ಆಳ್ವಾರರು
ಆಳ್ವಾರರು (‘ದೇವರಲ್ಲಿ ಮುಳುಗಿದವರು’) ಕ್ರಿ.ಶ. ೬ನೇ ಮತ್ತು ೯ನೇ ಶತಮಾನಗಳ ನಡುವೆ ಬದುಕಿದ್ದ ಮತ್ತು ಹಾತೊರೆತ, ಭಾವಪರವಶತೆ ಹಾಗು ಸೇವೆಯ ತಮ್ಮ ಹಾಡುಗಳಲ್ಲಿ ವಿಷ್ಣು-ಕೃಷ್ಣನಿಗೆ ಭಾವನಾತ್ಮಕ ಭಕ್ತಿಯನ್ನು ಸಮರ್ಥಿಸಿದ್ದ ತಮಿಳು ಕವಿಸಂತರಾಗಿದ್ದರು. ವೈಷ್ಣವ ಸಾಂಪ್ರದಾಯಿಕತೆಯು ಆಳ್ವಾರರ ಸಂಖ್ಯೆ ಹತ್ತೆಂದು ಹೇಳುತ್ತದೆ, ಆದರೆ ಅಂಡಾಳ್ ಹಾಗು ಮಧುರಕವಿಯನ್ನು ಒಳಗೊಳ್ಳುವ ಇತರ ಉಲ್ಲೇಖಗಳು ಇವೆ, ಹೀಗೆ ಸಂಖ್ಯೆ ಹನ್ನೆರಡಾಗುತ್ತದೆ. ತಮಿಳು ಇತಿಹಾಸದ ಮಧ್ಯ ಯುಗದ ಆರಂಭದಲ್ಲಿ ರಚಿತವಾಗಿದ್ದ ಆಳ್ವಾರರ ಭಕ್ತಿ ಭಾವಪ್ರವಾಹವು ಭಕ್ತಿ ಚಳುವಳಿ ಪುನರುಜ್ಜೀವನಗೊಳ್ಳಲು ನೆರವಾಯಿತು. ವೇದವೇದಾಂತಗಳಿಂದ ಪ್ರಭಾವಿತರಾಗಿ ಭಾಗವತ ಧರ್ಮವನ್ನು ಕೈಗೊಂಡು ಅದಕ್ಕೆ ಸ್ವಾನುಭವದ ವಿಶಿಷ್ಟ ರೂಪವನ್ನು ಕೊಟ್ಟು ದಕ್ಷಿಣ ಭಾರತದಲ್ಲಿ-ಮುಖ್ಯವಾಗಿ ಪಾಂಡ್ಯ, ಚೋಳ, ಕೇರಳ ರಾಜ್ಯಗಳ ಹರಹಿನಲ್ಲಿ-ಪ್ರಚುರಗೊಳಿಸಿದ ಮಹಾಮಹಿಮರ ಪೈಕಿ ಇವರು ಅಗ್ರಗಣ್ಯರು. ಭಗವವ್ ಧ್ಯಾನದಲ್ಲೂ ಭಜನೆಯಲ್ಲೂ ಕೈಂಕರ್ಯದಲ್ಲೂ ಸದಾ ಮುಳುಗಿದ್ದುದರಿಂದ ಇವರಿಗೆ ಆಳ್ವಾರ್ ಎಂಬ ಅನ್ವರ್ಥನಾಮವಾಯಿತು.
ಆಳ್ವಾರರ ಕಾಲ
[ಬದಲಾಯಿಸಿ]ಇವರ ಕಾಲ ನಿರ್ದಿಷ್ಟವಾಗಿ ತಿಳಿಯದು. 4ನೆಯ ಶತಮಾನದಿಂದ-8ನೆಯ ಶತಮಾನದ ವರೆಗೆ ಹರಡಿದೆಯೆಂದು ಕೆಲವರು ಪ್ರಾಜ್ಞರೂ ಮತ್ತೆ ಕೆಲವರು 7-9ನೆಯ ಶತಮಾನದ ಆದಿಭಾಗದವರೆಂದೂ ಅಭಿಪ್ರಾಯಪಡುತ್ತಾರೆ. ಆದರೆ ಸಂಪ್ರದಾಯದ ಪ್ರಕಾರ ಇವರ ಜನ್ಮದಿವಸಗಳು ನಿರ್ದಿಷ್ಟವಾಗಿವೆ. ಈ ಕಾಲ ಪ್ರ.ಶ.ಪು. 4203 ರಿಂದ ಪ್ರಾರಂಭವಾಗಿ 2706ಕ್ಕೆ ಮುಗಿಯುತ್ತದೆ. ಕಾಲದ ಪ್ರಕಾರ ಆಳ್ವಾರ್ಗಳನ್ನು ಮೂರು ಪಂಗಡಗಳಾಗಿ ವಿಂಗಡಿಸಬಹುದು. ಪೊಯ್ಗೈ ಆಳ್ವಾರ್, ಪುದತ್ತಾಳ್ವಾರ್, ಪೇಯಾಳ್ವಾರ್ ಮತ್ತು ತಿರುಮಳಿಶೈ ಆಳ್ವಾರ್-ಇವರದು ಮೊದಲ ಗುಂಪು. ನಮ್ಮಾಳ್ವಾರ್, ಮಧುರಕವಿ ಆಳ್ವಾರ್, ಕುಲಶೇಖರ ಆಳ್ವಾರ್, ಪೆರಿಯಾಳ್ವಾರ್ ಮತ್ತು ಆಂಡಾಳ್. ಇವರದು ಎರಡನೆಯದು. ತೊಂಡರಡಿಪ್ಪೊಡಿ ಆಳ್ವಾರ್, ತಿರುಪ್ಪಾಣಾಳ್ವಾರ್ ಮತ್ತು ತಿರುಮಂಗೈ ಆಳ್ವಾರ್ ಇವರು ಮೂರನೆಯ ಗುಂಪಿಗೆ ಬರುತ್ತಾರೆ. ಈಗ ಲಭಿಸಿರುವ ವಿವಿಧ ಮೂಲಗಳ ಪ್ರಕಾರ ಆಳ್ವಾರರ ಕಾಲವನ್ನು ಈ ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.
ಕ್ರಮ ಸಂಖ್ಯೆ | ಆಳ್ವಾರ್ ಸಂತ | ಕಾಲ[೧][೨] ಮತ್ತು ಸ್ಥಳ | ಕೃತಿ | ತಿಂಗಳು | ನಕ್ಷತ್ರ | ಅವತಾರ |
---|---|---|---|---|---|---|
1 | ಪೋಯ್ಗೈ ಆಳ್ವಾರ್ | 4203 BCE, ಕಾಂಚೀಪುರಮ್ | Mudhal Thiruvandhadhi, 100 verses. | Aiypassee | Thiruvonam (Sravana) | ಪಾಂಚಜನ್ಯ(Krishna's conch) |
2 | ಭೂದತ್ತಾಳ್ವಾರ್ | 4203 BCE, Thirukadalmallai (ಮಹಾಬಲಿಪುರಂ) | Irandam Thiruvandhadhi, 100 verses. | Aiypassee | Avittam (Dhanishta) | ಕೌಮೊದಕೀ (Vishnu's Mace/Club) |
3 | ಪೇಯಾಳ್ವಾರ್ | 4203 BCE, ಮೈಲಾಪುರ | Moondram Thiruvandhadhi, 100 verses. | Aiypassee | Sadayam (Satabhishak) | ನಂದಕ (Vishnu's sword) |
4 | ತಿರುಮಲಿಸಾಯ್ ಆಳ್ವಾರ್ | 4203 BCE Thirumazhisai | Nanmugan Thiruvandhadhi, 96 verses; ThiruChanda Virutham, 120 verses. | Thai | Magam (Maghā) | ಸುದರ್ಶನ (Vishnu's discus) |
5 | ನಮ್ಮಾಳ್ವಾರ್ | 3102/3059[೩] Azhwar Thirunagari (Kurugur) | Thiruvaymozhi, 1102 verses; Thiruvasiriyam, 7 verses; Thiruvirutham, 100 verses; Periya Thiruvandhadhi, 87 verses. | Vaikasi | Vishaakam (Vishākhā) | Vishvaksena (Vishnu's commander) |
6 | ಮಧುರಕವಿ ಆಳ್ವಾರ್ | 3102 BC, ತಿರುಕೊಲ್ಲೂರ್ | Kanninun Siruthambu, 11 verses. | Chitthirai | Chitthirai (Chithra) | ವೈನತೇಯ (Vishnu's eagle, Garuda) |
7 | ರಾಜಾ ಕುಲಶೇಖರ ಆಳ್ವಾರ್ | 3075 BC, ತಿರುವಂಚಿಕ್ಕುಳಂ, Later Chera kingdom | Perumal Thirumozhi, 105 verses. | Maasee | Punar Poosam (Punarvasu) | ಕೌಸ್ತುಭ (Vishnu's necklace) |
8 | ಪೆರಿಯಾಳ್ವಾರ್ | 3056 BC, ಶ್ರೀವಳ್ಳಿಪುತ್ತೂರ್ | Periyazhwar Thirumozhi, 473 verses. | Aani | Swathi (Swaathee) | ಗರುಡ (Vishnu's eagle) |
9 | ಆಂಡಾಳ್ | 3005 BC, ಶ್ರೀವಳ್ಳಿಪುತ್ತೂರ್ | Nachiyar Thirumozhi, 143 verses; Thiruppavai, 30 verses. | Aadi | Pooram (Pūrva Phalgunī (Pubbha)) | ಭೂದೇವಿ (Vishnu's wife, Lakshmi, in her form as Bhudevi) |
10 | ತೊಂಡರಡಿಪ್ಪೊಡಿ ಆಳ್ವಾರ್ | 2814 BCE, ತಿರುಮಂದನ್‍ಗುಡಿ | Thirumaalai, 45 verses; Thirupalliezhuchi, 10 verses. | Margazhi | Kettai (Jyeshta) | ವನಮಾಲ (Vishnu's garland) |
11 | ತಿರುಪ್ಪಾನ್ ಆಳ್ವಾರ್ | 2760 BCE, ಉರಯೂರ್ | Amalan Adi Piraan, 10 verses. | Karthigai | Rogini (Rohinee) | Srivatsa (An auspicious mark on Vishnu's chest) |
12 | ತಿರುಮಂಗೈ ಆಳ್ವಾರ್ | 2706 BCE, ತಿರುಕುರಯಾಲೂರ್ | Periya Thirumozhi, 1084 verses; Thiru Vezhukootru irukkai, 1 verse; Thiru Kurun Thandagam, 20 verses; Thiru Nedun Thandagam, 30 verses. | Kaarthigai | Krithika (Kṛttikā) | ಸಾರಂಗ (Rama's bow) |
ಆಪೂರ್ವ ಪ್ರತಿಭಾಸಂಪನ್ನರೂ ಜ್ಞಾನಪೂರ್ಣರು ಮಹಾನುಭಾವರೂ ಆದ ಇವರಲ್ಲಿ ಎಲ್ಲ ಜಾತಿಗಳವರೂ ವರ್ಗದವರೂ ಇದ್ದಾರೆ. ಒಬ್ಬರು ವೆಳ್ನಾಳರು, ಒಬ್ಬರು ರಾಜ, ಒಬ್ಬರು ಸ್ತ್ರೀ, ಮೂವರು ಬ್ರಾಹ್ಮಣರು. ನಾಲ್ವರ ಕುಲಗೋತ್ರಗಳು ಗೊತ್ತಿಲ್ಲ. ಆದರೆ ಪೂಜ್ಯತೆಯಲ್ಲಿ ಎಲ್ಲರೂ ಸಮಾನರು; ಮತ್ತು ಆಚಾರ್ಯರುಗಳಿಗಿಂತ ಮಿಗಿಲು. ತಾನೊಲಿದವರಿಗೆ ಆತ್ಮ ತನ್ನ ಮೈಯನ್ನು ವಿವರವಾಗಿ ತೆರೆದು ತೋರುತ್ತದೆ ಎಂಬ ಶ್ರುತಿವಾಕ್ಯಕ್ಕೆ ಈ ಆಳ್ವಾರ್‍ಗಳಿಗಿಂತ ಉತ್ತಮ ನಿದರ್ಶನ ಸಿಕ್ಕಲಾರದು. ಇವರಿಂದ ನಮಗೀಗ ಲಭಿಸಿರುವ ತಮಿಳು ಪ್ರಬಂಧಗಳಲ್ಲಿ ನಾಲ್ಕು ಸಾವಿರ ಬಿಡಿ ಪದ್ಯಗಳಿವೆ. ಶ್ರೀವೈಷ್ಣವರಲ್ಲಿ ಇದಕ್ಕೆ ವೇದಗಳಷ್ಟೇ ಪ್ರಾಮಾಣ್ಯ, ಪ್ರಾಶಸ್ತ್ಯಗಳು ದೊರೆತು ಇವು ಅನೇಕ ನಿಷ್ಠರ ಮುಖಸ್ಥವಾಗಿವೆ. ಇವುಗಳಲ್ಲಿ 215 ಪದ್ಯಗಳು ದಿನವೂ ಹೇಳತಕ್ಕ ನಿತ್ಯಾನುಸಂಧಾನಕ್ಕೆ ಸೇರಿವೆ. ಈ ಪ್ರಬಂಧಗಳಲ್ಲಿ ನಮ್ಮಾಳ್ವಾರರ ತಿರುವಾಯ್ಮೊಳಿ ಎಂಬ ಪ್ರಬಂಧ ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಅತ್ಯಗತ್ಯವಾಗಿದ್ದು ನಮ್ಮಾಳ್ವಾರರಿಗೆ ಆಳ್ವಾರ್ ಸಾಲಿನಲ್ಲಿ ಅಗ್ರ ಪದವಿ ಗಳಿಸಿಕೊಟ್ಟಿದೆ.
ಆಳ್ವಾರ್‍ಗಳ ತತ್ವ
[ಬದಲಾಯಿಸಿ]ಆಳ್ವಾರ್ಗಳ ಸೂಕ್ತಿಗಳಿಂದ ಮೂಡಿಬರುವ ತತ್ತ್ವಾರ್ಥವನ್ನು ಈ ರೀತಿ ಸಂಗ್ರಹಿಸಬಹುದು: ತತ್ತ್ವಗಳು ಮೂರು-ಚಿತ್, ಅಚಿತ್, ಈಶ್ವರ. ಚಿತ್ತೂ ಅಚಿತ್ತೂ ಈಶ್ವರನ ಪ್ರಕಾರಗಳು. ಅವುಗಳಿಂದ ಹೊರತಾಗಿ ಅವನಿಲ್ಲ. ಅವನಿಗೆ ಹೊರತಾಗಿ ಅವೂ ಇಲ್ಲ. ಆದರೆ ಚಿದಚಿದ್ವಿಲಕ್ಷಣವಾಗಿದ್ದಾನೆ, ಈಶ್ವರ. ಮೂರರ ಲಕ್ಷಣಗಳೂ ಬೇರೆ ಬೇರೆ. ಚಿತ್ ಅಂದರೆ ಜೀವಾತ್ಮ. ಅವನ ಸ್ವರೂಪ ಹೀಗಿದೆ. ಆತ 25ನೆಯ ತತ್ತ್ವ. ಮಿಕ್ಕ 24 ಯಾವುವೆಂದರೆ : ಮೂಲ ಪ್ರಕೃತಿ, ಅದರ ಮಹದಾದಿ ಸಪ್ತವಿಕೃತಿಗಳು, ಮತ್ತು ಷೋಡಶ ವಿಕಾರಗಳು; ದೇಹೇಂದ್ರಿಯ ಮನಃಪ್ರಾಣ ಬುದ್ಧ್ಯಾದಿ ವಿಲಕ್ಷಣ; ಅಜಡ; ಆನಂದರೂಪ; ನಿತ್ಯ; ಅಣು; ಅವ್ಯಕ್ತ; ಅಚಿಂತ್ಯ; ನಿರವಯವ; ನಿರ್ವಿಕಾರ; ಜ್ಞಾನಾಶ್ರಯ; ನಿಯಾಮ್ಯ; ಧಾರ್ಯ; ಮತ್ತು ಶೇಷಭೂತ. ಜೀವಾತ್ಮನ ಸ್ವರೂಪ ಹೀಗಿದ್ದರೂ ಅನಾದಿಕಾಲಸಂಚಿತವಾದ ಪುಣ್ಯಪಾಪ ಕರ್ಮಗಳಿಂದ ಕಟ್ಟುವಡೆದು ಈ ಬ್ರಹ್ಮಾತ್ಮಕವಾದ ಪ್ರಪಂಚದಲ್ಲಿ ಹುಟ್ಟಿ ಸಂಚರಿಸುತ್ತಾನೆ. ಇವನೇ ಬದ್ಧಾತ್ಮ. ಸ್ವರೂಪ ಜ್ಞಾನಹೀನ, ಸ್ವಕರ್ಮನಿಗಳ ಬದ್ಧ. ಈತನಿಗೆ ತನ್ನ ನಿಜವನ್ನು ತಾನರಿತು ಸಂಸಾರದಿಂದ ಮುಕ್ತನಾಗಬೇಕೆಂಬ ಪ್ರೇರಣೆ ಭಗವತ್ ಕೃಪೆಯಿಂದಲೇ ಒದಗಬೇಕು. ಹಾಗೆ ದೊರೆತವನೇ ಮುಮುಕ್ಷು. ಪರಮಾತ್ಮನ ಅಂಶವಾದ್ದರಿಂದ ಈತನಲ್ಲೂ ಪರಿಮಿತವಾಗಿ ಜ್ಞಾನ ಶಕ್ತಿಬಲ ಐಶ್ವರ್ಯ ವೀರ್ಯ ತೇಜಸ್ಸು ಸುಖ ದಯೆ ಕ್ಷಮೆ ಶಾಂತಿ ಮುಂತಾದ ಭಗವತ್ಗುಣಗಳು ಕಾಣಿಸಿಕೊಳ್ಳುತ್ತವೆ. ಇವು ಭಗವಂತನಲ್ಲಿ ಸರ್ವಕಾಲದಲ್ಲಿ ಸರ್ವಾವಸ್ಥೆಗಳಲ್ಲೂ ಸಂಪೂರ್ಣವಾಗಿಯೂ ಸ್ವಭಾವಸಿದ್ಧವಾಗಿಯೂ ಅನಂತವಾಗಿಯೂ ಅತ್ಯುತ್ಕೃಷ್ಟವಾಗಿಯೂ ಅವಿಚ್ಛಿನ್ನವಾಗಿಯೂ ಇರತಕ್ಕವು. ಕ್ಷುತ್ ಪಿಪಾಸಾದಿ ಹೇಯಗುಣಗಳು ಅಚಿತ್ ಸಂಪರ್ಕವುಳ್ಳ ಬದ್ಧಾತ್ಮನಲ್ಲಿ ಮಾತ್ರ ಕಾಣಬರತಕ್ಕವು. ಆತನ ಸ್ವರೂಪಕ್ಕೆ ಇವು ತಕ್ಕವು. ಕರ್ಮವಶನಲ್ಲದ ಪರಮಾತ್ಮನಿಗೆ ಈ ಹೇಯ ಗುಣಗಳ ಸಂಪರ್ಕ ಸುತಾರಾಂ ಇಲ್ಲ. ಭಗವತ್ ಕೃಪೆಯಿಂದ ಮುಮುಕ್ಷುವಾದ ಬದ್ಧಾತ್ಮ ಅಚಿತ್ ಸಂಸರ್ಗವನ್ನು ಕಳೆದುಕೊಳ್ಳಲು ತೊಡಗಿ ಆ ಪ್ರಯತ್ನದಲ್ಲಿ ಸದ್ಗುರುವನ್ನು ಆಶ್ರಯಿಸಿ ತನ್ಮುಖೇನ ತನಗೂ ಭಗವಂತನಿಗೂ ಇರುವ ನವ ವಿಧ ಸಂಬಂಧಗಳನ್ನು ಅರಿತುಕೊಂಡು ಭಗವತ್ ಸಂಶ್ಲೇಷಣವನ್ನು ಹೊಂದಲು ಪ್ರಯತ್ನಿಸುತ್ತಾನೆ; ದೈವಕೃಪೆಯಿದ್ದರೆ ಸಿದ್ಧಿಯನ್ನು ಹೊಂದುತ್ತಾನೆ. ಈ ಒಂಬತ್ತು ಸಂಬಂಧಗಳು ಈ ಪ್ರಕಾರವಾಗಿವೆ: ಆತ ಪಿತಾ-ಈತ ಪುತ್ರ, ರಕ್ಷಕ-ರಕ್ಷ್ಯ, ಶೇಷಿ-ಶೇಷ, ಭರ್ತೃ-ಭಾರ್ಯೆ, ಜ್ಞೇಯ-ಜ್ಞಾತೃ, ಸ್ವಾಮಿ-ಸ್ವತ್ತು, ಆಧಾರ-ಆಧೇಯ, ಆತ್ಮ-ಶರೀರ, ಭೋಕ್ತೃ-ಭೋಗ್ಯ. ಈ ಸಂಬಂಧಗಳನ್ನು ಕುರಿತೇ ಆಳ್ವಾರರುಗಳ ಪ್ರಬಂಧಗಳು ಪ್ರವರ್ತಿಸುತ್ತವೆ. ಆತ್ಮವೆಂಬ ಶರೀರಕ್ಕೆ ಪ್ರಾಣಭೂತನಾಗಿ ದ್ದಾನೆ ಪರಮೇಶ್ವರ. ಜೀವಾತ್ಮನಿಗೆ ಭಗವಂತನ ಸಾನ್ನಿಧ್ಯ ಕೈಂಕರ್ಯಗಳಿಗಿಂತಲೂ ಪ್ರಿಯವಾದದ್ದು ಮ��್ತಾವುದೂ ಇಲ್ಲ. ಮುಕ್ತಿಯಲ್ಲೂ ಆತ ಬಯಸುವುದು ಇದನ್ನೇ. ಭಗವಂತನ ದಯೆಯೂ ಅಪಾರವಾದದ್ದು. ಅದನ್ನು ಪಡೆಯಲು ಜ್ಞಾನಕರ್ಮ ಭಕ್ತ್ಯಾದಿ ಯಾವ ಅಧಿಕಾರವೂ ಬೇಕಿಲ್ಲ; ಶರಣಾಗತನಾದರೆ, ಪ್ರಪನ್ನನಾದರೆ ಸಾಕು. ಭಕ್ತಿಮಾರ್ಗಕ್ಕಿಂತಲೂ ಪ್ರಪತ್ತಿಮಾರ್ಗ ಶ್ರೇಷ್ಠವೆಂಬುದು ಆಳ್ವಾರುಗಳ ಅಭಿಮತವೆಂದು ತೋರುತ್ತದೆ. ಭಕ್ತಿಗೆ ನಿರಂತರ ಧ್ಯಾನ ಆವಶ್ಯಕ; ಇದು ಸಂಸ್ಕೃತರಾದ ದೃಢಚಿತ್ತರಿಗೆ ಮಾತ್ರ ಲಭ್ಯವಾಗತಕ್ಕದ್ದು. ಶರಣಾಗತಿಗೂ ಜ್ಞಾನಧ್ಯಾನಾದಿಗಳಾವುವೂ ಬೇಕಿಲ್ಲ. ಶರೀರಿಯೂ ಬೌದ್ಧನೂ ಆದ ಜೀವಾತ್ಮನಿಗೆ ಮಾತ್ರ ಭಗವಂತನ ನಿರ್ಹೇತುಕ ಕರುಣೆಯ ದೇವ ದುರ್ಲಭವಾದ ಭೋಗ. ಅವನೆಣಿಸಿದಂತೆ ಅವನ ದೈವ ಮೈದೋರಿ ಕಾಪಾಡುತ್ತದೆ. ಪರಮಾತ್ಮ ವಿಭುವೂ ಪ್ರಭುವೂ ಆಗಿರುವುದು, ತಾನು ಹಾಗಲ್ಲದಿರುವುದು ಕೂಡ, ಒಂದು ಗುಣವೇ. ಆತ ವಿಭುವಾಗಿರುವುದರಿಂದ ಕೈಂಕರ್ಯವನ್ನು ಒಂದು ಭೋಗವನ್ನಾಗಿ ಕರುಣಿಸುವುದಕ್ಕೆ ತಕ್ಕವ ಆತನೊಬ್ಬನೇ. ಹೀಗೆ ಈ ಸಂಬಂಧಗಳು ಬದ್ಧಾತ್ಮರುಗಳಿಗೂ ಸಕಲಾಂತರ್ಯಾಮಿಗೂ ಇರುವ ಪರಸ್ಪರವಾದ ಮಧುರ ಸಂಬಂಧಗಳನ್ನು ಎತ್ತಿ ತೋರಿಸುತ್ತ, ರಾಮಕೃಷ್ಣಾದಿ ವಿಭವಾವತಾರಗಳನ್ನೂ ವಿವರವಾಗಿ ನೆನೆದು ಕೊಂಡಾಡುತ್ತ ಯೋಗಕ್ಷೇಮಕಾತರವಾದ ಈ ಜಗತ್ತಿನಲ್ಲಿ ಸದ್ಭಾವ ಸಂತೋಷಗಳನ್ನು ಹರಡುತ್ತಿವೆ. ನಮ್ಮಾಳ್ವಾರರ ಶಿಷ್ಯರಾದ ಮಧುರಕವಿಗಳು ಮಾತ್ರ ಭಗವಂತನ ಗೊಡವೆಗೇ ಹೋಗದೆ ಆಚಾರ್ಯರೇ ದೈವವೆಂದು ಬಗೆದು ಆ ನಿಷ್ಠೆಯಲ್ಲಿ ಮುಳುಗಿ ಹನ್ನೊಂದು ಪಾಶುರಗಳಲ್ಲಿ ಅವರನ್ನು ಕೊಂಡಾಡಿ, ಹೊಸ ಮಾರ್ಗವೊಂದನ್ನು ತೆರೆದು, ಆಳ್ವಾರ್ ಪದವಿಗೇರಿದರು. ಈ ಹನ್ನೊಂದು ಪದ್ಯಗಳೂ ಮಿಕ್ಕವಂತೆ ಬಹು ಗಂಭೀರವೂ ಮಧುರವೂ ಆಗಿವೆ.
ಆಳ್ವಾರ್‍ಗಳ ಹಿರಿಮೆ
[ಬದಲಾಯಿಸಿ]ಆಳ್ವಾರ್ಗಳು ತಮ್ಮ ನಾಡಿನ ಹಲವೆಡೆಗಳಿಗೆ ಬಾನಿನ ಚೆಲುವನ್ನು ತಂದರು. ನಮ್ಮ ನುಡಿಗೆ ಅಪೂರ್ವ ಶೋಭೆಯನ್ನಿತ್ತರು. ಮೇಲ್ಮೆಯಲ್ಲಿ ಸದಾ ಆಸಕ್ತರಾಗಿ ಮೇಲ್ಮೆಯೊಲವನ್ನು ತಮ್ಮ ನಾಡಿನಲ್ಲಿ ಹರಡಿದರು; ಆದುದರಿಂದ ಈ ಮಹನೀಯರು ದೇಶಭಕ್ತರಲ್ಲೂ ಮೊದಲೆಣಿಕೆಗೆ ತಕ್ಕವರು. ವೇದಗಳಲ್ಲಿ ಉಕ್ತವಾಗಿರುವ ತಿಳಿವನ್ನು ತಮ್ಮ ಸುತ್ತಿನ ಜನರ ಆಡುಭಾಷೆಯಾದ ತಮಿಳಿನಲ್ಲಿ ಹಾಡಿದ ಆಳ್ವಾರುಗಳ ಸೂಕ್ತಿಗಳನ್ನು ತಮಿಳುವೇದವೆಂದೇ ಕರೆಯುತ್ತಾರೆ. ಶ್ರೀವೈಷ್ಣವ ದೇವಾಲಯಗಳಲ್ಲಿ ಆಳ್ವಾರುಗಳ ಮೂರ್ತಿಗಳನ್ನು ಪ್ರತಿಷ್ಠಿಸಿ ಪೂಜಿಸುವ ಪದ್ಧತಿಯಿದೆ. ಆಯಾ ಆಳ್ವಾರುಗಳ ಜನ್ಮಸ್ಥಳಗಳಲ್ಲಿ ಸಾಮಾನ್ಯವಾಗಿ ಅವರ ಮೂರ್ತಿಗಳುಳ್ಳ ಗುಡಿಗಳಿವೆ. ಆಳ್ವಾರುಗಳ ಆರಾಧ್ಯಮೂರ್ತಿಗಳ ಸಹಿತವಾಗಿ ಅವರ ಮೂರ್ತಿಗಳನ್ನು ಪೂಜಿಸುವುದು ಅಲ್ಲಿ ವಾಡಿಕೆ. ದೇವರ ಆರಾಧನೆಯ ಸಮಯದಲ್ಲಿ ಆಳ್ವಾರುಗಳ ಕೃತಿಗಳನ್ನು ಹಾಡುವುದು ಶ್ರೀವೈಷ್ಣವ ಸಂಪ್ರದಾಯ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Twelve Alvars Archived 2005-12-12 ವೇಬ್ಯಾಕ್ ಮೆಷಿನ್ ನಲ್ಲಿ.
- Alvars and Srivaishnavism
- The Alvar Saints (ramanuja.org)
- The Alvar Saints of Tamilnadu by Jyotsna Kamat
ಉಲ್ಲೇಖಗಳು
[ಬದಲಾಯಿಸಿ]- ↑ "Ancient India: Collected Essays on the Literary and Political History of Southern India", by Sakkottai Krishnaswami Aiyangar, p. 403-404, publisher = Asian Educational Services
- ↑ "Music and temples, a ritualistic approach", by L. Annapoorna, p. 23, year = 2000, isbn = 9788175740907
- ↑ "History of Classical Sanskrit Literature", by M. Srinivasachariar, p. 278, isbn=9788120802841