ವಿಷಯಕ್ಕೆ ಹೋಗು

ಕದ್ರಿ ಗೋಪಾಲನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕದ್ರಿ ಗೋಪಾಲನಾಥ್
ಕದ್ರಿ ಗೋಪಾಲನಾಥ್ - ಪಿಲಯರ್ಪಟ್ಟಿ ಬಾರಿಸುತ್ತ
ಹಿನ್ನೆಲೆ ಮಾಹಿತಿ
ಜನ್ಮನಾಮ (1949-12-11) ೧೧ ಡಿಸೆಂಬರ್ ೧೯೪೯ (ವಯಸ್ಸು ೭೫)
ಸಂಗೀತ ಶೈಲಿಭಾರತೀಯ ಶಾಸ್ತ್ರೀಯ ಸಂಗೀತ, ಚಲನಚಿತ್ರ ಸಂಗೀತ.
ವೃತ್ತಿಸ್ಯಾಕ್ಸೋಫೋನ್ ವಾದಕರು
ಅಧೀಕೃತ ಜಾಲತಾಣhttp://www.kadrigopalnath.com/
Notable instruments
‌‌ ಸ್ಯಾಕ್ಸೋಫೋನ್

ಕದ್ರಿ ಗೋಪಾಲನಾಥ್ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕರು. ಸ್ಯಾಕ್ಸೊಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದವರಾಗಿದ್ದಾರೆ.

ಗೋಪಾಲನಾಥರು ೧೯೪೯ ಡಿಸೆಂಬರ್ ೬ ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮೂಡ ಊರಿನಲ್ಲಿ ಜನಿಸಿದರು. ತಂದೆ ತನಿಯಪ್ಪನವರು ನಾಗಸ್ವರ ವಿದ್ವಾಂಸರಾಗಿದ್ದರಿಂದ ಸಂಗೀತವೆಂಬುದು ಗೋಪಾಲನಾಥರ ದಿನಚರಿಯಾಗಿತ್ತು. ತಾಯಿ ನಾಗಮ್ಮ. ಕದ್ರಿ ಗೋಪಾಲನಾಥರು ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ಶಿಕ್ಷಣವನ್ನು ಪಡೆದರು. ಆದರೆ ಅವರ ಬದುಕಿಗೆ ತೆರೆದದ್ದು ಮತ್ತೊಂದು ಬಾಗಿಲು. ಒಮ್ಮೆ ಅವರು ಮೈಸೂರು ಅರಮನೆಯ ಬ್ಯಾಂಡ್ ಸೆಟ್ನೊಂದಿಗೆ ಸ್ಯಾಕ್ಸಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿದ್ಯತೆಗೆ ಮನಸೋತು ಸ್ಯಾಕ್ಸಫೋನಿನಲ್ಲಿಯೇ ಪ್ರಾವೀಣ್ಯತೆ ಸಂಪಾದಿಸಬೇಕೆಂಬ ದೃಢ ನಿರ್ಧಾರ ಕೈಗೊಂಡರು. ಇದಕ್ಕಾಗಿ ಅವರು ನಡೆಸಿದ ನಿರಂತರ ತಪಸ್ಸು ಇಪ್ಪತ್ತು ವರ್ಷಗಳದ್ದು. ಮಂಗಳೂರಿನ ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಅವರು ಸಂಗೀತ ಕಲಿತರು. ಮುಂದೆ ಕದ್ರಿ ಗೋಪಾಲನಾಥರು ಮದ್ರಾಸಿನ ಟಿ. ಎನ್. ಗೋಪಾಲಕೃಷ್ಣನ್ ಅವರ ಸಂಪರ್ಕಕ್ಕೆ ಬಂದರು. ಗೋಪಾಲನಾಥರಲ್ಲಿದ್ದ ಅಗಾಧ ಪ್ರತಿಭೆಯನ್ನು ಗಮನಿಸಿದ ಗೋಪಾಲಕೃಷ್ಣನ್ ಅವರು ಕದ್ರಿ ಗೋಪಾಲನಾಥರು ಒಬ್ಬ ಅಂತರರಾಷ್ಟ್ರೀಯ ಪ್ರತಿಭೆಯಾಗಿ ರೂಪುಗೊಳ್ಳಲು ನೀರೆರೆದರು. ಟಿ. ಎನ್. ಗೋಪಾಲಕೃಷ್ಣ ಅವರಲ್ಲಿ ಸ್ಯಾಕ್ಸಫೋನ್ ವಾದನ ಕಲಿರು ಅತ್ಯಂತ ಶ್ರದ್ಧೆಯಿಂದ ಸಂಗೀತವನ್ನು ಅಭ್ಯಾಸ ಮಾಡಿದ ಗೋಪಾಲನಾಥರು ಕರ್ನಾಟಕ ಸಂಗೀತ ಮತ್ತು ಸ್ಯಾಕ್ಸೊಫೋನ್ ವಾದ್ಯಗಳೆರಡರಲ್ಲೂ ಪ್ರಭುತ್ವ ಸಾಧಿಸಿದರು. ಗೋಪಾಲನಾಥರು ತಮ್ಮ ಗುರುಗಳ ಅನುಗ್ರಹವೇ ತಮ್ಮ ಎಲ್ಲಾ ಸಾಧನೆಗಳ ಹಿಂದಿರುವ ಶಕ್ತಿ ಎಂದು ಭಕ್ತಿಯಿಂದ ಸ್ಮರಿಸುತ್ತಾರೆ.

ವಿಶ್ವದಾದ್ಯಂತ ಕಛೇರಿಗಳು

[ಬದಲಾಯಿಸಿ]

೧೯೭೮ರಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ತಮ್ಮ ಮೊದಲ ಸಂಗೀತ ಕಛೇರಿ ನೀಡಿದರು. ಗೋಪಾಲನಾಥರ ಪ್ರಥಮ ಕಾರ್ಯಕ್ರಮ ಮದ್ರಾಸಿನ ಚೆಂಬೈ ಮೆಮೋರಿಯಲ್ ಟ್ರಸ್ಟ್ನಲ್ಲಿ ನಡೆಯಿತು. ಅದು ಅವರಿಗೆ ಎಲ್ಲೆಡೆಯಿಂದ ಪ್ರಸಿದ್ಧಿ ತಂದಿತು. ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದರೆಂದು ಪರಿಗಣಿತರಾದ ಗೋಪಾಲನಾಥರ ಕಚೇರಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೇ ಅಲ್ಲದೆ ಉತ್ತರ ಭಾರತದ ಪ್ರತಿಷ್ಟಿತ ಉತ್ಸವ- ವೇದಿಕೆಗಳಲ್ಲಿ, ಬಿಬಿಸಿಯ ಆಹ್ವಾನದ ಮೇರೆಗೆ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ, ಫ್ರಾಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಮೆಕ್ಸಿಕೋದ ಸೆರ್ವಾಂಟಿನೊ ಉತ್ಸವ, ಲಂಡನ್‌ನ ಪ್ರೊಮೆನಾಡೊ, ಪ್ಯಾರಿಸ್‌ನ ಹೈಲ್ ಫೆಸ್ಟಿವಲ್ ಮುಂತಾದ ವಿಶ್ವ ಉತ್ಸವ-ವೇದಿಕೆಗಳಲ್ಲಿ ಕದ್ರಿಯವರ ಸ್ಯಾಕ್ಸೋಫೋನ್ ಮೊಳಗಿದೆ. ಯೂರೋಪ್, ಸ್ವಿಜರ್‌ಲ್ಯಾಂಡ್, ಯುನೈಟೆಡ್ ಕಿಂಗ್ಡಂ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಸಿಂಗಪೂರ್, ಬಹರೇನ್, ಕ್ವೆಟಾರ್, ಮಸ್ಕಟ್, ಮಲೇಷಿಯಾ, ಶ್ರೀಲಂಕಾ ಹೀಗೆ ಅವರು ವಿಶ್ವದಾದ್ಯಂತ ಯಶಸ್ವಿ ಕಚೇರಿಗಳನ್ನು ನಿರಂತರವಾಗಿ ನಡೆಸಿಕೊಡುತ್ತಾಬಂದಿದ್ದಾರೆ.

ಸ್ಯಾಕ್ಸೊಫೋನಿಗೆ ಮತ್ತೊಂದು ಹೆಸರು

[ಬದಲಾಯಿಸಿ]

ಕದ್ರಿಯವರ ವಾದನ ಸದಾ ಕಾವಿನಿಂದ ಕೂಡಿರುವಂಥದು. ಅವರ ಕಛೇರಿ ಮೊದಲಿನಿಂದ ಕೊನೆಯವರೆಗೂ ರಂಜನೀಯ; ಸುನಾದದ ಅಲೆ! ಚೇತೋಹಾರಿ ವಿನಿಕೆ. ��ನಿಯಾಗಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಕಲಾವಿದರೊಂದಿಗೆ ಜುಗಲ್‌ಬಂದಿ, ಪಾಶ್ಚಾತ್ಯ ವಾದ್ಯಗಳೊಂದಿಗೆ ಜಾಸ್, ಫ್ಯೂಷನ್ ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಕಚೇರಿಗಳಲ್ಲಷ್ಟೇ ಆಲ್ಲದೆ, ಅನೇಕ ವೈಶಿಷ್ಟ್ಯಪೂರ್ಣ ಆಲ್ಬಂಗಳಲ್ಲಿ ಸಹಾ ಅವರ ಸಂಗೀತ ಶ್ರೋತೃ-ಅಭಿಮಾನಿಗಳನ್ನು ತಣಿಸುತ್ತಿದೆ. ಇಂದು ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನ್‌ಗೆ ಶಾಸ್ತ್ರೀಯ ಸಂಗೀತದ ವೇದಿಕೆಯ ಮೇಲೆ ಒಂದು ಗೌರವಾನ್ವಿತ ಸ್ಥಾನ ದೊರಕಿರುವುದು ಅವರ ಪ್ರತಿಭೆ, ಪರಿಶ್ರಮಗಳಿಂದಲೇ. ಹಾಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ನಿಟ್ಟಿನಲ್ಲಿ ಸ್ಯಾಕ್ಸೊಫೋನ್ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್. ಭಾರತದಲ್ಲಿ ಮತ್ತು ಹೊರಗೆ ಅನೇಕ 'ಸಂಗೀತ-ಕಛೇರಿ'ಗಳನ್ನು ನಡೆಸುತ್ತಾ ಬಂದಿರುವ 'ಕದ್ರಿ ಗೋಪಾಲನಾಥ್' ಸ್ಯಾಕ್ಸೊಫೋನ್ ಚಕ್ರವರ್ತಿ ಎಂದೇ ಹೆಸರಾಗಿದ್ದಾರೆ.

'ಡಾ.ಬಾಲಮುರಳಿಕೃಷ್ಣರವರ ಜೊತೆ'

ಕಾರ್ಗಿಲ್ ಯುದ್ಧ ಸಂತ್ರಸ್ತರಿಗೆ ಕೊಡುಗೆ

[ಬದಲಾಯಿಸಿ]

ಚೆನ್ನೈನ ನಾರದ ಗಾನಸಭಾದಲ್ಲಿ ೪00 ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ಬಂದ ಲಕ್ಷಾಂತರ ಹಣವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಗೋಪಾಲನಾಥರು ಸಮರ್ಪಿಸಿದವರು.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]
  • ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, []
  • ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,
  • ತಮಿಳುನಾಡು ಸರಕಾರದ ಕಲೈಮಾಮಣಿ,
  • ಕರ್ನಾಟಕ ಕಲಾಶ್ರೀ, []
  • ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ,
  • ಶೃಂಗೇರಿ – ಮಂತ್ರಾಲಯ - ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ,
  • ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್,
  • ರಾಜ್ಯೋತ್ಸವ ಪ್ರಶಸ್ತಿ
  • ಬೆಂಗಳೂರು ವಿಶ್ವವಿದ್ಯಾಲಯದ ಮತ್ತು ವಿವಿಧ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು

ಅಕ್ಟೋಬರ್ ೧೧ ೨೦೧೯ ರಂದು ಬೆಳಗಿನ ಜಾವ ೬೯ ನೆಯ ವಯಸ್ಸಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]