ವಿಷಯಕ್ಕೆ ಹೋಗು

ತಿಪ್ಪಣಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಿಪ್ಪಣಾರ್ಯನು ಶ್ರೀ ಹನುಮದ್ವಿಲಾಸ, ಕುಚೇಲೋಪಾಖ್ಯಾನ , ಕಾಳಿಂಗ ಮರ್ಧನ ಎಂಬ ಮೂರು ಗ್ರಂಥಗಳನ್ನು ರಚಿಸಿದ್ದಾರೆ. ಖಾದ್ರಿ ನೃಸಿಂಹ ಎಂಬುದು ಈ ಕವಿಯ ಅಂಕಿತ. ಈ ಕವಿಯಿಂದ ರಚಿಸಲ್ಪಟ್ಟಿರುವ ಗ್ರಂಥಗಳು ಇನ್ನೂ ಕೆಲವು ಇರಬಹುದಾದರೂ. ಸದ್ಯಕ್ಕೆ ಲಭ್ಯವಿರುವುದು ಇವು ಮೂರು ಮಾತ್ರ. ಇವುಗಳಲ್ಲಿ ಒಂದೊಂದೂ ಅದ್ಭುತ ವರ್ಣನಾವೈಖರಿ, ಅಪೂರ್ವ ಶಬ್ದ ಸಂಪತ್ತಿ, ಅರ್ಥ ಗಾಂಭೀರ್ಯ, ಪದಪ್ರಯೋಗ ಚಾತುರ್ಯ ಮುಂತಾದವುಗಳಿಂದ ಕೂಡಿದ್ದು ನವರಸಾಲಂಕಾರಭರಿತವಾಗಿದೆ.

ತಿಪ್ಪಣಾರ್ಯರ ತಾಯಿಯ ಹೆಸರು ಗಿರಿಯಮ್ಮ, ತಂದೆ ರಂಗರಾರ್ಯ. ಗುರು ಚಂದ್ರರಸಾರ್ಯ. ತನ್ನ ಪಿತಾಮಹನು ಸರಸಕವಿ ಎಂದು ಪ್ರಸಿದ್ಧನಾದ ನರಸಿಂಹಾರ್ಯ (ನರ ಕಂಠೀರವ) ಎಂದು ತಿಪ್ಪಣಾರ್ಯ ತನ್ನ ಗ್ರಂಧದಲ್ಲಿ ಹೇಳಿಕೊಂಡಿದ್ದಾರೆ. ಇವರು ಮಾಧ್ವ ಸಂಪ್ರದಾಯದ, ಉಲಚುಕಮ್ಮಿ ಬ್ರಾಹ್ಮಣರೆಂದು, ವಿಶ್ವಾಮಿತ್ರ ಗೋತ್ರವರೆಂದೂ ಈತನ ಗ್ರಂಥಗಳಿಂದ ತಿಳಿದು ಬರುತ್ತದೆ.

ಕವಿಯ ಕಾಲ

[ಬದಲಾಯಿಸಿ]

ತಿಪ್ಪಣಾರ್ಯರ ಸ್ಥಳ-ಕಾಲಗಳು ವಿವಾದಾಸ್ಪದವಾಗಿದೆ. ಈತನ ಪೂರ್ವಿಕರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಪೂರ್ಣಯ್ಯನವರ ಆಳ್ವಿಕೆಯ ಕಾಲದಲ್ಲಿ ( ೧೭೯೯- ೧೮೧೧)ದಾನವಾಗಿ ಭೂಮಿಯನ್ನು ಪಡೆದಿದ್ದರೆಂದು ತಿಳಿದು ಬರುತ್ತದೆ. ಈ ಆಧಾರದಿಂದ ತಿಪ್ಪಣಾರ್ಯ ೧೦೦-೧೨೦ ವರ್ಷಗಳ ಹಿಂದೆ ಜೀವಿಸಿದ್ದು, ಕಾವ್ಯ ರಚನೆ ಮಾಡಿರಬಹುದೆಂದು ಊಹಿಸಲಾಗಿದೆ. ತಿಪ್ಪಣಾರ್ಯ ತನ್ನ ಗ್ರಂಥಗಳನ್ನು, ಧಾರ್ಮಿಕ ಸೇವೆಗಾಗಿ , ಭಕ್ತಿಯಿಂದ ರಚಿಸಿರುವುದರಿಂದ , ತನ್ನ ಪೂರ್ವಿಕರನ್ನಾಗಲೀ, ಸಮಕಾಲೀನರನ್ನಾಗಲೀ ಪ್ರಶಂಸಿಸುವ ಗೊಡವೆಗೆ ಹೋಗಿಲ್ಲ.

ಕವಿಯ ಸ್ಥಳ

[ಬದಲಾಯಿಸಿ]

ತಿಪ್ಪಣಾರ್ಯನು ತನ್ನ ವಾಸಸ್ಥಳವನ್ನು ನವಸಾಲಪುರೀ-ನೂತನಾವರಣ ಮಂದಿರ ಎಂದು ಹೇಳಿಕೊಂಡಿದ್ದಾರೆ. ಈ ಹೆಸರಿನ ಊರು ಈಗ ಯಾವುದೂ ಇಲ್ಲ. ಈ ಎರಡು ಹೆಸರುಗಳು ಹೊಸಕೋಟೆ ಎಂಬ ಅ���್ಥವನ್ನು ಕೊಡುತ್ತವೆ. ಆದರೆ ಮೈಸೂರ ಸೀಮೆಯಲ್ಲಿ ಹೊಸಕೋಟೆ ಎಂಬ ಹೆಸರಿನ ಮೂರು - ನಾಲ್ಕು ಸ್ಥಳಗಳಿರುವುದರಿಂದ , ಖಚಿತವಾಗಿ ಯಾವ ಹೊಸಕೋಟೆ ಎಂಬುದನ್ನೂ ನಿರ್ಧರಿಸುವುದು ಕಷ್ಟವಾಗಿದೆ. ಮಾಧ್ವ ಸಂಪ್ರದಾಯದ ,ಉಲುಚುಕಮ್ಮಿ ಕುಲಕ್ಕೆ ಸೇರಿದ ಒಂದೇ ಒಂದು ಬ್ರಾಹ್ಮಣ ಮನೆತನದವರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿರುವ ಚಿಂತನಪಲ್ಲಿಅಥವಾ ಹುಣಸೆಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ ಈ ಚಿಂತನಪಲ್ಲಿಯೇ ತಿಪ್ಪಣಾರ್ಯನ ವಾಸಸ್ಥಳ ಇದ್ದರೂ ಇರಬಹುದು ಎಂದು ಶಂಕಿಸಲಾಗಿದೆ.

ಕೃತಿಗಳು

[ಬದಲಾಯಿಸಿ]