ವಿಷಯಕ್ಕೆ ಹೋಗು

ಮಾವತ್ತೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.


ಮಾವತ್ತೂರು ಇದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಇರುವ ಒಂದು ದೊಡ್ಡ ಗ್ರಾಮ. ಇದು ಸುತ್ತ ಮುತ್ತ ಇರುವ ಸುಮಾರು ೩೦ ಹಳ್ಳಿಗಳಿಗೆ ಒಂದು ವ್ಯಾಪಾರ ಕೇಂದ್ರ. ಇಲ್ಲಿ ಪ್ರತಿ ವರ್ಷ ನಡೆಯುವ ಮಾವತ್ತೂರಮ್ಮನ ಜಾತ್ರೆ ಸುಮಾರು ೩೩ ಹಳ್ಳಿಗಳು ಸೇರಿ ಮಾಡುತ್ತವೆ. ಸುತ್ತಮುತ್ತಲ ಹಳ್ಳಿಗಳಿಂದ ಕುರ್ಜು (ರಥ)ಗಳು ಇಲ್ಲಿಗೆ ಬರುತ್ತವೆ. ಸುಮಾರು 9 ದಿನಗಳು ಈ ಜಾತ್ರೆ ನಡೆಯುತ್ತದೆ.

ಮಾವತ್ತೂರು ತನ್ನಲ್ಲಿ ಇರುವ ದೊಡ್ಡ ಕೆರೆಗೂ ಕೂಡ ಪ್ರಸಿದ್ಧಿಯಾಗಿದೆ. ೨೨00 ಎಕರೆ ಪ್ರದೇಶದಲ್ಲಿ ನೀರು ನಿಲ್ಲುವಂತೆ "ಗರುಡಾಚಲ" ನದಿಗೆ ಅಡ್ಡವಾಗಿ ಈ ಕೆರೆಯನ್ನು ನಿರ್ಮಿಸಲಾಗಿದೆ. ಇದು ಸುಮಾರು ೩೫೦೦ ಎಕರೆಗೂ ಕ್ಕೂ ಹೆಚ್ಚು ಗದ್ದೆಗಳಿಗೆ ನೀರುಣಿಸುತ್ತಿದೆ ಹಾಗು ಮೀನುಗಾರಿಕೆಗೂ ಕೂಡ ಬಳಸಲ್ಪಡುತ್ತಿದೆ. ಕೆರೆಯ ಮೇಲಿನಿಂದ ಕಾಣುವ ತೋಟ ಹಾಗು ಗದ್ದೆಗಳ ನೋಟ ನಯನ ಮನೋಹರ.

ಮಾವತ್ತೂರು ಕೆರೆ : ತುಮಕೂರು ಜಿಲ್ಲೆಯ ಮೊದಲ ಕೆರೆ ಹಾಗೂ ಅತ್ಯಂತ ಹಳೆಯದಾದ, ವಿಸ್ತಾರವಾದ ಕೆರೆ. ಕ್ರಿ.ಶ ೧೮೮೨ ರಲ್ಲೇ ಮೈಸೂರು ಮಹಾರಾಜರರಾದ ಚಾಮರಾಜ ಒಡೆಯರ್ (೧೮೮0-೧೯೦೨) ಕಾಲದಲ್ಲಿ ಈ ಬೃಹತ್ ಕೆರೆಗೆ ಅಡಿಪಾಯ ಹಾಕಲಾಯಿತು. ಸುಮಾರು ೧೬ ವರ್ಷಗಳ ಕಾಲ ದೀರ್ಘ ಕಾಮಗಾರಿಯಲ್ಲಿ, ೧೮೯೮ ಕೆರೆ ಉದ್ಘಾಟನೆಯಾಯಿತು. ಸುಮಾರು ೧೧೦೦ ಮೀಟರ್ ಉದ್ದ, ೬೦ ಅಡಿ ಎತ್ತರದ, ೧೫ ಅಡಿ ಎತ್ತರದ ಮೊದಲ ಹಂತದ ಅದರ ಮೇಲೆ ೪೫ ಅಡಿ ಎತ್ತರದ ��ರಡನೇ ಹಂತದ ಇದರ ಏರಿ, ಹಾಗೂ ಮೂರನೇ ಹಂತದಲ್ಲಿ ೧೫ ಅಡಿ ಎತ್ತರದ ಕೆರೆಯ ಏರಿಯು ಇಂದಿಗೂ ಬೃಹತ್ ಅಣೆಕಟ್ಟೆಗಳ ಗುಣಮಟ್ಟಕ್ಕೆ ಸೆಡ್ಡು ಹೊಡೆಯುವಂತಿದೆ. ಈ ಏರಿಯ ಅಗಲ ತಳಭಾಗದಲ್ಲಿ ೭೪ ಅಡಿ, ಮೇಲ್ಭಾಗದಲ್ಲಿ ೧೨ ಅಡಿ ಅಗಲವಿದೆ. ಈ ಕೆರೆಯ ಕಾಮಗಾರಿಗೆ, ಸಿಮೆಂಟ್ ಬಳಕೆ ಮಾಡದೆ ಕಲ್ಲು, ಗಾರೆಯಿಂದ ನಿರ್ಮಿಸಿದ್ದಾರೆ. ಏರಿಯ ಮೇಲೆ ಮಣ್ಣು ಹಾಕಲು ಯಾವುದೇ ಯಂತ್ರೋಪಕರಣಗಳನ್ನು ಬಳಸದೆ, ಕೋಣಗಳ ಮೇಲೆ ಮಣ್ಣನ್ನು ಹೊರಿಸಿ ತಂದು ಸುರಿದು, ಅವುಗಳ ಕಾಲಿನಿಂದಲೇ ತುಳಿಸಿ ಭದ್ರವಾಗಿ ನಿರ್ಮಿಸಿದ ಕೆರೆ ಎಂದು ಇಲ್ಲಿನ ಇತಿಹಾಸ. ಈ ಬೃಹತ್ ಕೆರೆ ಕಟ್ಟಲು ಅಂದಿನ ಕಾಲಕ್ಕೆ ಖರ್ಚಾಗಿದ್ದ ಹಣ ₹ ೩,೬೨,೮೪೩/-

ಕೆರೆ ಸಂಪೂರ್ಣವಾಗಿ ತುಂಬಿದಾಗ ಇದರ ನೀರಿನ ಸುತ್ತಳತೆ ದೂರ ಸುಮಾರು ೧೬ ಕಿ.ಮಿ. ವಿಸ್ತಾರವಾದುದು. ಕೆರೆಯ ಏರಿಯ ಮದ್ಯ ಭಾಗದಲ್ಲಿ ನಿಂತು ನೋಡಿದರೆ ಕೆರೆಯ ಮುಂದಿನ ತುದಿಯು ಸುಮಾರು ೭ ಕಿ.ಮೀ ದೂರವಿದೆ. ಇದರ ಗರಿಷ್ಟ ಅಗಲವು ೩ ಕಿ.ಮೀ ಈ ಕೆರೆಯ ಇನ್ನೊಂದು ವಿಶೇಷವೆಂದರೆ ಕೆರೆ ಕಟ್ಟಿದಾಗಿನಿಂದಲೂ ಇದುವರೆಗೂ ಈ ಕೆರೆ ಸಂಪೂರ್ಣವಾಗಿ ಎಂದಿಗೂ ಖಾಲಿಯಾಗಿಲ್ಲ. ಭೀಕರ ಬರಗಾಲದಲ್ಲಿಯೂ ಸುತ್ತ ಮುತ್ತಲ ಹಳ್ಳಿಗಳ ಸಾವಿರಾರು ಜನ ಜಾನುವಾರುಗಳ ಜೀವನಾಡಿಯಾಗಿದೆ.


೨೮ ಅಡಿ ಆಳದ ಗರಿಷ್ಟ ೧.೫ ಟಿ.ಎಂ.ಸಿ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ೨೦೧೭ ರಲ್ಲಿ ೨೫ ಅಡಿ ೨೦೦೮-೦೯ ರಲ್ಲಿ ೨೬ ಅಡಿ ೨೦೦೨ ರಲ್ಲಿ ೨೫ ಅಡಿ ೧೯೯೮ ರಲ್ಲಿ ೨೬ ಅಡಿ ೧೯೯೬ ರಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿತ್ತು ಉಳಿದಂತೆ ೧೯೯೦ ಕ್ಕಿಂತ ಹಿಂದೆ ಪ್ರತಿ ವರ್ಷವೂ ಕೆರೆ ಸಂಪೂರ್ಣ ಭರ್ತಿಯಾಗುತ್ತಿತ್ತು.

ಕೆರೆಯ ಮದ್ಯ ಭಾಗದಲ್ಲಿ ಇರುವ ಒಂದು ಸಣ್ಣ ಪಾಳು ಬಿದ್ದ ಕಲ್ಲಿನ ಮಂಟಪವನ್ನು "ವೀರುಲ(ವೀರನ) ಗುಡಿ" ಎಂದು ಸ್ಥಳೀಯರು ಕರೆಯುತ್ತಾರೆ. ಇದು ಪುರಾತನ ಕಾಲದ ದೇವಾಲಯ ಇರಬಹುದು ಎಂದು ಸ್ಥಳೀಯರ ಅಭಿಪ್ರಾಯ. ಹಾಗೆಯೇ ಕೆರೆಯ ಮದ್ಯಭಾಗದಲ್ಲಿ ಸದಾ ನೀರಿನಲ್ಲೆಯೇ ಮುಳುಗಿರುವ ೮ ಅಡಿ ಎತ್ತರದ ಪುರಾತನ ಕಾಲದ ಮಾವಿನ ಮರದ ಅವಶೇಷವು ಇಂದಿಗೂ ಕೊಳೆಯದೇ ಹಾಗಯೇ ಉಳಿದಿರುವುದು ವಿಶೇಷ ಆಕರ್ಷಣೆ. ಕೆರೆ ತುಂಬಿದಾಗ "ಗರುಡಾಚಲ" ನದಿಯು ಮುಂದೆ ಅಕ್ಕಿ ರಾಂಪುರ ಬಳಿ ತೀತಾ ಕೆರೆಯಿಂದ ಬರುವ ಜಯ ಮಂಗಲಿ ನದಿಯನ್ನು ಸೇರಿ ಅಲ್ಲಿಂದ ಬಹುದೂರ ಸಾಗಿ ಆಂದ್ರ ಪ್ರದೇಶದ "ಪರ್ಗಿ" ಕೆರೆಯನ್ನು ಸೇರುತ್ತದೆ. ಅಲ್ಲಿಂದ ಮುಂದೆ ಸಾಗಿ ಮತ್ತೆರಡು ಅಣೆಕಟ್ಟೆ ತುಂಬಿ ಪೆನ್ನಾರ್ ನದಿಯಾಗಿ, ಆಂಧ್ರಪ್ರದೇಶದ ಬಂಗಾಳಕೊಲ್ಲಿ ನದಿಯನ್ನು ಸೇರುತ್ತದೆ.

ಕೆರೆಯ ಹಿಂದೆ, ಪುರಾತನ ಕಾಲದ, ಶಕ್ತಿ ದೇವತೆ ಮಾವತ್ತೂರಮ್ಮ, ಹಾಗೂ ಆಂಜನೇಯನ ದೇವಾಲಯಗಳಿವೆ. ಕೆರೆಯ ಕಾಮಗಾರಿ ನಡೆಯುವಾಗ ಸಲಕರಣೆಗಳನ್ನು ತಟ್ಟಲು ಈ ಆಂಜನೇಯನ ದೇಗುಲದ ಬಳಿ ಕುಲುಮೆ ನಿರ್ಮಿಸಿಕೊಂಡಿದ್ದರೆಂದು ಹಿರಿಯರು ಹೇಳುತ್ತಾರೆ. ಇದುವರೆಗೂ ಕೆರೆಯ ತಳವನ್ನೇ ಕಾಣಲಾಗಿಲ್ಲ, ಅಂದರೆ ನೂರಾರು ವರ್ಷದಿಂದ ಕೆರೆಯ ಹೂಳನ್ನೇ ತೆಗೆಯಲು ಸಾದ್ಯವಾಗಿಲ್ಲ.

ಸರ್ಕಾರದ, ಅಧಿಕಾರಿಗಳ ನಿರ್ಲಕ್ಷ್ಯ & ಭ್ರಷ್ಟತನದಿಂದ ಸಾವಿರಾರು ಮೆಟ್ರಿಕ್ ಟನ್ ಮರಳು ಕಳ್ಳರ ಪಾಲಾಗಿದೆ. ಕೆರೆಯಂಗಳದ ಒತ್ತುವರಿ ತಡೆಯಲು ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಕೆರೆಯ ಅಂಚಿನುದ್ದಕ್ಕೂ ನೆಡುತೋಪುಗಳನ್ನು ನಿರ್ಮಿಸಿದ್ದು ವಿವಿಧ ಜಾತಿಯ ಪ್ರಾಣಿ ಪಕ್ಷಿ, ಬಾನಾಡಿಗಳಿಗೆ ಆಶ್ರಯ ತಾಣವಾಗಿದೆ.

ಪ್ರತಿ ಋತುಮಾನ ದಲ್ಲೂ ದೇಶ ವಿದೇಶಗಳಿಂದ ಹಕ್ಕಿ,ಪಕ್ಷಿಗಳು ಇಲ್ಲಿಗೆ ಬಂದು ಹೋಗುತ್ತವೆ.

ಈ ಕೆರೆಯ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಗದಿದ್ದರೂ ಈ ಏರಿಯ ಹಿಂಬಾಗದಲ್ಲಿ ಹಾದು ಹೋಗುವ ಗೊರವನಹಳ್ಳಿ- ಮಾವತ್ತೂರು - ತೊಂಡೇಬಾವಿ ರಸ್ತೆಯಲ್ಲಿ ಸಂಚರಿಸುವವರನ್ನು ಈ ಬೃಹತ್ ಕೆರೆ ಸೆಳೆಯದೇ ಇರುವುದಿಲ್ಲ.

ಪ್ರತಿ ಭಾನುವಾರ ಇಲ್ಲಿ ನಡೆಯುವ ಸಂತೆಯು ಸುತ್ತ ಮುತ್ತಲಿನ ಹಳ್ಳಿಗಳ ಜನರ ಅಗತ್ಯಗಳನ್ನು ಪೂರೈಸುತ್ತಿದೆ.

ಪ್ರಸಿಧ್ಧ ಪುಣ್ಯ ಕ್ಷೇತ್ರ ಗೊರವನಹಳ್ಳಿ (ಲಕ್ಷ್ಮಿ ದೇವಸ್ಥಾನ) ಇಲ್ಲಿಂದ ಪಶ್ಚಿಮಕ್ಕೆ ಕೇವಲ ೫ ಕಿ.ಮೀ ದೂರದಲ್ಲಿದೆ.