ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶ | |
ರಾಜಧಾನಿ - ಸ್ಥಾನ |
ಇಟಾನಗರ - |
ಅತಿ ದೊಡ್ಡ ನಗರ | ಇಟಾನಗರ |
ಜನಸಂಖ್ಯೆ () - ಸಾಂದ್ರತೆ |
1382611 (27th) - 13/km² |
ವಿಸ್ತೀರ್ಣ - ಜಿಲ್ಲೆಗಳು |
83,743 km² (14) - 16 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಫೆಬ್ರವರಿ ೨೦,೧೯೮೭ - ಜೋಗಿಂದರ್ ಜಸ್ವಂತ್ ಸಿಂಗ್ - ದೋರ್ಜೀ ಖಂಡು - Unicameral (60) |
ಅಧಿಕೃತ ಭಾಷೆ(ಗಳು) | ಇಂಗ್ಲೀಷ್,ಹಿಂದಿ |
Abbreviation (ISO) | IN-AR |
ಅಂತರ್ಜಾಲ ತಾಣ: http://www.arunachalpradesh.nic.in/ | |
ಅರುಣಾಚಲ ಪ್ರದೇಶ ರಾಜ್ಯದ ಮುದ್ರೆ |
ಅರುಣಾಚಲ ಪ್ರದೇಶ - ಭಾರತದ ಈಶಾನ್ಯ ರಾಜ್ಯಗಳಲ್ಲೊಂದು. ದಕ್ಷಿಣದಲ್ಲಿ ಅಸ್ಸಾಂ, ಆಗ್ನೇಯದಲ್ಲಿ ನಾಗಾಲ್ಯಾಂಡ್, ಪೂರ್ವದಲ್ಲಿ ಮ್ಯಾನ್ಮಾರ್, ಪಶ್ಚಿಮದಲ್ಲಿ ಭೂತಾನ್ ಮತ್ತು ಉತ್ತರದಲ್ಲಿ ಟಿಬೆಟ್‌ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.
ಇತಿವೃಏತ್ತ
[ಬದಲಾಯಿಸಿ]1962ಕ್ಕಿಂತ ಹಿಂದೆ ಅರುಣಾಚಲ ಪ್ರದೇಶ ರಾಜ್ಯವನ್ನು ಈಶಾನ್ಯ ಗಡಿನಾಡಿನ ಏಜೆನ್ಸಿ ಎಂದು ಕರೆಯಲಾಗುತ್ತಿತ್ತಲ್ಲದೇ ಅಸ್ಸಾಂ ರಾಜ್ಯದ ಒಂದು ಭಾಗವಾಗಿತ್ತು. 1972ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ಪರಿಗಣಿಸಲ್ಪಡುವುದರ ಜೊತೆಗೆ ಅರುಣಾಚಲಪ್ರದೇಶವೆಂದು ಪುನರ್ ನಾಮಕರಣ ಮಾಡಲಾಯಿತು. 1987 ಫೆಬ್ರವರಿ 20 ರಂದು ಇದು ಭಾರತ ಒಕ್ಕೂಟದ 24ನೆಯ ರಾಜ್ಯವಾಗಿ ಜಾರಿಗೆ ಬಂದಿತು.
ಭೌಗೋಳಿಕ
[ಬದಲಾಯಿಸಿ]ಸನ್ನಿವೇಶ ಮತ್ತು ವಿಸ್ತೀರ್ಣ: ಈ ರಾಜ್ಯ 26ಡಿಗ್ರಿ-28′ ಉತ್ತರ ಅಕ್ಷಾಂಶದಿಂದ 29ಡಿಗ್ರಿ-30′ ಉ.ಅಕ್ಷಾಂಶದವರೆಗೂ ರೇಖಾಂಶಿಕವಾಗಿ 91ಡಿಗ್ರಿ30′ ಪೂ.ರೇ. ದಿಂದ 96ಡಿಗ್ರಿ 30′ ಪೂ.ರೇ. ದವರೆಗೂ ವಿಸ್ತರಿಸಿದೆ. ಈ ರಾಜ್ಯ ಪೂರ್ವದಲ್ಲಿ ಮ್ಯಾನ್ಮಾರ್, ಪಶ್ಚಿಮದಲ್ಲಿ ಭೂತಾನ್, ಉತ್ತರದಲ್ಲಿ ಚೀನ ಮತ್ತು ಟಿಬೆಟ್‍ಗಳ ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿದ್ದರೆ, ದಕ್ಷಿಣದಲ್ಲಿ ಅಸ್ಸಾಂ ಮತ್ತು ನಾಗಾಲ್ಯಾಂಡ್ರಾಜ್ಯಗಳ ಗಡಿಗಳನ್ನು ಹೊಂದಿದೆ. ಈ ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣ 83,743 ಚ.ಕಿಮೀ. ಇದು 16 ಜಿಲ್ಲೆಗಳನ್ನು ಹೊಂದಿದ್ದು, ಇಟಾನಗರ ಈ ರಾಜ್ಯದ ರಾಜಧಾನಿಯಾಗಿದ್ದು ಸಮುದ್ರಮಟ್ಟದಿಂದ 530 ಮೀ ಎತ್ತರದಲ್ಲಿದೆ. ಜನಸಂಖ್ಯೆ 13,82.611.ಜನಸಂಖ್ಯೆ ಬೆಳವಣಿಗೆಯ ತಖ್ತೆ ಇಲ್ಲಿದೆ.
ಜನಸಂಖ್ಯೆಯ ಬೆಳವಣಿಗೆ | |||
---|---|---|---|
Census | Pop. | %± | |
1961 | ೩,೩೭,೦೦೦ | ||
1971 | ೪,೬೮,೦೦೦ | 38.9% | |
1981 | ೬,೩೨,೦೦೦ | 35.0% | |
1991 | ೮,೬೫,೦೦೦ | 36.9% | |
2001 | ೧೦,೯೮,೦೦೦ | 26.9% | |
2011 | ೧೩,೮೨,೬೧೧ | 25.9% | |
Source:Census of India[೧] First ever census was carried out in 1961. |
ಮೇಲ್ಮೈ ಲಕ್ಷಣ
[ಬದಲಾಯಿಸಿ]ಅರುಣಾಚಲ ಪ್ರದೇಶ ಭಾರತದ ಈಶಾನ್ಯ ಗಡಿ ಭಾಗದ ಹಿಮಾಲಯ ಪರ್ವತಗಳ ಭಾಗದಲ್ಲಿರುವ ರಾಜ್ಯವಾಗಿದೆ. ಇದು ನಾಲ್ಕು ಮೇಲ್ಮೈ ಲಕ್ಷಣಗಳಿಂದ ಕೂಡಿದೆ.
- ಪರ್ವತ ಶ್ರೇಣಿಗಳು
- ಉಪ ಪರ್ವತ ಪ್ರದೇಶ
- ನದಿ ಕಣವೆ ಪ್ರದೇಶಗಳು
- ಪರ್ವತದ ಇಳಿಜಾರುಗಳು.
ಹಿಮಾಲಯದ ಶಿವಾಲಿಕ್ ಭಾಗ ಈ ರಾಜ್ಯದಲ್ಲಿ ಹಲವಾರು ಶ್ರೇಣಿಗಳನ್ನು ಹೊಂದಿದೆ. ಶಿವಾಲಿಕ್ ಪ್ರದೇಶಕ್ಕೆ ಹೊಂದಿಕೊಂಡಂತೆ ಹಬ್ಬಿರುವ ಹಲವಾರು ಬೆಟ್ಟ ಸರಣಿಗಳು ಈ ರಾಜ್ಯದಲ್ಲಿ ಉತ್ತರ ದಕ್ಷಿಣಾಭಿಮುಖವಾಗಿ ಹಬ್ಬಿವೆ. ಈ ರಾಜ್ಯದಲ್ಲಿ ಟಿಬೆಟ್‍ನಿಂದ ಭಾರತಕ್ಕೆ ಪ್ರವೇಶಿಸುವ ಬ್ರಹ್ಮ ಪುತ್ರಾ ನದಿ ಪ್ರಮುಖವಾದದ್ದು. ಇಲ್ಲಿನ ನದಿಗಳು ತಮ್ಮ ಪಾತ್ರವನ್ನು ಆಳವಾಗಿ ಕೊರೆದು ಕಣವೆ ಪ್ರದೇಶವನ್ನು ನಿರ್ಮಿಸುವುದರ ಜೊತೆಗೆ, ಅಸ್ಸಾಂ ರಾಜ್ಯದ ಮೈದಾನದಿಂದ ಇವನ್ನು ಪ್ರತ್ಯೇಕಿಸಿವೆ. ಎತ್ತರವಾದ ತಳ ಹಿಮಾಲಯದ (ಶಿವಾಲಿಕ್) ಭಾಗದಿಂದ ತಗ್ಗಾದ ನದಿ ಕಣಿವೆ ಪ್ರದೇಶದ ಕಡೆಗೆ ಈ ರಾಜ್ಯದುದ್ದಕ್ಕೂ ಇಳಿಜಾರು ಪ್ರದೇಶ ಕಂಡುಬರುತ್ತದೆ.
ಜಲವ್ಯವವಸ್ಥೆ
[ಬದಲಾಯಿಸಿ]ಈ ರಾಜ್ಯ ಎತ್ತರವಾದ ಪರ್ವತ ಭಾಗದಿಂದ ಕೂಡಿದ್ದು ಇಳಿಜಾರನ್ನು ಹೊಂದಿ ಹಾಗೂ ವಾರ್ಷಿಕವಾಗಿ 500 ಸೆಂಮೀ ಮಳೆವನ್ನು ಪಡೆಯುವುದರಿಂದ ಇಲ್ಲಿ ಸರೋವರಗಳು ಮತ್ತು ನದಿಗಳು ಉಗಮ ಹೊಂದಿವೆ. ಹಲವಾರು ನದಿಗಳು ತಗ್ಗು ಪ್ರದೇಶದ ಕಡೆಗೆ ಹರಿಯುವುದರ ಜೊತೆಗೆ ಆಳವಾದ ಕಣವೆಯನ್ನು ನಿರ್ಮಿಸಿವೆ. ಇಲ್ಲಿ ಹರಿಯುವ ಪ್ರಮುಖ ನದಿ ಬ್ರಹ್ಮಪುತ್ರ ಇದು ಭಾರತದ ಪ್ರಮುಖ ನದಿಗಳಲ್ಲೊಂದಾಗಿದ್ದು, ಟಿಬೆಟಿನಿಂದ ಹರಿದು ಬಂದು ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳ ಮೂಲಕ ಹರಿದು ಬಂಗಾಲಕೊಲ್ಲಿಗೆ ಸೇರುವ ಮೊದಲು ಬಾಂಗ್ಲಾದೇಶದ ಮೂಲಕವೂ ಹರಿಯುತ್ತದೆ. ಇಲ್ಲಿ ಕಾಮೆಂಗ್, ಸುಬನ್ ಸಿರಿ, ಸಿಯಾಂಗ್, ಲೋಹಿತ್ ಮತ್ತು ಟೆರಾವ್, ಕಾಮ್ಟ, ಶಿವೂಮ್, ದಿಬಾಂಗ್, ನೋಹಾ - ದಿಹಾಂಗ್, ಕಾಮ್ಟಾಂಗ್ ಮುಂತಾದವು ಪ್ರಮುಖ ನದಿಗಳು.
ಮಣ್ಣಿನ ಪ್ರಕಾರಗಳು
[ಬದಲಾಯಿಸಿ]ಈ ರಾಜ್ಯದ ಪರ್ವತ ಪ್ರದೇಶಗಳು ದಟ್ಟ ಅರಣ್ಯಗಳನ್ನು ಹೊಂದಿದ್ದು, ಹೆಚ್ಚು ಮಳೆಯನ್ನು ಪಡೆಯುವುದರಿಂದ ವಿಭಿನ್ನ ರೀತಿಯ ಮಣ್ಣುಗಳನ್ನು ಹೊಂದಿದೆ. ಇಲ್ಲಿ ನಾಲ್ಕು ವಿಧದ ಮಣ್ಣುಗಳನ್ನು ಕಾಣಬಹುದು:
- ಅರಣ್ಯ ಮಣ್ಣು: ಇದು ಎತ್ತರವಾದ ಬೆಟ್ಟ ಹಾಗೂ ಪರ್ವತ ಪ್ರದೇಶಗಳಲ್ಲಿ ಕಂಡು ಬರುತ್ತದೆ. ತೆಳು ಕಪ್ಪು ಬಣ್ಣದಿಂದ ಕೂಡಿದ್ದು, ಸಾಕಷ್ಟು ಸಾರಜನಕವನ್ನು ಹೊಂದಿದೆ. ಮರದ ಎಲೆಗಳು ಮಣಿನಲ್ಲಿ ಕೊಳೆತು ಹ್ಯೂಮಸ್ ಅಥವಾ ಜೈವಿಕಾಂಶದ ಪ್ರಮಾಣ ಅಧಿಕವಾಗಿದೆ.
- ಜೌಗುಮಣ್ಣು: ಬೆಟ್ಟಗಳಿಂದ ಕೂಡಿದ ಇಳಿಜಾರಿನ ತಗ್ಗು ಪ್ರದೇಶಗಳಲ್ಲಿ ಕಂಡು ಬರುವ ಮಣ್ಣವನ್ನು ಜೌಗು ಮಣ್ಣು ಎನ್ನಲಾಗುತ್ತದೆ. ಇಲ್ಲಿ ಸದಾ ನೀರಿನ ಜಿನುಗುವಿಕೆ ಅಧಿಕ ಪ್ರಮಾಣದಲಿದ್ದು, ಜೈವಿಕಾಂಶ ಹೆಚ್ಚಾಗಿರುತ್ತದೆ. ಬತ್ತ ಹಾಗೂ ಅಧಿಕ ನೀರಿನ ಆಶ್ರಯದಲ್ಲಿ ಬೆಳೆಯುವ ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.
- ಜಂಬಿಟ್ಟಿಗೆ ಮಣ್ಣು: ಈ ರಾಜ್ಯದಲ್ಲಿ ಮಳೆ ಯಥೇಚ್ಛವಾಗಿ ಬೀಳುವುದರಿಂದ ಇಳಿಜಾರು ಪ್ರದೇಶಗಳಲ್ಲಿ ಕಂಡು ಬರುವ ಸಿಲಿಕ ಮತ್ತು ಲವಣಾಂಶಗಳೆಲ್ಲವೂ ಕರಗಿ ಮತ್ತು ತೊಳೆಸಲ್ಪಟ್ಟು ಕೇವಲ ಅಲ್ಯೂಮಿನಿಯಂ ಮತ್ತು ಕಬ್ಬಿಣಾಂಶಗಳು ಹಾಗೆಯೇ ಉಳಿದಿರುತ್ತವೆ. ಈ ಮಣ್ಣನ್ನೇ ಜಂಬಿಟ್ಟಿಗೆ ಮಣ್ಣು ಎನ್ನುವರು. ಇದರಲ್ಲಿ ತರಕಾರಿ ಹಾಗೂ ಇತರೆ ಕೆಲವು ತೋಟಗಾರಿಕಾ (ಹಣ್ಣು) ಬೆಳೆಗಳನ್ನು ಬೆಳೆಯಲಾಗುತ್ತಿದೆ.
- ಮೆಕ್ಕಲು ಮಣ್ಣು: ಪರ್ವತದ ಎತರ ಪ್ರದೇಶ ಹಾಗೂ ಇಳಿಜಾರುಗಳಿಂದ ಅಧಿಕ ಮಳೆಯ ನೀರು ಹಾಗೂ ನದಿಗಳಿಂದ ಸಾಗಿಸಲಟ್ಟು, ನದಿ ಕಣವೆಗಳ ತಗ್ಗುಪ್ರದೇಶಗಳಲ್ಲಿ ಸಂಚಯಿಸಲ್ಪಟ್ಟಿರುವ ಮಣ್ಣನ್ನೇ ಮೆಕ್ಕಲು ಮಣ್ಣು ಎನ್ನುವರು. ಇದು ಹೆಚ್ಚು ಫಲವತ್ತಾಗಿದ್ದು ಬತ್ತ ಹಾಗೂ ಗೋಧಿಗಳಂತಹ ಪಮುಖ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ.
ವಾಯುಗುಣ
[ಬದಲಾಯಿಸಿ]ಎತ್ತರಕ್ಕನುಗುಣವಾಗಿ ವ್ಯತ್ಯಾಸವಾಗುತ್ತದೆ. ಈ ರಾಜ್ಯದ ದಕ್ಷಿಣ ಭಾಗ ಉಷ್ಣ ಮತ್ತು ತೇವಯುತ ಉಪ ಉಷ್ಣವಲಯ ವಾಯುಗುಣವನ್ನು ಹೊಂದಿದೆ. ಕೇಂದ್ರ ಭಾಗ ತಂಪಾದ ವಾಯುಗುಣವನ್ನು ಹೊಂದಿದ್ದರೆ, ಇದರ ಉತ್ತರ ಭಾಗ ಆಲ್ಪೈನ್ ವಾಯುಗುಣವನ್ನು ಹೊಂದಿದೆ. ಮಳೆ ಅಸಮಾನವಾಗಿ ಹಂಚಿಕೆಯಾಗಿದ್ದು, ವರ್ಷವಿಡೀ ಮಳೆ ಬೀಳುತ್ತದೆ. ಮೇ ತಿಂಗಳಿನಿಂದ ಸೆಪ್ಟೆಂಬರ್‍ವರೆಗಿನ ಅವಧಿ ಈ ರಾಜ್ಯದಲ್ಲಿನ ಅತಿ ತೇವಯುತ ಋತುವಾಗಿರುತ್ತದೆ. ಸೆಪ್ಟೆಂಬರ್ ತಿಂಗಳ ಮಧ್ಯ ಭಾಗದಿಂದ ಡಿಸೆಂಬರ್ ತಿಂಗಳ ಮಧ್ಯದವರೆಗೆ ಹಾಗೂ ಮಧ್ಯ ಮಾರ್ಚ್‍ನಿಂದ ಮಧ್ಯ ಜೂನ್‍ವರೆಗಿನ ಅವಧಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಒಳ್ಳೆಯ ಅವಧಿಯಾಗಿದ್ದು, ಆಗ ನಿರಭ್ರ ಆಕಾಶವಿರುವುದರ ಜೊತೆಗೆ ಉತ್ತಮ ಹವಾಗುಣವಿರುತ್ತದೆ. ಇಲ್ಲಿ ಮಳೆ 100 - 575 ಸೆಂಮೀವರೆಗೆ ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ.
ಸಸ್ಯವರ್ಗ
[ಬದಲಾಯಿಸಿ]ಇದು ಶ್ರೀಮಂತವಾದ ಸಸ್ಯ ಸಂಪತ್ವನ್ನು ಹೊಂದಿದ್ದು, ಸು. 5000 ಜಾತಿಯ ಮರಗಿಡಗಳಿವೆ. ಇದರಲ್ಲಿ ಸು. 500 ಅಪರೂಪದ ಸಸ್ಯ ಸಂಕುಲಗಳಿವೆ. ಇಲ್ಲಿನ ಸ್ವಾಭಾವಿಕ ಸಸ್ಯ ವರ್ಗ ಈ ರಾಜ್ಯದ ಮಳೆಯ ಹಂಚಿಕೆ, ಎತ್ತರ ಮತ್ತು ಮಣ್ಣಿನ ಲಕ್ಷಣಗಳನ್ನು ಆಧರಿಸಿದಂತೆ ಹಂಚಿಕೆ ಗೊಂಡಿದೆ. ಈ ರಾಜ್ಯದಲ್ಲಿ ಕಂಡು ಬರುವ ಸಸ್ಯವರ್ಗಗಳನ್ನು ಅಗಲ ಎಲೆಯುಳ್ಳ ಐದು ವಿಧದ ಅರಣ್ಯಗಳಾಗಿ ವಿಂಗಡಿಸಲಾಗಿದೆ:
- ಉಷ್ಣ ವಲಯದ ಅರಣ್ಯಗಳು
- ಉಪ ಉಷ್ಣ ವಲಯದ ಅರಣ್ಯಗಳು
- ಪೈನ್ ಅರಣ್ಯಗಳು
- ಸಮಶೀತೋಷ್ಣ ವಲಯದ ಅರಣ್ಯಗಳು
- ಆಲೈನ್ ಅರಣ್ಯಗಳು. ಈ ಮೇಲಿನ ಎಲ್ಲಾ ವಿಧದ ಅರಣ್ಯಗಳಲ್ಲೂ ಬಿದಿರು ಮತ್ತು ಇತರೆ ಹುಲ್ಲುಜಾತಿಯ ಸಸ್ಯ ವರ್ಗಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ರಾಜ್ಯದ ಕಣಿವೆಗಳ ತಗ್ಗು ಪ್ರದೇಶಗಳು ಉಷ್ಣ ವಲಯದ ಅರಣ್ಯವನ್ನು ಹೊಂದಿದ್ದು ದಟ್ಟವಾದ ಹಾಗೂ ಗಟ್ಟಿ ಜಾತಿಯ ಮರಗಳು ಕಂಡುಬರುತ್ತವೆ. ಪೈನ್ ಅರಣ್ಯಗಳು ಬೆಟ್ಟಮಯ ಪ್ರದೇಶಗಳಲ್ಲಿದ್ದು, ಮೊನಚಾದ ಎಲೆಗಳನ್ನು ಒಳಗೊಂಡಿರುವ ಮೃದು ಮರಗಳಿಂದ ಕೂಡಿವೆ. ಆಲ್ಫೈನ್ ಅರಣ್ಯಗಳು ಪರ್ವತದ ಅತಿ ಉನ್ನತ ಅಥವಾ ಎತ್ತರ ಪ್ರದೇಶಗಳಲ್ಲಿ ಕಂಡುಬರುತ್ತಿದ್ದು, ಕೇವಲ ಹುಲ್ಲುಜಾತಿಗೆ ಸೇರಿದ ಸಸ್ಯ ವರ್ಗದಿಂದ ಕೂಡಿವೆ.
ಪ್ರಾಣಿವರ್ಗ
[ಬದಲಾಯಿಸಿ]ಈ ರಾಜ್ಯ ವನ್ಯಪ್ರಾಣಿ ಸಂಕುಲ ಹೊಂದಿರುವ ಭಾರತದ ರಾಜ್ಯಗಳಲ್ಲಿ ಶ್ರೀಮಂತವಾದದ್ದು. ಇಲ್ಲಿ ವಿಶಿಷ್ಟ್ಟ ಹಾಗೂ ವಿವಿಧ ಜಾತಿಯ 85 ಪ್ರಾಣಿ ಸಂಕುಲಗಳು ಕಂಡುಬರುತ್ತವೆ. ಇಲ್ಲಿನ ಶಿವಾಲಿಕ್ಮತ್ತು ಮೈದಾನದ ಅಂಚುಗಳಲ್ಲಿ ಆನೆ, ಕಾಡೆಮ್ಮೆಗಳು ಕಂಡುಬರುತ್ತವೆ. ಹುಲಿ, ಚಿರತೆ, ಬಿಳಿಬಣ್ಣದ ಗಿಬ್ಬನ್, ಹಿಮಜಿಂಕೆ, ಕೆಂಪು ಬಣ್ಣದ ಚಿರತೆ, ಹಿಮಾಲಯದ ಕಪ್ಪು ಕರಡಿ ಮುಂತಾದ ಪ್ರಾಣಿಗಳು ಇಲ್ಲಿ ವಾಸಿಸುತ್ತಿವೆ. ಇದಲ್ಲದೇ 500 ವಿವಿಧ ಜಾತಿಯ ಪಕ್ಷಿಗಳು ಇಲ್ಲಿ ವಾಸಿಸುತ್ತಿದ್ದು, ಭಾರತೀಯ ಹಾರ್ನ್‍ಬಿಲ್ ಜಾತಿಯ ಪಕ್ಷಿಗಳಿಗೆ ಈ ರಾಜ್ಯ ತವರಿದ್ದಂತೆ. ಬಿಳಿ ರೆಕ್ಕಗಳಿರುವ ಮರದ ಬಾತುಕೋಳಿ, ಹಸುರು ಪಾರಿವಾಳ, ಬಂಗಾಲದ ಫ್ಲೋರಿಕಾನ್, ಟಿಮ್ನಿನಿಕ್ಸ್, ಸ್ಕ್ಲಾಟರ್ಮಾ ನಾರ್ ಟಿಗೋಡಾನ್‍ಗಳಂತಹ ಪಕ್ಷಿಗಳು ಇಲ್ಲಿವೆ. ಇವುಗಳ ಸಂರಕ್ಷಣೆಗಾಗಿ ಹಲವು ವನ್ಯ ಜೀವಿ ಸಂರಕ್ಷಣಾ ಹಾಗೂ ಪಕ್ಷಿ ಧಾಮ ಗಳು ಈ ರಾಜ್ಯದಲ್ಲಿ ಸ್ಥಾಪನೆ ಗೊಂಡಿವೆ; ಇಲ್ಲಿ ಎರಡು ರಾಷ್ಟ್ರೀಯ ಉದ್ಯಾನವನಗಳಾದ ನಾಮ್ ದಪ್ಹಾ ಮತ್ತು ಮೌಲಿಂಗ್‍ಗಳು ಹಾಗೂ ಈ ರಾಜ್ಯದ ಅರಣ್ಯ ಇಲಾಖೆಯಿಂದ ನಿರ್ವಹಿಸಲಡುತ್ತಿರುವ 8 ವನ್ಯ ಜೀವಿ ಸಂರಕ್ಷಣಾ ಧಾಮಗಳಾದ ಪಾಕಾಯ್, ಇಟಾನಗರ, ಡೇಯಿಂಗ್ ಇರಿಂಗ್, ಮೆಹಾಪೋಕಾನೆ, ಈಗಲ್ಸ್ ನೆಸ್ಟ್, ಕಮ್ಲಾಂಗ್ ಮತ್ತು ದಿಬಾಂಗ್‍ಗಳು ಇವೆ.
ಕೃಷಿ
[ಬದಲಾಯಿಸಿ]ಈ ರಾಜ್ಯದಲ್ಲಿ ವರ್ಗಾವಣೆ ಬೇಸಾಯ ಕ್ರಮ (ಜೂಮಿಂಗ್) ಜಾರಿಯಲ್ಲಿದೆ. ಒಗ್ಗೂಡಿ ಕೃಷಿ ಮಾಡುವ ಪದ್ಧತಿ ಮುಖ್ಯಸ್ಥಾನವನ್ನು ಪಡೆದುಕೊಂಡಿದೆ. ಈ ರಾಜ್ಯದ ಬಹುತೇಕ ಜನ ಈ ಪದ್ಧತಿವನ್ನು ಪ್ರಾಚೀನ ಕಾಲದಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಜೂಮಿಂಗ್ ಬೇಸಾಯ ಪದ್ಧತಿಯಲ್ಲಿ (ಕುಂಬ್ರಿ) ಅಲ್ಲಲ್ಲಿ ಅರಣ್ಯದಲ್ಲಿರುವ ಮರಗಳನ್ನು ಕಡಿದು ಕೆಲವು ವರ್ಷಗಳ ಅನಂತರ ಬೆಂಕಿಯಲ್ಲಿ ಸುಟ್ಟು ಹಾಕಿ ಆ ಪ್ರದೇಶವನ್ನು ನೇಗಿಲಿನಂತಹ ಉಪಕರಣದಿಂದ ಉಳುಮೆ ಮಾಡಿ ನೇಗಿಲ ಹಿಂದೆ ಬಿತ್ತನೆ ಬೀಜಗಳನ್ನು ಬಿತ್ತಿ, ಕನಿಷ್ಟ ಪಕ್ಷ ನಾಲ್ಕು ಭಾರಿ ಕಳೆ ತೆಗೆದು, ಬೆಳೆಯುತ್ತಿರುವ ಬೆಳೆಯನ್ನು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಂದ ಕಾಯುವ ಹಾಗೂ ಸಂರಕ್ಷಿಸುವುದರ ಮೂಲಕ ಅಳಿದುಳಿದ ಮಿಶ್ರ ಫಲವನ್ನು ಪಡೆದುಕೊಳ್ಳುತ್ತಾರೆ. ಇಲ್ಲಿ ಕೆಲಸಗಾರರು ಪುರುಷ, ಮಹಿಳೆ ಹಾಗೂ ಮಕ್ಕಳು ಸು. 5-6 ತಿಂಗಳುಗಳ ಕಾಲ ಇದಕ್ಕಾಗಿ ಶ್ರಮವಹಿಸುವರು. ಬತ್ತ, ತೃಣ ಧಾನ್ಯಗಳು, ಗೋದಿ ಮತ್ತು ಮೆಕ್ಕೆಜೋಳ ಇಲ್ಲಿನ ಪ್ರಮುಖ ಬೆಳೆಗಳು. ಆಲೂಗಡ್ಡೆ, ಬದನೆ, ಶುಂಠಿ, ಮೆಣಸಿನಕಾಯಿ, ಕುಂಬಳ, ಸೌತೆ, ಅನಾನಸ್, ಕಿತ್ತಳೆ, ನಿಂಬೆ ಪರಂಗಿ, ಬಾಳೆ ಇತ್ಯಾದಿ ತರಕಾರಿ ಮತ್ತು ಹಣ್ಣುಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ.
ನೈಸರ್ಗಿಕ ಸಂಪನ್ಮೂಲಗಳು
[ಬದಲಾಯಿಸಿ]ಈ ರಾಜ್ಯ ಅಪಾರ ಪ್ರಮಾಣದ ಖನಿಜ ಸಂಪನ್ಮೂಲಗಳನ್ನು ಹೊಂದಿದೆ. ಕಲಿದ್ದಲು, ಸುಣ್ಣಕಲ್ಲು ಕಬ್ಬಿಣದ ಅದಿರು, ಗ್ರಾನೈಟ್, ಬೆಣಚು ಶಿಲೆ, ಅಭ್ರಕ, ತಾಮ್ರ, ಡಾಲೋಮೈಟ್, ಕಚ್ಚಾ ತೈಲ, ಸ್ವಾಭಾವಿಕ ಅನಿಲ ಹಾಗೂ ಅಮೃತಶಿಲೆಗಳಂತಹ ಖನಿಜ ಸಂಪನ್ಮೂಲಗಳು ಈ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹಂಚಿಕೆಯಾಗಿವೆ. ಇದರ ಜೊತೆಗೆ ಜಲವಿದ್ಯುಚ್ಛಕ್ತಿವನ್ನು ಉತ್ಪಾದಿಸಬಲ್ಲ ಸಂಭಾವ್ಯ ಪ್ರದೇಶವಾಗಿದೆ. ಇಲ್ಲಿ 1991 ರಲ್ಲಿ ಅರುಣಾಚಲ ಪ್ರದೇಶ ಖನಿಜ ಅಭಿವೃದ್ಧಿ ಮತ್ತು ವಾಣಿಜ್ಯ ಕಾರ್ಪೋರೇಷನ್ ಲಿಮಿಟೆಡ್ ಅರಂಭವಾಯಿತು. ನಾಮ್‍ಚಿಕ್ ನಾಮ್‍ಹುಕ್ ಪ್ರದೇಶಗಳಲ್ಲಿನ ಕಲಿದ್ದಲು ಕ್ಷೇತ್ರಗಳು ಈ ಸಂಸ್ಥೆಯ ಅಧೀನದಲ್ಲಿವೆ.
ಕೈಗಾರಿಕೆಗಳು
[ಬದಲಾಯಿಸಿ]ಈ ರಾಜ್ಯ ಹೊಂದಿರುವ ಅರಣ್ಯ ಸಂಪನ್ಮೂಲದ ಆಧಾರದ ಮೇಲೆ ಹಲವಾರು ಮಧ್ಯ ಮ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿದೆ. ಇಲ್ಲಿ ಸಿಮೆಂಟ್ ಉತ್ಪಾದನ ಸ್ಥಾವರಗಳೂ ಹಣ್ಣು ಸಂರಕ್ಷಣಾ ಘಟಕಗಳೂ ತಲೆಯೆತ್ತಿವೆ. ಅಸಂಖ್ಯಾತ ಕರಕುಶಲ ಉತ್ಪನ್ನ ತರಬೇತಿ ಕೇಂದ್ರಗಳಿವೆ. ಇಲ್ಲಿನ ಕೈಮಗ್ಗ ಕೈಗಾರಿಕೆಗಳು ಅತ್ಯುತ್ತಮ ಪ್ರಗತಿ��ನ್ನು ಸಾಧಿಸಿವೆ. ಇಲ್ಲಿನ ಜನ ಬೆತ್ತ ಮತ್ತು ಬಿದಿರಿನ ಬುಟ್ಟಿಗಳನ್ನು ಹೆಣೆಯುವುದರಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಮರದ ಕೆತ್ತನೆ, ಕಮ್ಮಾರಿಕೆಗಳಂತಹ ವೃತ್ತಿಗಳೂ ಕೆಲವು ಹಳ್ಳಿಗಳಲ್ಲಿ ಕಂಡು ಬರುತ್ತವೆ. ಗುದ್ದಲಿ, ಹಾರೆ ಇತ್ಯಾದಿ ಕೃಷಿ ಯೋಗ್ಯ ಹಾಗೂ ದೈನಂದಿನ ಚಟುವಟಿಕೆಗಳಿಗೆ ಅಗತ್ಯವೆನಿಸುವ ಉಪಕರಣಗಳನ್ನೂ ತಯಾರಿಸಲಾಗುತ್ತದೆ. ಇಲ್ಲಿ ಸಣ್ಣ ಪ್ರಮಾಣದ ಗುಡಿ ಕೈಗಾರಿಕೆಗಳು, ಪ್ಲೈವುಡ್ ಹಾಗೂ ಮೇಣದ ಬತ್ತಿ ತಯಾರಿಕಾ ಘಟಕಗಳೂ ಸ್ಥಾಪನೆಗೂಂಡಿವೆ.
ಸಾರಿಗೆ ಸಂಪರ್ಕ
[ಬದಲಾಯಿಸಿ]ಈ ರಾಜ್ಯ ಉತ್ತಮ ರಸ್ತೆ ಮತ್ತು ವಾಯುಸಾರಿಗೆ ಸಂಪರ್ಕಗಳನ್ನು ಹೊಂದಿದೆ. ರಾಜ್ಯ ಸಾರಿಗೆ ಸಂಸ್ಥೆ ಕ್ರಮಬದ್ಧವಾಗಿ ಹಾಗೂ ನಿರಂತರವಾಗಿ ರಾಜ್ಯದ ವಿವಿಧ ಪ್ರದೇಶಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತಿರುವುದರ ಜೊತೆಗೆ ನೆರೆ ರಾಜ್ಯಗಳೂಡನೆ ಸಂಪರ್ಕವನ್ನು ಕಲಿಸಿಕೊಟ್ಟಿದೆ. ನಾಹರ್‍ಲಗೂನ್ ಮಾರ್ಗವಾಗಿ ಉತ್ತರ ಲಖಿಂಪುರ ಮತ್ತು ಇಟಾನಗರಗಳ ನಡುವೆ ನೇರ ಸಾರಿಗೆ ಸೇವೆಯನ್ನು ಕಲ್ಪಿಸಲಾಗಿದೆ. ಪ್ರತಿ ನಿತ್ಯವೂ ಇಟಾನಗರದಿಂದ 429 ಕಿಮೀ ದೂರದಲ್ಲಿರುವ ಗುವಾಹಟಿಗೆ ಬಸ್ ಸಂಪರ್ಕವಿದೆ. ಇಟಾನಗರದಿಂದ 33 ಕಿಮೀ ಹಾಗೂ ನಹಾರ್ ಲಗೂನ್ ನಿಂದ 23 ಕಿಮೀ ದೂರದಲ್ಲಿರುವ ಅಸ್ಸಾಮಿನ ಹಾರ್ಮುಟಿ ರೈಲ್ವೆ ನಿಲ್ದಾಣ ಈ ರಾಜ್ಯಕ್ಕೆ ಹತ್ತಿರದ ರೈಲು ನಿಲ್ದಾಣ. ಆದರೂ ಇಟಾನಗರದಿಂದ 60 ಕಿಮೀ, ನಹರ್ ಲಗೂನ್‍ನಿಂದ 50 ಕಿಮೀ ದೂರದಲ್ಲಿರುವ ಅಸ್ಸಾಂ ರಾಜ್ಯದ ಉತ್ತರ ಲಖಿಂಪುರ ರೈಲ್ವೆ ನಿಲ್ದಾಣ, ಆಧುನಿಕ ಸೌಲಭ್ಯ ಗಳನ್ನು ಒಳಗೊಂಡಿರುವ ನಿಲ್ದಾಣ. ಇಟಾನಗರದಿಂದ 67 ಕಿಮೀ ನಹರ್‍ಲಗೂನ್‍ನಿಂದ 57 ಕಿಮೀ ದೂರದಲ್ಲಿರುವ ಅಸ್ಸಾಂನ ಉತ್ತರ ಲಖಿಂಪುರದಲ್ಲಿರುವ ಲಿಲಾಬಾರಿಯಲ್ಲಿಯ ವಿಮಾನ ನಿಲ್ದಾಣ ಅತಿ ಸಮೀಪವಾದದ್ದಾಗಿದೆ. ಇಂಡಿಯನ್ ಏರ್‍ಲೈನ್ಸ್ ಸಂಸ್ಥೆ ಪ್ರತೀ ಬುಧವಾರ, ಶುಕ್ರವಾರ ಮತ್ತು ಭಾನುವಾರಗಳಂದು ಕೋಲ್ಕತ್ತದಿಂದ ತೇಜ್‍ಪುರಗಳ ನಡುವೆ (ಇಟಾನಗರದಿಂದ 216 ಕಿಮೀ ದೂರದಲ್ಲಿರುವ) ನೇರ ವಿಮಾನ ಸೇವೆಯನ್ನೂ ಕಲ್ಪಿಸುತ್ತಿದೆ. ಗುವಾಹಟಿ��ಿಂದ ನಹರ್ ಲಗೂನ್‍ಗಳ ನಡುವೆ ಹೆಲಿಕಾಪ್ಟರ್ ಸೇವೆಯನ್ನು ಕಲ್ಪಿಸಲಾಗಿದೆ.
ವಾಣಿಜ್ಯ
[ಬದಲಾಯಿಸಿ]ರಾಜ್ಯದಲ್ಲಿ ಹಲವು ಪಟ್ಟಣ, ನಗರ ಮತ್ತು ವಾಣಿಜ್ಯ ಕೇಂದ್ರಗಳಿವೆ. ಸಾಮಾನ್ಯವಾಗಿ ಪವಾಸಿ ಕೇಂದಗಳು ವಾಣಿಜ್ಯ ಕೇಂದ್ರಗಳಾಗಿಯೂ ಕಂಡುಬರುತ್ತವೆ. ತವಾಂಗ್, ಬಾಮ್ಡಿಲಾ, ಟಿಪಿ, ಇಟಾನಗರ, ಝಿರೋ, ಡಾಪೋರಿಜೋ, ಅಲಾಂಗ್, ಪರಶುರಾಮ್‍ರಾಯ್ ಕುಂಡ್, ಮಲಿನಿತನ್, ಲಿಕ್‍ಬಾಲಿ, ನಾಮ್‍ಸಾಯ್, ಮಾಯಾವೋ ಮತ್ತು ಚಾಂಗ್‍ಲಾಂಗ್ ಇಲ್ಲಿನ ಪ್ರವಾಸಿ ತಾಣಗಳು. ಇಲ್ಲಿನ ಮರದ ಕೆತ್ತನೆ, ಬಿದಿರು ಮತ್ತು ಬೆತ್ತದ ಬುಟ್ಟಿ ಮತ್ತು ಕರಕುಶಲ ಉತನ್ನಗಳು ಈ ರಾಜ್ಯವನ್ನು ವಾಣಿಜ್ಯಾತ್ಮಕವಾಗಿ ಖ್ಯಾತಿಗೊಳಿಸಿದೆ. ರಾಜ್ಯದ ಜನಸಂಖ್ಯೆ 10,91,117. ಅದರಲ್ಲಿ 5,73,951 ಪುರುಷರು, 5,17,166 ಸ್ತ್ರೀಯರು. ಇಲ್ಲಿನ ಲಿಂಗಾನುಪಾತ ಪ್ರಮಾಣ 1000 ಪುರುಷರಿಗೆ 901 ಸ್ತ್ರೀಯರು. ಈ ರಾಜ್ಯದ ಸಾಕ್ಷರತೆಯ ಪ್ರಮಾಣ ಶೇ. 54.74. ಇಲ್ಲಿನ ಜನಸಂಖ್ಯೆ ಮುಖ್ಯವಾಗಿ ಬುಡಕಟ್ಟು ಸಮುದಾಯದವರಿಂದ ಕೂಡಿದೆ. ಈ ರಾಜ್ಯ 20 ಮುಖ್ಯ ಬುಡಕಟ್ಟು ಹಾಗೂ ಅವುಗಳ ಅಸಂಖ್ಯಾತ ಉಪಬುಡಕಟ್ಟುಗಳನ್ನು ಹೊಂದಿದೆ. ಮುಖ್ಯವಾದ ಬುಡಕಟ್ಟುಗಳೆಂದರೆ - ಆದೀಸ್, ನಿಶಿ, ಅಪತಾನಿ, ಟಾಗಿನ್, ವಿಸ್ಮಿ, ಖಾಮ್ಟಿ, ನಾಯ್ಟಿ, ವಾಂಖೋ, ಟಾಂಗ್‍ಕಾ, ಸಿಂಗ್‍ಪ್ಹೋ, ಮೊನ್ಹಾ, ಕೆರ್ಡೂಕ್‍ಪೆನ್ ಮತ್ತು ಅಕಾಗಳು. ಇವರು ತಮ್ಮದೇ ಆದ ಭಾಷೆಗಳನ್ನು ಮಾತನಾಡುತ್ತಾರೆ. ಇಲ್ಲಿನ ಪ್ರಮುಖ ಭಾಷೆಗಳು ಮೋದ್ವಾ, ಅಪತಾನಿ, ಹಿಲ್ ಮಿರಿ, ಇಡು, ಟಾಗಿನ್ ಆದಿ, ಕಾಮ್ಟಿ, ಸಿಂಗ್‍ಪ್ಹೋ ಟಾಂಗ್‍ಸಾ, ನೋಕ್ಟೆ, ವಾಂಖೋ, ದಿಗಾರೂ, ಮಿಜಿ.
ಪ್ರಮುಖ ನಗರ ಮತ್ತು ಪಟ್ಟಣಗಳು
[ಬದಲಾಯಿಸಿ]ಇಟಾನಗರ, ನಹರ್‍ಲಗೂನ್, ಟವಾಂಗ್, ಬಾಮ್ಡಿಲಾ, ರೂಪ, ಭಾಲುಕ್ ಪೊಂಗ್, ಸೆಪ್ಪಾ, ದಾಪೋರಿಜೋ, ಅಲಾಂಗ್, ಪಾಸಿಘಾಟ್, ಯಿಂಗ್ ಕಿಯಾಂಗ್ ರೋಯಿಂಗ್, ಟೆಝ, ನಾಮ್‍ಸಾಯ್, ಖೋನ್ಸಾ, ಅದಿನಿ, ಚಾಂಗ್‍ಲಾಂಗ್ ಮುಂತಾದವು.
- (ಕೆಳಗಿನ ಮೂರೂ ಚುನಾವಣೆಯ ವಿಭಾಗಗಳನ್ನು ಹೊಸ ಪುಟಕ್ಕೆ ಹಾಕಿದೆ:ನೋಡಿ: ಅರುಣಾಚಲ ಪ್ರದೇಶ ವಿಧಾನಸಭೆ ಮತ್ತು ಚುನಾವಣೆಗಳು.
೨೦೧೪ ರಲ್ಲಿ ನೆಡೆದ ಲೋಕ ಸಭೆ ಮತ್ತು ವಿಧಾನ ಸಭೆ ಚುನಾವಣೆ ಫಲಿತಾಂಶ
[ಬದಲಾಯಿಸಿ](ಸಂಪಾದಕರು ಇದನ್ನು ಅಳಿಸದಿರಲಿ-ಇಲ್ಲವೇ ಬೇರೆ ಪುಟ ತೆರೆಯಲಿ;ಮಾಹಿತಿ ಅಳಿಸುವುದು ಸರಿಯಲ್ಲ)
- (ಈಗ ಬೇರೆ ಪುಟ ತೆರೆದಿದೆ:ಅರುಣಾಚಲ ಪ್ರದೇಶ ವಿಧಾನಸಭೆ ಮತ್ತು ಚುನಾವಣೆಗಳುದೊಡ್ಡ ಪಠ್ಯ
- ಅರುಣಾಚಲ ಪ್ರದೇಶ ವಿಧಾನಸಭೆಯ ಚುನಾವಣೆ 2014
- 9 ಏಪ್ರಿಲ್ 2014 ರಂದು ಅರುಣಾಚಲ ಪ್ರದೇಶ ವಿಧಾನಸಭೆಯ 60 ಸ್ಥಾನಗಳಿಗೆ ಚುನಾವಣೆ ನಡೆಯಿತು.16 ಮೇ 2014ರಂದು ಮತಗಳನ್ನು ಎಣಿಸಲಾಯಿತು 2014ರ ಸಂಸತ್ ಚುನಾವಣೆ ಜೊತೆಗೆ ನಡೆಯಿತು. [2]
ಪಕ್ಷ | ಸ್ಪರ್ಧೆ | ಗೆಲವು | ಬದಲಾವಣೆ | ಗೆಲವು ಶೇ. | ವೋಟು ಗಳಿಕೆ | ವೋಟು ಶೇ. | +ಹೆಚ್ಚು/- ಕಡಿಮೆ |
---|---|---|---|---|---|---|---|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 60 | 42 | - 1 | 70.00 | 2,51,575 | 49.5 | - 0.88 |
ಭಾರತೀಯ ಜನತಾಪಕ್ಷ | 42 | 11 | + 8 | 18.33 | 1,57,412 | 30.97 | + 25.79 |
ಅರುಣಾಚಲದ ಪೀಪಲ್ ಪಾರ್ಟಿ | 16 | 5 | + 1 | 10.00 | 45,532 | 8.96 | + 1.69 |
ಪಕ್ಷೇತರ | 16 | 2 | + 1 | 15.00 | 24,985 | - | - |
ಒಟ್ಟು ಸ್ಥಾನ | - | 60 | - | ವೋಟರುಗಳು> 7,59,344 | ವೋಟು ಹಾಕಿದವರು>4,93,928 | (64.99 %) | - |
- ರಾಜ್ಯಪಾಲ: ಜ್ಯೋತಿ ಪ್ರಸಾದ್ ರಾಜ್‌ಖೋವಾ
- ಮುಖ್ಯಮಂತ್ರಿ: ನಬಂ ಟುಕಿ (ಭಾ.ರಾ.ಕಾಂಗ್ರೆಸ್)
ಮುಖ್ಯಮಂತ್ರಿ ನಬಂ ಟುಕಿ ಅವರ ಸರ್ಕಾರ ವಜಾ
[ಬದಲಾಯಿಸಿ]- ದಿ.ಜನವರಿ 27, 2016 ರಂದು ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ ರಾಜ್ಯಪಾಲ ಜ್ಯೋತಿ ಪ್ರಸಾದ್ ರಾಜ್‌ಖೋವಾ ಅವರು ಆಡಳಿತದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಸಭೆ ಕರೆದ ರಾಜ್ಯಪಾಲರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
- ರಾಷ್ಟ್ರಪತಿ ಆಳ್ವಿಕೆಗೆ ಕಾರಣ :
- 2016 ಡಿಸೆಂಬರ್ 16, ರಂದು ನಿಜವಾದ ಬಿಕ್ಕಟ್ಟು ಆರಂಭವಯಿತು. 21 ವಿಧಾನಸಭಾ, ಬಂಡಾಯ ಕಾಂಗ್ರೆಸ್ ಶಾಸಕರು 11 ಬಿಜೆಪಿ ಸದಸ್ಯರ ಮತ್ತು ಇಬ್ಬರು ಪಕ್ಷೇತರರ ಜೊತೆ ಸೇರಿ, ಅಧಿಕೃತವಲ್ಲದ ತಾತ್ಕಾಲಿಕ ಪ್ರತ್ಯೇಕ ಸ್ಥಳದಲ್ಲಿ ಸಭೆ ಸೇರಿ ಸ್ಪೀಕರ್ ನಬಮ್ ರುಬಿಯಾ ಅವರನ್ನು "ಅಪರಾಧಿಯೆಂದು ವಜಾಮಾಡಲು",ನಿರ್ಣಯ ಮಾಡಿದರು.ಕಅರಣ ಅವರು ವಿಧಾನಸಬೆಯ ಕಟ್ಟಡ/ ಸಭಾಂಗಣಕ್ಕೆ ಬೀಗ ಹಾಕಿಸಿದ್ದರು.ರಾಜ್ಯಪಾಲರು ಮಂತ್ರಿಮಂಡಳದ ಶಿಪಾರಸು ಇಲ್ಲದೆ ನಿಗದಿಗಿಂತ ಮೊದಲೇ ವಿಧಾನಸಭೆ ಸೇರಲು ಕೆರೆದಿದ್ದರು.
- ಕಾಂಗ್ರೆಸ್ ಸುಪ್ರೀಮ್ ಕೋರ್ಟಿಗೆ ರಾಜ್ಯಪಾಲರ ಆಡಳಿತ ಪ್ರಶ್ನಿಸಿ ಅಪೀಲು ಹಾಕಿದೆ. ರಾಷ್ಟ್ರಪತಿ ಆಳ್ವಿಕೆ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಎಸ್. ಖೇಹರ್ ನೇತೃತ್ವದ ಐವರು ಸದಸ್ಯರ ಪೀಠ, ಅರುಣಾಚಲ ಪ್ರದೇಶ ರಾಜಕೀಯ ಬಿಕ್ಕಟ್ಟು ‘ಗಂಭೀರ ವಿಷಯ’ ಎಂದು ಹೇಳಿದೆ.[೩]
ನೋಡಿ
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Official website
- Tourism in Arunachal Pradesh (Official)
- ಟೆಂಪ್ಲೇಟು:Wikivoyage-inline
- Arunachal Pradesh Territorial Dispute between India and China Archived 2010-10-01 ವೇಬ್ಯಾಕ್ ಮೆಷಿನ್ ನಲ್ಲಿ., Inventory of Conflict and Environment
- reviewNE – all things North East India
- STD Codes of Arunachal Pradesh Archived 2016-05-31 ವೇಬ್ಯಾಕ್ ಮೆಷಿನ್ ನಲ್ಲಿ.
- Languages of Arunachal Pradesh (Roger Blench) Archived 2016-06-01 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "Census Population" (PDF). Census of India. Ministry of Finance India. Archived from the original (PDF) on 19 December 2008. Retrieved 18 December 2008.
{{cite web}}
: Unknown parameter|deadurl=
ignored (help) - ↑ Statistical Report on General Election, 2014 : To the Legislative Assembly of Arunachal Pradesh" (PDF). Election Commission of India. Retrieved July 11, 2015.
- ↑ https://www.blogger.com/blogger.g?blogID=3170077761789937623#allposts/postNum=0
ನೋಡಿ
[ಬದಲಾಯಿಸಿ]- ಭಾರತದ ಮುಖ್ಯಮಂತ್ರಿಗಳು ಹುಡುಕುವಿಕೆಗಾಗಿ
- ಸಲಹೆ ಕೊಡಲು ಈ ಮೇಲಿನ ಎಡ- ಚರ್ಚೆ ಪುಟಕ್ಕೆ ಹೋಗಿ. ಬದಲಾಯಿಸಿಗೆ ಕ್ಲಿಕ್ ಮಾಡಿ ಕೆಳಗಡೆ ಸಲಹೆ ಟೈಪು ಮಾಡಿ ;