ಫೆಡರಿಕೊ ಗಾರ್ಸಿಯಾ ಲೋರ್ಕಾ
ಫೆಡರಿಕೊ ಗಾರ್ಸಿಯಾ ಲೋರ್ಕ್, 1899-1936. ಆಧುನಿಕ ಸ್ಪೇನಿನ ಪ್ರಮುಖ ಸಾಹಿತಿಗಳಲ್ಲೊಬ್ಬ.
ಬದುಕು
[ಬದಲಾಯಿಸಿ]ಸ್ಪೇನಿನ ಗ್ರಾನಡ ಜಿಲ್ಲೆಯ ಪೋಂತೆ ವಾಕ್ವೆರೋಸ್ ಎಂಬ ಹಳ್ಳಿಯಲ್ಲಿ ಜನಿಸಿದ. ಚಿಕ್ಕಂದಿನಿಂದಲೂ ದೇಹಸ್ಥಿತಿ ಬಹಳ ಸೂಕ್ಷ್ಮವಾಗಿದ್ದ ಕಾರಣ, ದೈಹಿಕ ಶ್ರಮದ ಕೆಲಸ ಈತನಿಗೆ ಸಾಧ್ಯವಾಗಲಿಲ್ಲ. ವೈಚಾರಿಕ ಮತ್ತು ಗಹನ ಮೀಮಾಂಸೆಯ ಪ್ರವೃತ್ತಿಯ ಲೋರ್ಕನಿಗೆ ತನ್ನ ಆಂಡಲೂಸಿಯ ಪ್ರಾಂತ್ಯದ ಜನರ ಸಹಜವಾದ ಪ್ರಕೃತಿ ಪ್ರೇಮ, ಸೂಕ್ಷ್ಮವಾದ ಕಲಾ ವಸ್ತುಗಳ ಪ್ರೇಮ ಹುಟ್ಟಿನಿಂದಲೇ ಮೈಗೂಡಿ ಬಂದಿತ್ತು. ಈತ ಚಿಕ್ಕಂದಿನಿಂದಲೂ ಸಂಗೀತದ ಅಭ್ಯಾಸದ ಜೊತೆಗೆ ಸ್ಪೇನಿನ ಪ್ರಾಚೀನ ಮತ್ತು ಈಚಿನ ಕಾವ್ಯಗಳ ಅಧ್ಯಯನ ನಡೆಸಿದ. ಗ್ರಾನಡ ವಿಶ್ವವಿದ್ಯಾಲಯ ಮತ್ತು ಮ್ಯಾಡ್ರಿಡ್ಗಳಲ್ಲಿ ತತ್ತ್ವಶಾಸ್ತ್ರ, ಸಾಹಿತ್ಯ ಮತ್ತು ನ್ಯಾಯಶಾಸ್ತ್ರಗಳ ಅಭ್ಯಾಸ ಮಾಡಿ 1921ರಲ್ಲಿ ಪದವಿಗಳನ್ನು ಪಡೆದ. ಇವನ ಮೊದಲ ಪದ್ಯಗಳೆಲ್ಲವೂ ಸ್ಪೇನಿನಲ್ಲೆಲ್ಲ ಪ್ರಸಾರವಾಗಿ ಬರೆದವನಿಗೆ ಅಪಾರ ಕೀರ್ತಿ ತಂದುಕೊಟ್ಟವು. ಲೋರ್ಕ ಮತ್ತು ಗೆಳೆಯರು ಅವನ್ನು ತಾವೇ ಹಾಡಿ ಜನಪ್ರಿಯಗೊಳಿಸಿದರು. ಪ್ರಾರಂಭದಿಂದಲೂ ಮಕ್ಕಳ ಹಾಡಿನ ಸಾಂಗತ್ಯದ ಬಗ್ಗೆ ಅಪಾರ ಪ್ರೇಮವಿದ್ದ ಈತ ತನ್ನ ಜನತೆಯ ಬದುಕು, ಜಾನಪದ ಸಾಹಿತ್ಯಗಳ ಅಂತರಾಳಗಳನ್ನು ಕಂಡುಕೊಂಡು ನಿಜವಾದ ಜನತಾಕವಿಯೆನಿಸಿಕೊಂಡ. ಈತನ ಕವನ ಸಂಕಲನ ಅಚ್ಚಾದುದು 1921ರಲ್ಲಿ.
ಸ್ಪೇನಿನ ಆಧುನಿಕ ಜಾನಪದ ಪುನರುತ್ಥಾನಕ್ಕೆ ಕಾರಣನಾಗಿ ಕಲೆಯನ್ನು ಅದಕ್ಕಾಗಿ ಮೀಸಲಿಟ್ಟ ಲೋರ್ಕ ಸ್ಪೇನಿನ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಪರಿಗಣಿತ ನಾಗಿದ್ದಾನೆ. 1936ರಲ್ಲಿ ಸ್ಪೇನಿನಲ್ಲಿ ಅಂತರ್ಯುದ್ಧ ಪ್ರಾರಂಭವಾದಾಗ ಫ್ರ್ಯಾಂಕೋ ಬಣದ ಕಮ್ಯುನಿಸ್ಟ ವಿರೋಧಿ ಗುಂಪ��ಂದು ಗ್ರಾನಡದಲ್ಲಿ ಗಾರ್ಸಿಯಾ ಲೋರ್ಕವನ್ನು 1936ರ ಆಗಸ್್ಟ 19ರಂದು ರಸ್ತೆಯಲ್ಲಿ ಇರಿದು ಕೊಂದುಹಾಕಿತು.
ಬರಹ
[ಬದಲಾಯಿಸಿ]ಈತನ ಇಂಪ್ರೆಸಿಯೋನ್ಸ್ ಇ ಪೈಸಾಜೆಸ್ ಎಂಬ ಗದ್ಯಗ್ರಂಥದಲ್ಲಿ (1918) ಹಳ್ಳಿಯ ಬದುಕು ಬಹು ಸಹಜವಾಗಿ ಚಿತ್ರಿತವಾಗಿದೆ. ಪ್ರಿಮೆರ್ ರೊಮಾನ್ಸೆರೊ ಗಿತಾನೊ ಎಂಬ ಕವಿತಾ ಸಂಗ್ರಹದಲ್ಲಿ (1928) ತನ್ನ ಗ್ರಾಮೀಣ ಸಮಾಜದ ಸತ್ತ್ವವನ್ನು ಅರ್ಥಪುರ್ಣವಾಗಿ ಈತ ಚಿತ್ರಿಸಿದ್ದಾನೆ. ಆದರೂ ಆಧುನಿಕ ಕಲೆಯಲ್ಲಿ ಆಸಕ್ತನಾದ ಲೋರ್ಕಾ ಆಗಿನ ಯುವಕ ಚಿತ್ರಕಾರ ಸಾಲ್ವಡೋರ್ ಡಾಲಿ, ಕವಿ ಗೆರಾರ್ಡೊ ಡಿಯೇಗೊ ಮತ್ತು ಮ್ಯಾನುಯೆಲ್ ಡ ಫಾಲಾ ಮುಂತಾದವರ ಗೆಳೆಯನಾಗಿ ಅವರ ಪ್ರಭಾವಕ್ಕೊಳಗಾದ. 1922 ಮತ್ತು 1923ರಲ್ಲಿ ಜನತೆಯ ದೊಡ್ಡ ಜಾತ್ರೆಯೊಂದನ್ನು ನಡೆಸಿದ. ಇದು ಆಂಡಲೂಸಿಯದ ಜಾನಪದ ಕತೆಗಳ ಪುನರ್ನವೀಕರಣ ಮತ್ತು ಉದ್ಧಾರಕ್ಕೆ ಕಾರಣವಾಯಿತು. ಅದೇ ಕಾಲದಲ್ಲಿಯೇ ಜಾನಪದ ಸಂಗೀತಕ್ಕಾಗಿ ಲೋರ್ಕ ಮತ್ತೊಂದು ಸಮ್ಮೇಳನ ನಡೆಸಿದ. 1931ರಲ್ಲಿ ಪ್ರಕಟವಾದ ಪೊಯಾಮಾ ಡೆಲ್ ಕಾಂತೆ ಜಾಂಡೋ ಕಾವ್ಯಸಂಕಲನ ಎರಡು ಭಾಗಗಳಲ್ಲೂ ಲೋರ್ಕ ತನ್ನ ಪ್ರದೇಶದ ಜಿಪ್ಸಿಗಳ ಜಾನಪದ ಕಾವ್ಯಭಾಷೆಯನ್ನೇ ಬಳಸಿ, ಅವರ ಜೀವನದ ಸಮಗ್ರ ಚಿತ್ರಣ ಕೊಟ್ಟಿದ್ದಾನೆ. ಅವರ ಬದುಕಿನ ಅಲೆಮಾರಿತನದಲ್ಲಿಯೂ ಸಾವಿನೆದುರಿಗೆ ನಿಲ್ಲುವುದು ಅವರ ಸ್ಥೈರ್ಯ ಸುಂದರವಾಗಿ ಅಚ್ಚಳಿಯದಂತೆ ಮೂಡಿರುವ ಈ ಕೃತಿ ಅದ್ವಿತೀಯವಾದುದು. ಇಲ್ಲಿಯೂ ಲೋರ್ಕನ ಮನಸ್ಸಿನಲ್ಲಿ ಸದಾ ಹುದುಗಿದ್ದ ಸಾವಿನ ವಿಚಾರ ಇಣುಕುತ್ತದೆ. ಇವನ ಸ್ನೇಹಿತ ಗೂಳಿಕಾಳಗಪಟು ಮೇಜಿಯಾಸ್ ಕಾಳಗವೊಂದರಲ್ಲಿ ಗೂಳಿಯ ಇರಿತಕ್ಕೆ ಸಿಕ್ಕಿ ಸತ್ತಾಗ ಲೋರ್ಕ ಬರೆದ ಶೋಕಗೀತೆ (1935) ಕಣ್ಣಿನಲ್ಲಿ ರಕ್ತ ಹರಿಸುವಂಥ ಆಳವಾದ ಭಾವೋದ್ರೇಕದಿಂದ, ಜಿಲ್ಲೆನ್ನಿಸುವ ಪ್ರತಿಮೆಗಳಿಂದ ಕೂಡಿದೆ. ಈ ಕವಿತೆ ಆಧುನಿಕ ಯುರೋಪಿನ ಸಾಹಿತ್ಯದ ಅತ್ಯದ್ಭುತ ಶೋಕಗೀತೆಯೆಂದು ಹೆಸರಾಗಿದೆ.
ಕವಿಯೇ ಅಲ್ಲದೆ ಸಂಗೀತಗಾರ, ಚಿತ್ರಗಾರ, ನಾಟಕಕಾರ, ನಟ ಮತ್ತು ಜಾನಪದ ನೃತ್ಯಗಾರನಾಗಿ ಲೋರ್ಕ ಅಪಾರ ಜನಪ್ರಿಯತೆ ಗಳಿಸಿದ. 1929ರಲ್ಲಿ ನ್ಯೂಯಾರ್ಕಿಗೆ ಹೋಗಿಬಂದ ಅನಂತರ ಈತ ವಾಲ್ಟ್ ವ್ವಿಟ್ಮನ್ ಮತ್ತಿತರ ಬಗ್ಗೆ ಸ್ವತಂತ್ರ್ಯ ಗೀತೆಗಳನ್ನು ರಚಿಸಿದ. ಸಂಚಾರೀ ಜಾನಪದ ರಂಗಭೂಮಿಯಲ್ಲಿ ಆಸಕ್ತಿ ವಹಿಸಿ ಕೊನೆಯವರೆಗೆ ಲ ಬ್ಯಾರಾಕಾದ ಸದಸ್ಯನಾಗಿದ್ದು ನಟನಾಗಿ, ನಾಟಕಕಾರನಾಗಿ, ನಿರ್ದೇಶಕನಾಗಿ ದುಡಿದ. ಬೋದಾಸ್ದ ಸಾಂಗ್ರೆ (1933), ಯೆರ್ಮಾ (1934), ಬರ್ನಾರ್ಡಾ ಆಲ್ಬನ ಮನೆ (1935ರಲ್ಲಿ ಬರೆದುದಾದರೂ 1940ರಲ್ಲಿ ಕವಿಯ ಸಾವಿನ ಅನಂತರ ಪ್ರಕಟವಾಯಿತು). ಮುಂತಾದ ದುರಂತ ನಾಟಕಗಳಿಗೆ ಜಿಪ್ಸಿ ಅಲೆಮಾರಿಗಳ ಜೀವನವೇ ವಸ್ತು.