ವಿಷಯಕ್ಕೆ ಹೋಗು

ಜಯಂತಿ(ಪತ್ರಿಕೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಯಂತಿ -ಧಾರವಾಡದಿಂದ ಪ್ರಕಟವಾಗುತ್ತಿದ್ದ ಒಂದು ಕನ್ನಡ ಮಾಸಪತ್ರಿಕೆ.

ಪತ್ರಿಕೆಯ ಆರಂಭ ಮತ್ತು ಅಂತ್ಯ

[ಬದಲಾಯಿಸಿ]

ಮರಾಠಿಯ ಕಿರ್ಲೋಸ್ಕರದಂಥ ಒಂದು ಪತ್ರಿಕೆ ಕನ್ನಡದಲ್ಲಿರಬೇಕೆಂದು ವಿ.ವೈ.ಜಠಾರ, ಶಂಕರರಾವ್ ಜಠಾರ, ಸಿ.ಡಿ.ದೇಶಪಾಂಡೆ, ಮಾಧವರಾವ್ ಪಾಟೀಲ ಇವರು 1938ರ ಮೇ ತಿಂಗಳಲ್ಲಿ ಇದನ್ನು ಪ್ರಾರಂಭಿಸಿದರು. ಪ್ರಾರಂಭದಿಂದಲೂ ಬೆಟಗೇರಿ ಕೃಷ್ಣಶರ್ಮ (ಆನಂದ ಕಂದ) ಸಂಪಾದಕರು. ಜೊತೆಗೆ ಮೊದಲ ಮೂರು ವರ್ಷ ಮಾಧವರಾವ್ ಪಾಟೀಲರೂ ಸಂಪಾದಕರಾಗಿದ್ದರು. ಕೃಷ್ಣ ಶರ್ಮರೇ ಸಾಹಿತ್ಯದ ಎಲ್ಲ ಹೊಣೆಯನ್ನೂ ನಿರ್ವಹಿಸುತ್ತಿದ್ದರು. 1941ರಲ್ಲಿ ಆರ್ಥಿಕ ಕಾರಣಗಳಿಗಾಗಿ ಇದನ್ನು ನಿಲ್ಲಿಸಬೇಕೆಂದು ನಿರ್ಣಯವಾದಾಗ ಬೆಟಗೇರಿಯವರು ತಮ್ಮ ಕೆಲವು ಸ್ನೇಹಿತರ ಸಹಾಯದಿಂದ ಇದನ್ನು ಪಡೆದುಕೊಂಡು 1961ರ ಜುಲೈವರೆಗೆ ನಡೆಸಿಕೊಂಡು ಬಂದರು. ಆ ವರ್ಷದ ಸೆಪ್ಟೆಂಬರ್‍ನಲ್ಲಿ ಸಿ.ಎಸ್. ಕುಲಕರ್ಣಿ ಇದನ್ನು ವಹಿಸಿಕೊಂಡರು. ಅನಂತರ ಎರಡು ವರ್ಷ ಸಂಪಾದಕರಾಗಿದ್ದರು. 1963ರಲ್ಲಿ ಹೊರಡಿಯವರು ಇದನ್ನು ವಹಿಸಿಕೊಂಡರು. ರಾಮಚಂದ್ರ ಕೊಟ್ಟಲಗಿಯವರು ಸ್ವಲ್ಪಕಾಲ ಸಂಪಾದಕರಾಗಿದ್ದರು. 1964ರ ಹೊತ್ತಿಗೆ ಈ ಪತ್ರಿಕೆ ನಿಂತುಹೋಯಿತು.

ಗಾತ್ರ, ಬೆಲೆ , ಪ್ರಸಾರ

[ಬದಲಾಯಿಸಿ]

ಪ್ರಾರಂಭದಲ್ಲಿ ಡಿಮೈ ಚತುಷ್ಟಮದ ಆಕಾರದ 64 ಪುಟಗಳಿಂದ ಕ���ಡಿದ ಪತ್ರಿಕೆಯ ಪುಟಗಳ ಸಂಖ್ಯೆ ಕಾಲಕ್ರಮದಲ್ಲಿ 80ಕ್ಕೆ ಏರಿತು. ಕೊನೆಯಲ್ಲಿ 48ಕ್ಕೆ ಇಳಿದಿತ್ತು. ಬೆಲೆ ಮೊದಲು ನಾಲ್ಕು ಆಣೆ (25 ಪೈಸೆ). 1939ರಲ್ಲಿ ಇದನ್ನು 5 ಆಣೆಗಳಿಗೂ 1942ರಲ್ಲಿ 6 ಆಣೆಗಳಿಗೂ ಕೊನೆಗೆ 8 ಆಣೆಗಳಿಗೂ ಹೆಚ್ಚಿಸಲಾಗಿತ್ತು. ವಾರ್ಷಿಕ ಚಂದಾ ಅನುಕ್ರಮವಾಗಿ ರೂ. 3,4,5 ಮತ್ತು 6. ಪ್ರಸಾರ 3,000ದ ವರೆಗೆ ಏರಿತ್ತು. ಕೊನೆ ಕೊನೆಗೆ ಸುಮಾರು 1,000ಕ್ಕೆ ಇಳಿದಿತ್ತು.

ಕನ್ನಡ ಸಾಹಿತ್ಯಕ್ಕೆ ಕೊಡುಗೆ

[ಬದಲಾಯಿಸಿ]

ಕನ್ನಡದ ಅನೇಕ ಪ್ರಮುಖ ಲೇಖಕರು ಈ ಪತ್ರಿಕೆಗೆ ಬರೆಯುತ್ತಿದ್ದರು. ಹೊಸ ಲೇಖಕರನೇಕರಿಗೆ ಜಯಂತಿ ಪ್ರೋತ್ಸಾಹ ನೀಡಿತು. ಅನೇಕ ಲೇಖಕರು ಇದರ ಮೂಲಕ ಹೆಸರು ಪಡೆದರು. 23 ವರ್ಷಗಳ ಕಾಲ ಅಖಂಡವಾಗಿ ಸಂಪಾದಕರಾಗಿದ್ದ ಬೆಟಗೇರಿ ಕೃಷ್ಣ ಶರ್ಮರು `ವಿಹಾರಿ' ನಾಮಾಂಕಿತದಲ್ಲಿ ಬರೆಯುತ್ತಿದ್ದ ಇವರ ಸಾಹಿತ್ಯ ಸಮಾಲೋಚನೆಯ ಬರಹ ಚುರುಕಾಗಿರುತ್ತಿತ್ತು. ಸೃಜನ ಶೀಲತೆಯನ್ನು ಪ್ರೋತ್ಸಾಹಿಸಿ ಸಣ್ಣ ಕಥಾ ಸ್ಪರ್ಧೆಗಳನ್ನು ಏರ್ಪಡಿಸಿದರು. ಆ ಸ್ಪರ್ಧೆಗಳಲ್ಲಿ ಮಿರ್ಜಿ ಅಣ್ಣಾರಾಯರು, ಭಾರತೀಸುತ ಮೊದಲಾದವರು ಬೆಳಕಿಗೆ ಬಂದರು. ವಿಮರ್ಶೆಯ ಶಿಕ್ಷಣರಂಗ ವಿಭಾಗದ ಮೂಲಕ ಓದುಗರಿಗೆ ವಿಮರ್ಶೆಯ ವಿಷಯದಲ್ಲಿ ತಿಳಿವಳಿಕೆ ನೀಡಲಾಗುತ್ತಿತ್ತು. ಒಳ-ಹೊರನಾಡುಗಳ ಕನ್ನಡಿಗರ ಚಟುವಟಿಕೆಗಳಿಗೆ ಪತ್ರಿಕೆ ಪ್ರಚಾರ ನೀಡಿತು. ಲಲಿತಸಾಹಿತ್ಯವನ್ನೇ ಹೆಚ್ಚಾಗಿ ಪ್ರಕಟಿಸುತ್ತಿದ್ದ ಜಯಂತಿ ಒಂದು ಶ್ರೇಷ್ಠ ದರ್ಜೆಯ ಮಾಸಪತ್ರಿಕೆಯೆನಿಸಿ ಕನ್ನಡಕ್ಕೆ ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸಿತು.

ಉಲ್ಲೇಖ

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: