ವಿಷಯಕ್ಕೆ ಹೋಗು

ಉಚ್ಚೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಚ್ಚೆಯು (ಮೂತ್ರ) ಮಾನವರಲ್ಲಿ ಮತ್ತು ಅನೇಕ ಪ್ರಾಣಿಗಳಲ್ಲಿ ಚಯಾಪಚಯ ಕ್ರಿಯೆಯ ದ್ರವ ಉಪ-ಉತ್ಪನ್ನವಾಗಿದೆ. ಉಚ್ಚೆಯು ಮೂತ್ರನಾಳದ ಮೂಲಕ ಮೂತ್ರಕೋಶಕ್ಕೆ ಮೂತ್ರಪಿಂಡಗಳಿಂದ ಹರಿಯುತ್ತದೆ. ಮೂತ್ರ ವಿಸರ್ಜನೆಯ ಮೂಲಕ ದೇಹದಿಂದ ಮೂತ್ರವನ್ನು ನಾಳದ ಮೂಲಕ ವಿಸರ್ಜಿಸಲಾಗುತ್ತದೆ.

ಜೀವಕೋಶೀಯ ಚಯಾಪಚಯವು ಸಾರಜನಕದಿಂದ ಸಮೃದ್ಧವಾದ ಅನೇಕ ಉಪ-ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಯೂರಿಯಾ, ಯೂರಿಕ್ ಆಮ್ಲ, ಮತ್ತು ಕ್ರೀಯಾಟ್ನಿನ್‍ನಂತಹ ಈ ಉಪ-ಉತ್ಪನ್ನಗಳನ್ನು ರಕ್ತದಿಂದ ತೆಗೆದು ಹಾಕಬೇಕಾಗುತ್ತದೆ. ಈ ಉಪ-ಉತ್ಪನ್ನಗಳನ್ನು ಮೂತ್ರ ವಿಸರ್ಜನೆಯ ಅವಧಿಯಲ್ಲಿ ದೇಹದಿಂದ ಹೊರಹಾಕಲಾಗುತ್ತದೆ. ಮೂತ್ರ ವಿಸರ್ಜನೆಯು ದೇಹದಿಂದ ನೀರಿನಲ್ಲಿ ಕರಗುವ ರಾಸಾಯನಿಕಗಳನ್ನು ವಿಸರ್ಜಿಸುವ ಪ್ರಧಾನ ವಿಧಾನವಾಗಿದೆ. ಮೂತ್ರ ಪರೀಕ್ಷೆಯು ಸಸ್ತನಿ ದೇಹದ ಸಾರಜನಕಯುಕ್ತ ತ್ಯಾಜ್ಯಗಳನ್ನು ಪತ್ತೆ ಹಚ್ಚಬಲ್ಲದು.

ಮೂತ್ರವು ಭೂಮಿಯ ಸಾರಜನಕ ಚಕ್ರದಲ್ಲಿ ಪಾತ್ರ ಹೊಂದಿದೆ. ಸಂತುಲಿತ ಪರಿಸರ ವ್ಯವಸ್ಥೆಗಳಲ್ಲಿ ಮೂತ್ರವು ಮಣ್ಣನ್ನು ಫಲವತ್ತಾಗಿಸುತ್ತದೆ ಮತ್ತು ಹಾಗಾಗಿ ಸಸ್ಯಗಳು ಬೆಳೆಯುವುದಕ್ಕೆ ನೆರವಾಗುತ್ತದೆ. ಹಾಗಾಗಿ, ಮೂತ್ರವನ್ನು ರಸಗೊಬ್ಬರವಾಗಿ ಬಳಸಬಹುದು. ಕೆಲವು ಪ್ರಾಣಿಗಳು ತಮ್ಮ ಪ್ರದೇಶವನ್ನು ಗುರುತು ಮಾಡಲು ತಮ್ಮ ಮೂತ್ರವನ್ನು ಬಳಸುತ್ತವೆ. ಐತಿಹಾಸಿಕವಾಗಿ, ಮೂತ್ರವನ್ನು ಸಿಡಿಮದ್ದು ಉತ್ಪಾದನೆ, ಸ್ವಚ್ಛಗೊಳಿಸುವಿಕೆ, ಚಕ್ಕಳ ಸಂಸ್ಕರಣ ಮತ್ತು ಬಟ್ಟೆಗಳಿಗೆ ಬಣ್ಣಹಾಕುವಿಕೆಯಲ್ಲಿ ಕೂಡ ಬಳಸಲಾಗಿತ್ತು.

ಮಾನವ ಮೂತ್ರ ಮತ್ತು ಮಲವನ್ನು ಒಟ್ಟಾರೆಯಾಗಿ ಮಾನವ ತ್ಯಾಜ್ಯ ಎಂದು ಸೂಚಿಸಲಾಗುತ್ತದೆ, ಮತ್ತು ಇವನ್ನು ನಿರ್ಮಲೀಕರಣ ವ್ಯವಸ್ಥೆಯಿಂದ ನಿರ್ವಹಿಸಲಾಗುತ್ತದೆ. ಜಾನುವಾರುಗಳ ಜನಸಂಖ್ಯಾ ಸಾಂದ್ರತೆ ಹೆಚ್ಚಿದ್ದರೆ ಜಾನುವಾರುಗಳ ಮೂತ್ರ ಮತ್ತು ಮಲಕ್ಕೂ ಸರಿಯಾದ ನಿರ್ವಹಣೆ ಅಗತ್ಯವಿದೆ.

ಬಹುತೇಕ ಪ್ರಾಣಿಗಳು ಕರಗಬಲ್ಲ ವಿಷಪೂರಿತ ತ್ಯಾಜ್ಯಗಳ ನಿರ್ಮೂಲನೆಗೆ ವಿಸರ್ಜನಾ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಮಾನವರಲ್ಲಿ, ಕರಗಬಲ್ಲ ತ್ಯಾಜ್ಯಗಳನ್ನು ಪ್ರಧಾನವಾಗಿ ಮೂತ್ರ ವ್ಯವಸ್ಥೆಯ ಮೂಲಕ ವಿಸರ್ಜಿಸಲಾಗುತ್ತದೆ. ಸ್ವಲ್ಪ ಮಟ್ಟಿಗೆ ಯೂರಿಯಾದ ರೂಪದಲ್ಲಿ, ಬೆವರುವಿಕೆ ಮೂಲಕವೂ ವಿಸರ್ಜಿಸಲಾಗುತ್ತದೆ.[] ಮೂತ್ರ ವ್ಯವಸ್ಥೆಯು ಮೂತ್ರಪಿಂಡಗಳು, ಮೂತ್ರನಾಳ, ಮೂತ್ರಕೋಶ, ಮತ್ತು ಮೂತ್ರ ವಿಸರ್ಜನಾ ನಾಳವನ್ನು ಒಳಗೊಂಡಿರುತ್ತದೆ. ಈ ವ್ಯವಸ್ಥೆಯು ಸೋಸುವಿಕೆ, ಮರುಹೀರಿಕೆ, ಮತ್ತು ನಾಳೀಯ ಸ್ರವಿಸುವಿಕೆ ಪ್ರಕ್ರಿಯೆಯ ಮೂಲಕ ಮೂತ್ರವನ್ನು ಉತ್ಪಾದಿಸುತ್ತದೆ. ಮೂತ್ರಪಿಂಡಗಳು ರಕ್ತದಿಂದ ಕರಗಬಲ್ಲ ತ್ಯಾಜ್ಯಗಳು, ಜೊತೆಗೆ ಹೆಚ್ಚುವರಿ ನೀರು, ಸಕ್ಕರೆಗಳು, ಮತ್ತು ಅನೇಕ ಇತರ ಸಂಯುಕ್ತಗಳನ್ನು ತೆಗೆಯುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Arthur C. Guyton; John Edward Hall (2006). "25". Textbook of medical physiology (11 ed.). Elsevier Saunders. ISBN 978-0-8089-2317-6. Retrieved 26 September 2011.


"https://kn.wikipedia.org/w/index.php?title=ಉಚ್ಚೆ&oldid=859259" ಇಂದ ಪಡೆಯಲ್ಪಟ್ಟಿದೆ