ಟೀಯೆನ್‍ಟ್ಸಿನ್
ಟೀಯೆನ್‍ಟ್ಸಿನ್ - ಈಶಾನ್ಯ ಚೀನದಲ್ಲಿರುವ ಹೋವೇ ಪ್ರಾಂತ್ಯದ ಮುಖ್ಯ ಪಟ್ಟಣ. ಕೈಗಾರಿಕೆ ವಾಣಿಜ್ಯಗಳ ನಗರ. ಪೀಕಿಂಗಿನ ಆಗ್ನೇಯಕ್ಕೆ 80 ಮೈ. (113 ಕಿಮೀ.) ದೂರದಲ್ಲಿ, ಹಳದಿ ಸಮುದ್ರದಿಂದ ನದಿಯ ಮೂಲಕ 32 ಮೈ. (51 ಕಿಮೀ.) ಅಂತರದಲ್ಲಿ, ಉ.ಅ. 39° 8' ಮತ್ತು ಪೂ.ರೇ. 117° 16' ಮೇಲೆ ಇದೆ. ಇದರ ಬಳಿ ಬೈ ನದಿ ಮತ್ತು ಗ್ರಾಂಡ್ ಕೆನಾಲ್ ಕೂಡುತ್ತವೆ. ಸಂಗಮದಿಂದ ಕೆಳಕ್ಕೆ ಹರಿಯುವ ನದಿಯ ಹೆಸರು ಹೈ ಹೊ. ಟೀಯೆನ್ ಟ್ಸಿನ್ ನ ಜನಸಂಖ್ಯೆ 45,00,000 (1970 ಅಂ.).
ಇತಿಹಾಸ
[ಬದಲಾಯಿಸಿ]1782ರ ವರೆಗೆ ಇದು ಕೇವಲ ಸೈನಿಕ ಠಾಣೆಯ ಪಟ್ಟಣವಾಗಿತ್ತು. 1853 ರಲ್ಲಿ ಟೇಪಿಂಗ್ ದಂಗೆಕೋರರು ಇದನ್ನು ವಶಪಡಿಸಿಕೊಂಡಿದ್ದರು. 1860ರಲ್ಲಿ ಕೌಲಿನ ಬಂದರಾಗಿ ತರುವಾಯ ಶೀಘ್ರವಾಗಿ ಬೆಳೆಯತೊಡಗಿತು. ಹೈ ಹೋದ ಬಲದಂಡೆಯ ಮೇಲೆ ವಿದೇಶಿ ನೆಲೆಯೊಂದು ಸ್ಥಾಪಿತವಾಗಿತ್ತು. 1900ರ ಬಾಕ್ಸರ್ ದಂಗೆಯ ಅನಂತರ ಈ ನಗರದ ಗೋಡೆಗಳು ನೆಲಸಮವಾದುವು. ಆಗ ಈ ನಗರ ಆಧುನಿಕ ರೀತಿಯಲ್ಲಿ ನಿರ್ಮಿತವಾಯಿತು. ಜಪಾನೀಯರ ಆಕ್ರಮಣಕ್ಕೆ ಮೊದಲು ಹಾಗೂ ವಿಶೇಷ ಪ್ರಾಧಿಕಾರ ರದ್ದಾಗುವುದಕ್ಕೆ ಮೊದಲು ಬ್ರಿಟನ್, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಇಲ್ಲಿ ಮಿಲಿಟರಿ ನೆಲೆಗಳನ್ನು ಹೊಂದಿದ್ದುವು. 1937 ರಲ್ಲಿ ಜಪಾನ್ ಈ ನಗರದ ಮೇಲೆ ಬಾಂಬುದಾಳಿ ಮಾಡಿತು.ನಾನ್ ಕೈ ವಿಶ್ವವಿದ್ಯಾಲಯದ ಕಟ್ಟಡಗಳು ಆಗ ನೆಲಸಮವಾದುವು. ಟೀಯೆನ್ ಟ್ಸಿನ್ ಪ್ರದೇಶವೆಲ್ಲ ಜಪಾನೀಯರ ವಶವಾಯಿತು. ಮುಂದೆ 1949ರಲ್ಲಿ ಚೀನೀ ಕಮ್ಯೂನಿಸ್ಟರು ಈ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಮೊದಲು ಈ ನಗರ ತುಂಬ ಚಿಕ್ಕದಾಗಿತ್ತು. ಮುಂದೆ ವಿಸ್ತಾರವಾಗುತ್ತ ಬಂತು. 1949ರಲ್ಲಿ ಟಾ-ಕೂ ಮತ್ತು ಟಾಂಗ್ ಕೂ ಬಂದರು ಪ್ರದೇಶಗಳನ್ನು ನಗರದ ವ್ಯಾಪ್ತಿಗೆ ಒಳಪಡಿಸಲಾಯಿತು. 1953ರ ಹೊತ್ತಿಗೆ ಹೈ ಹೊ ನದೀತೀರ ಪ್ರದೇಶವನ್ನೂ ನಗರಕ್ಕೆ ಸೇರಿಸಿಕೊಳ್ಳಲಾಯಿತು. 1958ರ ವರೆಗೆ ಇದು ಸ್ವತಂತ್ರ ಪುರಸಭೆಯಾಗಿತ್ತಾದರೂ, ಪೀಕಿಂಗಿನ ನೇರ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ ಇದನ್ನು ಹೋಪೇ ಪ್ರಾಂತ್ಯಕ್ಕೆ ಒಳಪಡಿಸಿ ಅದರ ಮುಖ್ಯಪಟ್ಟಣವನ್ನಾಗಿ ಮಾಡಲಾಯಿತು.
ಇಲ್���ಿನ ಕಟ್ಟಡಗಳು
[ಬದಲಾಯಿಸಿ]ಸಮುದ್ರಾಭಿಮುಖವಾಗಿರುವ ಬೌದ್ಧ ದೇವಾಲಯವೊಂದನ್ನು ಬಿಟ್ಟರೆ, ಈ ನಗರದಲ್ಲಿ ಹೇಳಿಕೊಳ್ಳುವಂಥ ಐತಿಹಾಸಿಕ ಕಟ್ಟಡಗಳಾವುವೂ ಇಲ್ಲ. ಆಧುನಿಕ ಕಟ್ಟಡಗಳಲ್ಲಿ ಹೆಸರಿಸಬಹುದಾದ್ದು ತ್ಸುದುಲಿನ್ ನಲ್ಲಿ (ಕೆಂಪು ಬೊಂಬಿನ ತೋಪು) ಕಟ್ಟಿರುವ ಗೋರ್ಡನ್ ಹಾಲ್.
ನಗರದ ಕೆಳಗೆ ಇರುವ ಮುಖ್ಯನದಿ ಹಿಂದಿನಿಂದಲೂ ತೆಟ್ಟೆಯಾಗಿಯೇ ಇದೆ. ಇದರಲ್ಲಿ ಹೂಳು ಹೆಚ್ಚು. ಎರಡು ದಿವಸಗಳ ಅವಧಿಯಲ್ಲಿ ನದಿಯ ಆಳವನ್ನೇ ಅರ್ಧವಾಗಿಸಿಬಿಡುವಷ್ಟು ಮಟ್ಟಿಗೆ ಇದರಲ್ಲಿ ಹೂಳು ತುಂಬುತ್ತಿರುತ್ತದೆಂದು ಹೇಳಲಾಗಿದೆ. ಹೂಳೆತ್ತುವ ಕಾರ್ಯ ಸತತವಾಗಿ ನಡೆಯುತ್ತಿದೆ. ಇತರ ನದಿಗಳ ನೀರು ಬಂದು ಸೇರುವುದರ ಪರಿಣಾಮವಾಗಿ ಉಂಟಾಗಬಹುದಾದ ಪ್ರವಾಹದ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ನಗರವನ್ನು ಬಳಸಿ ಹೋಗುವಂತೆ ಇದಕ್ಕೆ ಕಾಲುವೆಯನ್ನು ನಿರ್ಮಿಸಲಾಗಿದೆ. ಹೂಳೆತ್ತುತ್ತಿರುವುದರಿಂದ ಈ ನದಿಯ ಮೇಲೆ ಸಣ್ಣ ಹಡಗುಗಳು ಸಾಗಬಹುದು. ಸರ್ವಕಾಲಗಳಲ್ಲೂ ಭಾರಿ ಹಡಗುಗಳು ನಿಲ್ಲಬಲ್ಲ ಸಿಂಕಾಂಗ್ ಎಂಬ ಕೃತಕ ರೇವೊಂದನ್ನು ಟಾಂಗ್‍ಕುವಿನಲ್ಲಿ ಕಟ್ಟಲಾಗಿದೆ.
ಶಿಕ್ಷಣ, ವ್ಯಾಪಾರ, ಕೈಗಾರಿಕೆಗಳು
[ಬದಲಾಯಿಸಿ]ಇಂದು ಟೇಯೆನ್ ಟ್ಸಿನ್ ಚೀನದ ಪ್ರಮುಖ ಸಮುದ್ರ ಬಂದರು ಮಾತ್ರವಲ್ಲದೆ ರಸ್ತೆ, ರೈಲು ಹಾಗೂ ವಿಮಾನ ಮಾರ್ಗಗಳ ಕೇಂದ್ರ. ಇದು ಪ್ರಾದೇಶಿಕ ವ್ಯಾಪಾರ ಕೇಂದ್ರ, ಜವಳಿ, ಸಿಗರೇಟ್, ಹಿಟ್ಟು, ಬೆಂಕಿಪೊಟ್ಟಣ, ಸೈಕಲ್, ತಂಬಾಕು ಮತ್ತು ಸರಳ ರಾಸಾಯನಿಕಗಳ ಕೈಗಾರಿಕೆಗಳು ಹಿಂದಿನಿಂದ ಇಲ್ಲಿ ಬೆಳೆದಿವೆ. ಕಮ್ಯೂನಿಸ್ಟ್ ಆಡಳಿತದಲ್ಲಿ ಬೃಹದ್ಯಂತ್ರಗಳ ಅನೇಕ ಬಗೆಯ ರಾಸಾಯನಿಕಗಳ ಹಾಗೂ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಇಲ್ಲಿ ಸ್ಥಾಪಿತವಾಗಿವೆ. ಇದು ಈಗ ಚೀನದ ಮೂರನೆಯ ಪ್ರಮುಖ ಕೈಗಾರಿಕಾ ಪ್ರದೇಶ. (ಮೊದಲನೆಯ ಎರಡು ಪ್ರದೇಶಗಳು ಷಾಂಗ್ ಹೈ ಮತ್ತು ಮಂಚೂರಿಯ), ಇದು ಶಿಕ್ಷಣ ಕೇಂದ್ರ ಕೂಡ. ನಾನ್ ಕೈ ವಿಶ್ವವಿದ್ಯಾಲಯದ ಪೀಠವಿದು.