ಕರೆಹಣ
ಕರೆಹಣ: ಬಂಡವಾಳ ಪತ್ರಗಳ ವಹಿವಾಟುದಾರರು, ದಳ್ಳಾಳಿಗಳು ಮುಂತಾದವರಿಗೆ ಖಜಾನೆ ಹುಂಡಿಯೇ ಮುಂತಾದವುಗಳ ಒತ್ತೆಯ ಮೇಲೆ ಬ್ಯಾಂಕುಗಳು ನೀಡುವ ಸಾಮಾನ್ಯವಾಗಿ ೨೪ ಘಂಟೆಗಳಿಗೂ ಕಡಿಮೆಯ ವಾಯಿದೆಯ ಸಾಲ; ಕರೆದಾಗ ಬರುವ ಹಣ (ಕಾಲ್ ಮನಿ).ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಇದಕ್ಕೆ ಕರೆಸಾಲ ಎಂದು ಹೆಸರು.
ವಿಧಿ ವಿಧಾನಗಳು
[ಬದಲಾಯಿಸಿ]ಇದರ ವಿಧಿ ವಿಧಾನಗಳು ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇವೆ. ಹಣದ ಪೇಟೆಯಲ್ಲಿ ಮಾರಾಟವಾದ ಪತ್ರಗಳು ಕೈಯಿಂದ ಕೈಗೆ ಬದಲಾವಣೆಯಾಗುವ ಸಂದರ್ಭದಲ್ಲಿ ವಹಿವಾಟುದಾರರ ಹಣದ ದರವನ್ನು ಪೂರೈಸಲು ಇದು ಅನುವಾಗಿದೆ. ಕೇಳಿದ ಕೂಡಲೇ ಮರಳಿ ಪಾವತಿ ಮಾಡಬೇಕೆಂಬ ಷರತ್ತಿನ ಮೇಲೆ ಈ ಹಣವನ್ನು ಕೊಡಲಾಗುವುದರಿಂದಲೂ ಇದಕ್ಕೆ ಅನುಬಂಧಿಯಾಗಿ ಇಡುವ ಒತ್ತೆಯ ಮೌಲ್ಯಕ್ಕೂ ಸಾಲವಾಗಿ ಕೊಡುವ ಹಣಕ್ಕೂ ಇರುವ ಅಂತರದ ದೃಷ್ಟಿಯಿಂದಲೂ ಈ ಸಾಲದ ಹಣವೂ ಬಹುತೇಕ ದ್ರವರೂಪಿಯೆಂದೇ (ಲಿಕ್ವಿಡ್) ಬ್ಯಾಂಕಿಗೆ ಭರವಸೆಯಿರುತ್ತದೆ. ಬ್ಯಾಂಕಿನ ಅತ್ಯಂತ ದ್ರವರೂಪಿ ಆಸ್ತಿಯೆಂದರೆ ನಗದು; ಕೇಂದ್ರೀಯ ಮತ್ತು ಇತರ ಬ್ಯಾಂಕುಗಳಲ್ಲಿರುವ ಹಣ. ಕೇಳಿದಾಗ ಹಿಂತಿರುಗಿಸಲೊಪ್ಪಿದ, ಅತ್ಯಂತ ಕಿರುವಾಯಿದೆಯ, ಈ ಹಣದ್ದು ಎರಡನೆಯ ಸ್ಥಾನ. ಈ ಪ್ರಕಾರವಾಗಿ-ದ್ರವತೆಯ ಕ್ರಮದಲ್ಲಿ-ತನ್ನ ಆಸ್ತಿಗಳನ್ನು ಜೋಡಿಸಿಕೊಂಡಿದ್ದು ತನ್ನ ಠೇವಣಿದಾರರಿಂದ ನಗದಿಗಾಗಿ ಬರುವ ಬೇಡಿಕೆಗಳನ್ನು ಪುರೈಸುವ ರಕ್ಷಣಾಶಕ್ತಿಯೊಂದಿಗೆ ಯಥೋಚಿತ ಲಾಭವನ್ನೂ ಗಳಿಸುವುದು ಬ್ಯಾಂಕಿಗೆ ಸಾಧ್ಯವಾಗುತ್ತದೆ. ಕೇಳಿದಾಗ ಕೊಡಬೇಕೆಂಬುದು ಸಾಮಾನ್ಯವಾಗಿ ಇಂಥ ಸಾಲಗಳ ಷರತ್ತಾದರೂ ಈ ಷರತ್ತಿನ ಅನ್ವಯದ ವಿಚಾರದಲ್ಲಿ ಒಂದೊಂದು ದೇಶದ ರೂಢಿ ಒಂದೊಂದು ಬಗೆಯದು. ಹಿಂದಿನ ದಿನ ಕೊಟ್ಟು ಮರುದಿನ ಬೆಳಗಾಗ ಹಿಂದಿರುಗಿಸಬೇಕಾದ ಮುಂಗಡಗಳೆಂದೂ ದಿನದಿಂದ ದಿನಕ್ಕೆ ಮುಂದುವರಿಯುತ್ತ ಹೋಗುವ ಮುಂಗಡಗಳೆಂದೂ ಇವನ್ನು ವಿಭಾಗಿಸಬಹುದು. ಎರಡನೆಯ ಬಗೆಯ ಮುಂಗಡಗಳನ್ನು ಹಿಂದಿರುಗಿಸಬೇಕೆಂದು ಸಾಮಾನ್ಯವಾಗಿ ಬ್ಯಾಂಕುಗಳು ಕರೆನೀಡುವುದಿಲ್ಲ. ಅಮೇರಿಕದಲ್ಲಿ ಈ ಬಗೆಯ ಮುಂಗಡಗಳೇ ಹೆಚ್ಚು. ನ್ಯೂಯಾರ್ಕಿನ ಕರೆಸಾಲ ಮಾರುಕಟ್ಟೆ ವಿಶ್ವದಲ್ಲೇ ಅತಿ ದೊಡ್ಡದು. ಕರೆಹಣದ ವಹಿವಾಟು ಹೆಚ್ಚಾಗಿ ನಡೆಯಬೇಕಾದರೆ ಬ್ಯಾಂಕುಗಳ ಬಳಿ ಹೆಚ್ಚುವರಿ ಹಣ ಇರಬೇಕಾದುದು ಅವಶ್ಯ. ಅಲ್ಲದೆ ಮುಂಗಡ ಪಡೆಯಬಯಸುವ ಗ್ರಾಹಕರ ಬಳಿಯಲ್ಲಿ ಒತ್ತೆಯಾಗಿ ನೀಡಬಹುದಾದ ಪ್ರತಿಭೂತಿಗಳೂ (ಸೆಕ್ಯೂರಿಟೀಸ್) ಹಣಪತ್ರಗಳೂ ಇರಬೇಕು; ಅವರಿಗೆ ಹಣದ ಆವಶ್ಯಕತೆಯೂ ಪಡೆದ ಮುಂಗಡವನ್ನು ಸಕಾಲದಲ್ಲಿ ಅಥವಾ ಕೇಳಿದಾಗ ಹಿಂದಿರುಗಿಸುವ ಶಕ್ತಿಯೂ ನಂಬಿಕೆಯೂ ಇರಬೇಕು. ಸುವ್ಯವಸ್ಥಿತವಾದ ಹಣದ ಪೇಟೆಯಿಲ್ಲದ ಭಾರತದಂಥ ದೇಶದಲ್ಲಿ ಕರೆಹಣದ ಪ್ರಾಮುಖ್ಯ ಇಂಗ್ಲೆಂಡ್ ಮುಂತಾದ ದೇಶಗಳಲ್ಲಿರುವಷ್ಟಿಲ್ಲ. ಕರೆಹಣವನ್ನು ಪ್ರತ್ಯೇಕವಾಗಿ ತೋರಿಸುವ ವಾಡಿಕೆಯೂ ಭಾರತದ ಬ್ಯಾಂಕುಗಳಲ್ಲಿ ಇತ್ತೀಚಿನವರೆಗೂ ಇರಲಿಲ್ಲ. ಒಂದು ಬ್ಯಾಂಕು ಇತರ ಬ್ಯಾಂಕುಗಳಲ್ಲಿ ಇಟ್ಟಿರುವ ಹಣವನ್ನೇ ಕರೆದಾಗ ಅಥವಾ ಅಲ್ಪಾವಧಿಯ ತಿಳಿವಳಿಕೆ (ನೋಟೀಸ್) ನೀಡಿದಾಗ ಹಿಂದಿರುಗಿಸಬೇಕಾದ ಹಣ’ ಎಂಬ ಶೀರ್ಷಿಕೆಯ ಅಡಿ���ಲ್ಲಿ ತೋರಿಸಲಾಗುತ್ತಿತ್ತು. ಕರೆಹಣದ ಮೇಲಿನ ಬಡ್ಡಿಯ ದರ ಸಾಮಾನ್ಯವಾಗಿ ಹೆಚ್ಚಿನದಾಗಿರುತ್ತದೆ. ಮೊದಲನೆಯ ಬಾರಿಗೆ ಪಡೆಯುವ ಮುಂಗಡದ ಮೇಲಿನ ಬಡ್ಡಿಯ ದರಕ್ಕಿಂತ ಹಳೆಯ ಸಾಲವನ್ನು ನವೀಕರಣಗೊಳಿಸುವಾಗ (ರಿನ್ಯೂ) ವಿಧಿಸಲಾಗುವ ಬಡ್ಡಿಯ ದರ ಅಧಿಕವಾಗಿರಬಹುದು.