ವಿಷಯಕ್ಕೆ ಹೋಗು

ಚಾತುರ್ಮಾಸ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾತುರ್ಮಾಸವೆಂಬುದು ಒಂದು ವ್ರತ. ವೈದಿಕ ಧರ್ಮಾನುಯಾಯಿಗಳಲ್ಲೂ ಜೈನರಲ್ಲೂ, ವಿಶೇಷವಾಗಿ ಯತಿಗಳಲ್ಲಿ, ಆಚರಣೆಯಲ್ಲಿದೆ. Raja Ravi Varma - Sankaracharya

ಆಷಾಢದ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕದ ಶುಕ್ಲ ಪಕ್ಷದ ದಶಮಿಯವರೆಗೆ, ನಾಲ್ಕು ತಿಂಗಳುಗಳ ಕಾಲ ಆಚರಿಸುವ ಕಾರಣ ಈ ವ್ರತಕ್ಕೆ ಚಾತುರ್ಮಾಸವೆಂದು ಹೆಸರು. ಒಂದೊಂದು ತಿಂಗಳೂ ಒಂದೊಂದು ಬಗೆಯ ಆಹಾರವನ್ನು ವರ್ಜಿಸುವುದು ಈ ವ್ರತದ ಮುಖ್ಯಾಂಶ.

ಮೊದಲನೆಯ ತಿಂಗಳು (ಆಷಾಢ ಶುಕ್ಲ ಏಕಾದಶಿ - ಶ್ರಾವಣ ಶುಕ್ಲ ದಶಮಿ) ಕಾಯಿ ಪಲ್ಲೆ ತರಕಾರಿಗಳು ವರ್ಜ್ಯ. ಇದನ್ನು ಶಾಕವ್ರತವೆನ್ನುತ್ತಾರೆ. ಕಾಯಿಪಲ್ಲೆಗಳ ಬದಲಾಗಿ ಕಾಳುಗಳು, ಹುಳಿಯ ರುಚಿಗೆ ಮಾವಿನ ಹಣ್ಣು, ಮೆಣಸು ಜೀರಿಗೆಗಳು ಖಾರಕ್ಕೆ ಬಳಸಲ್ಪಡುತ್ತವೆ. ಸಾಸಿವೆ ಬಹುತೇಕ ವರ್ಜ್ಯ ಆದರೆ ಕೆಲ ಸಂಪ್ರದಾಯಗಳಲ್ಲಿ ಸಾಸಿವೆಯ ಬಳಕೆ ಉಂಟು.

ಎರಡನೆಯ ತಿಂಗಳು (ಶ್ರಾವಣ - ಭಾದ್ರಪದ) ಮೊಸರು ಬಳಸುವುದಿಲ್ಲ. ಇದು ದಧಿ ವ್ರತ. ಮಜ್ಜಿಗೆಗೆ ದೋಷವಿಲ್ಲ.

ಮೂರನೆಯ ತಿಂಗಳು (ಭಾದ್ರಪದ - ಆಶ್ವಯಜ, ಆಶ್ವೀನ) ಹಾಲಿನ ಬಳಕೆಯಿಲ್ಲ. ಇದು ಕ್ಷೀರವ್ರತ.

ನಾಲ್ಕನೆಯ ತಿಂಗಳು (ಆಶ್ವೀನ - ಕಾರ್ತಿಕ) ದ್ವಿದಳ ಧಾನ್ಯ, ಬೇಳೆಗಳು ವರ್ಜ್ಯ. ಇದು ದ್ವಿದಳ ವ್ರತ. ದ್ವಿದಳ ಸಸ್ಯಗಳಾಗಲೀ ಸಸ್ಯೋತ್ಪನ್ನಗಳಾಗಲಿ ಬಳಕೆಗೆ ಬಾರವು.

ನಾಲ್ಕು ತಿಂಗಳುಗಳು ಪೂರೈಸಿದ ಬಳಿಕ ಉತ್ಥಾನ ದ್ವಾದಶಿಯಂದು ವ್ರತ ಸಮಾಪ್ತಿಯಾಗುವುದು.

ಯತಿಗಳಲ್ಲಿ ಚಾತುರ್ಮಾಸ್ಯವನ್ನು ಒಂದು ಪಕ್ಷವನ್ನು ಒಂದು ಮಾಸದಂತೆ ಗಣಿಸಿ ಎರಡು ತಿಂಗಳುಗಳಲ್ಲಿ ವ್ರತವನ್ನು ಪೂರೈಸುವ ಪರಿಪಾಠವುಂಟು. ಚಾತುರ್ಮಾಸ್ಯಕ್ಕೆ ಸಂಕಲ್ಪಿಸಿದ ಯತಿಗಳು ವ್ರತ ಮುಗಿಯುವವರೆಗೆ ಸಂಚಾರ ಕೈಗೂಳ್ಳುವಂತಿಲ್ಲ. ವ್ರತಕ್ಕೆ ಕುಳಿತ ಕ್ಷೇತ್ರದ, ಊರಿನ ಸುತ್ತಿನ ಒಳಗೆಯೆ ವ್ರತಕಾಲವನ್ನು ಕಳೆಯುತ್ತಾರೆ. ವ್ರತಸಮಾಪ್ತಿಯ ನಂತರ ಸೀಮೋಲ್ಲಂಘನ ಮಾಡಿ ಮತ್ತೆ ಸಂಚಾರಕ್ಕೆ ತೊಡಗುತ್ತಾರೆ.

ಚಾತುರ್ಮಾಸದ ಆಚರಣೆಯು ಯಾವಾಗ ಆರಂಭವಾಯಿತೆಂದು ಸುಲಭವಾಗಿ ಹೇಳಲು ಬಾರದು. ೧೦೦೦ ವರ್ಷಗಳ ಹಿಂದೆ, ಸಾಮಾನ್ಯ ಶಕೆಯ ೧೦-೧೧ ಶಕತಗಳಲ್ಲಿ, ಆಚರಣೆಯಲ್ಲಿತ್ತೆಂದು ಧಾರ್ಮಿಕ ಗ್ರಂಥಗಳಿಂದಲೂ ಲೌಕಿಕ ಸಾಹಿತ್ಯದಿಂದಲೂ ತಿಳಿದು ಬರುತ್ತದೆ.

ಚಾತುರ್ಮಾಸ ವ್ರತಾಚರಣೆಯ ಮೂಲ ಉದ್ದೇಶಗಳು ಏನಿದ್ದಿರಬಹುದೆಂದು ಈಗ ಊಹಿಸಬೇಕಷ್ಟೆ. ಅದೇನೆ ಇರಲಿ, ಚಾತುರ್ಮಾಸದ ನಾಲ್ಕು ತಿಂಗಳುಗಳೂ ದಿನಸಾಮಾನ್ಯದ ಅಡುಗೆಗಳಿಗಿಂತ ಬೇರೆಯಾದ, ಪರದೇಶೀ ತರಕಾರಿಗಳೂ ಧಾನ್ಯಗಳೂ ಭಾರತಕ್ಕೆ ಕಾಲಿಡುವ ಮುನ್ನಿನ ಅಡುಗೆಗಳ ತಿನಿಸುಗಳ ರುಚಿಯನ್ನು ಸವಿಯುವ, ಭಾರತದ ಲೌಕಿಕ ಸಂಸ್ಕೃತಿಯ ಮುಖ್ಯವಾದ ಅಂಶವೊಂದನ್ನು ಉಳಿಸಿಕೊಳ್ಳುವ, ಬೆಳೆಸುವ ಒಳ್ಳೆಯ ಅವಕಾಶ.

ಜೈನರಲ್ಲಿ ಚಾತುರ್ಮಾಸ

[ಬದಲಾಯಿಸಿ]

ವರ್ಷಾಯೋಗ ಚಾತುರ್ಮಾಸ

[ಬದಲಾಯಿಸಿ]

Acharya5 (cropped) ಭೋಗಭೂಮಿಯಿಂದ ಕರ್ಮಭೂಮಿಯತ್ತ ನಾವುಗಳು ಸಾಗಿದಾಗ ಮೋಕ್ಷದ ದಾರಿಯ ಹುಡುಕಾಟ ಪ್ರಾರಂಭವಾಗುತ್ತದೆ. ಅದರಿಂದ ನಂತರ ಮುನಿಗಳ ಪರಂಪರೆ ಪ್ರಾರಂಭವಾಗುತ್ತದೆ. ಕಠಿಣ ವ್ರತಗಳನ್ನು ಪಾಲಿಸುತ್ತಾ ಸಮ್ಯಕ್ತ್ವ ಸಂಪನ್ನರಾಗಿ ಅಂತರಂಗದಲ್ಲಿ ಲೀನರಾಗುತ್ತಾರೆ. ಸೂಕ್ಷ್ಮಾತಿಸೂಕ್ಷ್ಮವಾಗಿ ಚರ್ಯೆಗಳನ್ನು ಪಾಲಿಸುತ್ತಾ ಮೋಕ್ಷ ಪುರದತ್ತ ಸಾಗುತ್ತಾರೆ. ನಮ್ಮಂತಹ ಜನಸಾಮಾನ್ಯರಿಗೆ ತಪೋನಿರತ ಮುನಿಗಳನ್ನು ಕಂಡಾಗ ಭಯವಾಗುತ್ತದೆ / ಭಕ್ತಿ ಭಾವ ಉಂಟಾಗುತ್ತದೆ / ಆಶ್ಚರ್ಯವಾಗುತ್ತದೆ. ಇಂತಹಾ ಈ ಕಾಲದಲ್ಲೂ ಮುನಿಗಳು ಘನ ಘೋರವಾದ ವ್ರತ ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿರುವುದನ್ನು ಕಂಡು ದಿಗ್ಭ್ರಮೆ ಪಡುತ್ತಾರೆ. ಸಿಕ್ಕ ಸುಖ ಭೋಗಗಳು ಯಾತಕ್ಕೂ ಸಾಲುತ್ತಿಲ್ಲ ಎಂಬ ನಮ್ಮಂತಹ ಜನಗಳ ನಡುವೆ ಪರಿಗ್ರಹ ರಹಿತ ಮುನಿಗಳನ್ನು ಕಂಡಾಗ ತಾನೇ ತಾನಾಗಿ ನಮ್ಮ ಶಿರಗಳು ಭಕ್ತಿ ಭಾವದಿಂದ ಬಾಗುತ್ತದೆ.

ಪ್ರಬಲ ಅಹಿಂಸೆ

[ಬದಲಾಯಿಸಿ]

ಬಹುಶಃ ಜಗತ್ತಿನಲ್ಲಿ ಜೈನ ಧರ್ಮವು ಬೋಧಿಸಿರುವ ಪ್ರಬಲ ಅಹಿಂಸಾ ತತ್ವವನ್ನು ಯಾವ ಧರ್ಮವೂ ಪ್ರತಿಪಾದಿಸಿರಲಿಕ್ಕಿಲ್ಲ. ಕಾಯ, ವಾಚಾ, ಮನಸಾ ಈ ಮೂರರಿಂದಲೂ ಹಿಂಸೆಯಾಗುತ್ತದೆ ಎಂಬುದನ್ನು ಜೈನ ಧರ್ಮವು ಪ್ರತಿಪಾದಿಸುತ್ತದೆ. ಅದರಲ್ಲೂ ಜೈನ ಮುನಿಗಳಂತೂ ವಾಚಾ ಹಾಗೂ ಮನಸಾದಿಂದ ಅಹಿಂಸೆಯ ಪಾಲಕರಿರುತ್ತಾರೆ. ಕಾಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಿಂಸೆಯು ಅನಿವಾರ್ಯ ಕಾರಣದಿಂದ ಆಗುತ್ತದೆ. ಇದನ್ನು ಆದಷ್ಟು ಪ್ರಮಾಣದಲ್ಲಿ ಅಂದರೆ ತನ್ನ ಉತ್ಕೃಷ್ಟ ಸಾಧನೆಯಿಂದ ಕಡಿಮೆಗೊಳಿಸಲು ಪ್ರಯತ್ನಿಸುತ್ತಾರೆ. ಈ ಹಿಂಸೆಯು ಹಿಂಸೆ ಮಾಡಬೇಕೆಂಬ ಭಾವದಿಂದ ಆಗುವುದಿಲ್ಲ , ಅನಿವಾರ್ಯ ಕಾರಣದಿಂದ ಆಗುತ್ತದೆ.

ಚಾತುರ್ಮಾಸಕ್ಕೆ ಕಾರಣ

[ಬದಲಾಯಿಸಿ]

ನಮ್ಮ ದೇಶದಲ್ಲಿ ಮೂರು ರೀತಿಯ ಕಾಲಗಳು ಬರುತ್ತವೆ. ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಎಂಬುದಾಗಿ ಇದೆ. ಕಾಲಕ್ಕೆ ಸರಿಯಾಗಿ ಜೀವಿ ಪ್ರಪಂಚದ ಉತ್ಪತ್ತಿ ನಾಶದ ಪ್ರಕ್ರಿಯೆ ಇರುತ್ತದೆ. ಒಂದೊಂದು ಕಾಲಕ್ಕೆ ಅನುಗುಣವಾಗಿ ಆಯಾಯ ಪರಿಸರಕ್ಕೆ ಹೊಂದುವ ಜೀವಿಗಳ ಉತ್ಪತ್ತಿ / ನಾಶದ ಪ್ರಕ್ರಿಯೆ ಜರಗುತ್ತದೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಅಸಂಖ್ಯಾತ ಜೀವಿಗಳ ಉತ್ಪತ್ತಿಯು ಬೇರೆ ಎರಡು ಕಾಲಕ್ಕಿಂತ ಜಾಸ್ತಿ ಇರುತ್ತದೆ. ಕಣ್ಣಿಗೆ ಕಾಣದ ಕಾಣಿಸುವ ಜೀವಿ ಪ್ರಪಂಚದ ಉತ್ಪತ್ತಿಯು ಆಗುತ್ತಲಿರುತ್ತದೆ. ಮೊದಲೇ ಹೇಳಿದಂತೆ ಅಹಿಂಸೆಯ ಅತ್ಯುಗ್ರ ಪಾಲಕರಾದ ಮುನಿ ಮಹಾರಾ��ರುಗಳು ಮಳೆಗಾಲದ ಸಮಯದ ಪರಿಸ್ಥಿತಿಯನ್ನು ಅವಲೋಕಿಸುತ್ತಾರೆ. ಮುನಿ ಮಹಾರಾಜರುಗಳು ಒಂದೇ ಸ್ಥಳದಲ್ಲಿ ಠಿಕಾಣಿ ಹೂಡುವ ಪ್ರಮೇಯವಿಲ್ಲ. ಮನೆಯಿಂದ ಮನೆಗೆ, ಊರಿನಿಂದ ಊರಿಗೆ, ನಾಡಿನಿಂದ ನಾಡಿಗೆ, ರಾಜ್ಯದಿಂದ ರಾಜ್ಯಕ್ಕೆ ವಿಹಾರ ಮಾಡುತ್ತಾ ಇರುತ್ತಾರೆ. ವಿಹಾರದ ಸಮಯದಲ್ಲಿ ಅಂದರೆ ನಡೆದಾಡುವ ಸಮಯದಲ್ಲಿ ತನ್ನ ಕಾಲಡಿಗೆ ಬಿದ್ದು ಸಾಯಬಹುದಾದ ಜೀವಿಗಳತ್ತ ಗಮನ ಹರಿಸಿಯೇ ಹರಿಸುತ್ತಾರೆ. ಈರ್ಯಾ ಪಥ ಶುದ್ಧಿಯು ಮುನಿಗಳ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಹಾಗಾಗಿ ಮಳೆಗಾಲದಲ್ಲಿ ತಾನು ವಿಹಾರ ಮಾಡುವ ಸಮಯದಲ್ಲಿ ಬೇರೆ ಸಮಯಗಳಿಗಿಂತ ಮಳೆಗಾಲದ ಸಮಯದಲ್ಲಿ ಜೀವಿಗಳಿಗೆ ಘಾತವಾಗಬಾರದೆಂಬ ಉದ್ಧೇಶದಿಂದ ಮಳೆಗಾಲದ ಸಮಯವನ್ನು ಒಂದೆಡೆ ಸ್ಥಿರವಾಗಿದ್ದು ಅಂದರೆ ವಿಹಾರ ರಹಿತರಾಗಿ ತನ್ನ ವ್ರತ ನಿಯಮಗಳನ್ನು ಪ್ರಾಮಾಣಿಕತೆಯಿಂದ ನೆರವೇರಿಸುತ್ತಾರೆ. ಹಾಗಾಗಿ ಈ ಸಮಯವನ್ನು ಮುನಿಗಳ ಚಾತುರ್ಮಾಸ ಅಥವಾ ವರ್ಷಾಯೋಗ ಅನ್ನುತ್ತಾರೆ. ಭವ್ಯರಾದ ಮುನಿಮಹಾರಾಜರುಗಳು ಪ್ರತಿಯೊಂದು ಜೀವಿಯ ಮೇಲೂ ದಯಾ ಭಾವವುಳ್ಳವರೆಂದು ಈ ಪ್ರಕರಣದಿಂದ ವೇದ್ಯವಾಗುತ್ತದೆ.

ಚಾತುರ್ಮಾಸ ವೈಭವ

[ಬದಲಾಯಿಸಿ]

ಮುನಿಗಳ ಚಾತುರ್ಮಾಸವು ಭವ್ಯ ಕೋಟಿಗಳಿಗೆ ಪುಣ್ಯ ಸಂಪಾದನೆಯ ಮಾರ್ಗವಾಗುತ್ತದೆ. ಚಾತುರ್ಮಾಸವು ನಾಡಿನ ಜನತೆಯ ಪುಣ್ಯದ ಉದಯವಾಗಿರುವುದರ ಸಂಕೇತವಾಗಿದೆ. ಮುನಿಗಳು ಎಲ್ಲಿ ಚಾತುರ್ಮಾಸ ಮಾಡುತ್ತಾರೋ ಆ ನಾಡಿನನಲ್ಲಿ ಹಾಗೂ ನಾಡಿನ ಜನರಲ್ಲಿ ಸುಭೀಕ್ಷೆಯನ್ನು ಉಂಟು ಮಾಡುತ್ತದೆ. ಚಾತುರ್ಮಾಸದುದ್ದಕ್ಕೂ ಮುನಿಗಳ ದರ್ಶನ, ಸೇವೆ, ಹಾಗೂ ಅಮೃತ ವಚನವನ್ನು ಸವಿಯುವ ಅವಕಾಶ ದೊರೆಯುತ್ತದೆ. ಚಾತುರ್ಮಾಸ ಕಲಶ ಸ್ಥಾಪನೆಯಿಂದ ಹಿಡಿದು ವಿಸರ್ಜನೆಯವರೆಗೆ ಶ್ರಾವಕರಿಗೆ ಪುಣ್ಯಾರ್ಜನೆಗೆ ವಿಪುಲ ಅವಕಾಶಗಳಿವೆ. ಮುನಿಗಳ ಆಹಾರ ತಯಾರಿಕೆ, ನೀಡಿಕೆ, ವೈಯಾವೃತಿ ಮುಂತಾದವುಗಳಲ್ಲಿ ಭಕ್ತಿ ಭಾವದಿಂದ ಭಾಗವಹಿಸಬಹುದು. ಪ್ರವಚನಗಳ ಸರ ಮಾಲೆಯನ್ನು ಆಸ್ವಾದಿಸಬಹುದು. ಚಾತುರ್ಮಾಸದ ಅವಧಿಯಲ್ಲಿ ಹಲವು ವಿದ್ವಾಂಸರಿಂದ ನಡೆಯುವ ಗೋಷ್ಠಿಗಳ ಸವಿಯನ್ನು ಮನಪೂರ್ವಕ ಅರಗಿಸಿಕೊಳ್ಳಬಹುದು. ಇದೇ ಸಮಯದಲ್ಲಿ ನಡೆಯುವ ವಿವಿಧ ಆರಾಧನೆಗಳು, ಪೂಜೆಗಳು ನಮ್ಮ ಮನದ ಕಲಂಕವನ್ನು ತೊಡೆದು ಹಾಕಬಹುದು. ದೂರದೂರದ ಊರುಗಳಿಂದ ಬರುವ ಪ್ರತಿಮಾಧಾರಿಗಳು, ಶ್ರಾವಕರಿಗೆ ಆತಿಥ್ಯ ನೀಡುವ ಸದಾವಕಾಶವೂ ದೊರೆಯುತ್ತದೆ. ಮಳೆಗಾಲದಲ್ಲಿ ಕೃಷಿಕ ಕುಟುಂಬಕ್ಕೆ ಸ್ವಲ್ಪ ವಿಶ್ರಾಂತಿಯ ಸಮಯವೂ ಇರುತ್ತದೆ. ಹಾಗಾಗಿ ವಿಶ್ರಾಂತಿಯನ್ನು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಸದ್ವಿಚಾರಗಳ ನಡುವೆಯೇ ಕಾಯಾ, ವಾಚಾ , ಮನಸ್ಸನ್ನು ತೊಡಗಿಸುವುದರಿಂದ ಶುಭ ಭಾವನೆ ಉಂಟಾಗಿ ಅಜ್ಞಾನದ ಜೊತೆಯಲ್ಲಿ ಕರ್ಮಗಳನ್ನೂ ಕಳೆದುಕೊಳ್ಳಬಹುದು. ನಮ್ಮ ಹಾಗೂ ನಾಡಿನ ಮನೋಸ್ಥಿತಿ ಇತ್ಯಾದಿಗಳ ವಿಕಾಸವಾಗುತ್ತದೆ.

ಚಾತುರ್ಮಾಸದ ಮುಕ್ತಾಯ

[ಬದಲಾಯಿಸಿ]

ಚಾತುರ್ಮಾಸದ ವಿಸರ್ಜನೆಯ ಕಾಲವು ಹತ್ತಿರವಾದಂತೆ ಕೆಲವರಲ್ಲಿ ಅನಾಥ ಪ್ರಜ್ಞತೆಯು ಕಾಡಲಾರಂಭಿಸುತ್ತದೆ. ಇಷ್ಟು ದಿನ ನಮ್ಮ ಮನದ , ನಮ್ಮ ಮನೆಯ , ನಮ್ಮ ಪರಿವಾರದ ಜನರಿಗೆ ಏನೇ ಸಮಸ್ಯೆಗಳಿಗೆ ಪರಿಹಾರ ನೀಡುವ ಗುರುಗಳಿದ್ದರು , ಇನ್ನು ಮುಂದಕ್ಕೆ ನಮಗೆ ದಾರಿ ತೋರಿಸುವವರು ಯಾರು ಎಂಬ ಚಿಂತೆ ಕಾಡತೊಡಗುತ್ತದೆ. ಆದರೆ ಗುರುಗಳು ಇದಾವುದರ ಪರಿವೆಯಿಲ್ಲದೇ ಪರಿಗ್ರಹದಿಂದ ರಹಿತರಾದ ಉತ್ತಮೋತ್ತರು ವಿಹಾರವನ್ನು ಮಾಡಲು ಪ್ರಾರಂಭಿಸುತ್ತಾರೆ. ಕೆಲವರು ಭಾರವಾದ ಮನಸ್ಸಿನಿಂದ, ಕೆಲವರು ಉದ್ವೇಗ ರಹಿತರಾಗಿ‌ ವಿವೇಕಯುತರಾಗಿ ಮುನಿಮಹಾರಾಜರುಗಳನ್ನು ಭಕ್ತಿ ಭಾವದಿಂದ ಬೀಳ್ಕೊಡುವರು. ಗುರುಗಳ ಸಾನ್ನಿಧ್ಯದಿಂದ ದೊರಕಿದ ಅನುಭೂತಿಯನ್ನು ಸವಿಯುತ್ತಾ ಮುನಿಶ್ರೇಷ್ಟರು ತೋರಿಸಿದ ದಾರಿಯಲ್ಲಿ ನಡೆಯುತ್ತಾ ಧರ್ಮ ಮಾರ್ಗದಲ್ಲಿ ವಿಹರಿಸುವರು.