ವಿಷಯಕ್ಕೆ ಹೋಗು

ಚಾರ್ಲ್ಸ್ ಗುಡ್ಇಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಚಾರ್ಲ್ಸ್ ಗುಡ್ಇಯರ್, 1800-60. ಅಮೆರಿಕದ ರಸಶಾಸ್ತ್ರಜ್ಞ ಮತ್ತು ತಂತ್ರಜ್ಞ. ರಬ್ಬರನ್ನು ಅನೇಕ ರಂಗಗಳಲ್ಲಿ ಉಪಯೋಗಿಸಲು ಸಾಧ್ಯವಾಗುವಂಥ ವಲ್ಕನೀಕರಣ ವಿಧಾನವನ್ನು ಕಂಡುಹಿಡಿದು ಇಂದಿನ ರಬ್ಬರ್ ಉದ್ಯಮಕ್ಕೆ ನಾಂದಿ ಹಾಕಿದವ. ಜೀವಮಾನವಿಡೀ ಸಾಲದ ಬವಣೆ, ಸೋಲಿನ ಹತಾಶೆ ಅನುಭವಿಸುತ್ತಿದ್ದರೂ ಅದಮ್ಯ ಸಾಹಸ ಪ್ರವೃತ್ತಿಯಿಂದ ಮುನ್ನುಗ್ಗಿದ ಉದ್ಯಮ ಶೀ�� ವ್ಯಕ್ತಿ.

ಬದುಕು ಮತ್ತು ಸಾಧನೆ

[ಬದಲಾಯಿಸಿ]

ಅಮೆರಿಕ ಸಂಯುಕ್ತ ಸಂಸ್ಥಾನಗಳ ಕನೆಕ್ಟಿಕಟ್ ಪ್ರಾಂತದ ಮುಖ್ಯ ಪಟ್ಟಣ ನ್ಯೂಹೇವನ್ನಲ್ಲಿ 29 ಡಿಸೆಂಬರ್ 1800ರಂದು ಜನಿಸಿದ. ಬಾಲ್ಯವನ್ನೂ ನ್ಯೂಹೇವನ್ನಲ್ಲಿಯೇ ಮುಗಿಸಿದ ಬಳಿಕ ವ್ಯವಸಾಯ ಉಪಕರಣ ಮತ್ತು ಇತರ ಲೋಹ ಸಲಕರಣೆಗಳ ತಯಾರಿಕೆಯಲ್ಲಿ ನಿಪುಣನಾಗಿದ್ದ ತನ್ನ ತಂದೆಯ ಸಂಸ್ಥೆಯಲ್ಲಿ ಕೆಲಸ ಮಾಡಿ (1821-30) ಅನಂತರ ಸ್ವತಂತ್ರವಾಗಿ ಕೆಲಸ ಮಾಡಲು ತೊಡಗಿದ. ಈತ ತನ್ನ ತಂದೆಯಿಂದ ಬೇರೆಯಾಗುವ ವೇಳೆಗಾಗಲೇ ರಬ್ಬರ್ ಇವನನ್ನು ಆಕರ್ಷಿಸಿತ್ತು. ಅತಿ ಶೀತ ಮತ್ತು ಅತಿ ಉಷ್ಣದ ಪರಿಸ್ಥಿತಿಗಳಲ್ಲಿಯೂ ಸಮರ್ಪಕವಾಗಿ ಕೆಲಸಮಾಡುವಂತೆ ರಬ್ಬರ್ನ್ನು ಮಾರ್ಪಡಿಸುವುದೇ ಇವನ ಕನಸಾಯಿತು. ಈ ಮಾರ್ಪಾಡಿಗಾಗಿ ಇವನು ಲೆಕ್ಕವಿಲ್ಲದಷ್ಟು ಪ್ರಯೋಗಗಳನ್ನು ನಡೆಸಿದ. ರಬ್ಖರ್ ನೈಟ್ರಿಕ್ ಆಮ್ಲ ಮಿಶ್ರಣಗಳೊಡನೆ ಇವನು ಮಾಡಿದ ಆರಂಭ ಪ್ರಯೋಗಗಳು ಮೊದಮೊದಲು ಆಶಾದಾಯಕವೆಂಬಂತೆ ತೋರಿದರೂ ಈ ಬಗೆಯಲ್ಲಿ ಮಾರ್ಪಡಿಸಿದ ರಬ್ಬರ್ ಅತ್ಯುಷ್ಣ ಪರಿಸ್ಥಿತಿಗಳಲ್ಲಿ ಸಮರ್ಪಕವಾಗಿರಲಿಲ್ಲ. ಅದೇ ಸಮಯದಲ್ಲಿ ನೆರೆಯೂರಾದ ರಾಕ್ಸ್‌ ಬರಿಯ ರಬ್ಬರ್ ಕಾರ್ಖಾನೆಗಳಲ್ಲಿ ನೇಥೇನಿಯಲ್ ಹ್ಯಾವರ್ಡ್ ಎಂಬಾತ ರಬ್ಬರಿನ ಮೇಲೆ ಗಂಧಕದ ಪರಿಣಾಮಗಳನ್ನು ಕುರಿತು ಅಭ್ಯಾಸ ಮತ್ತು ಪ್ರಯೋಗಗಳನ್ನು ನಡೆಸುತ್ತಿದ್ದ. ಹ್ಯಾವರ್ಡನ ಪರಿಚಯವಾದ ಮೇಲೆ ಆತ ಉಪಯೋಗಿಸುತ್ತಿದ್ದ ವಿಧಾನಗಳ ಮೇಲೆ ಹಕ್ಕನ್ನು ಕೊಂಡುಕೊಂಡು ಗುಡ್ಇಯರ್ ಆ ವಿಧಾನಗಳನ್ನು ಉತ್ತಮಗೊಳಿಸಲು ಪ್ರಯತ್ನ ಮಾಡತೊಡಗಿದ. ಈ ಪ್ರಯೋಗಗಳಲ್ಲಿ ನಿರತನಾಗಿದ್ದಾಗ 1839ರಲ್ಲಿ ಒಂದು ದಿನ ಆಕಸ್ಮಿಕವಾಗಿ ರಬ್ಬರ್-ಗಂಧಕದ ಮಿಶ್ರಣ ಗುಡ್ಇಯರ್ನ ಕೈಯಿಂದ ಹಾರಿ ಬೆಂಕಿಯಲ್ಲಿ ಬಿತ್ತು. ಬೆಂಕಿಯಲ್ಲಿ ಬಿದ್ದ ಮಿಶ್ರಣವನ್ನು ಹೊರತೆಗೆದಾಗ ಪಡೆದಿದ್ದನ್ನು ಈತ ಗಮನಿಸಿದ. ರಬ್ಬರ್ಗಳನ್ನು ಗಂಧಕದೊಡನೆ ಕಾಯಿಸಿ ರಬ್ಬರಿನ ಗುಣಗಳನ್ನು ಮಾರ್ಪಡಿಸುವ ಈ ವಿಧಾನವನ್ನು ಮತ್ತೆ ಹಲವಾರು ಪ್ರಯೋಗಗಳನ್ನು ಮಾಡಿ ಖಚಿತಗೊಳಿಸಿ ಪರಿಪುರ್ಣಗೊಳಿಸಿದ. ಇದಕ್ಕೆ ವಲ್ಕನೀಕರಣವೆಂದು (ರೋಮನ್ ಪುರಾಣದಲ್ಲಿ ವಲ್ಕನ್ ಎಂದರೆ ಅಗ್ನಿದೇವತೆ) ಹೆಸರಿಟ್ಟು 1844 ರಲ್ಲಿ ತನ್ನ ಮೊದಲ ಏಕಸ್ವಾಮ್ಯವನ್ನು ಪಡೆದ. ಈ ವಿಧಾನ ಬಲು ಸರಳವಾದದ್ದರಿಂದ ಏಕಸ್ವಾಮ್ಯದ ನಿಯಮಗಳನ್ನು ಉಲ್ಲಂಘಿಸಿ ಸ್ವತಂತ್ರವಾಗಿ ವಲ್ಕನೀಕೃತ ರಬ್ಬರನ್ನು ತಯಾರಿಸುವ ಅನುಕರಣಕಾರರು ಪ್ರಪಂಚದಾದ್ಯಂತ ತಲೆ ಎತ್ತಿದರು. ಇವರ ವಿರುದ್ಧ ಕಾದಾಡಬೇಕಾಯಿತು. ಏಕಸ್ವಾಮ್ಯದ ಬರೆವಣಿಗೆಯಲ್ಲಿ ಕುಂದುಕೊರತೆಗಳಿದ್ದುದರಿಂದ ಫ್ರಾನ್ಸ್‌ ಮತ್ತು ಇಂಗ್ಲೆಂಡಿನ ಕೋರ್ಟುಗಳಲ್ಲಿ ಇವನಿಗೆ ಸೋಲಾಯಿತು. ಅಮೆರಿಕದ ನ್ಯಾಯಾಲಯದಲ್ಲಿ ಇವನಿಗೆ ವಿಜಯ ದೊರೆಯಿತು (1852). ಆದರೆ ಇವನಿಗೆ ಸ್ವಲ್ಪವೂ ಲಾಭವಾಗದಂತೆ ಆ ವಿಧಾನವನ್ನು ಇವನ ಅನುಮತಿಯಿಲ್ಲದೆ ಅನೇಕ ಮಂದಿ ಉಪಯೋಗಿಸಿದರು.


ತನ್ನ ಸಂಶೋಧನೆಗಳನ್ನು ಕುರಿತ ‘ಗಮ್ ಇಲಾಸ್ಟಿಕ್ಸ್‌, ಅಂಡ್ ಇಟ್ಸ್‌ ವೆರೈಟೀಸ್’ ಎಂಬ ಪುಸ್ತಕವನ್ನು 1853-55ರ ಅವಧಿಯಲ್ಲಿ ಬರೆದು ಎರಡು ಸಂಪುಟಗಳಾಗಿ ಪ್ರಕಟಿಸಿದ. ಗುಡ್ ಇಯರ್ನ ಸಂಶೋಧನೆ ಹಾಗೂ ವಿಧಾನಗಳನ್ನು ಉಪಯೋಗಿಸಿ ಅನೇಕ ಜನ ಲಕ್ಷಾಧೀಶರಾದರೂ ಈತ ಮಾತ್ರ ನಿರ್ಗತಿಕನಾಗಿಯೇ ಉಳಿದ. ಫ್ರಾನ್ಸಿನಲ್ಲಿ ಇವನಿಗೆ ಸಂಭಾವನೆ ಹಣ ಕೊಟ್ಟು ಇವನ ವಿಧಾನವನ್ನು ಉಪಯೋಗಿಸುತ್ತಿದ್ದ ಕಾರ್ಖಾನೆಯೊಂದು ದಿವಾಳಿಯೆದ್ದಿತು. ಬಾಕಿಯಿದ್ದ ಸಾಲಗಳನ್ನು ತೀರಿಸದೇ ಹೋದದ್ದರಿಂದ ಈತ ಪ್ಯಾರಿಸಿನಲ್ಲಿ ಸೆರೆಮನೆ ಕಾಣಬೇಕಾಯಿತು (1853). ಐದು ವರ್ಷಗಳ ಅನಂತರ ಮಾಡಲು ಉದ್ಯೋಗವಿಲ್ಲದೆ, ಜೀವನದಲ್ಲಿ ಪೂರ್ಣ ನಿರಾಶನಾಗಿ, ನಿರ್ಗತಿಕನಾಗಿ ನ್ಯೂಯಾರ್ಕ್ ನಗರದಲ್ಲಿ 1 ಜುಲೈ 1860ರಂದು ನಿಧನ ಹೊಂದಿದ.

ಇವನ ಹೆಸರಿನಲ್ಲಿ ಗುಡ್ಇಯರ್ ಟೈರ್ ಅಂಡ್ ರಬ್ಬರ್ ಕಂಪನಿಯನ್ನು 1898ರಲ್ಲಿ ಸ್ಥಾಪಿಸಲಾಯಿತು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: