ಗುರೆಳ್ಳು
Guizotia abyssinica | |
---|---|
Guizotia flower | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | G. abyssinica
|
Binomial name | |
Guizotia abyssinica | |
Synonyms[೧] | |
Synonymy
|
ಗುರೆಳ್ಳು ಆಸ್ಟರೇಸೀ (ಕಂಪಾಸಿóಟೇ) ಕುಟುಂಬಕ್ಕೆ ಸೇರಿದ ಮತ್ತು ಆರ್ಥಿಕ ಪ್ರಾಮುಖ್ಯವುಳ್ಳ ಒಂದು ಏಕವಾರ್ಷಿಕ ಸಸ್ಯ.
ಪರ್ಯಾಯ ನಾಮಗಳು
[ಬದಲಾಯಿಸಿ]ಹುಚ್ಚೆಳ್ಳು, ಕಾರೆಳ್ಳು, ಖುರಾಸಾನಿ ಪರ್ಯಾಯ ನಾಮಗಳು. ಇಂಗ್ಲೀಷಿನ ನೈಜರ್ ಎಂದು ಕರೆಯಲಾಗುತ್ತದೆ. ಗೈಜೋóಶಿಯ ಅಬಿಸೀನಿಕ ಇದರ ಶಾಸ್ತ್ರೀಯ ಹೆಸರು. ಆಫ್ರಿಕದ ಉಷ್ಣವಲಯದ ಮೂಲವಾಸಿ. ಇದನ್ನು ಎಣ್ಣೆಗೋಸ್ಕರ ಆಫ್ರಿಕ ಮತ್ತು ಭಾರತದಲ್ಲಿ ಬೆಳೆಸುತ್ತಾರೆ.[೨]
ಲಕ್ಷಣಗಳು
[ಬದಲಾಯಿಸಿ]ಗುರೆಳ್ಳು ನೆಟ್ಟಗೆ 1' - 3' ಎತ್ತರಕ್ಕೆ ಬೆಳೆಯುವ ಮೂಲಿಕೆ ಸಸ್ಯ. ಕಾಂಡ ಮತ್ತು ಎಲೆಗಳ ಮೇಲೆ ಒರಟಾದ ಮತ್ತು ಸೂಕ್ಷ್ಮ ಗಾತ್ರದ ಕೂದಲಿನ ಹೊದಿಕೆಯಿರುವುದರಿಂದ ಈ ಭಾಗಗಳು ಒರಟಾಗಿವೆ. ಎಲೆಗಳು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಉದ್ದ ಸುಮಾರು 3" - 5", ಆಕಾರ ಈಟಿಯಂತೆ ಮತ್ತು ಅಂಚು ಗರಗಸದಂತೆ. ಎಲೆಗಳ ತೊಟ್ಟು ಬಲು ಚಿಕ್ಕದು; ಎಲೆಗಳ ಬುಡ ಕಾಂಡವನ್ನು ಅರ್ಧ ಸುತ್ತುವರಿದಿದೆ. ಹೂಗಳು ಬಲು ಚಿಕ್ಕವು; ಚಂಡುಮಂಜರಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂ ಗೊಂಚಲಿನ ವ್ಯಾsಸ 0.5 " - 1". ಹೂಗಳು ಅಚ್ಚ ಹಳ���ಿ ಬಣ್ಣಕ್ಕಿದ್ದು ಬಹಳ ಅಂದವಾಗಿ ಕಾಣುತ್ತದೆ. ಫಲಗಳು ಎಕೀನ್ ಮಾದರಿಯವು. ತುಂಬ ಚಿಕ್ಕದಾಗಿ 1/4" - 1/2" ಉದ್ದಕ್ಕೆ ನೀಳವಾಗಿ ಇವೆ. ಹೊಳೆಯುವ ಕಪ್ಪು ಬಣ್ಣ ಉಂಟು. ಇವು ಗಡುಸಾಗಿವೆ.
ವ್ಯವಸಾಯ
[ಬದಲಾಯಿಸಿ]ಗುರೆಳ್ಳು ನಸುಗೆಂಪು ಇಲ್ಲವೆ ಕಂದು ಬಣ್ಣದ ಗೋಡು ಮಣ್ಣಿನ ಭೂಮಿಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಎರೆಮಣ್ಣಿಲ್ಲೂ ಕೊಂಚ ಮಟ್ಟಿಗೆ ಬೆಳೆಸಬಹುದು. ಇದಕ್ಕೆ ಹೆಚ್ಚು ಮಳೆ ಬೇಡ. ಮಳೆಯ ವಾರ್ಷಿಕ ಮೊತ್ತ 40" ಮೀರಬಾರದು. ಇದನ್ನು ಸಾಮಾನ್ಯವಾಗಿ ರಾಗಿಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಸುತ್ತಾರೆ. ಹುರುಳಿ, ಕಡಲೆಕಾಯಿ, ಹರಳು, ನವಣೆ, ಸಜ್ಜೆ ಮುಂತಾದವುಗಳ ಜೊತೆಗೆ ಬೆಳೆಸುವುದುಂಟು. ಜುಲೈ ಇಲ್ಲವೆ ಸೆಪ್ಟೆಂಬರ್ ಸುಮಾರಿಗೆ ಬಿತ್ತನೆ ಮಾಡಲಾಗುತ್ತದೆ. ರಾಗಿಯೊಂದಿಗೆ ಬೆಳೆಸುವಾಗ 6"-12" ಅಂತರವಿರುವ ಸಾಲುಗಳಲ್ಲೂ ಹುರುಳಿಯೊಂದಿಗೆ ಬೆಳೆಸುವಾಗ 6" ಅಂತರಗಳ ಸಾಲುಗಳಲ್ಲೂ ಬಿತ್ತಲಾಗುತ್ತದೆ. ಭೂಮಿಯೊಂದಿಗೆ ಚೆನ್ನಾಗಿ ಉತ್ತು, ಹದ ಮಾಡಿದರೆ ಗಿಡಗಳ ಬೆಳೆವಣಿಗೆ ಹುಲುಸಾಗಿರುತ್ತದೆ. ಇದರಿಂದಲೆ ರಾಗಿಯೊಂದಿಗೆ ಬೆಳೆಸಿದ ಗುರಳ್ಳಿನ ಪೈರು ಬಹಳ ಚೆನ್ನಾಗಿರುತ್ತದೆ. ಬೀಜ ಬಿತ್ತಿದ ಮೂರು ತಿಂಗಳ ಬಳಿಕ ಗಿಡಗಳು ಹೂ ಬಿಡಲು ಆರಂಭಿಸುತ್ತವೆ. ಆಮೇಲೆ 5-6 ವಾರಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತವೆ. ಕುಡುಗೋಲಿನಿಂದ ಗಿಡಗಳ ಬುಡದವರೆಗೂ ಕೊಯ್ದು ಕಂತೆ ಕಟ್ಟಲಾಗುತ್ತದೆ. ಅನಂತರ ಕೋಲುಗಳ ಸಹಾಯದಿಂದ ತೆನೆಗಳನ್ನು ಬಡಿದು ಕಾಳುಗಳನ್ನು ಬಿಡಿಸಿ, ತೂರಿ, ಜರಡಿಯಾಡಿಸಿ ಚೊಕ್ಕಟ ಮಾಡಲಾಗುತ್ತದೆ. ಆದರೂ ಕಾಳಿನೊಂದಿಗೆ ಮಣ್ಣಿನ ಕಣಗಳು, ಕಳೆಬೀಜಗಳು ಸೇರಿರುವುದರಿಂದ ಗುರೆಳ್ಳನ್ನು ಸಂಗ್ರಹಿಸಿಡುವಾಗ, ಮಾರಾಟಕ್ಕೆ ಸಿದ್ಧಗೊಳಿಸುವಾಗ ಇನ್ನೊಮ್ಮೆ ಶುದ್ಧೀಕರಿಸಬೇಕಾಗುತ್ತದೆ. ರಾಗಿಯೊಂದಿಗೆ ಮಿಶ್ರಬೆಳೆಯಾಗಿ ಬೆಳೆಸಿದಾಗ ಗುರೆಳ್ಳಿನ ಇಳುವರಿ ಎಕರೆಗೆ 45 ಕೆಜಿ. ಇರುವುದಾದರೂ ಶುದ್ಧ ಬೆಳೆಯಾಗಿ ಬೆಳೆಸಿದರೆ ಇದು ಸುಮಾರು 135-180 ಕೆಜಿ. ವರೆಗೆ ಹೆಚ್ಚಬಹುದು.
ಎಣ್ಣೆ
[ಬದಲಾಯಿಸಿ]ಗುರೆಳ್ಳಿನ ಬೀಜಗಳಲ್ಲಿ 40%-45% ರಷ್ಟು ಎಣ್ಣೆ ಉಂಟು. ಇದಕ್ಕೆ ರೂಢಿಯ ಹೆಸರು ಹುಚ್ಚೆಳ್ಳೆಣ್ಣೆ. ಇದು ಉಪಯೋಗಿಸಲು ಯೋಗ್ಯವಾದ ಎಣ್ಣೆ. ಇದರ ಬಣ್ಣ ತಿಳಿ ಹಳದಿ. ಅಡುಗೆಗೆ, ಇತರ ಬಗೆಯ ಎಣ್ಣೆಗಳೊಂದಿಗೆ-- ಮುಖ್ಯವಾಗಿ ಎಳ್ಳೆಣ್ಣೆಯೊಂಗಿದೆ ಮಿಶ್ರ ಮಾಡಲು ಹುಚ್ಚೆಳ್ಳೆಣ್ಣೆಯನ್ನು ಬಳಸುತ್ತಾರೆ. ಮೃದುಚಾಲಕಗಳ ಮತ್ತು ಮೃದುಸಾಬೂನುಗಳ ತಯಾರಿಕೆಯಲ್ಲೂ ಇದನ್ನು ಉಪಯೋಗಿಸುವುದಿದೆ. ಎಣ್ಣೆಯನ್ನು ತೆಗೆದು ಮೇಲೆ ಉಳಿಯುವ ಹಿಂಡಿ ದನಕರುಗಳಿಗೆ ಉತ್ತಮವಾದ ಆಹಾರ. ಹಾಲು ಕರೆಯುವ ಹಸು, ಎವ್ಮ್ಮೆಗಳಿಗೆ ತಿನ್ನಿಸಿದರೆ ಹಾಲಿನ ಪ್ರಮಾಣ ಹೆಚ್ಚುವುದೆಂದು ಹೇಳಲಾಗಿದೆ. ಹುಚ್ಚೆಳ್ಳನ್ನು ಚಟ್ನಿಪುಡಿ, ಚಟ್ನಿ, ಗೊಜ್ಜು ಮುಂತಾದವಕ್ಕೆ ಬಳಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Plants for a Future database
- Multilingual taxonomic information from the University of Melbourne
- James A. Duke. 1983. Handbook of Energy Crops (unpublished)
- Nigerseed: Specialty Grain Opportunity for Midwestern US
- Ethiopian Plant Names By Aberra Molla Archived 2008-02-24 ವೇಬ್ಯಾಕ್ ಮೆಷಿನ್ ನಲ್ಲಿ.