ವಿಷಯಕ್ಕೆ ಹೋಗು

ಪಾಂಡುರಂಗ ವಾಮನ ಕಾಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ಪಾಂಡುರಂಗ ವಾಮನ ಕಾಣೆ (೧೮೮೦-೧೯೭೨) ಹೆಸರಾಂತ ಸಂಸ್ಕೃತ ಹಾಗೂ ಭಾರತ ಶಾಸ್ತ್ರದ (ಇಂಡಾಲಜಿ) ವಿದ್ವಾಂಸ. ಇವರು ಹುಟ್ಟಿದ್ದು ಮಹಾರಾಷ್ಟ್ರದ ರತ್ನಾಗಿರಿಯ ಸಾಂಪ್ರದಾಯಿಕ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ.

ಧರ್ಮಶಾಸ್ತ್ರದ ಇತಿಹಾಸ - ಭಾರತದಲ್ಲಿ ಪ್ರಾಚೀನ ಮತ್ತು ಮಧ್ಯಯುಗೀಯ ಧರ್ಮಗಳು ಮತ್ತು ಪ್ರಜಾಧರ್ಮ ( ಹಿಸ್ಟರಿ ಆಫ್ ಧರ್ಮಶಾಸ್ತ್ರ - ಏನ್ಷಿಯಂಟ್ ಅಂಡ್ ಮಿಡೀವಲ್ ರಿಲಿಜನ್ಸ್ ಅಂಡ್ ಸಿವಿಲ್ ಲಾ ಇನ್ ಇಂಡಿಯಾ) ಎಂಬ ಇಂಗ್ಲೀಷ್ ಮಹಾಗ್ರಂಥದಿಂದ ಡಾ. ಕಾಣೆ ಪ್ರಸಿದ್ಧರಾಗಿದ್ದಾರೆ. ಪ್ರಾಚೀನ ಮತ್ತು ಮಧ್ಯಕಾಲಗಳಲ್ಲಿ ಧರ್ಮಶಾಸ್ತ್ರದ ವಿಕಾಸ ಕುರಿತು ಈ ಗ್ರಂಥ ಆನೇಕ ಶತಮಾನಗಳಿಂದ ಕಲೆಹಾಕಲ್ಪಟ್ಟ ಗ್ರಂಥಗಳು, ಹಸ್ತಲಿಪಿಗಳು ಇವುಗಳನ್ನು ಸಂಶೋಧಿಸುತ್ತದೆ. ಐದು ಭಾಗಗಳಲ್ಲಿ ಪ್ರಕಾಶನಗೊಂಡ ಈ ಮಹಾಕೃತಿಯ ಮೊದಲನೆಯ ಭಾಗ ೧೯೩೦ರಲ್ಲಿ ಹೊರಬಂದರೆ, ಕೊನೆಯದು ಹೊರಬಂದದ್ದು ೧೯೬೨ರಲ್ಲಿ. ಒಟ್ಟು ೬,೫೦೦ಕ್ಕೂ ಹೆಚ್ಚು ಪುಟಗಳಿವೆ. ಮುಂಬಯಿಏಶಿಯಾಟಿಕ್ ಸೊಸೈಟಿ ಹಾಗೂ ಪುಣೆಯ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಟಿಟ್ಯೂಟ್ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಲ್ಲಯ ಆಕರ ಗ್ರಂಥಗಳನ್ನು ಡಾ. ಕಾಣೆ ಅಧ್ಯಯನ ಮಾಡಿದರು. ಈವರೆಗೂ ಅಸ್ಪಷ್ಟವಾಗಿದ್ದ ಆಕರಗಳನ್ನೂ ಸೇರಿ ಮಹಾಭಾರತ, ಪುರಾಣಗಳು, ಕೌಟಿಲ್ಯ ಇತ್ಯಾದಿ ವಿಶಾಲ ಹರಹಿನ ವಿವಿಧ ವಿಷಯಗಳ ಬಗ್ಯೆ ಆಳವಾದ ಸಂಶೋಧನೆ ಈ ಗ್ರಂಥದ ವೈಶಿಷ್ಟ್ಯ. ಅವರ ಸಂಸ್ಕೃತ ಪಾಂಡಿತ್ಯ ಈ ಪುಸ್ತಕವನ್ನು ಇನ್ನಷ್ಟು ಶ್ರೀಮಂತವಾಗಿಸಿದೆ. ಪುರಾತನ ಗ್ರಂಥಗಳನ್ನು ವೈಭವೀಕರಿಸದೆ ವಸ್ತುನಿಷ್ಟ ದೃಷ್ಟಿಕೋನದಿಂದ ವಿಮರ್ಶಿಸಿರುವುದು ಈ ಕೃತಿಯ ಯಶಸ್ಸಿನ ಗುಟ್ಟು ಎನ್ನಲಾಗಿದೆ.

ಕಾಣೆಯವರು ವ್ಯವಹಾರಮಯೂಖ ಎಂಬ ಪುಸ್ತಕ ಬರೆದರು. ಓದುಗರಿಗೆ ಧರ್ಮಶಾಸ್ತ್ರದ ಬಗ್ಯೆ ಪಕ್ಷಿನೋಟ ದೊರಕಿಸುವ ದೃಷ್ಟಿಯಿಂದ ,ಈ ಪುಸ್ತಕಕ್ಕೆ ಮುನ್ನುಡಿಯ ರೂಪದಲ್ಲಿ ಧರ್ಮಶಾಸ್ತ್ರದ ಇತಿಹಾಸವನ್ನು ಬರೆಯಲು ಪ್ರಾರಂಭಿಸಿದರು. ಅದೇ ವಿಸ್ತಾರವಾಗುತ್ತಾ ಹೋಗಿ ಐದು ಸಂಪುಟಗಳ ಮಹದ್ ಗ್ರಂಥ ಸೃಷ್ಟಿಯಾಯಿತು. ಇಷ್ಟಾದರೂ, ಇಂಗ್ಲೀಷಿನಲ್ಲಿ ಧರ್ಮ ಶಬ್ದದ ಸಮಾನಾರ್ಥಕ ಶಬ್ದ ಸಿಗುವುದು ಕಠಿಣ ಎಂದು ಬಲವಾಗಿ ಪ್ರತಿಪಾದಿಸಿದರು. ಸಂಸ್ಕೃತ , ಮರಾಠಿ, ಇಂಗ್ಲೀಷ್ ಭಾಷೆಗಳಲ್ಲಿಯ ಅವರ ಬರವಣಿಗೆ ಒಟ್ಟು ೧೫,೦೦೦ ಪುಟಗಳನ್ನು ಮೀರುತ್ತದೆ.

ಪುರಸ್ಕಾರಗಳು

[ಬದಲಾಯಿಸಿ]

ತಮ್ಮ ಅಗಾಧ ವಿದ್ವತ್ತಿನಿಂದ ಡಾ.ಕಾಣೆ, ಮಹಾಮಹೋಪಾಧ್ಯಾಯ ಎಂದು ಆದರಿಸಲ್ಪಟ್ಟರು. ಮುಂಬಯಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಅವರು ಸೇವೆ ಸಲ್ಲಿ��ಿದರು. ಕುರುಕ್ಷೇತ್ರ ವಿಶ್ವವಿದ್ಯಾಲಯದ ಭಾರತ ಶಾಸ್ತ್ರದ ವಿಭಾಗವನ್ನು ಪ್ರಾರಂಭಿಸಲು ಅವರ ನೆರವನ್ನು ಕೋರಲಾಯಿತು. ೧೯೫೬ರಲ್ಲಿ ಅವರ ಮಹಾಗ್ರಂಥ ನಾಲ್ಕನೆಯ ಸಂಪುಟಕ್ಕೆ, ಸಂಸ್ಕೃತ ಭಾಷಾಂತರದ ಸಂಶೋಧನೆಯ ವಿಭಾಗದಲ್ಲಿ , ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತು . ಅವರು ಭಾರತೀಯ ವಿದ್ಯಾಭವನದ ಗೌರವ ಸದಸ್ಯರೂ ಆಗಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ಅವರ ಮಹತ್ತರ ಕೊಡುಗೆಯನ್ನು ಗೌರವಿಸಿ ಅವರನ್ನು ರಾಜ್ಯಸಭೆಯ ಸದಸ್ರಾಗಿ ನಾಮಕರಣ ಮಾಡಲಾಯಿತು. ಭಾರತದ ಅತ್ಯುಚ್ಚ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು ೧೯೬೩ರಲ್ಲಿ ಅವರಿಗೆ ಪ್ರದಾನಮಾಡಲಾಯಿತು.

ಭಾರತದ ಸಂವಿಧಾನವು ,ತಮಗೆ ಕೇವಲ ಹಕ್ಕುಗಳಷ್ಟೇ ಇವೆ, ಬಾಧ್ಯತೆಗಳಲ್ಲ ಎಂಬ ಹುಸಿ ಅಭಿಪ್ರಾಯವನ್ನು ನಾಗರೀಕರ ಮನಸ್ಸಿನಲ್ಲಿ ಹುಟ್ಟು ಹಾಕಿ, ಭಾರತದ ಸಾಂಪ್ರದಾಯಿಕ ಮೌಲ್ಯಗಳಿಂದ ದೂರ ಸಾಗಿದೆ ಎಂದು ಅವರ ನಂಬಿಕೆಯಾಗಿತ್ತು.

ಅವರ ಗ್ರಂಥಗಳ ವಿಶ್ವಕೋಶದೋಪಾದಿಯ ಹರವು ಮತ್ತು ವಿಷಯಗಳ ಅಧಿಕಾರಯುತವಾದ ಮಂಡನೆಯಿಂದ , ಅವುಗಳನ್ನು ರಾಜನೀತಿಯ ಚರ್ಚೆಗಳಲ್ಲಿ ಆಗಾಗ ಉದ್ಧರಿಸಲಾಗುತ್ತದೆ. ಅಟಲ ಬಿಹಾರಿ ವಾಜಪೇಯಿಯವರ ಮಂತ್ರಿಮಂಡಲದ ಕಾಲದಲ್ಲಿ ಪ್ರಾಚೀನ ಭಾರತೀಯರು ಗೋಮಾಂಸ ಭಕ್ಷಕರಾಗಿದ್ದರೇ ಎಂಬ ,ಅದರಲ್ಲಿಯೂ ಹಿಂದೂಗಳು ಗೋವನ್ನು ತಾಯಿಸಮಾನವಾಗಿ ಪೂಜಿಸುವುದರ ಹಿನ್ನೆಲೆಯಲ್ಲಿ, ವಿವಾದ ಉಂಟಾದಾಗ, ಎರಡೂ ಪಕ್ಷದವರೂ ತಮ್ಮ ವಾದಕ್ಕೆ ಸಮರ್ಥನೆಯಾಗಿ , ಕಾಣೆಯವರ ಗ್ರಂಥಗಳಿಂದ ವಿಪುಲವಾಗಿ ಉದ್ಧರಿಸಿದರು. ಇಂಥದೇ ಇನ್ನೊಂದು ವಿವಾದವೆಂದರೆ, ಈಗ ಬರಿಯ ಪುರುಷರಿಗಷ್ಟೇ ಸೀಮಿತವಾಗಿರುವ, ಯಜ್ನೋಪವೀತವನ್ನು ( ಜನಿವಾರ) , ಧರಿಸಲು ಪ್ರಾಚೀನ ಕಾಲದಲ್ಲಿ ಸ್ತ್ರೀಯರಿಗೂ ಅಧಿಕಾರವಿತ್ತೇ ಎಂಬುದು.

ಕಾಣೆಯವರ ನೆನಪಿನಲ್ಲಿ

[ಬದಲಾಯಿಸಿ]

೧೯೭೪ರಲ್ಲಿ ಪೌರಾತ್ಯ ಅಧ್ಯಯನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಮುಂಬಯಿಯ ಏಶಿಯಾಟಿಕ್ ಸೊಸೈಟಿಯು, ಅವರ ನೆನಪಿನಲ್ಲಿ, ಮಹಾಮಹೋಪಾಧ್ಯಾಯ ಪಿ.ವಿ.ಕಾಣೆ ಸ್ನಾತಕೋತ್ತರ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿತು. ವೈದಿಕ, ಧರ್ಮಶಾಸ್ತ್ರೀಯ ಅಥವಾ ಅಲಂಕಾರ ಸಾಹಿತ್ಯದಲ್ಲಿ ಅಮೂಲ್ಯ ಕೊಡುಗೆ ನೀಡಿದ ಸ್ನಾತಕರಿಗೆ ಡಾ. ಪಿ.ವಿ. ಕಾಣೆ ಸುವರ್ಣ ಪದಕವನ್ನು ಮೂರು ವರ್ಷದಲ್ಲಿ ಒಮ್ಮೆ ನೀಡಲಾಗುತ್ತಿದೆ.