ದತ್ತಿ ಮತ್ತು ಪ್ರತಿಷ್ಠಾನಗಳು
ದತ್ತಿ ಎಂದರೆ ಒಬ್ಬ ವ್ಯಕ್ತಿಗಾಗಲಿ ಅಥವಾ ಸಂಸ್ಥೆಗಾಗಲಿ ಶಾಶ್ವತವಾಗಿ ವಹಿಸಿಕೊಟ್ಟ ಸ್ವತ್ತು. ಪ್ರತಿಷ್ಠಾನ ಎಂದರೆ (ಅ) ಯಾವುದನ್ನು ಒಂದು ನಿಧಿಯಿಂದ ಸ್ಥಾಪಿಸಿಯೋ ನಡೆಸಿಕೊಂಡೋ ಬರುತ್ತೇವೆಯೋ ಅದು; ಕಾಲೇಜು, ಮಠ, ಪುಸ್ತಕ ಭಂಡಾರ ಮುಂತಾದ ದತ್ತಿ ಹಾಕಿಕೊಟ್ಟಿರುವ ಸಂಸ್ಥೆ ಅಥವಾ ಸೊಸೈಟಿಗಳು. (ಆ) ಒಂದು ಸಂಸ್ಥೆಯನ್ನಾಗಲಿ, ಸಂಘವನ್ನಾಗಲಿ ಸಂಸ್ಥಾಪಿಸುವುದಕ್ಕೆ ಬೇಕಾದ ಶಾಶ್ವತನಿಧಿ. ಫ್ರೆಡರಿಕ್ ಪಿ. ಕೆಪ್ಪೆಲ್ ಎಂಬಾತ ಹೇಳುವಂತೆ ಶಾಸನದ ದೃಷ್ಟಿಯಲ್ಲಿ ದಾನವೆಂದು ಪರಿಗಣಿಸಲ್ಪಟ್ಟು ಸಾಂಪ್ರದಾಯಿಕವಾಗಿ ಪ್ರಾಂತೀಯ ಅಥವಾ ಸಂಯುಕ್ತ ಸರ್ಕಾರದ ಸನ್ನದಿನ ಆಸರೆಯಲ್ಲಿ ಟ್ರಸ್ಟಿಗಳ ನಿರ್ದೇಶನದ ಪ್ರಕಾರ ನಡೆಸಿಕೊಂಡು ಹೋಗುವ ಸೌಲಭ್ಯ ಮುಂತಾದವಕ್ಕೆ ಪಾತ್ರವಾದ ಪುದವಟ್ಟಿಗೆ ಪ್ರತಿಷ್ಠಾನ ಅಥವಾ ಫೌಂಡೇಷನ್ ಎಂದು ಹೆಸರು. ಮೂಲಧನವನ್ನು ಮುಟ್ಟದೆ ಅದರ ಬಡ್ಡಿಯನ್ನು ಮಾತ್ರ ಉಪಯೋಗಿಸಬೇಕೆಂದೋ ಮೂಲಧನವನ್ನೂ ಬಳಸಿಕೊಳ್ಳಬೇಕೆಂದೋ ಪುದುವಟ್ಟು ಹಾಕಿರುವವನು ಹೇಳಿರುವ ಹಾಗೆ, ಆ ಹಣವನ್ನು ನಿರ್ದಿಷ್ಟೋದ್ದೇಶಕ್ಕಾಗಿ ಅದು ಸಂಕುಚಿತವಾಗಿರಲಿ ಅಥವಾ ವಿಸ್ತøತವಾಗಿರಲಿ, ಉಪಯೋಗಿಸಬೇಕು. ಮೊದಲಿನದಕ್ಕೆ ಪ್ರತಿಷ್ಠಾನಗಳೆಂದೂ ಅಥವಾ ದತ್ತಿಗಳೆಂದೂ ಎರಡನೆಯದಕ್ಕೆ ಪುದುವಟ್ಟುಗಳೆಂದೂ ಕರೆಯುವುದು ರೂಢಿಯಲ್ಲಿದೆ, ಆದರೆ ಇದೇ ಅರ್ಥದಲ್ಲಿ ಈ ಶಬ್ದಗಳನ್ನು ಬಳಸುವುದು ರೂಢಿಯಲಿಲ್ಲ.
ಅಮೆರಿಕನ್ ಫೌಂಡೇಷನ್ ಮತ್ತು ಅವುಗಳ ಕ್ಷೇತ್ರಗಳು ಎಂಬ ಗ್ರಂಥದ ಏಳನೆಯ ಆವರ್ತದಲ್ಲಿ ಹೇಳಿರುವಂತೆ, ಪ್ರತಿಷ್ಠಾನ ಎಂದರೆ ತನ್ನದೇ ಅದ ಮೂಲಧನವುಳ್ಳದ್ದಾಗಿಯೋ ಅದನ್ನು ಹುಟ್ಟುಹಾಕಿದ ಜೀವಂತ ಪ್ರತಿಷ್ಠಾಪಕರಿಂದ ಕೊಡುಗೆಗಳನ್ನು ಸ್ವೀಕರಿಸುತ್ತಲೋ ಸಮಸ್ತ ಮಾನವರ ಕಲ್ಯಾಣಕ್ಕೂ ಉಪಯುಕ್ತವಾಗುವ ನ್ಯಾಯಬದ್ಧವಾದ ಲಾಭದೃಷ್ಟಿಯಿಲ್ಲದ ಸ್ವತ್ತು. ಆದುದರಿಂದ ಪ್ರತಿಷ್ಠಾನಗಳು ತಮ್ಮ ಕೊಡುಗೆಗಳನ್ನು ಈಗಾಗಲೇ ಪಡೆದಿವೆಯೆಂದೋ ಜೀವಂತದಾನಿ ಅಥವಾ ದಾನಿಗಳು ಕೊಡುವ ದತ್ತಿ ಅಥವಾ ದಾನಪತ್ರಗಳ ಮೂಲಕ ತನ್ನ ಮೂಲಧನವನ್ನು ಪಡೆಯುವ ಹಾರೈಕೆಯಲ್ಲಿವೆಯೆಂದೋ ಭಾವಿಸಬಹುದು.
ಸಾಮಾನ್ಯವಾಗಿ ಟ್ರಸ್ಟಿ ಅಥವಾ ನ್ಯಾಸಾಡಳಿತ ಕೊಡುಗೆದಾರನ ಶಾಸನಬದ್ಧವಾದ ಇಷ್ಟದ ಪ್ರಕಾರ, ಆದಾಯವನ್ನಾಗಲಿ ಅದರ ಜತೆಗೆ ಮೂಲ ಧನವನ್ನಾಗಲಿ ವೆಚ್ಚ ಮಾಡಿ ಇತರ ಸ್ವಪ್ರೇರಿತ ದಾನಗಳನ್ನೂ ತೆರಿಗೆ ಧನಗಳನ್ನೂ ಪಡೆಯದಿರದಂಥ ಪರಿಶೋಧನೆಗಳಿಗೂ ಪ್ರಯೋಗಗಳಿಗೂ ಪ್ರದರ್ಶನಗಳಿಗೂ ತಮ್ಮಿಷ್ಟದಂತೆ ನೆರವು ನೀಡಲು ಸ್ವತಂತ್ರರು. ಪರೋಪಕಾರದ ಸಹಾಯಕ್ಕೆ ಮೂಲಧನ ಎಂಬುದಾಗಿ ಪ್ರತಿಷ್ಠಾನದ ಸಂಪನ್ಮೂಲಗಳನ್ನು ಕರೆಯುವುದುಂಟು. ಕೊಡುಗೆದಾರ ನಿರ್ದೇಶಿಸಿರುವ ಯಾವುದೋ ಒಂದು ಉದ್ದೇಶವನ್ನು ನಡೆಸಿಕೊಂಡು ಬರಲು ಅದಕ್ಕಾಗಿ ಕೂಡಿಟ್ಟ ಹಣವನ್ನು ವಿನಿಯೋಗಿಸುವ ಅಭ್ಯಾಸಕ್ಕೆ ಎಂಡೋಮೆಂಟುಗಳೆಂದೂ ಫೌಂಡೇಷನ್ನುಗಳೆಂದೂ ಹೆಸರು. ಇವನ್ನು ಪರೋಪಕಾರದ ಸುಸಂಘಟಿತ ಹೊಸರೂಪ ಎಂದು ಪರಿಭಾವಿಸುವುದುಂಟು. ಬರ್ಕ್, ದತ್ತಿಯನ್ನು ಕಡೆಗಾಲದ ಪಶ್ಚಾತ್ತಾಪದ ಫಲ ಎಂಬುದಾಗಿ ವರ್ಣಿಸಿದ್ದಾನೆ.
ಉಗಮ
[ಬದಲಾಯಿಸಿ]ಈ ಚಳುವಳಿ ಬೆಳೆದಿರುವುದು ಸಂಯುಕ್ತ ಸಂಸ್ಥಾನಗಳಲ್ಲಿ; ಅಲ್ಲಿ ಸುಮಾರು 7,300 ಪ್ರತಿಷ್ಠಾನಗಳಿವೆ. ಅವುಗಳಲ್ಲಿ 78 ಕ್ಕೆ 10,000,000 ಡಾಲರ್‍ಗಳಿಗೂ ಅಧಿಕವಾದ ಸ್ವತ್ತಿದೆ. ಇವುಗಳ ಟ್ರಸ್ಟಿಗಳು ಅಮೆರಿಕದ ಸಮಸ್ತ ಪತಿಷ್ಠಾನಗಳ ಶೇಕಡ 80 ಭಾಗದಷ್ಟನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದಾರೆ. ಈಗಿನ ಪೇಟೆಯ ಧಾರಣೆಗಳ ಪ್ರಕಾರ, ಸಮಸ್ತ ಪ್ರತಿಷ್ಠಾನಗಳ ಸ್ವತ್ತುಗಳ ಬೆಲೆ 7,000,000,000 ಡಾಲರುಗಳಷ್ಟಾಗುತ್ತದೆ. ಇವರ ಅಧೀನದಲ್ಲಿರುವುದರ ಬೆಲೆ 5,600,000,000,000 ಡಾಲರುಗಳು. ಈ ಪ್ರತಿಷ್ಠಾನಗಳಲ್ಲಿ ಹೆಚ್ಚಿನ ಭಾಗಕ್ಕೆ ಅವುಗಳ ಪ್ರತಿಷ್ಠಾಪಕರು ವ್ಯಾಪಕವಾದ ಉದ್ದೇಶಗಳನ್ನು ಹಾಕಿಕೊಟ್ಟಿದ್ದಾರೆ. ಆರೋಗ್ಯ ಚಿಕಿತ್ಸೆ ಮತ್ತು ಸಮಾಜ ಕಲ್ಯಾಣ-ಇವು ಪ್ರಚಲಿತ ಪ್ರತಿಷ್ಠಾನಗಳ ಪ್ರಮುಖ ಉದ್ದೇಶಗಳು.
ಅಮೇರಿಕದಲ್ಲಿ
[ಬದಲಾಯಿಸಿ]ಸಂಯುಕ್ತ ಸಂಸ್ಥಾನದಲ್ಲಿ ಪ್ರತಿಷ್ಠಾನ ತನ್ನ ತೀವ್ರಾಭಿವೃದ್ಧಿಯ ಎರಡು ಅವಧಿಗಳನ್ನು ಕಂಡಿದೆ. ಮೊದಲನೆಯದು ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲೂ ಎರಡನೆಯದು 1940 ರಲ್ಲೂ ತೆರಿಗೆಗಳು ಥಟ್ಟನೇರಿದುದರ ಪರಿಣಾಮವಾಗಿ ಮೈದೋರಿದುವು. ಈ ಎರಡು ಅವಧಿಯಲ್ಲಿ ಪರೋಪಕಾರವೇ ಮುಖ್ಯ ಪ್ರೇರಣೆಯಾಗಿತ್ತು. ಮೊದಲನೆಯ ಅವಧಿಯಲ್ಲಿ ಅತುಲ್ಯೆಶ್ವರ್ಯದ ಮೂಲಕ ಈ ಪ್ರತಿಷ್ಠಾನಗಳು ಜನ್ಮ ತಾಳಿದುವು. ಎರಡನೆಯ ಅವಧಿಯಲ್ಲಿ ತೆರಿಗೆಯಲ್ಲಿನ ಉಳಿತಾಯಗಳಿಂದ ಜನಿಸಿದವು.
ಕೆಲವು ಪ್ರತಿಷ್ಠಾನಗಳು ಎರಡು ಮುಖವಾದ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದು ವ್ಯಕ್ತಪಡುತ್ತದೆ; ಸಂಸ್ಥೆಗಳಾಗಲಿ ವ್ಯಕ್ತಿಗಳಿಗಾಗಲಿ ಅಥವಾ ಎರಡಕ್ಕೆ ಆಗಲಿ ಕೊಡುಗೆಗಳನ್ನು ಕೊಡುತ್ತವೆ. ಈ ವರ್ಗಕ್ಕೆ ಹೆಚ್ಚು ಭಾಗ ಹಿರಿಯ ಕಿರಿಯ ಪ್ರತಿಷ್ಠಾನಗಳು ಸೇರುತ್ತವೆ. ಸಂಶೋಧನೆಯನ್ನಾಗಲಿ ಸೇವೆಯನ್ನಾಗಲಿ ಕಾಯಂ ಸಿಬ್ಬಂದಿಯಿಂದಲೋ ಆ ಕೆಲಸಕ್ಕಾಗಿ ನಿಯುಕ್ತವಾದವರಿಂದಲೋ ನಡೆಸತಕ್ಕವು ಎರಡನೆಯ ವರ್ಗದವು. ವಾಷಿಂಗ್‍ಟನ್ನಿನ ಕಾರ್ನೆಗಿ ಇನ್‍ಸ್ಟಿಟ್ಯೂಟ್ ಮೊದಲನೆಯದಕ್ಕೆ ಉದಾಹರಣೆ. ರಸೆಲ್‍ಸೇಜ್ ಪ್ರತಿಷ್ಠಾನ ಎರಡನೆಯ ರೀತಿಯದು; ಕೆಲವು ಪ್ರತಿಷ್ಠಾನಗಳು ಹಣ ಕೊಡುವುದಲ್ಲದೆ ಕೆಲಸವನ್ನೂ ನಡೆಸುತ್ತವೆ. ರಾಕ್‍ಫೆಲರ್ ಪ್ರತಿಷ್ಠಾನ, ಫೋರ್ಡ್ ಪ್ರತಿಷ್ಠಾನ ಇಂಥವು.
ಅಮೆರಿಕದವರು ಇಂಥ ಟ್ರಸ್ಟುಗಳಿಗೆ ಪ್ರತಿಷ್ಠಾನ, ಪುದುವಟ್ಟು, ದತ್ತಿ, ಕಾಪೋರೇಷನ್, ಸೊಸೈಟಿ-ಹೀಗೆ ವಿವಿಧ ಹೆಸರುಗಳನ್ನು ಕೊಟ್ಟಿರುವರು. ಆದರೆ ಪ್ರತಿಷ್ಠಾನಗಳು ಒಂದು ಅಥವಾ ಹಲವಾರು ಮಾದರಿಯ ರಚನೆ ಮತ್ತು ಕಾರ್ಯಭಾರಕ್ಕೆ ಸೇರುತ್ತವೆ. ಕೆಲವು ಪ್ರತಿಷ್ಠಾಪಕರು ಲಾಭರಹಿತ ಕಾರ್ಪೋರೇಷನ್ನುಗಳನ್ನು ಸ್ಥಾಪಿಸಿದ್ದಾರೆ. ಮತ್ತೆ ಕೆಲವರು ಬದುಕಿರುವವರಲ್ಲಿಯೋ ಅಥವಾ ಮರಣಶಾಸನದ ಮೂಲಕವೇ ಶಾಸನಬದ್ಧವಲ್ಲದ ದತ್ತಿಗಳನ್ನು ಬಿಟ್ಟುಹೋಗಿದ್ದಾರೆ. ಆದರೆ ಟ್ರಸ್ಟಿಗಳಿಗೆ ಅವನ್ನು ಶಾಸನಬದ್ಧವಾಗಿ ಮಾಡುವ ಅಧಿಕಾರವನ್ನು ಅವರು ಕೊಟ್ಟಿರಬಹುದು. ಕೆಲವು ದಾನಿಗಳು ಆದಾಯವಷ್ಟನ್ನೂ ವೆಚ್ಚ ಮಾಡಿ ಶಾಶ್ವತವಾಗಿ ತಮ್ಮ ದತ್ತಿಯನ್ನು ನಡೆಸಿಕೊಂಡು ಬರುವಂತೆ ಅಪೇಕ್ಷಿಸಿದ್ದಾರೆ. ಕಾರ್ನೆಗಿ ಪ್ರತಿಷ್ಠಾನ ಇಂಥವಕ್ಕೆ ಮಾದರಿಯಾಗಿದೆ. ಮತ್ತೆ ಕೆಲವರು ಆದಾಯದ ಜತೆಗೆ ಮೂಲಧನವನ್ನೂ ಉಚಿತ ರೀತಿಯಲ್ಲಿ ಅಥವಾ ಐಚ್ಛಿಕವಾಗಿ ವೆಚ್ಚ ಮಾಡುವ ಹಕ್ಕನ್ನು ಕೊಟ್ಟು ದತ್ತಿಗಳನ್ನು ಬಿಟ್ಟಿದ್ದಾರೆ. ರಾಕ್‍ಫೆಲರ್ ಪ್ರತಿಷ್ಠಾನ ಈ ವರ್ಗಕ್ಕೆ ಸೇರುತ್ತದೆ. ಕೆಲವರು ಅದರ ಆದಾಯ ಸಮೇತವಾಗಿ ತಮ್ಮ ಮೂಲಧನ ಇಷ್ಟು ವರ್ಷಗಳಲ್ಲಿ ವೆಚ್ಚವಾಗಿ ಹೋಗಬೇಕೆಂಬ ವಿಧಿಯನ್ನು ಹಾಕಿ ಆ ಪ್ರತಿಷ್ಠಾನದ ಬಯಕೆಗೆ ಒಂದು ಅವಧಿಯನ್ನು ಕಲ್ಪಿಸಿರಬಹುದು. ಜೂಲಿಯಸ್ ರೋಸೆನ್‍ಯಾರ್ಡ್ ತನ್ನ ಪುದುವಟ್ಟು ಇಪ್ಪತ್ತೈದು ವರ್ಷಗಳಲ್ಲಿ ಆದಾಯ ಮತ್ತು ಮೂಲಧನದ ಸಮೇತ ತೀರಿಹೋಗಬೇಕೆಂಬ ಕರಾರು ಹಾಕಿ ಈ ತೆರದ ಕೊಡುಗೆಯನ್ನು ಜಾರಿಗೆ ತಂದ. ಅಲ್ಪ ಸಂಖ್ಯೆಯ ಕೆಲವು ದಾನಿಗಳು ತಮ್ಮ ಪುದುವಟ್ಟಿನ ಹಣ ಒಂದು ಮೊತ್ತಕ್ಕೆ ಬರುವವರೆಗೆ ಅದರ ಸಮಗ್ರ ಆದಾಯವನ್ನೋ ಅಥವಾ ಒಂದು ಭಾಗವನ್ನೋ ಮೂಲಧನಕ್ಕೆ ಸೇರಿಸುತ್ತ ಹೋಗಬೇಕೆಂದು ನಿಯಮಿಸಿ ದತ್ತಿಗಳನ್ನು ಕೊಟ್ಟಿರುವುದುಂಟು. ಬೆಂಜಮಿನ್ ಫ್ರ್ಯಾಂಕ್ಲಿನ್ನನ ಪುದುವಟ್ಟು ಈ ವರ್ಗಕ್ಕೆ ಸೇರಿದ್ದು. ಡೂಕ್ ಎಂಡೋಮೆಂಟ್ ಎಂಬ ಪುದುವಟ್ಟು ತನ್ನ ಆದಾಯದ ಶೇಕಡ 20ರಷ್ಟನ್ನು ಮೂಲಧನದ ಮೊತ್ತ 40,000,000 ಡಾಲರುಗಳಿಗೇರುವವರಿಗೂ ಸೇರಿಸುತ್ತ ಹೋಗಬೇಕೆಂಬ ಕರಾರು ಹೊಂದಿದೆ.
ಅನೇಕ ಅಮೆರಿಕನ್ ದತ್ತಿಗಳು ಧಾರ್ಮಿಕವಲ್ಲ, ಲೌಕಿಕವಾಗಿವೆ. ವಿದ್ಯೆ, ಸಾಮಾಜಿಕಭಿವೃದ್ಧಿ, ಸಂಶೋಧನೆ ಪ್ರಚಾರ-ಇವುಗಳಿಗೆ ಅವು ಗಮನ ಕೊಟ್ಟಿವೆ. ಲೋಕೋಪಕಾರಿಯಲ್ಲಿ ಅಗ್ರಗಣ್ಯನಾದ ಬೆಂಜಿಮಿನ್ ಫ್ರಾಕ್ಲಿನ್ ಮದುವೆಯಾಗಿ ವೃತ್ತಿನಿರತರಾಗಿರುವ ಕುಶಲಕರ್ಮಿಗಳಿಗೆ ಬಡ್ಡಿಯ ಮೇಲೆ ಸಾಲವನ್ನು ಕೊಡಲು ಸ್ವಲ್ಪ ಹಣವನ್ನು ಮೀಸಲಿರಿಸಿದ. ಆಮೇಲೆ ಜಾರ್ಜಪೀಬಾಡಿ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಬೌದ್ಧಿಕ, ನೈತಿಕ ಹಾಗೂ ಔದ್ಯೋಗಿಕ ಶಿಕ್ಷಣಕ್ಕಾಗಿ ಒಂದು ಪುದುವಟ್ಟನ್ನು ಹಾಕಿದ. ಮಾನವರಲ್ಲಿ ತಿಳಿವು ಹರಡಿ ಹಬ್ಬಲು ಸ್ಮಿತ್ ಸೋನಿಯನ್ ಸಂಸ್ಥೆ 1849 ರಲ್ಲಿ ಪ್ರತಿಷ್ಠಾಪಿತವಾಯಿತು.
ಈ ಶತಮಾನ ಆದಿಯಲ್ಲಿ ಅಮೆರಿಕದ ಲೋಕೋಪಕಾರ ನೀತಿಯಲ್ಲಿ ವಿದ್ಯಾಭ್ಯಾಸ ಹೆಚ್ಚು ಪ್ರಾಶಸ್ತ್ಯ ಪಡೆಯಿತು. ಆ್ಯಂಡ್ರು ಕಾರ್ನೆಗಿ ಎಂಬಾತ 1911 ರಲ್ಲಿ ನ್ಯೂಯಾರ್ಕಿನ ಕಾರ್ನೆಗಿ ಕಾರ್ಪೋರೇಷನ್ ಎಂಬ ಸಂಸ್ಥೆಯನ್ನು ಪ್ರತಿಷ್ಠಾಪಿಸಿದ. ಅನೇಕ ಕ್ಷೇತ್ರಗಳಲ್ಲಿ ಶಿಕ್ಷಣವನ್ನೂ ಸಂಶೋಧನೆಯನ್ನೂ ನಡೆಸಿ ಬೆಳೆಸುವ ಮತ್ತು ಲೋಕದಲ್ಲಿ ಶಾಂತಿ ಹಬ್ಬುವಂತೆ ಮಾಡುವ ಧ್ಯೇಯದಿಂದ ಪ್ರವೃತ್ತವಾದ ಪ್ರತಿಷ್ಠಾನಗಳಲ್ಲೆಲ್ಲ ಇದು ಅತ್ಯಂತ ದೊಡ್ಡದು. ಡಿ. ರಾಕ್‍ಫೆಲರ್ ಮತ್ತು ಜಾನ್, ಡಿ ರಾಕ್ ಫೆಲರ್ ಜ್ಯೂನಿಯರ್ ಎಂಬುವರು ಔಷಧ ಚಿಕಿತ್ಸೆ, ಸಮಾಜ ಶಾಸ್ತ್ರ, ಮತ್ತು ಇತರ ಕ್ಷೇತ್ರಗಳಲ್ಲಿ ಸಂಶೋಧನೆ, ವಿದ್ಯಾಭ್ಯಾಸ ಕಲ್ಯಾಣ ಕಾರ್ಯಕ್ರಮ-ಇವುಗಳಿಗಾಗಿ ಐದು ಪ್ರತಿಷ್ಠಾನಗಳನ್ನು ನಿರ್ಮಿಸಿದ್ದಾರೆ. ಇನ್ನು ಕೆಲವರು ಮಕ್ಕಳ ಅಭ್ಯುದಯವನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯಾಸಂಗ ಮತ್ತು ಪ್ರದರ್ಶನಗಳ ವ್ಯವಸ್ಥೆಗಾಗಿಯೂ ಮಾನಸಿಕ ಆರೋಗ್ಯ, ವೈಯಕ್ತಿಕ ಹಾಗೂ ಸಾಮಾಜಿಕ ಆರೋಗ್ಯಗಳಿಗಾಗಿಯೂ ದತ್ತಿ ಕೊಟ್ಟಿದ್ದಾರೆ. ಮಿಲ್‍ಬಾಂಕ್ ಮೆಮೊರಿಯಲ್ ಫಂಡ್ ಮತ್ತು ರಸೆಲ್ ಸೇಜ್ ಪ್ರತಿಷ್ಠಾನ ಈ ಸಾಮಾಜಿಕ ಕ್ಷೇತ್ರದಲ್ಲಿನ ಅಗತ್ಯ ಸೇವೆಗೆಂದು ಏರ್ಪಟ್ಟಿವೆ.
ವಿಜ್ಞಾನ, ಶಿಕ್ಷಣ ಮತ್ತು ದಾನ-ಈ ಉದ್ದೇಶಗಳಿಗಾಗಿ ಹಣವನ್ನು ಸ್ವೀಕರಿಸಿ ಆಡಳಿತವನ್ನು ನಿರ್ವಹಿಸುವ ಸಲುವಾಗಿ ಫೋರ್ಡ್ ಪ್ರತಿಷ್ಠಾನ ಶಾಸನಬದ್ಧವಾಗಿ 1936 ನೆಯ ಇಸವಿ 15 ನೆಯ ಜನವರಿಯಲ್ಲಿ ಏರ್ಪಟ್ಟಿತು. 1951 ರಲ್ಲಿ ಅದು ವಯಸ್ಕರ ವಿದ್ಯಾಭ್ಯಾಸ ಮತ್ತು ಪೂರ್ವ ಯೂರೋಪಿನ ಜನತೆಯ ಹಿತಕ್ಕಾಗಿ (ಇದಕ್ಕೆ ಫ್ರೀ ರಷ್ಯಾ ಫಂಡ್ ಎಂದು ಹಿಂದೆ ಹೆಸರಿತ್ತು) ಮೂರು ಪುದುವಟ್ಟುಗಳನ್ನು ಹಾಕಿತು. ಮತ್ತೆ ವಯಸ್ಕರ ವಿದ್ಯಾಭ್ಯಾಸ ಪುದುವಟ್ಟಿನ ಮೂಲಕ ನಿರ್ವಹಿಸಲ್ಪಡುವಂತೆ 1,200,000 ಡಾಲರುಗಳನ್ನು ಮೀಸಲಿರಿಸಿ ಟೆಲಿವಿಷನ್ ರೇಡಿಯೋ ವರ್ಕ್‍ಷಾಪ್ ಎಂಬುದನ್ನು ಸ್ಥಾಪಿಸಿತು. ಫೋರ್ಡ್ ಫೌಂಡೇಷನ್ ನಿಧಿಯಿಂದ ವಿದ್ಯಾಭ್ಯಾಸ, ಸಾರ್ವಜನಿಕ ವಿಚಾರ, ಆರ್ಥಿಕಾಭಿವೃದ್ಧಿ ಮತ್ತು ಆಡಳಿತ, ಮಾನಸಿಕ ಆರೋಗ್ಯ, ಅಂತಾರಾಷ್ಟ್ರೀಯ ಶಾಂತಿ ಮತ್ತು ಪರಸ್ಪರ ತಿಳಿವಳಿಕೆ ಈ ಐದು ಅರಿಸಿದ ಕಾರ್ಯಕ್ರಮಗಳ ಕ್ಷೇತ್ರಗಳಲ್ಲಿ ಪ್ರೋತ್ಸಾಹ ನೀಡುತ್ತಿದೆ. ಭಾರತದಲ್ಲಿ ಕಮ್ಯುನಿಟಿ ಡೆವಲಪ್‍ಮೆಂಟ್ ಪ್ಲ್ಯಾನುಗಳನ್ನು ಕಾರ್ಯರೂಪಕ್ಕೆ ತರಲು ಈ ಕೊಡುಗೆಗಳಿಂದ ಸಾಧ್ಯವಾಯಿತು. ಸ್ವೀಡನ್ನಿನ ನೊಬೆಲ್ ಪ್ರತಿಷ್ಠಾನ ಪ್ರತಿವರ್ಷವೂ ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರವಿಜ್ಞಾನ, ಔಷಧ, ಆದರ್ಶಸಾಹಿತ್ಯ ಮತ್ತು ವಿಶ್ವಶಾಂತಿ-ಇವುಗಳಿಗಾಗಿ ಬಹುಮಾನವನ್ನು ಕೊಡುತ್ತಿದೆ.
ಒಟ್ಟಿನಲ್ಲಿ ವಿದ್ಯಾಭ್ಯಾಸ, ಆರೋಗ್ಯ, ಔಷಧ ಮತ್ತು ಸಮಾಜ ಕಲ್ಯಾಣ-ಇವು ಪ್ರತಿಷ್ಠಾನಗಳ ಮುಖ್ಯ ಸೇವಾಕ್ಷೇತ್ರಗಳು. ಆದರೆ ಧರ್ಮ, ಮಾನವಿಕ ವಿಷಯಗಳು ಅಂತಾರಾಷ್ಟ್ರೀಯ ಮತ್ತು ಅಂತರಸಾಂಸ್ಕøತಿಕ ಸಂಬಂಧಗಳು, ಪೌರತ್ವದ ಕಾರ್ಯಕ್ರಮಗಳು ವೈಜ್ಞಾನಿಕ ಸಂಶೋಧನೆಗಳು ಇತ್ಯಾದಿ ಕ್ಷೇತ್ರಗಳು ಅವುಗಳ ವ್ಯಾಪ್ತಿಗೆ ಹೊರತಾಗಿಲ್ಲ.
ಭಾರತದಲ್ಲಿ
[ಬದಲಾಯಿಸಿ]ಜನತೆಯ ಕಲ್ಯಾಣಕಾರ್ಯಗಳಿಗಾಗಲಿ ದಾನದತ್ತಿಗಳನ್ನು ಕೊಡುವುದು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕಂಡುಬರುತ್ತದೆ. ಪೌರಾಣಿಕ ಯುಗದಲ್ಲಿ ರಾಜಮಹಾರಾಜರು ಋಷ್ಯಾಶ್ರಮಗಳಿಗೂ ವಿದ್ವಜ್ಜನರಿಗೂ ಯಥೇಚ್ಚವಾಗಿ ಧನಸಹಾಯ ನೀಡುತ್ತಿದ್ದರು. ಸಾತವಾಹನ ಅರಸರು ಧಾರ್ಮಿಕ ಸಂಸ್ಥೆಗಳಿಗೂ ವಿದ್ವಜ್ಜನರಿಗೂ ಭೂಕೊಡುಗೆಯ ರೂಪದಲ್ಲಿ ದತ್ತಿಗಳನ್ನು ಹಾಕಿಕೊಡುವ ಸಂಪ್ರದಾಯವನ್ನು ಆರಂಭಿಸಿದರು. ಅವರ ಅನಂತರ ಕರ್ನಾಟಕದಲ್ಲಿ ಆಳಿದ ಚುಟುಕುಲಾನುದ ಸಾತಕರ್ಣಿಯ ಮಗಳಾದ ಶಿಸ್ಕಂದ ನಾಗಶ್ರೀ ಬನವಾಸಿಯ ಶಿಕ್ಷಣ ಸಂಸ್ಥೆಯೊಂದಕ್ಕೆ ಭೂಕೊಡುಗೆಯನ್ನು ಕ್ರಿ.ಶ, ಮೂರನೆಯ ಶತಮಾನದಲ್ಲಿ ನೀಡಿರುವ ಅಂಶ ಅಲ್ಲಿನ ಮಧುಕೇಶ್ವರ ದೇವಾಲಯದ ನಾಗಶಿಲಾಶಾಸನದಲ್ಲಿ ಉಲ್ಲೇಖವಾಗಿದೆ. ಅನಂತರದ ಅರಸುಮನೆತನಗಳೂ ಅವರ ಮಾಂಡಲಿಕರೂ ಮಠಗಳಿಗೂ ದೇವಾಲಯಗಳಿಗೂ ಭೂಕೊಡುಗೆಯನ್ನು ದತ್ತಿಯಾಗಿ ಕೊಡುತ್ತಿದ್ದ ಅಂಶ ಶಾಸನಗಳಲ್ಲಿ ವ್ಯಕ್ತಪಟ್ಟಿದೆ. ರಾಜ ಮಹಾರಾಜರಂತೆ ಧನಿಕರೂ ಊರೋಟ್ಟಿನ ಜನತೆಯೂ ಶೈಕ್ಷಣಿಕ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಭೂಕೊಡುಗೆಯನ್ನು ಕೊಡುತ್ತಿದ್ದರು. ಅಗ್ರಹಾರ, ಬ್ರಹ್ಮಪುರಿ ದೇವಾಲಯದ ವಿದ್ಯಾಲಯಗಳು ಭೂಕೊಡುಗೆಯಿಂದ ಬರುತ್ತಿದ್ದ ಆದಾಯದಿಂದ ನಡೆಯುತ್ತಿದ್ದವು.
ಆಧುನಿಕ ಭಾರತದಲ್ಲಿ ಹಣದ ಆದಾಯದಿಂದ ಆಸ್ತಿಯನ್ನು ದತ್ತಿಯಾಗಿ ನೀಡುವುದು ದೇಶಾದ್ಯಂತ ಕಂಡುಬರುತ್ತಿದೆ. ಧಾರ್ಮಿಕ ಮತ್ತು ಶೈಕ್ಷಣಿಕ ಉದ್ದೇಶಗಳಂತೆ ಅಂಗವಿಕಲರ ಕಲ್ಯಾಣ ದೀನದಲಿತರ ಉದ್ಧರಣ, ವಿಜ್ಞಾನ ಸಂಶೋಧನೆ, ವಯಸ್ಕರ ಶಿಕ್ಷಣ-ಈ ಉದ್ದೇಶಗಳಿಗೂ ದತ್ತಿ ಅಥವಾ ಪುದುವಟ್ಟುಗಳು ಏರ್ಪಡುತ್ತಿವೆ. ಭಾರತದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ವಿವ��ಧ ವಿಷಯದ ಭಾಗಗಳ ವಿದ್ಯಾರ್ಥಿಗಳಿಗೆ ವೇತನ, ಬಹುಮಾನ, ಮುಂತಾದ ರೀತಿಯಲ್ಲಿ ಪ್ರೋತ್ಸಾಹ ನೀಡಲು ದತ್ತಿಗಳೇರ್ಪಟ್ಟಿವೆ. ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ಅನೇಕ ನಿಧಿಗಳು ಸ್ಥಾಪನೆಯಾಗಿವೆ. ಸಾಹಿತ್ಯರಚನೆ, ನಿರ್ಮಾಣಕಾರ್ಯ-ಇವುಗಳಿಗೂ ದತ್ತಿಗಳೂ ಏರ್ಪಟ್ಟಿವೆ. ಪಾಶ್ಚಾತ್ಯ ದೇಶಗಳಲ್ಲಿ ಅಧಿಕಲಾಭಗಳಿಗೆ ಮತ್ತು ತೆರಿಗೆಯ ವಿನಾಯತಿ ಪ್ರತಿಷ್ಠಾನಗಳ ಸ್ಥಾಪನೆಗೆ ಮೂಲ ಪ್ರಚೋದಕಗಳೆನಿಸಿದ್ದರೆ ಭಾರತದಲ್ಲಿ ಅಂಥ ದಾನದತ್ತಿಗಳಿಗೆ ಆಧ್ಯಾತ್ಮಿಕ ದೃಷ್ಟಿಯೂ ಜನತಾ ಕಲ್ಯಾಣವೂ ಮೂಲ ಉತ್ತೇಜನಕಗಳೆನಿಸಿದೆ.
ಹೆಚ್ಚಿನ ಓದಿಗೆ
[ಬದಲಾಯಿಸಿ]- Newfield, Christopher (2008). Unmaking the public university: the forty-year assault on the middle class. Harvard University Press. p. 162. ISBN 978-0-674-02817-3.
- Stone, Diane. Knowledge actors and transnational governance: The private-public policy nexus in the global agora. Palgrave Macmillan, 2013.
- Lester Salamon et al., "Global Civil Society: Dimensions of the Nonprofit Sector", 1999, Johns Hopkins Center for Civil Society Studies.
- Joan Roelofs, Foundations and Public Policy: The Mask of Pluralism, State University of New York Press, 2003, ISBN 0-7914-5642-0
- Helmut Anheier, Siobhan Daly, The Politics of Foundations: A Comparative Analysis, Routledge, 2006.
- Legitimacy of Philanthropic Foundations: United States and European Perspectives, ed. Kenneth Prewitt, Russell Sage Foundation, 2006.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Ford Foundation: A Primer for Endowment Grantmakers
- Dada, Kamil (February 1, 2008). "Congress investigates endowment". Stanford Daily. Archived from the original on June 9, 2011.
- 12 SMA for Financial Endowments
- Comparative Highlights of Foundation Laws: The operating environment for foundations in Europe
- Foundations in Europe
- European Foundation Statute
- It's time for a European Foundation Statute (2011)