ಗೋವಿಂದ ವಲ್ಲಭ ಪಂತ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪಂಡಿತ್ ಗೋವಿಂದ್ ವಲ್ಲಭ ಪಂತ್ | |
---|---|
ಅಧಿಕಾರ ಅವಧಿ 17 Jul 1937 – 27 Dec 1954 | |
ಪೂರ್ವಾಧಿಕಾರಿ | Nawab Sir Muhammad Ahmad Said Khan Chhatari |
ಉತ್ತರಾಧಿಕಾರಿ | Vacant |
ಅಧಿಕಾರ ಅವಧಿ 1 Apr 1946 – 26 Jan 1950 | |
ಪೂರ್ವಾಧಿಕಾರಿ | Vacant |
ಉತ್ತರಾಧಿಕಾರಿ | Post abolished |
ಅಧಿಕಾರ ಅವಧಿ 26 Jan 1950 – 27 Dec 1954 | |
ಪೂರ್ವಾಧಿಕಾರಿ | New creation |
ಉತ್ತರಾಧಿಕಾರಿ | Sampurnanand |
ವೈಯಕ್ತಿಕ ಮಾಹಿತಿ | |
ಜನನ | ೧೦ ಸೆಪ್ಟೆಂಬರ್ ೨೮೮೭ Khoont-Dhaamas village, Almora, North-Western Provinces |
ಮರಣ | 7 March 1961 ಉತ್ತರ ಪ್ರದೇಶ |
ರಾಜಕೀಯ ಪಕ್ಷ | Indian National Congress |
ಮಕ್ಕಳು | K. C. Pant |
ವೃತ್ತಿ | ಸ್ವಾತಂತ್ರ್ಯ ಹೋರಾಟಗಾರರು, ಕೇಂದ್ರ ಗೃಹ ಮಂತ್ರಿಗಳು,ಸಮಾಜ ಸೇವಕರು |
ಪಂಡಿತ ಗೋವಿಂದ ವಲ್ಲಭ ಪಂತ್ (ಸೆಪ್ಟೆಂಬರ್ ೧೦, ೧೮೮೭ - ಮಾರ್ಚ್ ೭,೧೯೬೧) ಭಾರತ ದೇಶದ ಮಹಾನ್ ಪುತ್ರರಲ್ಲೊಬ್ಬರೆನಿಸಿದ್ದು, ಸಮಾಜ ಕಾರ್ಯಕರ್ತರಾಗಿ, ಸ್ವಾತಂತ್ಯ್ರ ಹೋರಾಟಗಾರರಾಗಿ, ರಾಜಕಾರಣಿಗಳಾಗಿ, ಆಡಳಿತಗಾರರಾಗಿ, ಶಾಸಕರಾಗಿ, ಮಂತ್ರಿಗಳಾಗಿ, ಮುಖ್ಯ ಮಂತ್ರಿಗಳಾಗಿ, ಕೇಂದ್ರ ಗೃಹ ಮಂತ್ರಿಗಳಾಗಿ ಹೀಗೆ ವಿವಿಧ ಹುದ್ಧೆಗಳಲ್ಲಿ ದುಡಿದು ತಮ್ಮ ನಿಷ್ಠ ದೇಶ ಸೇವೆಗಾಗಿ ಪ್ರಸಿದ್ಧರಾಗಿದ್ದಾರೆ. ೧೯೫೭ರ ವರ್ಷದಲ್ಲಿ ಅವರನ್ನು 'ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೀವನ
[ಬದಲಾಯಿಸಿ]ಗೋವಿಂದ ವಲ್ಲಭರ ಹಿರಿಯರು ಮಹಾರಾಷ್ಟ್ರದವರು. ಹಲಕಾಲದ ಹಿಂದೆ ಮಹಾನ್ ವಿದ್ವಾಂಸರಾಗಿದ್ದ ಗೋವಿಂದ ವಲ್ಲಭರ ಮುತ್ತಾತ ಬದರೀಯಾತ್ರೆ ಮಾಡುವುದಕ್ಕೆ ಉತ್ತರಕ್ಕೆ ಹೋದಾಗ, ಅವರ ಪಾಂಡಿತ್ಯಕ್ಕೆ ಮಾರುಹೋದ ಆಲ್‌ಮೋರಾದಲ್ಲಿದ್ದ ಕುಮಾವೋ ಪ್ರಾಂತ್ಯದ ರಾಜ ಅವರನ್ನು ತನ್ನ ಆಸ್ಥಾನ ವಿದ್ವಾಂಸರಾಗಿರುವುದಕ್ಕೆ ಮನವೊಲಿಸಿದ. ಈ ವಿದ್ವಾಂಸರ ಮೊಮ್ಮಗನಾಗಿದ್ದು ಸರ್ಕಾರಿ ನೌಕರರಾಗಿದ್ದ ಮನೋರಥ ಪಂತ್ ಅವರ ಮಗನಾಗಿ ಗೋವಿಂದ ವಲ್ಲಭ ಪಂತರು ೧೮೮೭ನೆಯ ಇಸವಿ ಸೆಪ್ಟೆಂಬರ್ ತಿಂಗಳ ೧೦ನೇ ತಾರೀಖಿನಂದು ಜನಿಸಿದರು.
ಮನೋರಥ ಪಂತರಿಗೆ ಕಂದಾಯ ಇಲಾಖೆಯಲ್ಲಿ ಊರೂರು ತಿರುಗುವ ಕೆಲಸ ಮಾಡಬೇಕಿದ್ದರಿಂದ ಮಗ ಗೋವಿಂದ ವಲ್ಲಭನನ್ನು ನೈನಿತಾಲಿನಲ್ಲಿ ದೊಡ್ಡ ಸರ್ಕಾರಿ ಅಧಿಕಾರಿಗಳಾಗಿದ್ದ ತಮ್ಮ ಚಿಕ್ಕಪ್ಪ ಬದರೀದಾಸ ಜೋಷಿ ಅವರ ಮನೆಯಲ್ಲಿ ಬಿಟ್ಟರು. ನೈನಿತಾಲಿನಲ್ಲಿ ಸ್ವಲ್ಪಕಾಲ, ಆಮೇಲೆ ಆಲ್‌ಮೋರಾದ ಸ್ಯಾಮಲ್‌ಸೇ ಕಾಲೇಜಿನಲ್ಲಿ ಸ್ವಲ್ಪಕಾಲ ಓದಿದ ನಂತರದಲ್ಲಿ ಗೋವಿಂದ ವಲ್ಲಭ ಪಂತರು ಅಲಹಾಬಾದಿನ ಮ್ಯೂರ್ ಸೆಂಟ್ರಲ್ ಕಾಲೇಜಿಗೆ ಸೇರಿದರು.
ಓದಿನ ದಿನಗಳಲ್ಲೇ ಮುಂದಾಳು
[ಬದಲಾಯಿಸಿ]ನೈನಿತಾಲಿನಲ್ಲಿ ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಗೋವಿಂದ ವಲ್ಲಭರಿಗೆ ದೇಶದ ಬಗ್ಗೆ ಅಭಿಮಾನ ಹುಟ್ಟುತ್ತಾ ಇತ್ತು. ಆಂಗ್ಲರು ನಮ್ಮ ದೇಶವನ್ನು ಆಕ್ರಮಿಸಿದ್ದಾರಲ್ಲ, ಇದು ನ್ಯಾಯವಲ್ಲ, ಇವರನ್ನು ಇಲ್ಲಿಂದ ಓಡಿಸಬೇಕು, ನಾವು ಸ್ವತಂತ್ರರಾಗಬೇಕು ಎನ್ನುವ ವಿಚಾರ ಹುಡುಗ ಪಂತರ ತಲೆಯಲ್ಲಿ ತುಂಬಿತ್ತು. ಅಲಹಾಬಾದಿನ ಕಾಲೇಜಿಗೆ ಬಂದಮೇಲೆ ಈ ವಿಚಾರ ಚೆನ್ನಾಗಿ ಬೆಳೆಯಲೂ ಅವಕಾಶವಾಯಿತು. ತರುಣ ಗೋವಿಂದ ವಲ್ಲಭ ಪಂತ್ ವಿದ್ಯಾರ್ಥಿಗಳ ಮುಖಂಡ ಆಗುವುದಕ್ಕೆ ತಡವಾಗಲಿಲ್ಲ. ಕಾಲೇಜಿಗೆ ಸೇರಿದ ಸ್ವಲ್ಪ ದಿನದಲ್ಲೆ ಎಲ್ಲರಿಗೂ ಅಚ್ಚುಮೆಚ್ಚಾದ, ಮುಂದಾಳುವಾದರು.
೧೯೦೬ನೆಯ ಇಸವಿಯಲ್ಲಿ ಅಲಹಾಬಾದಿನಲ್ಲಿ ಮಾಘಮೇಳ ನಡೆಯಿತು. ಭಾರಿ ಜನಸಂದಣಿ ಕೂಡಿದ್ದ ಅಲ್ಲಿ ಒಂದು ಸಭೆ ಏರ್ಪಾಟಾಯಿತು. ಹತ್ತೊಂಬತ್ತು ವರ್ಷದ ಗೋವಿಂದ ವಲ್ಲಭನೇ ಭಾಷಣಕಾರ. ಅದೇ ಆತನ ಮೊದಲನೆಯ ಭಾಷಣ. ಒಳ್ಳೆ ಉತ್ಸಾಹದಿಂದ ಮಾತಾಡಿದ. ತರ್ಕಬದ್ಧವಾಗಿ ಮಾತಾಡಿದ. ಬ್ರಿಟಿಷರು ಹೇಗೆ ನಮ್ಮನ್ನು ಗುಲಾಮರಾಗಿ ಮಾಡಿದ್ದಾರೆ, ನಮ್ಮ ಮೇಲೆ ಕೂತು ಆಳುತ್ತಿದ್ದಾರೆ, ನಾವು ಅವರಿಗೆ ಅಡಿಯಾಳಾಗಿ ಇರುವುದು ಅವಮಾನಕರ, ಅವರನ್ನು ನಮ್ಮ ಹೆಗಲಮೇಲಿಂದ ಇಳಿಸಬೇಕು, ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು, ಇತರ ಜನರ ಹಾಗೆಯೆ ನಾವೂ ಸ್ವತಂತ್ರರಾಗಿ ತಲೆಯೆತ್ತಿಕೊಂಡು ನಿಲ್ಲಬೇಕು. ಸ್ವಾತಂತ್ರ್ಯವಿಲ್ಲದೆ ಇದ್ದರೆ ಸತ್ತ ಹಾಗೆಯೆ ಸರಿ. ಈ ಬ್ರಿಟಿಷರು ನಮ್ಮ ದೇಶವನ್ನು ಲೂಟಿಮಾಡಿದ್ದಾರೆ, ನಮ್ಮ ಶಕ್ತಿಯನ್ನು ನಾಶಮಾಡಿದ್ದಾರೆ, ನಾವೀಗ ಅವರನ್ನು ಓಡಿಸಬೇಕು, ನಮ್ಮ ಬಲವನ್ನು ಹೆಚ್ಚಿಸಿಕೊಳ್ಳಬೇಕು. ಹೀಗೆಲ್ಲ ಜೋರಾಗಿ ಭಾಷಣ ಮಾಡಿದ. ಇನ್ನೂ ತರುಣ, ಯಾರಿಗೂ ಹೆದರದೆ ಹಿಂದೆ ಮುಂದೆ ನೋಡದೆ ಮಾತಾಡಿದ. ಈ ವಿಷಯ ಕಾಲೇಜಿನ ಮುಖ್ಯಾಧಿಕಾರಿಯ ಕಿವಿಗೆ ಬಿತ್ತು. ಆತನಿಗೆ ರೋಷ ತಲೆಗೇರಿ, ಗೋವಿಂದ ವಲ್ಲಭ ಪಂತನನ್ನು ಕಾಲೇಜಿನಿಂದ ತೆಗೆದುಹಾಕಲು ಆಜ್ಞೆ ಮಾಡಿದ.
ಗೋವಿಂದ ವಲ್ಲಭ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಾಯಕ. ತಮ್ಮ ನಾಯಕನಿಗೆ ಈ ಅವಮಾನ ಆದರೆ ಸುಮ್ಮನಿರುತ್ತಾರೆಯೆ? ಹುಡುಗರೆಲ್ಲ ಎದುರುನಿಂತರು. ಪಂತನನ್ನು ಮತ್ತೆ ಕಾಲೇಜಿಗೆ ಸೇರಿಸಿಕೊಳ್ಳಿ ಎಂದು ಒತ್ತಾಯಪಡಿಸಿ ದೊಡ್ಡ ಚಳವಳಿಯನ್ನೇ ಹೂಡಿದರು. ಕಾಲೇಜಿನ ಅಧಿಕಾರಿಗಳ ಬೆದರಿಕೆ ಏನೂ ಸಾಗಲಿಲ್ಲ. ಹುಡುಗರ ಒಗ್ಗಟ್ಟಿನ ಮುಂದೆ, ಕಾಲೇಜು ನಡೆಯುವುದೇ ಕಷ್ಟವಾಗಿ ಹೋಯಿತು. ಆಗ ಪಂಡಿತ ಮದನ ಮೋಹನ ಮಾಳವೀಯರು ಸಂಧಾನ ಮಾಡಿ ಅಧಿಕಾರಿಗಳಿಗೆ ತಕ್ಕ ಬುದ್ಧಿ ಹೇಳಿದರು. ಕೊನೆಗೆ ಅಧಿಕಾರಿಗಳು ಪಂತರನ್ನು ಯಾವುದೇ ಷರತ್ತೂ ಇಲ್ಲದೆ ಮತ್ತೆ ಕಾಲೇಜಿಗೆ ಸೇರಿಸಿಕೊಳ್ಳುವುದಾಗಿ ಒಪ್ಪಿದರು. ಪಂತ್ ಮತ್ತೆ ಕಾಲೇಜಿಗೆ ಬಂದಾಗ ಎಲ್ಲ ಹುಡುಗರೂ ಸಂಭ್ರಮದ ಸ್ವಾಗತ ನೀಡಿದರು. ಈ ಪ್ರಸಂಗದಿಂದ ಗೋವಿಂದ ವಲ್ಲಭ ಪಂತರಿಗೆ ಜನನಾಯಕನ ಪಟ್ಟ ದೊರೆತಿತ್ತು.
ಜನಪ್ರಿಯ ವಕೀಲ
[ಬದಲಾಯಿಸಿ]೧೯೦೭ರಲ್ಲಿ ಪಂತರು ಬಿ.ಎ. ಪರೀಕ್ಷೆ ಮುಗಿಸಿದರು. ೧೯೦೯ರಲ್ಲಿ ವಕೀಲಿ ಪರೀಕ್ಷೆಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾದರು. ಅದಕ್ಕಾಗಿ ಅವರಿಗೆ ಲುಮ್ಸ್‌ಡೆನ್ ಬಂಗಾರದ ಪದಕ ಲಭಿಸಿತು.
ವಕೀಲಿ ಪರೀಕ್ಷೆ ಮುಗಿಸಿದ ಮೇಲೆ ಪಂತರು ಆಲ್ಮೋರಾ ಜಿಲ್ಲೆಯ ಕಾಶೀಪುರದಲ್ಲಿ ವಕೀಲಿ ಕೆಲಸ ಆರಂಭಿಸಿದರು. ಅವರ ಹರಿತವಾದ ಬುದ್ಧಿ, ಸಾಕ್ಷ ಆಧಾರಗಳನ್ನು ಸರಿಯಾಗಿ ಬಳಸಿಕೊಂಡು ವಾದ ಮಾಡುತ್ತಿದ್ದ ವೈಖರಿ ಇವುಗಳಿಂದಾಗಿ ಸ್ವಲ್ಪ ಕಾಲದಲ್ಲೇ ಅವರು ಆ ಸುತ್ತಿಗೆಲ್ಲ ತುಂಬ ಹೆಸರುವಾಸಿಯಾದ ವಕೀಲರಾದರು. ಗೋವಿಂದ ವಲ್ಲಭ ಪಂತರು ವಾದಕ್ಕೆ ನಿಂತರು ಎಂದರೆ ಕೇಸು ಗೆದ್ದ ಹಾಗೆಯೇ. ಅವರು ಚಿಲ್ಲರೆಪಲ್ಲರೆ ಕೇಸುಗಳನ್ನಾಗಲಿ ಸುಳ್ಳು ಕೇಸುಗಳನ್ನಾಗಲಿ ತೆಗೆದುಕೊಳ್ಳುತ್ತಲೇ ಇರಲಿಲ್ಲ. ವಕೀಲಿ ಕೆಲಸ ಚೆನ್ನಾಗಿ ನಡೆಯುತ್ತಿತ್ತು. ಸಂಪಾದನೆಯೂ ಜೋರಾಗಿತ್ತು. ಆದರೆ ಪಂತರ ಮನಸ್ಸು ದೇಶಸೇವೆಯ ಕಡೆಗೇ ವಾಲುತ್ತಿತ್ತು.
ಕೂಲಿಕಾರರ ಹಿತಕ್ಕಾಗಿ ಹೋರಾಟ
[ಬದಲಾಯಿಸಿ]ಆಗ ಕುಮಾವೂ ಪ್ರಾಂತದಲ್ಲಿ ‘ಕೂಲಿಬೇಗಾರ್’ ಎನ್ನುವ ಒಂದು ಕೆಟ್ಟ ಪದ್ಧತಿ ಇತ್ತು. ಅದರ ಪ್ರಕಾರ ಬಡ ಕೂಲಿಯಾಳುಗಳು ಕಡ್ಡಾಯವಾಗಿ ಬಿಟ್ಟಿ ಚಾಕರಿ ಮಾಡಬೇಕಾಗಿತ್ತು. ಆ ಕೂಲಿಗಳಿಗೆ ಇದನ್ನು ವಿರೋಧಿಸಲು ಶಕ್ತಿಯೇ ಇರಲಿಲ್ಲ. ಅವರ ಈ ದೀನಸ್ಥಿತಿಯನ್ನು ಕಂಡು ಪಂತರಿಗೆ ನೋವಾಯಿತು. ಅವರ ಪರವಾಗಿ ಹೋರಾಟ ಪ್ರಾರಂಭಿಸಿದರು. ಆ ಕೆಟ್ಟ ಪದ್ಧತಿ ಹೋಗಬೇಕು ಎಂದು ಸರ್ಕಾರಕ್ಕೆ ಒತ್ತಾಯಮಾಡಿದರು. ಅಧಿಕಾರಿಗಳ ಆಕ್ಷೇಪಣೆ ಎಷ್ಟೇ ಬಂದರೂ ಲೆಕ್ಕಿಸಲಿಲ್ಲ. ಒಂದೇ ಸಮನೆ ಶ್ರಮಿಸಿದರು.
ಕಾಶೀಪುರದಲ್ಲಿ ಪಂಡಿತ ಬದರೀದತ್ತ ಪಾಂಡೆ ಎನ್ನುವ ಗೆಳೆಯರೊಂದಿಗೆ ಸೇರಿ ‘‘ಶಕ್ತಿ’’ ಎನ್ನುವ ಒಂದು ಪತ್ರಿಕೆಯನ್ನು ಆರಂಭಿಸಿ, ಜನರ ಕಷ್ಟ ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಎತ್ತಿ ತೋರಿಸುತ್ತಿದ್ದರು. ಕೂಲಿ ಬೇಗಾರ್ ಪದ್ಧತಿಯನ್ನು ತೊಲಗಿಸುವುದರಲ್ಲೂ ‘ಶಕ್ತಿ’ ಪತ್ರಿಕೆ ತುಂಬ ಕೆಲಸ ಮಾಡಿತು. ಕೊನೆಗೂ ಆ ಪದ್ಥತಿ ಹೋಗಲೇಬೇಕಾಯಿತು.
ಜನಪ್ರತಿನಿಧಿಯಾಗಿ
[ಬದಲಾಯಿಸಿ]ಜೊತೆಗೇ ಪಂತರು ೧೯೧೮ರಲ್ಲಿ ಕಾಶೀಪುರದ ಪುರ ಸಭೆಯ ಸದಸ್ಯರಾದರು. ಆ ಕಾಲದಲ್ಲಿ ಕುಮಾವೂ ತುಂಬ ಹಿಂದುಳಿದ ಪ್ರಾಂತವಾಗಿತ್ತು. ಗುಡ್ಡಗಾಡಿನ ನಾಡು, ಏನೂ ಅರಿಯದ ಜನ, ವಿಪರೀತ ಚಳಿ. ಹೀಗಾಗಿ ಬಡತನ ಬಹಳ ಹೆಚ್ಚಾಗಿತ್ತು. ಅದನ್ನು ‘ಹಿಂದುಳಿದ ಪ್ರದೇಶ’ ಎಂದೇ ಕರೆಯುತ್ತಿದ್ದರು. ಪಂತರು ಈ ಸಮಸ್ಯೆಯನ್ನು ಎತ್ತಿಕೊಂಡು ಒಂದೇ ಸಮನೆ ಹೋರಾಡಿದರು. ತಮ್ಮ ಜಿಲ್ಲೆಯ ಸ್ಥಿತಿಗತಿಗಳು ಉತ್ತಮವಾಗಲು ಶ್ರಮಿಸಿದರು.
ಮುಂದೆ ಪಂತರು ಸಂಯುಕ್ತ ಉತ್ತರ ಪ್ರದೇಶದ ವಿಧಾನ ಪರಿಷತ್ತಿಗೆ ಸದಸ್ಯರಾಗಿ ಆಯ್ಕೆಯಾದರು. ಅಲ್ಲಿಂದ ಮುಂದೆ ಅವರು ತೀರಿಕೊಳ್ಳುವವರೆಗೂ ಶಾಸಕರಾಗಿಯೆ ಇದ್ದರು. ಪ್ರತಿಯೊಂದು ಚುನಾವಣೆಯಲ್ಲೂ ಅವರಿಗೆ ಗೆಲವು ಕಟ್ಟಿಟ್ಟಿತ್ತು.
ಪ್ರಾರಂಭಿಕ ಕಾಂಗ್ರೆಸ್ ರಾಜಕಾರಣದಲ್ಲಿ
[ಬದಲಾಯಿಸಿ]೧೯೨೦ರಲ್ಲಿ ಮಹಾತ್ಮ ಗಾಂಧಿಯವರು ನಾಯಕರು ದೇಶ ಸೇವೆಗಾಗಿ ಕೊಟ್ಟ ಕರೆಯಿಂದ ಪ್ರಭಾವಿತರಾದ ಗೋವಿಂದ ವಲ್ಲಭ ಪಂತರು ತಮ್ಮ ಹೇರಳ ಸಂಪಾದನೆಯ ವಕೀಲಿ ಕೆಲಸವನ್ನು ತ್ಯಾಗ ಮಾಡಿ ಕಾಂಗ್ರೆಸ್ಸಿನ ಕೆಲಸದಲ್ಲಿ ಮುಳುಗಿದರು. ಮುಂದೆ ರಾಜಕೀಯವೇ ಅವರ ಜೀವನವಾಯಿತು.
೧೯೨೦ರ ಚಳವಳಿ ಆದಮೇಲೆ ಗೋವಿಂದ ವಲ್ಲಭ ಪಂತರು ‘‘ಸ್ವರಾಜ್ಯಪಕ್ಷ’’ ಪಕ್ಷದ ಪರವಾಗಿ ಸಂಯುಕ್ತ ಪ್ರಾಂತದ ಶಾಸನಸಭೆಗೆ ಆರಿಸಿಬಂದು ಏಳು ವರ್ಷ ಅಲ್ಲಿ ಅವರು ಸ್ವರಾಜ್ಯ ಪಕ್ಷದ ನಾಯಕರಾಗಿದ್ದರು. ಪಂತರ ಮಾತುಗಾರಿಕೆ ಸರ್ಕಾರದ ಎದೆ ನಡುಗಿಸುತ್ತಿತ್ತು. ಅವರು ಬ್ರಿಟಿಷ್ ಸರ್ಕಾರದ ಕೆಟ್ಟ ಕಾನೂನುಗಳನ್ನೆಲ್ಲ ನಿರ್ದಾಕ್ಷಿಣ್ಯವಾಗಿ ವಿರೋಧಿಸುತ್ತಿದ್ದರು. ಅಷ್ಟೇ ಅಲ್ಲ ಎದುರಾಳಿಗಳೂ ಒಪ್ಪುವ ಹಾಗೆ ಸಮರ್ಥವಾಗಿ ಪ್ರಭಾವಪೂರ್ಣವಾಗಿ ವಾದಿಸುತ್ತಿದ್ದರು. ಪಂತರ ಮಾತಿಗೆ ಎದುರು ನಿಲ್ಲುವವರೇ ಇರಲಿಲ್ಲ. ವೈಸರಾಯರ ಪ್ರತಿನಿಧಿ ಜೇಮ್ಸ್ ಗ್ರೇಗ್ ಎಂಬವನಿದ್ದ. ಆತನಿಗೆ ಪಂತರ ಮಾತು ಎಂದರೆ ಗಾಬರಿ. ಅಷ್ಟು ಬಲವಾಗಿತ್ತು ಪಂತರ ಮಾತುಗಾರಿಕೆ. ಪಂತರ ಬುದ್ಧಿ ಹರಿತ, ಯೋಚನೆ ಆಳ, ಜ್ಞಾನ ಅಪಾರ, ತರ್ಕ ಎದುರಿಸಲು ಸಾಧ್ಯವಾಗದ್ದು, ಮಾತೋ ಸೊಗಸು. ಹೀಗಾಗಿ ಅವರ ವಿರುದ್ಧ ನಿಲ್ಲುವುದಕ್ಕೆ ಯಾರಿಗೂ ಸಾಧ್ಯವಿರಲಿಲ್ಲ.
ಮುಂದೆ ಪಂತರು ದೆಹಲಿಯ ಕೇಂದ್ರ ಶಾಸನ ಸಭೆಯ ಸದಸ್ಯರಾದರು. ಅಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕರೂ ಆದರು, ಶಾಸನ ಸಭೆಯ ಒಳಗೆ ಹಾಗೂ ಹೊರಗೆ ಬಿಡುಗಡೆಯ ಹೋರಾಟವನ್ನು ಎಡೆಬಿಡದೆ ನಡೆಸಿದರು.
೧೯೨೮ರ ಕಾಲದಲ್ಲಿ ಭಾರತದ ಪರಿಸ್ಥಿತಿಯನ್ನು ಪರಿಶೀಲಿಸಲು ಬ್ರಿಟಿಷ್ ಸರ್ಕಾರ ನೇಮಿಸಿದ್ದ ಸೈಮನ್ ಸಮಿತಿಯಲ್ಲಿ ಎಲ್ಲರೂ ಆಂಗ್ಲರೇ ಇದ್ದು ಒಬ್ಬ ಭಾರತೀಯರು ಇರಲಿಲ್ಲ. ಈ ಸಮಿತಿಯನ್ನು ಬಹಿಷ್ಕರಿಸುವುದಕ್ಕಾಗಿ ಲಾಹೋರಿನಲ್ಲಿ ನಡೆದ ಚಳವಳಿಯಲ್ಲಿ ಪಂಜಾಬಿನ ಸಿಂಹ ಲಾಲಾ ಲಜಪತರಾಯರಿಗೆ ಪೊಲೀಸರಿಂದ ಬಲವಾಗಿ ಏಟುಬಿತ್ತು. ಕೆಲವು ದಿನದಲ್ಲೆ ಅವರು ಪ್ರಾಣಬಿಟ್ಟರು. ಇದರಿಂದಾಗಿ ಇಡೀ ದೇಶದಲ್ಲೆಲ್ಲಾ ಉಗ್ರವಾದ ಚಳವಳಿ ನಡೆಯಿತು.
ಮರೆಯಲಾಗದ ಲಾಠಿ ಏಟು
[ಬದಲಾಯಿಸಿ]ಅಲಹಾಬಾದು, ಲಕ್ನೋ, ಕಾನ್‌ಪುರ ಮುಂತಾದ ಊರುಗಳಲ್ಲೆಲ್ಲ ಚಳವಳಿ ಬಲವಾಗಿತ್ತು. ಲಕ್ನೋದಲ್ಲಿ ಎರಡು ಕಡೆಯಿಂದ ದೊಡ್ಡ ಮೆರವಣಿಗೆ ಹೊರಟವು. ಒಂದರ ನಾಯಕ ಪಂಡಿತ ಜವಾಹರಲಾಲ ನೆಹರು. ಇನ್ನೊಂದರ ಮುಖಂಡ ಗೋವಿಂದವಲ್ಲಭ ಪಂತರು. ಎರಡೂ ಮೆರವಣಿಗೆ ರಸ್ತೆಯಲ್ಲಿ ಸೇರುವ ವೇಳೆಗೆ ಹಿಂದಿನಿಂದ ಹಾಗೂ ಮುಂದಿನಿಂದ ಪೊಲೀಸರ ದಂಡು ಬಂತು. ಕುದುರೆ ಸವಾರರ ದಂಡು, ಜನರನ್ನೆಲ್ಲ ಹೊಡೆದು ಓಡಿಸುತ್ತ ಬಂತು. ನೂರಾರು ಜನ ಏಟು ತಿಂದು ಆಕಡೆ ಈಕಡೆ ಓಡಿದರು. ಕೆಲವರು ರಸ್ತೆಯಲ್ಲಿ ಕುಳಿತುಬಿಟ್ಟರು. ರಸ್ತೆ ಮಧ್ಯೆ ನೆಹರು, ಪಂತ್ ಹಾಗೂ ಕೆಲವರು ಉಳಿದುಕೊಂಡರು. ಪೊಲೀಸರ ದಂಡು ಇವರ ಮೇಲೂ ನುಗ್ಗಿ ಬಂತು. ರಪರಪನೆ ಲಾಠಿಗಳಿಂದ ಎಲ್ಲರನ್ನೂ ಬಡಿಯಿತು. ಪಂತರು ನೆಹರೂ ಅವರನ್ನು ಕಾಪಾಡಲೆಂದು ಅವರ ಮುಂದೆ ಬಂದು ನಿಂತರು. ಅವರು ಭಾರಿ ಆಳು. ಸರಿಯಾಗಿ ಏಟಿಗೆ ಸಿಕ್ಕರು, ಬಹುಪಾಲು ಏಟು ಅವರಿಗೇ ಬಿದ್ದವು. ನೆಹರೂಗೂ ಏಟು ತಪ್ಪಲಿಲ್ಲವಾದರೂ ಪಂತರಿಗೆ ಜೋರಾಗಿ ಬಿತ್ತು. ಅವನ ಬೆನ್ನಿನ ನರಕ್ಕೆ ಬಲವಾದ ಪೆಟ್ಟು ಬಿದ್ದು ನರವೇ ಊನವಾಯಿತು. ಅದರಿಂದ ಕೈಕಾಲುಗಳಲ್ಲಿ ನಡುಕ ಉಂಟಾಯಿತು. ಸರಾಗವಾಗಿ ಓಡಾಡುವುದಕ್ಕೆ ಕಷ್ಟ ಆಯಿತು. ಮುಂದೆ ಅವರು ಬದುಕಿದ್ದಷ್ಟು ಕಾಲವೂ ಈ ತೊಂದರೆಯನ್ನು ಅನುಭವಿಸಬೇಕಾಯಿತು. ಆಗ ನಡೆದ ಸತ್ಯಾಗ್ರಹದಲ್ಲಿ ಗೋವಿಂದ ವಲ್ಲಭ ಪಂತರು ಎರಡುಸಲ ಸೆರೆಗೆ ಹೋಗಿರಬೇಕಾಯಿತು.
ಸ್ವಾತಂತ್ರ್ಯ ಪೂರ್ವ ಶಾಸನಸಭೆಯಲ್ಲಿ
[ಬದಲಾಯಿಸಿ]೧೯೩೫ರಲ್ಲಿ ಬ್ರಿಟಿಷರು ಭಾರತದಲ್ಲಿ ರಚಿಸಿದ ಹೊಸ ಕಾನೂ��ಿನ ಪ್ರಕಾರ ಜನರು ಸರ್ಕಾರವನ್ನು ಆರಿಸುವ ವ್ಯವಸ್ಥೆ ಮೂಡಿಬಂದು ಚುನಾವಣೆಗಳು ನಡೆದಾಗ ಪಂತರು ಸಂಯುಕ್ತ ಪ್ರಾಂತದ ಶಾಸನ ಸಭೆಗೆ ಆರಿಸಿ ಬಂದು ಮುಖ್ಯಮಂತ್ರಿಯಾಗಿ ಚುನಾಯಿತರಾದರು. ತಮಗಿದ್ದ ಸೀಮಿತ ಅವಕಾಶದಲ್ಲೆ ಪಂತರು ಬಹಳಷ್ಟು ಸುಧಾರಣೆಗಳನ್ನು ತಂದರು. ‘ಮಾಲ್‌ಗುಜಾರಿ’ ಎಂಬ ಹೆಸರಿನ ಭೂ ಕಂದಾಯವನ್ನು ತೆಗೆದುಹಾಕಿದರು. ಉಳುವ ರೈತನಿಗೇ ಜಮೀನು ಸಿಗಬೇಕು ಎಂದು ಕಾನೂನು ಮಾಡಿದರು. ಜನರ ಭಾಷೆಯಲ್ಲೇ ಆಡಳಿತ ನಡೆಯಬೇಕು ಎಂದು ಹಿಂದಿಯನ್ನು ಜಾರಿಗೆ ತಂದರು.
ರೈತರ ಸಮಸ್ಯೆಗಳನ್ನು ತಿಳಿದುಕೊಂಡು ಅವಕ್ಕೆ ಪರಿಹಾರ ಸೂಚಿಸಲು ೧೯೩೧ರಲ್ಲಿ ಒಂದು ಸಮಿತಿ ಏರ್ಪಾಡಾಗಿತ್ತು. ಅದಕ್ಕೆ ಪಂತರೇ ಅಧ್ಯಕ್ಷರು. ಎಲ್ಲ ವಿಷಯಗಳನ್ನೂ ಚೆನ್ನಾಗಿ ಪರಿಶೀಲಿಸಿ ಒಂದು ವರದಿ ತಯಾರಿಸಿದರು. ಅದಕ್ಕೆ ‘ಪಂತ್ ಸಮಿತಿ ವರದಿ’ ಎಂದೇ ಹೆಸರಾಯಿತು. ಪಂಡಿತ ಪಂತರ ಆಡಳಿತ ಎಷ್ಟು ಬಿಗಿಯಾಗಿತ್ತೆಂದರೆ ಯಾವುದೇ ಮುಲಾಜಿಲ್ಲದೆ ಸರಿಯಾಗಿ ಕೆಲಸ ನಿರ್ವಹಿಸದ ಬ್ರಿಟಿಷ್ ಅಧಿಕಾರಿಗಳನ್ನೇ ವರ್ಗ ಮಾಡಿದ್ದರು. ಆಗಲೇ ಕಾಕೋರಿ ಲೂಟಿಯ ಪ್ರಸಂಗದಲ್ಲಿ ಸೆರೆಸಿಕ್ಕ ದೇಶಭಕ್ತ ವೀರ ತರುಣರನ್ನು ಬಿಟ್ಟು ಬಿಡಬೇಕು ಎಂದು ಪಂತರು ಬ್ರಿಟಿಷ್ ಅಧಿಕಾರಿಗಳ ಮೇಲೆ ಒತ್ತಡ ತಂದು ಯಶಸ್ವಿಯಾದರು.
ಪ್ರಭಾವಿತ ಜೈಲುವಾಸಿ
[ಬದಲಾಯಿಸಿ]ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯಾರನ್ನೂ ಕೇಳದೆಯೆ ಬ್ರಿಟಿಷ್ ಸರ್ಕಾರ ಭಾರತವನ್ನೂ ಯುದ್ಧದಲ್ಲಿ ಸೇರಿಸಿತು. ಅದಕ್ಕೆ ಪ್ರತಿಭಟಿಸಲು ಹಲವು ಪ್ರಾಂತಗಳಲ್ಲಿದ್ದ ಕಾಂಗ್ರೆಸ್ ಸರ್ಕಾರಗಳು ರಾಜೀನಾಮೆ ಕೊಟ್ಟವು. ಅದರಂತೆ ಪಂತರೂ ೧೯೩೯ರಲ್ಲಿ ಮುಖ್ಯಮಂತ್ರಿ ಪದವಿಯನ್ನು ಬಿಟ್ಟು ಬಂದರು. ಮುಂದಿನ ವರ್ಷ ಮತ್ತೆ ಸತ್ಯಾಗ್ರಹ ಆರಂಭವಾಯಿತು. ಪಂತರೂ ಭಾಗವಹಿಸಿ ಸೆರೆಮನೆಗೆ ಹೋದರು. ಒಂದು ವರ್ಷ ಇದ್ದಮೇಲೆ ಹೊರಗೆ ಬಂದರು.
ಯುದ್ಧ ಬಿರುಸಾಗುತ್ತ ಬಂತು. ಭಾರತದ ರಾಜಕೀಯ ಸ್ಥಿತಿ ತುಂಬ ಕಷ್ಟವಾದುದಾಗಿತ್ತು. ೧೯೪೨ರಲ್ಲಿ ಗಾಂಧೀಜಿ ‘‘ಬ್ರಿಟಿಷರೇ ಭಾರತದಿಂದ ಹೊರಡಿ’’ ಎಂಬ ಕರೆಯನ್ನು ಕೊಟ್ಟರು. ಚಳವಳಿ ಶುರು ಆಗುವ ಮೊದಲೇ ದೇಶದ ನಾಯಕರನ್ನೆಲ್ಲ ಸರ್ಕಾರ ಸೆರೆ ಹಿಡಿಯಿತು. ಗೋವಿಂದವಲ್ಲಭ ಪಂತರನ್ನು ಸೆರೆ ಹಿಡಿಯಲು ಪೊಲೀಸರು ಬಂದಾಗ ಬೆಳಗಿನ ಜಾವ 5 ಗಂಟೆ, ಆದರೆ ಪಂತರು ಅವರನ್ನು ಲೆಕ್ಕಿಸಲೇ ಇಲ್ಲ. ‘‘ನಾನು ಇಷ್ಟು ಬೇಗ ಏಳುವುದಿಲ್ಲ’’ ಎಂದುಬಿಟ್ಟರು. ಪೊಲೀಸರೇ ಕಾಯಬೇಕಾಯಿತು ಅವರು ಏಳುವವರೆಗೆ. ಆಮೇಲೆ ಅವರನ್ನು ದಸ್ತಗಿರಿ ಮಾಡಲಾಯಿತು. ಪಟೇಲ್, ನೆಹರು, ಆಜಾದ್, ನರೇಂದ್ರದೇವ್, ಪಟ್ಟಾಭಿ ಸೀತಾರಾಮಯ್ಯ, ಶಂಕರರಾವ್ ದೇವ್, ಹರೇಕೃಷ್ಣ ಮೆಹತಾಬ್, ಪಿ.ಸಿ.ಘೋಷ್, ಅಸಫ್‌ಆಲಿ, ಸೈಯದ್ ಮಹಮೂದ್ ಮೊದಲಾದವರ ಜೊತೆಯಲ್ಲಿ ಪಂತರನ್ನೂ ಅಹಮದ್ ನಗರದ ಕೋಟೆಯ ಜೈಲಿನಲ್ಲಿ ಇಡಲಾಯಿತು.
ಅವರೆಲ್ಲ ದೇಶದ ಹಿರಿಯ ನಾಯಕರು; ತುಂಬ ತಿಳಿದವರು, ಅನುಭವಶಾಲಿಗಳು, ಅದರಲ್ಲೂ ಪಂತರ ಮಾತು ಎಂದರೆ ಎಲ್ಲರಿಗೂ ಇಷ್ಟ. ಸೆರೆಮನೆಯಲ್ಲಿ ಓದು ಬರಹ, ಆಟ, ತೋಟಗಾರಿಕೆ, ಚರ್ಚೆಗಳಲ್ಲಿ ಕಾಲ ಕಳೆಯುತ್ತಿತ್ತು. ಆರೂಕಾಲು ಅಡಿ ಎತ್ತರ, ೨೦೮ಪೌಂಡು ತೂಕ ಇದ್ದರೂ ಪಂಡಿತ ಪಂತರು ಚುರುಕಾಗಿ ಆಟ ಆಡುತ್ತಿದ್ದುದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಜೈಲಿನಲ್ಲಿ ಪಂತರಿಗೆ ಆಗಾಗ ಏನಾದರೂ ಕಾಯಿಲೆ ಬರುತ್ತಿತ್ತು. ಆದರೆ ಅವರಿಗೆ ಅದರ ಲೆಕ್ಕವೇ ಇಲ್ಲ. ದಿನಕ್ಕೆ ೮-೧೦ ಗಂಟೆ ಕಾಲ ಓದು ಬರಹ ಪಂತರ ಕೆಲಸ.
೧೯೪೫ರ ಮಾರ್ಚಿ ವೇಳೆಗೆ ಪಂತರ ಕಾಯಿಲೆ ಹೆಚ್ಚಿತು. ಆ ವೇಳೆಗೆ ಯುದ್ಧವು ನಿಲ್ಲುವ ಹಾಗಿತ್ತು. ಪಂತರಿಗೆ ಶಸ್ತ್ರಚಿಕಿತ್ಸೆ ಆಗಬೇಕಾಗಿದೆ, ಅವರ ಪ್ರಾಂತಕ್ಕೆ ಕಳಿಸಲಾಗುತ್ತದೆ ಎಂದು ಸುದ್ದಿ ಬಂತು. ಅದೇ ತಿಂಗಳು ೨೮ರಂದು ಅವರನ್ನು ಅಹಮದ ನಗರದಿಂದ ನೈನಿತಾಲ್ ಜೈಲಿಗೆ ಸಾಗಿಸಲಾಯಿತು. ಮುಂದೆ ಇಜ್ಜತ್ ನಗರಕ್ಕೆ ಒಯ್ದು ಅಲ್ಲಿ ಬಿಡುಗಡೆ ಮಾಡಲಾಯಿತು.
ಮುಖ್ಯಮಂತ್ರಿಯಾಗಿ
[ಬದಲಾಯಿಸಿ]ಈ ನಡುವೆ ೧೯೪೬ರಲ್ಲಿ ಮತ್ತೆ ಚುನಾವಣೆಗಳು ನಡೆದವು. ಆಗಲೂ ಕಾಂಗ್ರೆಸ್ಸು ಗೆದ್ದುಬಂತು. ಸಂಯುಕ್ತ ಪ್ರಾಂತದಲ್ಲಿ ಪಂತರೇ ನಾಯಕರಾಗಿ ಆರಿಸಿ ಬಂದರು. ಮುಖ್ಯಮಂತ್ರಿ ಆದರು. ಎಂಟು ವರ್ಷ ಆ ಸ್ಥಾನದಲ್ಲಿದ್ದರು. ಆಗ ಜಮೀನುದಾರಿ ಪದ್ಧತಿಯನ್ನು ತೆಗೆದು ಹಾಕುವುದೇ ಮೊದಲಾದ ಸುಧಾರಣೆಗಳನ್ನು ಜಾರಿಗೆ ತಂದರು.
ಗೃಹಮಂತ್ರಿಗಳಾಗಿ
[ಬದಲಾಯಿಸಿ]ಮುಂದೆ ೧೯೫೫ರಲ್ಲಿ ಪಂತರು ಗೃಹಮಂತ್ರಿಗಳಾಗಿ ಕೇಂದ್ರ ಸರ್ಕಾರಕ್ಕೆ ಸೇರಿದರು. ಭಾರತದ ಪ್ರಾಂತಗಳನ್ನು ಭಾಷೆಗಳಿಗೆ ಹೊಂದಿಕೊಳ್ಳುವಂತೆ ಪುನರ್ರಚಿಸಬೇಕು ಎನ್ನುವ ತೀರ್ಮಾನ ಆದದ್ದು ಅವರ ಕಾಲದಲ್ಲೆ. ಅದರಂತೆ ನಮ್ಮ ಕರ್ನಾಟಕ ಆಂಧ್ರ ತಮಿಳುನಾಡು ಕೇರಳ ರಾಜ್ಯಗಳು ರಚಿತವಾದವು. ಪಂತರು ಸಂಸತ್ತಿನಲ್ಲಿ ತುಂಬ ದಕ್ಷರಾದವರಾಗಿದ್ದರು. ಯಾವುದೇ ಸಮಸ್ಯೆ ಬಂದರೂ ಧೈರ್ಯದಿಂದ ಬುದ್ಧಿವಂತಿಕೆಯಿಂದ ಬಿಡಿಸುತ್ತಿದ್ದರು.
ನಿರಂತರ ಸೇವೆ
[ಬದಲಾಯಿಸಿ]ಪಂತರಿಗೆ ಸದಾ ಕೆಲಸವೇ. ವಿಶ್ರಾಂತಿ ಎನ್ನುವುದೇ ಇಲ್ಲ. ದಿನಕ್ಕೆ ೧೮-೨೦ ಗಂಟೆ ದುಡಿಯುವರು. ಆದರೂ ಮುಖದಲ್ಲಿ ಆಯಾಸ ಇರುತ್ತಿರಲಿಲ್ಲ. ಆದರೆ ದೇಹ ಕೇಳಬೇಕಲ್ಲ. ಎಷ್ಟು ಆಯಾಸ ತಡೆದೀತು? ೧೯೫೯ರ ಏಪ್ರಿಲ್‌ನಲ್ಲಿ ಸ್ವಲ್ಪ ಕಾಯಿಲೆ ಕಾಣಿಸಿಕೊಂಡಿತು, (ಆಗ ಅವರಿಗೆ ಎಪ್ಪತ್ತೊಂದನೆಯ ವರ್ಷ.) ‘‘ಸ್ವಲ್ಪ ಕಾಲ ವಿಶ್ರಾಂತಿ ಪಡೆಯಿರಿ’’ ಎಂದು ಎಲ್ಲರೂ ಸಲಹೆ ಮಾಡಿದರು. ಪಂತರು ಒಪ್ಪಲೇ ಇಲ್ಲ. ‘‘ವಿಶ್ರಾಂತಿ ಏಕೆ? ಕೆಲಸವೇ ನಿಜವಾದ ವಿಶ್ರಾಂತಿ. ಕೆಲಸ ಮಾಡದೆ ಇದ್ದರೆ ಮನುಷ್ಯ ಭೂಮಿಗೆ ಭಾರ. ಅವನಿಂದ ಏನು ಪ್ರಯೋಜನ? ಸಾಯುವವರೆಗೂ ಕೆಲಸ ಮಾಡಬೇಕು. ಲೋಕಸಭೆಯಲ್ಲಿ ಮಾತನಾಡುತ್ತ ಇರುವಾಗಲೇ ಸಾಯಬೇಕು ಅಂತ ನನ್ನ ಆಸೆ’’ ಎಂದು ಹೇಳಿದರು.
ಎರಡು ವರ್ಷದ ನಂತರ ಅಂದರೆ ೧೯೬೧ರಲ್ಲಿ ಒಂದು ದಿನ ಲೋಕಸಭೆಯಲ್ಲಿ ಕೆಲಸವನ್ನು ಮುಗಿಸಿ ಮನೆಗೆ ಬಂದರು. ಮನೆಯಲ್ಲಿ ರಾಶಿ ಕೆಲಸ ಕಾದಿತ್ತು. ಅದನ್ನೂ ಮುಗಿಸಿದರು. ಆಗ ಇದ್ದಕ್ಕಿದ್ದ ಹಾಗೆಯೇ ಎಚ್ಚರ ತಪ್ಪಿಹೋಯಿತು. ಹದಿನೈದು ದಿನ ಅದೇ ಸ್ಥಿತಿ. ಮಾರ್ಚ್ ಏಳನೆಯ ತಾರೀಕು ಆ ಮಹಾನಾಯಕ ರಾಜಕಾರಣಿ ಆಡಳಿತಗಾರ ಗೋವಿಂದವಲ್ಲಭ ಪಂತರು ಕೊನೆಯ ಉಸಿರು ಎಳೆದರು. ಆಗ ಅವರಿಗೆ ೭೩ ವಯಸ್ಸು.
ಗೋವಿಂದ ವಲ್ಲಭ ಪಂತರಿಗೆ ದೇಶಸೇವೆಯೆ ಉಸಿರು. ತಮಗೆ ಏನೇ ಸ್ಥಾನ ಸಿಗಲಿ, ಗೌರವ ಸಿಗಲಿ ಅವರಿಗೆ ಏನೂ ಮುಖ್ಯವಲ್ಲ. ೧೯೫೭ರಲ್ಲಿ ‘ಭಾರತ ರತ್ನ’ ಪ್ರಶಸ್ತಿಯನ್ನು ಅವರಿಗೆ ಕೊಟ್ಟು ಗೌರವಿಸಲಾಯಿತು. ಆಗ ಪಂತರು ಹೇಳಿದರು ‘‘ನಾನು ಸ್ವಾಂತ್ರ ಕ್ಕಾಗಿ ನಾಲ್ಕು ಸಲ ಜೈಲಿಗೆ ಹೋಗಿದ್ದೆ. ಅದೇ ನನಗೆ ಸಿಕ್ಕ ನಿಜವಾದ ಪುರಸ್ಕಾರ. ಅದಕ್ಕಿಂತ ಇನ್ನೇನು ಬೇಕು?’’
ಹೀಗೆ ಪಂಡಿತ ಗೋವಿಂದ ವಲ್ಲಭ ಪಂತರು ನಮ್ಮ ದೇಶದ ಬಿಡುಗಡೆಗಾಗಿ ಹೋರಾಡಿದವರು. ಬಿಡುಗಡೆ ಬಂದ ಮೇಲೆ ದೇಶವನ್ನು ಕಟ್ಟುವುದಕ್ಕೆ ತಮ್ಮ ಬದುಕನ್ನೇ ಮುಡಿಪಾಗಿ ಇಟ್ಟು ಸೇವೆ ಮಾಡಿದವರು.
ಮಾಹಿತಿ ಆಧಾರ
[ಬದಲಾಯಿಸಿ]ಗೋವಿಂದ ವಲ್ಲಭ ಪಂತರ ಕುರಿತ ನೀಲತ್ತಹಳ್ಳಿ ಕಸ್ತೂರಿ ಅವರು ಬರೆದಿರುವ ಪುಸ್ತಕ. ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ. ಮುಖ್ಯ ಸಂಪಾದಕರು: ಎಲ್. ಎಸ್. ಶೇಷಗಿರಿ ರಾವ್
ಉಲ್ಲೇಖಗಳು
[ಬದಲಾಯಿಸಿ]
- ಉಲ್ಲೇಖವಿಲ್ಲದ ಲೇಖನಗಳು
- Articles with FAST identifiers
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BNF identifiers
- Articles with BNFdata identifiers
- Articles with GND identifiers
- Articles with ICCU identifiers
- Articles with J9U identifiers
- Articles with LCCN identifiers
- Articles with NSK identifiers
- Articles with NTA identifiers
- Articles with CINII identifiers
- Articles with SNAC-ID identifiers
- Articles with SUDOC identifiers
- ಕೇಂ��್ರ ಗೃಹಮಂತ್ರಿಗಳು
- ಸ್ವಾತಂತ್ಯ್ರ ಹೋರಾಟಗಾರರು
- ಭಾರತ ರತ್ನ ಪುರಸ್ಕೃತರು