ವಿಷಯಕ್ಕೆ ಹೋಗು

ತಂಬಾಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಂಬಾಕು : ತಂಬಾಕು ಸಸ್ಯದ ಎಲೆಗಳನ್ನು ಕ್ಯೂರಿಂಗ್ ಮಾಡಿ ತಯಾರಿಸಲಾದ ಒಂದು ಉತ್ಪನ್ನ. ಈ ಸಸ್ಯವು ನೀಕೋಟಿಯಾನಾ ಕುಲ ಮತ್ತು ಸೊಲನೇಸಿಯಿ ಕುಟುಂಬದ ಭಾಗವಾಗಿದೆ. ತಂಬಾಕಿನ ೭೦ಕ್ಕೂ ಹೆಚ್ಚು ಸಸ್ಯಜಾತಿಗಳು ಪರಿಚಿತವಾಗಿವೆಯಾದರೂ, ನೀಕೋಟಿಯಾನಾ ಟಬಕಮ್ ಮುಖ್ಯ ವಾಣಿಜ್ಯ ಬೆಳೆಯಾಗಿದೆ. ಹೆಚ್ಚು ಪ್ರಬಲ ಮತ್ತು ಭಿನ್ನ ಸಸ್ಯಜಾತಿಯಾದ ನೀಕೋಟಿಯಾನಾ ರಸ್ಟಿಕಾ ಕೂಡ ವಿಶ್ವಾದ್ಯಂತ ಬಳಸಲ್ಪಡುತ್ತದೆ. ತಂಬಾಕು ಒಂದು ಉತ್ತೇಜಕವಾದ ನಿಕಟೀನ್ ಕ್ಷಾರಾಭವನ್ನು ಹೊಂದಿರುತ್ತದೆ. ಒಣಗಿದ ತಂಬಾಕು ಎಲೆಗಳನ್ನು ಮುಖ್ಯವಾಗಿ ಸಿಗರೇಟುಗಳು, ಸಿಗಾರ್‍ಗಳು, ಚುಂಗಾಣಿ ತಂಬಾಕು, ಮತ್ತು ಸುಗಂಧಯುಕ್ತ ಶೀಶಾ ತಂಬಾಕಿನಲ್ಲಿ ಧೂಮಪಾನಕ್ಕಾಗಿ ಬಳಸಲಾಗುತ್ತದೆ. ಅದನ್ನು ನಶ್ಯ, ಅಗಿಯುವ ತಂಬಾಕು, ಅದ್ದಿದ ತಂಬಾಕು ಮತ್ತು ಸ್ನೂಸ್‍ನ ರೂಪದಲ್ಲಿ ಸೇವಿಸಬಹುದು. ತಂಬಾಕು ಬಳಕೆ ಅನೇಕ ರೋಗಗಳಿಗೆ ಅಪಾಯಕಾರಿ ವಸ್ತುವಾಗಿದೆ. ವಿಶೇಷವಾಗಿ ಹೃದಯ, ಯಕೃತ್ತು, ಮತ್ತು ಶ್ವಾಸಕೋಶಗಳನ್ನು ಬಾಧಿಸುವ ರೋಗಗಳ ಜೊತೆಗೆ ಅನೇಕ ಕ್ಯಾನ್ಸರ್‍ಗಳಿಗೂ ಕಾರಣವಾಗುತ್ತದೆ.

ತಂಬಾಕು ಹಲ್ಲೆಗಳು, ಒತ್ತಿದ ಬಿಲ್ಲೆಗಳಿಂದ ಸೀಳಿದ್ದು

ಉಗಮ ಮತ್ತು ಇತಿಹಾಸ

[ಬದಲಾಯಿಸಿ]

ಸೊಲನೇಸೀ ಕುಟುಂಬಕ್ಕೆ ಸೇರಿದ ನಿಕೋಶಿಯಾನ ಟಬೇಕಮ್ ಎಂಬ ಶಾಸ್ತ್ರೀಯ ಹೆಸರಿನ ಗಿಡ (ಟಬ್ಯಾಕೊ). ಗಿಡಕ್ಕೂ ಅದರ ಒಣಗಿಸಿದ ಅಥವಾ ಒಣಗಿಸಿ ಹದಗೊಳಿಸಿದ ಎಲೆಗೂ ಈ ಹೆಸರು ಅನ್ವಯವಾಗುವುದು. ಇದರ ಉತ್ತೇಜಕ ಗುಣದಿಂದಾಗಿ ಚಟವುಳ್ಳವರು ಇದರ ಹೊಗೆಯನ್ನು ಅಥವಾ ಪುಡಿಯನ್ನು ಸೇದುವುದುಂಟು. ಕೆಲವರು ಅಡಿಕೆ ಎಲೆಯೊಂದಿಗೆ ತಿನ್ನುವರು. ಬೀಡಿ, ಸಿಗರೇಟು, ಚುಟ್ಟ, ಹುಕ್ಕ ಮತ್ತು ಚಿಲಿಮೆ ಇವು ಹೊಗೆಯನ್ನು ಸೇದು��� ಬಗೆಗಳು.ತಂಬಾಕಿನ ಉಗಮ ಮತ್ತು ಪೂರ್ವೇತಿಹಾಸದ ಬಗ್ಗೆ ಭಿನ್ನಮತಗಳಿದ್ದರೂ ಇದು ಮೂಲತಃ ಅಮೆರಿಕ ಖಂಡದ ದಕ್ಷಿಣ, ಮಧ್ಯ ಪ್ರದೇಶಗಳಲ್ಲಿ ಜನಿಸಿ ಜಗತ್ತಿನಲ್ಲೆಲ್ಲ ಪಸರಿಸಿತೆಂದು ಸಸ್ಯಸಂಶೋಧಕರು ಸಿದ್ಧಪಡಿಸಿರುವರು. ಅಮೆರಿಕದ ಆದಿವಾಸಿಗಳಾದ ರೆಡ್ ಇಂಡಿಯನ್ ಜನ ತಂಬಾಕಿನ ಹೊಗೆಯನ್ನು ಚಿಲಿಮೆಯ ರೂಪದ ಕಚ್ಚಿಗೆಯ ನಳಿಗೆಯಿಂದ ಸೇದಿ ಮೂಗಿನಿಂದ ಹೊಗೆಯನ್ನು ಬಿಡುತ್ತಿದ್ದರೆಂದೂ ಅದನ್ನು ನೋಡಿದ ಪಾಶ್ಚಾತ್ಯ ಪ್ರಯಾಣಿಕರು ಚಿಲಿಮೆಯ ಹೆಸರಾದ ಟೊಬೇಕೊ ಎಂಬುದನ್ನೇ ಸೇದುವ ಎಲೆಗೇ ಅನ್ವಯಿಸಿದರೆಂದೂ ಹೇಳಲಾಗಿದೆ. ಸ್ಪೇನಿನಿಂದ ಮೆಕ್ಸಿಕೊ ದೇಶಕ್ಕೆ ಹೋದ ವೈದ್ಯನೊಬ್ಬ ತಂಬಾಕನ್ನು 1560ರಲ್ಲಿ ಮೊಟ್ಟಮೊದಲು ಯೂರೋಪ್ ಖಂಡಕ್ಕೆ ತಂದನು. ಚೀನ್ ನಿಕೊಟ್ ಎಂಬ ಫ್ರೆಂಚ್ ರಾಯಭಾರಿ ಲಿಸ್ಬನ್ ಪಟ್ಟಣದಲ್ಲಿ ತಂಬಾಕಿನ ಬಗ್ಗೆ ಮಾಹಿತಿಯನ್ನು ಪಡೆದು ಆ ಗಿಡವನ್ನು ಫ್ರೆಂಚ್ ಅರಮನೆಯ ತೋಟದಲ್ಲಿ ಬೆಳೆಸಲಾರಂಭಿಸಿದ. ಆದ್ದರಿಂದ ಈ ಗಿಡದ ಜಾತಿಗೆ ನಿಕೋಶಿಯಾನ ಎಂಬ ಹೆಸರು ಬಂದಿತು.

ತಂಬಾಕನ್ನು 17ನೆಯ ಶತಮಾನದ ಪ್ರಾರಂಭದಲ್ಲಿ ಪೋರ್ಚುಗೀಸರು ಭಾರತಕ್ಕೆ ತಂದರು. ಇತರ ದೇಶಗಳಂತೆ ಭಾರತದಲ್ಲಿ ಕೂಡ ತಂಬಾಕಿನ ಬಗ್ಗೆ ತಿರಸ್ಕಾರವಿದ್ದುದಲ್ಲದೆ ಬಹಿಷ್ಕಾರವನ್ನೂ ಹಾಕಲಾಗಿತ್ತು. ಆದರೂ ದಿನ ಹೋದಂತೆ ಅದು ಜನಪ್ರಿಯವಾಗುತ್ತಾ ಹೋಗಿ ದೇಶದ ತುಂಬ ಪಸರಿಸಿತು. ಮೊದಲು ಒಂದು ಶತಮಾನದ ವರೆಗೆ ಹಿಂದಿನ ಮುಂಬಯಿ ರಾಜ್ಯದ ಮಹಾರಾಷ್ಟ್ರ ಮತ್ತು ಗುಜರಾತ್ ವಿಭಾಗಗಳಲ್ಲಿ ಮಾತ್ರ ಇದರ ಸಾಗುವಳಿಯೂ ವ್ಯಾಪಾರವೂ ನಡೆಯುತ್ತಿದ್ದವು. ಬಳಿಕ ಇತರ ಪ್ರಾಂತ್ಯಗಳಿಗೂ ಇದು ಹಬ್ಬಿತು. ಸಿಗರೇಟುಗಳಲ್ಲಿ ಉಪಯೋಗಿಸುವ ವರ್ಜೀನಿಯ ತಂಬಾಕಿನ ಬೆಳವಣಿಗೆಯನ್ನು ಇಂಡಿಯನ್ ಲೀಫ್ ಡೆವಲೆಪ್‍ಮೆಂಟ್ ಕಂಪನಿಯವರು ಆಂಧ್ರ ಪ್ರದೇಶದಲ್ಲಿ ಸುಮಾರು 35 ವರ್ಷಗಳ ಹಿಂದೆ ಆರಂಭಿಸಿದರು. ಇದು ಈ ಪ್ರಾಂತ್ಯದಲ್ಲೆ ದೊಡ್ಡ ಪ್ರಮಾಣದಲ್ಲಿ ಪ್ರಸಾರ ಹೊಂದಿದೆಯಲ್ಲದೆ ಈಗ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿಯೂ ಹಬ್ಬಿದೆ.

ವರ್ಗೀಕರಣ

[ಬದಲಾಯಿಸಿ]

ವರ್ಗೀಕರಣಕ್ಕೆ ತಳಹದಿಯಾಗಿರುವ ಎಲೆ ಮತ್ತು ಹೂಗಳ ಲಕ್ಷಣಗಳಲ್ಲಿ ಅತಿಶಯ ವ್ಯತ್ಯಾಸವಿರುವುದರಿಂದಲೂ ತಂಬಾಕಿನಲ್ಲಿ ಕಾಡುಜಾತಿಗಳಿಲ್ಲವಾದ್ದರಿಂದಲೂ ವಾಣಿಜ್ಯ ಜಾತಿಗಳನ್ನಷ್ಟೇ ವರ್ಣಿಸುವುದು ಸಾಧ್ಯವಾಗಿದೆ. ಭಾರತದಲ್ಲಿಯ ತಂಬಾಕಿನ ದಂಪತಿಗಳು 1910ರಲ್ಲಿ ಮತ್ತು ಕಾಶೀರಾಮ ಇವರು 1931ರಲ್ಲಿ ವರ್ಣಿಸಿದ್ದಾರೆ. ಇಲ್ಲಿನ ಮುಖ್ಯ ವ್ಯಾಪಾರೀ ಜಾತಿಗಳು ಈ ಕೆಳಗಿನಂತಿವೆ :

  1. ಸಿಗರೇಟ್ ಜಾತಿಗಳು : ಹ್ಯಾರಿಸನ್ ಸ್ಪೆಷಲ್, ಡೆಲ್‍ಕ್ರೆಸ್ಟ್, ಚಾಥ್ಯಾಮ್, ಹ್ವೈಟ್‍ಬರ್ಲಿ ಮತ್ತು ನಾಟು;
  2. ಚಿಲುಮೆಯ ಜಾತಿಗಳು: ನಾಟು (ದೇಶೀ);
  3. ಬೀಡಿಯ ಜಾತಿಗಳು; (i) ನಿಪ್ಪಾಣಿ ವಿಭಾಗ : (ಅ) ಟಬೇಕಮ್-ಸುರ್ತಿ, ಮಿರ್ಜಿ, ಸಾಂಗಲಿ, ಜವಾರಿ, (ಆ) ರಸ್ಟಿಕ_ಪಂಢರಪುರಿ, (ii) ಗುಜರಾತ್ ವಿಭಾಗ : ಶೆಲಿಯು, ಗುಂಡಿಯು, ನೈಜಪುರಿಯು, ಐಲಿಯು, ಮೊವಾಡಿಯು, ಕಾಳಿಪತ್ತಿ.
  4. ಸಿಗಾರ್ ಮತ್ತು ಚಿರೂಟ ಜಾತಿಗಳು : (i) ತಮಿಳುನಾಡು : ವೆಲ್ಲವಾಳೆ, ಕರುವಾಳೆ, ಕರಿಂ ಕಪ್ಪಲ, ಊಸಿಕಪ್ಪಲ; (ii) ಬಂಗಾಳ; ಜಾತಿ, ಭೇಂಗಿ, (iii) ಆಂದ್ರ ಪ್ರದೇಶ : ನಾಟು, ಲಂಕಾ;
  5. ಹುಕ್ಕ ಜಾತಿಗಳು : (ಅ) ಟಬೇಕಮ್-ಆಸಾಮ, ಬಂಗಾಲ: ಜಾತಿ, ಬೇಂಗಿ; ಬಿಹಾರ : ಬೋವರಿ; ಉತ್ತರಪ್ರದೇಶ : ಪೂರ್ಬಿ; ಪಂಜಾಬ್ : ನೋಕಿ; (ಆ) ರಸ್ಟಿಕ-ಕಲಕತ್ತಿಯಾ, ಗೋಬಿ, ಮೋತಿಹಾರಿ;
  6. ತಿನ್ನುವ ಮತ್ತು ಸಸ್ಯದ ಜಾತಿಗಳು : (ಅ) ಟಬೇಕಮ್—ತಮಿಳುನಾಡು : ಪೊನ್ನಕಪ್ಪಲ, ಊಸಿಕಪ್ಪಲ, ವೆಚ್ಚಿಕಪ್ಪಲ, ಜೆರುಮಾಯ್ ಕಪ್ಪಲ; ಬಂಗಾಳ: ಜಾತಿ; ಗುಜರಾತ್ : ಕಾಳೀ ಜೋಪಡಿ, ಜೂಡಿ: ಕರ್ನಾಟಕ; ಪುಚಕ್ಕಡ; (ಆ) ರಸ್ಟಿಕ-ಮೋತಿಹಾರಿ.

ಬೆಳೆಸುವ ವಿಧಾನ

[ಬದಲಾಯಿಸಿ]

ತಂಬಾಕಿನ ಬೀಜಗಳನ್ನು ಮಣ್ಣಿನಲ್ಲಿ ಹರಡಿ, ನೀರು ಹಾಕಲಾಗುತ್ತದೆ. ಅವುಗಳ ಅಂಕುರಣ ಬಿಸಿಲಿನಿಂದ ಕ್ರಿಯಾಶೀಲವಾಗುತ್ತದೆ. ಸಸ್ಯಗಳು ಸ್ವಲ್ಪ ಎತ್ತರವಾದ ನಂತರ, ಅವುಗಳನ್ನು ಹೊಲಗಳಿಗೆ ಕಸಿ ಮಾಡಲಾಗುತ್ತದೆ.[]

ಭಾರತದ ಒಟ್ಟು ಸಾಗುವಳಿ ಕ್ಷೇತ್ರದಲ್ಲಿ ತಂಬಾಕಿನ ವಿಸ್ತೀರ್ಣ ಕೇವಲ 0.3% ಅಂದರೆ 37,81,000 (1959-60) ಹೆಕ್ಟೇರುಗಳು. ತಂಬಾಕಿನ ಬೆಳೆಯಲ್ಲಿ ಆಂಧ್ರಪ್ರದೇಶ ಮೊದಲನೆಯದು (39.6%), ಗುಜರಾತ್ ಎರಡನೆಯದು (17.7%). ಕರ್ನಾಟಕ ಮೂರನೆಯದು (11.0% ಅಂದರೆ 41,700 ಹೆಕ್ಟೇರು). ಇಡೀ ದೇಶದಲ್ಲಿ ತಂಬಾಕಿನ ಉತ್ಪನ್ನ 28,55,12,000 ಕೆ.ಜಿ. ಇದರಲ್ಲಿ ಆಂಧ್ರಪ್ರದೇಶದ್ದು 41.3%. ಕೃಷಿ ಕ್ಷೇತ್ರ ತೀರ ಕಡಿಮೆ ಇದ್ದರೂ ದೇಶದ ಆರ್ಥಿಕ ದೃಷ್ಟಿಯಿಂದ ತಂಬಾಕು ಬಹಳ ಮಹತ್ತ್ವದ ಬೆಳೆ ಆಗಿದೆಯೆಂಬುದು ಈ ಕೆಳಗಿನ ಅಂಶಗಳಿಂದ ತಿಳಿಯುತ್ತದೆ. ತಂಬಾಕಿನ ವ್ಯವಸಾಯದಲ್ಲಿ ತೊಡಗಿದವರ ಒಟ್ಟು ಸಂಖ್ಯೆ 30 ಲಕ್ಷ. ತಂಬಾಕಿನಿಂದ ವಾರ್ಷಿಕ ಉತ್ಪನ್ನ ಸುಮಾರು 50 ಕೋಟಿ ರೂಪಾಯಿಗಳು. ತಂಬಾಕಿನ ಮೇಲಿನ ಕರದಿಂದ ಸರ್ಕಾರಕ್ಕೆ ವಾರ್ಷಿಕ ಉತ್ಪನ್ನ 53.7 ಕೋಟಿ ರೂಪಾಯಿಗಳು.

ಭಾರತದಿಂದ ತಂಬಾಕು 50ಕ್ಕಿಂತ ಹೆಚ್ಚು ದೇಶಗಳಿಗೆ ನಿರ್ಯಾತವಾಗುತ್ತಿದ್ದು ಅದರಲ್ಲಿ ಸಿಗರೇಟಿಗೆ ಉಪಯೋಗಿಸುವ ವರ್ಜೀನಿಯ ತಂಬಾಕಿನ ಪ್ರಮಾಣ 75%-80% ರಷ್ಟು ಇದೆ. ದೊಡ್ಡ ಪ್ರಮಾಣದಲ್ಲಿ ಭಾರತದ ತಂಬಾಕನ್ನು ಖರೀದಿ ಮಾಡುವ ದೇಶಗಳೆಂದರೆ ಗ್ರೇಟ್ ಬ್ರಿಟನ್, ರಷ್ಯ, ಬೆಲ್ಜಿಯಮ್ ಮತ್ತು ನೆದರ್‍ಲೆಂಡ್ಸ್.

ಸಸ್ಯಶಾಸ್ತ್ರೀಯ ವಿವರಣೆ

[ಬದಲಾಯಿಸಿ]

ನಿಕೋಶಿಯಾನ ಜಾತಿಯನ್ನು ಸ್ವೀಡನ್ನಿನ ಸಸ್ಯವಿಜ್ಞಾನಿ ಲಿನೀಯಸ್ 1753ರಲ್ಲಿ ಮೊತ್ತಮೊದಲು ವರ್ಣಿಸಿದ. ಇದರಲ್ಲಿ ಸುಮಾರು 60 ಪ್ರಭೇದಗಳಿವೆಯಾದರೂ ಟಿಬೇಕಮ್ ಮತ್ತು ರಸ್ಟಿಕ ಎಂಬ ಎರಡು ಮಾತ್ರ ಮಾನವನ ಉಪಯೋಗಕ್ಕಾಗಿ ಬೆಳೆಸಲ್ಪಡುತ್ತಿವೆ. ಸಿಲ್ವೆಸ್ಟ್ರಿಸ್ ಮತ್ತು ಏಲೇಟ ಎಂಬವನ್ನು ಚೆಲುವಿನ ಹೂಗಿಡಗಳಾಗಿ ಬೆಳೆಸುವುದುಂಟು. ಟಿಬೇಕಮ್ ಎಂಬುದು ಸಿಲ್ವೆಸ್ಟ್ರಿಸ್ ಮತ್ತು ಟೊಮೆಂಟೋಸಿಫಾರ್ಮಿಸ್ ಎಂಬ ಪ್ರಭೇದಗಳ ನಡುವೆ ಉಂಟಾದ ಸ್ವಭಾವಿಕ ಸಂಕರದಿಂದ ಆರ್ಜಂಟೀನಾದ ಈಶಾನ್ಯ ಭಾಗದಲ್ಲೂ ರಸ್ಟಿಕ ಎಂಬುದು ಅಂಡ್ಯುಲೇಟ ಮತ್ತು ಪೆನಿಕ್ಯುಲೇಟ ಇವುಗಳ ಸಂಕರದಿಂದ ಪೆರು, ಬೊಲೀವಿಯ ಮತ್ತು ಎಕ್ವಡಾರ್‍ಗಳ ಗುಡ್ಡಗಾಡು ಪ್ರದೇಶಗಳಲ್ಲೂ ಉದ್ಭವಿಸಿದವೆಂದು ಸಂಶೋಧನೆಗಳಿಂದ ಗೊತ್ತುಪಡಿಸಲಾಗಿದೆ. ಈ ಎರಡೂ ಪ್ರಭೇದಗಳಲ್ಲಿ 48 ಬಗೆಗಳಿವೆ.

ಟಬೇಕಮ್ ಗಿಡ ಸಾಮಾನ್ಯವಾಗಿ 4-6 ಎತ್ತರ ಬೆಳೆಯುತ್ತದೆ. ಎಲೆಗಳ ಉದ್ದ 2-3; ಆಕಾರ ಲಂಬಗೋಲ ಅಥವಾ ಬರ್ಜಿಯಂತೆ. ರಸ್ಟಿಕ ಪ್ರಭೇದದ ಎತ್ತರ 2-4. ಎಲೆಗಳು 6”-1 ಉದ್ದ ಇವೆ. ಇವುಗಳ ಬಣ್ಣ ಅಚ್ಚ ಹಸಿರು, ಆಕಾರ ಹೃದಯದಂತೆ ಅಥವಾ ಲಂಬಗೋಲದಂತೆ ಎರಡು ಪ್ರಭೇದಗಳಲ್ಲೂ ಹೂಗೊಂಚಲುಗಳು ಸಂಯುಕ್ತ ಮಾದರಿಯವು. ಹೂಗಳು ನಳಿಗೆಯಾಕಾರದವೂ ಅಗಲಕಂಠದವೂ ಆಗಿವೆ. ಬೀಜಗಳು ಬಲು ಸಣ್ಣವು, ಗಿಡವೊಂದರಲ್ಲಿ 1.5-1 ಲಕ್ಷ ಬೀಜಗಳಿರುವುವು. ಅವುಗಳ ಒಟ್ಟು ತೂಕ ಸುಮಾರು 25-30 ಗ್ರಾಂ

ಸಾಗುವಳಿ, ಹವೆ ಮತ್ತು ಮಣ್ಣು

[ಬದಲಾಯಿಸಿ]

ತಂಬಾಕು ಮೂಲತಃ ಉಷ್ಣವಲಯದ್ದು. ಆದ್ದರಿಂದ ಇದು ಉಷ್ಣಹವೆಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದರೂ ಇದನ್ನು ಸಮಶೀತೋಷ್ಣ ಮತ್ತು ಶೀತವಲಯಗಳಲ್ಲಿ ಸಹ ಬೆಳೆಸುತ್ತಾರೆ. ಇದು ಉತ್ತರ ಅಕ್ಷಾಂಶ 600ಯಲ್ಲಿರುವ ಮಧ್ಯ ಸ್ವೀಡನ್ನಿನಿಂದ ದಕ್ಷಿಣದಲ್ಲಿ 400 ಅಕ್ಷಾಂಶದ ನ್ಯೂಜಿóೀಲೇಂಡ್ ವರೆಗೆ ಬೆಳೆಯುತ್ತದೆ. ಟಬೇಕಮ್ ಪ್ರಭೇದ ಜಗತ್ತಿನ ಬಹುಶಃ ಎಲ್ಲ ದೇಶಗಳಲ್ಲಿ ಹಬ್ಬಿದ್ದು ರಸ್ಟಿಕ ಮಾತ್ರ ಏಷ್ಯಮೈನರ್, ರಷ್ಯ, ಭಾರತ ಮತ್ತು ಅನೇಕ ಯೂರೋಪಿಯನ್ ದೇಶಗಳಲ್ಲಿ ಪಸರಿಸಿದೆ.[]

ಭಾರತದಲ್ಲಿ ತಂಬಾಕು ಬೆಳೆಸುವ ಪ್ರದೇಶಗಳ ಉಷ್ಣತೆ ಸುಮಾರು 310-370 ಅ. 380 ಅ. ಗಿಂತ ಹೆಚ್ಚು ಉಷ್ಣತೆಯಿದ್ದರೆ ಇಲ್ಲವೆ ಮಂಜು ಬೀಳುತ್ತಿದ್ದರೆ ಎಲೆಗಳಿಗೆ ಪಟ್ಟು ತಗಲುತ್ತದೆ. ಪೈರು ಪಕ್ವವಾಗುವಾಗ ದೊಡ್ಡ ಮಳೆಯಾದರೆ ಎಲೆಗಳ ಮೇಲಿನ ಮೇಣಗಳೂ ಸರಿಗಳೂ ತೊಳೆದುಹೋಗಿ ಎಲೆಗಳು ಕಾಗದದಂತೆ ತೆಳ್ಳಗಾಗುತ್ತವೆ. ಬಿರುಗಾಳಿಯೂ ಆಲಿಕಲ್ಲು ಮಳೆಯೂ ಹಾನಿಕರವಾದವು. ತಂಬಾಕಿನ ಬೆಳೆವಣಿಗೆಗೆ ಆ��್ರ್ರತೆ ಬಹಳ ಮಹತ್ತ್ವದ್ದು. ಆದ್ರ್ರತೆ ಕಡಿಮೆಯಿದ್ದಾಗ ಬೆಳೆದ ತಂಬಾಕಿನಲ್ಲಿ ನೈಟ್ರೊಜನ್ ಮತ್ತು ನಿಕೊಟೀನ್ ಇವೆರಡೂ ಹೆಚ್ಚಾಗಿರುತ್ತವೆ. ಬೆಳೆಯುವಾಗ ನೀರಿನ ಪೂರೈಕೆ ಬಹಳ ದಿನ ಕಡಿಮೆಯಾದರೆ ಎಲೆಗಳು ದಪ್ಪವೂ ಅಚ್ಚಹಸಿರು ಬಣ್ಣದವೂ ಆಗಿ ಅವುಗಳ ಮೇಲೆ ಬಹಳ ಅಂಚಿನ ಆಚ್ಛಾದನವುಂಟಾಗುತ್ತದೆ. ಆದ್ದರಿಂದ ಅವು ಚೆನ್ನಾಗಿ ಹುದುಗಟ್ಟುವುದಿಲ್ಲ : ಉರಿಯುವುದಿಲ್ಲ ಹಾಗೂ ಅವುಗಳ ಸ್ವಾದ ಮತ್ತು ವಾಸನೆ ಕೆಡುತ್ತವೆ.

ವಿದೇಶಗಳಲ್ಲೆಲ್ಲ ಸಿಗರೇಟ್ ತಂಬಾಕನ್ನು ಬರಿಯ ಮರಳು ಇಲ್ಲವೆ ಮರಳು ಪ್ರಧಾನ ಮಣ್ಣಿನ, ಸಾವಯವ ಪದಾರ್ಥಗಳು ಕಡಿಮೆ ಇರುವ, ಆಮ್ಲೀಯ ಹೊಲಗಳಲ್ಲಿ ಬೆಳೆಸುತ್ತಾರೆ. ಭಾರತದಲ್ಲಿ ಮಾತ್ರ ತಂಬಾಕಿನ ಸಾಗುವಳಿಯನ್ನು ಆಂಧ್ರಪ್ರದೇಶದಲ್ಲಿ ಕ್ಷಾರೀಯ ಮಣ್ಣಿನಲ್ಲಿ ಮಾಡುತ್ತಾರೆ. ಇದರಿಂದಾಗಿ ಫಸಲಾಗಲಿ ಎಲೆಯ ಗುಣವಾಗಲಿ ಉತ್ತಮವಾಗಿರುವುದಿಲ್ಲ. ಕರ್ನಾಟಕದಲ್ಲಿ ಕೆಂಬಣ್ಣದ ಗೋಡುಮಣ್ಣಿನಲ್ಲಿ ಬೆಳೆಯುವ ಸಿಗರೇಟ್ ತಂಬಾಕು ಮೈಕಟ್ಟಿನಲ್ಲಿಯೂ ವಾಸನೆಯಲ್ಲಿಯೂ ಹೆಚ್ಚು ಚೆನ್ನಾಗಿರುತ್ತದೆ. ಚೌಳು ಹೊಲಗಳಲ್ಲೂ ಕ್ಷಾರಯುಕ್ತ ಹೊಲಗಳಲ್ಲೂ ಬೆಳೆದ ತಂಬಾಕಿನ ಬಣ್ಣ ಬಹುಬೇಗ ಕಡಿಮೆಯಾಗುತ್ತದೆ. ಅಲ್ಲದೆ ಅದು ಚೆನ್ನಾಗಿ ಉರಿಯುವುದಿಲ್ಲ.

ತಂಬಾಕಿನ ಪೂರ್ಣ ಬೆಳೆ

[ಬದಲಾಯಿಸಿ]

ಸಿಗಾರುಗಳಲ್ಲಿ ಮೂರು ಬಗೆಯ ತಂಬಾಕು ಇರುತ್ತದೆ. ನಟ್ಟನಡುವೆ ಭರ್ತಿಯ(ಫಿಲರ್) ತಂಬಾಕು ಹಾಕಿ ಅದನ್ನು ಕಟ್ಟುವ ತಂಬಾಕಿನಿಂದ (ಬೈಂಡರ್) ಕಟ್ಟಿ ತಯಾರಿಸಿದ ದಿಂಡನ್ನು ವೇಷ್ಟನ ತಂಬಾಕಿನಿಂದ (ರ್ಯಾಪರ್) ಸುತ್ತುವರು. ಸಿಗಾರಿನ ಉರಿಯುವ ಸಾಮಥ್ರ್ಯ ವೇಷ್ಟನ ತಂಬಾಕನ್ನು ಅವಲಂಬಿಸಿರುವುದರಿಂದ ಅದು ಎಲ್ಲಕ್ಕೂ ಹೆಚ್ಚು ಮಹತ್ತ್ವದ್ದು. ಉತ್ತಮದರ್ಜೆಯ ವೇಷ್ಟನ ತಂಬಾಕನ್ನು ಫ್ಲಾರಿಡ ಮತ್ತು ಸುಮಾತ್ರಗಳಲ್ಲಿ ಗೋಡುಮಣ್ಣಿನ ತಳಪದರು ಇರುವ ಮರಳು ಅಥವಾ ಮರಳು ಹೆಚ್ಚಾಗಿರುವ ಮಣ್ಣುಗಳಲ್ಲಿ ಬೆಳೆಸುತ್ತಾರೆ. ಭಾರತದಲ್ಲಿ ಒಳ್ಳೆಯ ಬಗೆಯ ವೇಷ್ಟನ ತಂಬಾಕನ್ನು ಬೆಳೆಸುವುದಿಲ್ಲ. ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯ ಗೋಡುಮಣ್ಣಿನಲ್ಲಿ ಸಾಧಾರಣ ತರಗತಿಯ ವೇಷ್ಟನ ತಂಬಾಕನ್ನು ಬೆಳೆಸಲಾಗುತ್ತದೆ. ಭರ್ತಿಯ ಮತ್ತು ಕಟ್ಟುವ ತಂಬಾಕನ್ನು ತಮಿಳುನಾಡಿನ ಕೊಯಮತ್ತೂರು, ಮಧುರೈ ಮತ್ತು ತಿರುಚಿನಾಪಳ್ಳಿ ಜಿಲ್ಲೆಗಳ ಕೆಂಬಣ್ಣದ ಕ್ಷಾರೀಯ ಮಣ್ಣುಗಳಲ್ಲಿ ಬೆಳೆಸುತ್ತಾರೆ. ಬೀಡಿ ತಂಬಾಕಿಗೆ ಎಲೆಯಲ್ಲಿ ಮುಖ್ಯವಾಗಿ ಬೇಕಾಗುವ ಕೆಂಪು ಮಣ್ಣು (ಸ್ಪಾಂಗಲ್ಸ್) ಉಂಟಾಗಲಿಕ್ಕೆ ಹಳೆಯ, ಮೆಕ್ಕಲು ಪ್ರಧಾನವಾದ ಗೋಡುಮಣ್ಣು ಬಲು ಒಳ್ಳೆಯದು. ಹುಕ್ಕಾ ಮತ್ತು ತಿನ್ನುವ ತಂಬಾಕುಗಳನ್ನು ಉತ್ತರ ಭಾರತದ ವಿವಿಧ ರೀತಿಯ ಮಣ್ಣುಗಳಲ್ಲಿ ಬೆಳೆಸುತ್ತಾರೆ. ಆದರೆ ಸಾಮಾನ್ಯವಾಗಿ, ಎತ್ತರ ನೆಲದ ಮರಳುಮಿಶ್ರಿತ ಮಣ್ಣು ಟಬೇಕಮ್ ಪ್ರಭೇದಕ್ಕೂ ಕೆಳಗಿನ ಹೊಲಗಳ ಜಿಗಟು ಮಣ್ಣು ರಸ್ಟಿಕ ಪ್ರಭೇದಕ್ಕೂ ಉತ್ತಮ. ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯ ಲೋನಾಮಿಟ್ಟಿಯೆಂಬ ಕ್ಷಾರೀಯ ಮೆಕ್ಕಲುಮಣ್ಣು ಹುಕ್ಕಾ ತಂಬಾಕಿಗೆ ಉತ್ತಮವೆಂದು ಪ್ರಸಿದ್ಧವಾಗಿದೆ. ತಿನ್ನುವ ತಂಬಾಕಿಗೆ ನೈಟ್ರೊಜನ್ ಮತ್ತು ಪೊಟ್ಯಾಷ್ ದೊಡ್ಡ ಪ್ರಮಾಣದಲ್ಲಿ ಬೇಕಾಗುವುದರಿಂದ ಇಂಥ ತಂಬಾಕನ್ನು ಚೌಳು ಭೂಮಿಯಲ್ಲಿ ಮತ್ತು ಕ್ಲೋರೈಡ್ ಒಡಗೂಡಿದ ನೀರುಳ್ಳ ಬಾವಿಗಳ ಸುತ್ತ ಬೆಳೆಸುತ್ತಾರೆ.

ಬೆಳೆಯ ಸರದಿ

[ಬದಲಾಯಿಸಿ]

ತಂಬಾಕನ್ನೇ ವರ್ಷಾನುವರ್ಷ ಬೆಳೆಸುವುದರಿಂದ ಫಸಲಿನ ಗುಣಮಟ್ಟ ಸುಧಾರಿಸುತ್ತ ಹೋಗುತ್ತದೆಂದು ಕಂಡುಬಂದಿರುವುದರಿಂದ ಈ ಪೈರಿಗೆ ಸರದಿಯನ್ನು ಅನುಸರಿಸುವುದಿಲ್ಲ. ಆದರೆ ಪರದೇಶಗಳಲ್ಲಿ ತಂಬಾಕಿನ ಸಾಗುವಳಿಯನ್ನು ವಿಶೇಷತಃ ಮರಳುಮಿಶ್ರಿತ ಮಣ್ಣುಗಳಲ್ಲಿ ಮಾಡುವುದರಿಂದಲೂ ಅಂಥ ಮಣ್ಣುಗಳಲ್ಲಿ ನೆಮಟೋಡ್ ಹುಳದ ಕಾಟ ವಿಪರೀತವಿರುವುದರಿಂದಲೂ ತಂಬಾಕಿನೊಡನೆ ಈ ಹುಳುಗಳು ಹತ್ತದಿರುವ ಪೈರುಗಳನ್ನು ಬೆಳೆಸುವ ಪದ್ಧತಿ ಇದೆ. ತಂಬಾಕು ಬೆಳೆಯುವ ಮಣ್ಣಿನಲ್ಲಿ ಸಾವಯವ ವಸ್ತು ವಿಪುಲವಾಗಿ ಬೇಕಾಗುತ್ತದೆ. ಈ ಪೈರಿಗೆ ಪ್ರಮುಖವಾಗಿ ನೈಟ್ರೋಜನ್ ಮತ್ತು ಪೊಟ್ಯಾಷ್ ಮುಂತಾದ ಪೋಷಕ ವಸ್ತುಗಳು ಅವಶ್ಯಕ. ಆದರೆ ಫಾಸ್ಫಾರಿಕ್ ಆಮ್ಲದ ಮಹತ್ತ್ವ ಕಡಿಮೆ. ಸಿಗರೇಟ್ ತಂಬಾಕಿಗೆ ಹೆಕ್ಟೇರಿಗೆ 22-23 ಕೆ.ಜಿ ನೈಟ್ರೊಜನ್ ಬೇಕಾದರೆ ದೊಡ್ಡ, ಭಾರವಾದ ಎಲೆಯುಳ್ಳ ಬೀಡಿ ತಂಬಾಕಿಗೆ 180 ರಿಂದ 220 ಕೆ.ಜಿ ಬೇಕಾಗುತ್ತದೆ. ಸೇದುವ ತಂಬಾಕಿಗೆ ಪೊಟ್ಯಾಷ್ ಮಹತ್ತ್ವದ್ದು. ಎಲೆಗೆ ಚೆನ್ನಾಗಿ ಉರಿಹತ್ತುವುದೂ ಎಲೆ ಒಂದೇ ಸಮನೆ ಉರಿಯುತ್ತ ಹೋಗುವುದೂ ಎಲೆಯೊಳಗಿನ ಪೊಟ್ಯಾಷ್ ಪರಿಮಾಣವನ್ನು ಅವಲಂಬಿಸಿರುತ್ತದೆ. ಅಲ್ಲದೆ ಪೊಟ್ಯಾಷಿನಿಂದ ಗಿಡಗಳಿಗೆ ರೋಗನಿರೋಧ ಸಾಮಥ್ರ್ಯವೂ ಬರುತ್ತದೆ. ಹೆಕ್ಟೇರಿಗೆ ಸುಮಾರು 56-112 ಕೆ.ಜಿ ಪೊಟ್ಯಾಷ್ ಹಾಕುವುದು ಉತ್ತಮ. ಮಣ್ಣಿನಲ್ಲಿ ಕ್ಲೋರಿನ್ನಿನ ಪರಿಮಾಣ ಹೆಚ್ಚಿದ್ದರೆ ತಂಬಾಕಿನ ಸುಡುವ ಗುಣ ಕೆಡುತ್ತದೆ. ಆದರೆ ಅದರಿಂದ ತಿನ್ನುವ ತಂಬಾಕಿನ ಗುಣ ಸುಧಾರಿಸುತ್ತದೆ. ಮಳೆಗಾಲ ತೀರಿದ ಮೇಲೆ ಬೇಸಾಯ ಮಾಡಲಾಗುವ ತಂಬಾಕಿಗೆ ಗೊಬ್ಬರವನ್ನು 6”-9” ಆಳಕ್ಕೆ ಹಾಕಿದರೆ ಫಸಲು ಹೆಚ್ಚುತ್ತದೆ.

ಸಸಿಗಳನ್ನು ತಯಾರಿಸುವುದು

[ಬದಲಾಯಿಸಿ]

ತಂಬಾಕಿನ ಬೀಜ ಬಹಳ ಸೂಕ್ಷ್ಮ ಗಾತ್ರದ್ದಾಗಿರುವುದರಿಂದಲೂ ಚಿಕ್ಕ ಸಸಿಗಳಿಗೆ ರೋಗಗಳ ಮತ್ತು ಕೀಟಗಳ ಕಾಟ ಬಹಳವಿರುವುದರಿಂದಲೂ ಸಸಿಗಳನ್ನು ನೆಲದಿಂದ 3”-6” ಎತ್ತರದಲ್ಲಿ ಮರಳು ಮಣ್ಣಿನ ಮಡಿಗಳಲ್ಲಿ ಬೆಳೆಸುವರು. ಮಡಿಗಳ ಉದ್ದ ಎಷ್ಟಾದರೂ ಇರಬಹುದು. ಆದರೆ ಕಳೆ ಮತ್ತು ಕೀಟಗಳನ್ನು ಕೈಯಿಂದ ತೆಗೆದುಹಾಕುವ ಅನುಕೂಲತೆಗಾಗಿ ಅವುಗಳ ಅಗಲ 3.1/2ಗಿಂತ ಹೆಚ್ಚು ಇರುವುದಿಲ್ಲ. ಒಂದು ಹೆಕ್ಟೇರು ಮಡಿಗೆ 2.1/4-3.1/2 ಕೆ.ಜಿ ಬೀಜ ಸಾಕಾಗುತ್ತದೆ. ಸಸಿಗಳು 3”-4” ಎತ್ತರಕ್ಕೆ ಬೆಳೆಯುವ ತನಕ ದೊಡ್ಡ ಮಳೆಯ ಪೆಟ್ಟು ಮತ್ತು ಬಿಸಿಲಿನ ತಾಪ ಹತ್ತದಂತೆ ಹೊದಿಕೆಯನ್ನು ಹಾಕುವುದುಂಟು. 7-13 ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುವುವು. ಒಂದು ಹೆಕ್ಟೇರು ಮಡಿಯಿಂದ 100 ಹೆಕ್ಟೇರು ಹೊಲಕ್ಕೆ ಸಾಕಾಗುವಷ್ಟು ಸಸಿಗಳನ್ನು ಪಡೆಯಬಹುದು.

ತಂಬಾಕಿನ ಗಿಡ ಮತ್ತು ಹೂವು

[ಬದಲಾಯಿಸಿ]

ಚೆನ್ನಾಗಿ ಉಳುಮೆ ಮಾಡಿ ಕೊಟ್ಟಿಗೆ ಗೊಬ್ಬರ ಮತ್ತು ಕೃತಕ ಗೊಬ್ಬರ ಹಾಕಿ ತಯಾರಿಸಿದ ಹೊಲದಲ್ಲಿ, ನೀರಾವರಿಯ ಅನುಕೂಲತೆ ನೋಡಿಕೊಂಡು ಸಮತಟ್ಟು ನೆಲದಲ್ಲೊ ದಿಂಡುಸಾಲು ಪದ್ಧತಿಯಿಂದಲೊ ಸಸಿಗಳನ್ನು ನಾಟಿ ಮಾಡುವರು. ಎರಡು ಸಸಿಗಳ ಅಂತರ ಸಿಗರೇಟ್ ತಂಬಾಕಿನಲ್ಲಿ 33”(36” ಇರುತ್ತದೆ. ಆ ಬಳಿಕ, 2-2.1/2 ತಿಂಗಳ ವರೆಗೆ ನೀರು ಕೊಡುವುದು, ಕಳೆ ತೆಗೆಯುವುದು ಕುಂಟೆ ಹೊಡೆಯುವುದು, ರೋಗ ಮತ್ತು ಕೀಟನಿವಾರಕ ದ್ರಾವಣಗಳನ್ನು ಸಿಂಪಡಿಸುವುದು ಮುಂತಾದ ಕ್ರಮಗಳು ನಡೆಯುತ್ತವೆ. ಸಿಗರೇಟ್ ತಂಬಾಕಿನಲ್ಲಿ ಹೂಬಿಡುವ ಸಮಯಕ್ಕೂ ಬೀಡಿ ಸಿಗಾರ್ ಮೊದಲಾದ ದಪ್ಪ ಎಲೆಯ ತಂಬಾಕುಗಳಲ್ಲಿ 10-14 ಎಲೆಗಳು ಮೂಡಿದ ಬಳಿಕವೂ ಚಿವುಟುವ ಕ್ರಮ ಉಂಟು. ಇದರಿಂದ ಎಲೆಗಳನ್ನು ಚೆನ್ನಾಗಿ ಬೆಳೆದು ಫಸಲಿನ ಮೊತ್ತವೂ ಅದರ ಗುಣವೂ ಹೆಚ್ಚುತ್ತವೆ. ತಲೆ ಚಿವುಟಿದ ಕೆಲವು ದಿನಗಳಲ್ಲಿ ಎಲೆಗಳ ಕಂಕುಳಲ್ಲಿ ಹುಟ್ಟುವ ಕವಲುಗಳನ್ನೂ ತೆಗೆಯಬೇಕಾಗುತ್ತದೆ. ಕಂಕುಳುಗಳಲ್ಲಿ ತೆಂಗಿನ ಎಣ್ಣೆ ಹಚ್ಚಿದರೆ ಅಥವಾ ಗಿಡಗಳ ಮೇಲೆ ಮ್ಯಾಲಿಕ್ ಹೈಡ್ರೊಜೈಡ್ ರಾಸಾಯನಿಕವನ್ನು ಸಿಂಪಡಿಸಿದರೆ ಕವಲು ಒಡೆಯುವುದನ್ನು ತಡೆಯಬಹುದು. ಬೀಡಿ ತಂಬಾಕಿನಂಥ ದಪ್ಪ ಎಲೆಯ ತಂಬಾಕಿಗೆ ಹೀಗೆ ಸಿಂಪಡಿಸಬೇಕಾಗಿಲ್ಲ.

ತಂಬಾಕಿನ ಆರೈಕೆ

[ಬದಲಾಯಿಸಿ]

ತಂಬಾಕಿಗೆ ಹಲವು ರೋಗಗಳ ಬಾಧೆ ಉಂಟು. ಇವುಗಳಲ್ಲಿ ಮುಖ್ಯವಾದವೆಂದರೆ :

ಕೊಳೆರೋಗ

[ಬದಲಾಯಿಸಿ]

ಕೊಳೆರೋಗ (ಡ್ಯಾಂಪಿಂಗ್ ಆಫ್), ಚುಕ್ಕೆ ರೋಗ (ಆಂತ್ರಾಕ್ನೋಸ್), ಚಿತ್ರಿರೋಗ (ರೂಟ್ ರಾಟ್), ಕಪ್ಪೆಕಣ್ಣು (ಫ್ರಾಗ್ ಐ ಸ್ಪಾಟ್), ಬೂದಿರೋಗ (ಪೌಡರಿ ಮಿಲ್‍ಡ್ಯೂ), ಶಬಲ ರೋಗ (ಮೊಸೇಯಿಕ್), ಎಲೆಮಡಚುವ ರೋಗ (ಲೀಫ್‍ಕರ್ಲ್), ಬೋಡು (ಓರಬ್ಯಾಂಕೆ) ಮತ್ತು ಬೇರುಗಂಡು (ರೂಟ್‍ನಾಟ್). ಇವುಗಳಲ್ಲಿ ಮೊದಲಿನ ಐದು ರೋಗಗಳು ಬೇರೆ ಬೇರೆ ಶಿಲೀಂಧ್ರಗಳಿಂದ ಉಂಟಾಗುವುವು. ಮೊಸೇಯಿಕ್ ಮತ್ತು ಎಲೆಮಡಚುವ ರೋಗಗಳು ವೈರಸ್ಸುಗಳಿಂದ ಉಂಟಾಗುತ್ತವೆ. ಬೋಡುರೋಗ ಹೂಬಿಡುವ ಪರಾವಲಂಬಿ ಗಿಡದಿಂದಲೂ ಬೇರುಗಂಟು ಪರಾವಲಂಬಿ ಹುಳದಿಂದಲೂ ಉಂಟಾಗುತ್ತದೆ.

ಕೊಳೆರೋಗ ಮತ್ತು ಚುಕ್ಕೆರೋಗ

[ಬದಲಾಯಿಸಿ]

ಇವು ಮಡಿಗಳೊಳಗಿನ ಸಸಿಗಳಿಗೆ ಬರುವಂಥ ರೊಗಗಳು. ಕೊಳೆರೊಗಪೀಡಿತ ಸಸಿಗಳ ಕಾಂಡ ಕೊಳೆತು ಸಸಿಗಳು ಕುಸಿದು ಬೀಳುತ್ತವೆ. ಮೋಡ ಕವಿಯುವುದು ಮತ್ತು ಆದ್ರ್ರಹವೆ ಇವು ಈ ರೋಗಗಳಿವೆ ಅನುಕೂಲ. ಗೋಲಾಕಾರದ ಕಾಗದದದಂತೆ ತೆಳ್ಳಗಿನ ಕೇಂದ್ರಭಾಗವೂ ಎತ್ತರ ಪರಿಘವೂ ಇರುವಂಥ ಕಂದುಬಣ್ಣದ ಚುಕ್ಕೆಗಳು ಚುಕ್ಕೆ ರೋಗದ ಲಕ್ಷಣಗಳು. ಸಸಿಗಳು ಕೆಳಬದಿಯ ಎಲೆಗಲಲ್ಲಿ ಪ್ರಾರಂಭವಾಗಿ ಬೇರೆ ಬೇರೆ ಭಾಗಗಳಿಗೆ ಪಸರಿಸುತ್ತದೆ. ಮಡಿಗಳನ್ನು ನಿರ್ಮಲವಾಗಿ ಇಡುವುದರಿಂದ, ಬೋರ್ಡೋ ಮಿಶ್ರಣ, ಪೆರೆನೋಕ್ಸ್‍ಗಳಂಥ ತಾಮ್ರ ಸಂಯುಕ್ತ ದ್ರಾವಣಗಳನ್ನು ಸಿಂಪಡಿಸುವುದರಿಂದ ಈ ರೋಗಗಳನ್ನು ತಡೆಗಟ್ಬಹುದು.

ಚಿತ್ರಿರೋಗ

[ಬದಲಾಯಿಸಿ]

ಗುಜರಾತಿನಲ್ಲಿ ಬೆಳೆಯುವ ಬೀಡಿ ತಂಬಾಕಿಗೆ ಇದರ ಕಾಟ ಹೆಚ್ಚು. ಹೊಲದಲ್ಲಿ ಸಸಿಗಳನ್ನು ನಾಟಿ ಮಾಡಿದ 6 - 8 ವಾರಗಳಲ್ಲಿ ರೋಗ ಉಂಟಾಗಿ ಗಿಡಗಳು ಕುಸಿದುಬೀಳುತ್ತದೆ. ರೋಗಬಂದ ಗಿಡಗಳನ್ನು ಸಮೂಲ ಸುಡುವುದರಿಂದಲೂ ತಂಬಾಕಿನೊಂದಿಗೆ ಇತರ ಪೈರುಗಳನ್ನು ಬೆಳೆಸುವುದರಿಂದಲೂ ಇದನ್ನು ನಿಯಂತ್ರಿಸಿಬಹುದು.

ಕಪ್ಪೆಕಣ್ಣು

[ಬದಲಾಯಿಸಿ]

ಈ ರೋಗ ಮಡಿಗಳಲ್ಲೂ ಹೊಲಗಳಲ್ಲೂ ಬರುತ್ತದೆ. ಕೆಳಗಿನ ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕಿಗಳಾಗುವುದು. ಇದರ ಪ್ರಧಾನ ಲಕ್ಷಣ. ಸಿಗರೇಟು ತಂಬಾಕಿನಲ್ಲಿ ಶಾಖದಿಂದ ಹದಕೊಡುವಾಗ ಎಲೆಗಳಲ್ಲಿ ಕಂದುಬಣ್ಣದ ಚುಕ್ಕೆಗಳುಂಟಾಗುತ್ತವೆ. ತಾಮ್ರ ಸಂಯುಕ್ತ ದ್ರಾವಣವನ್ನು ಸಿಂಪಡಿಸುವುದರಿಂದ ಈ ರೋಗವನ್ನು ಹತೋಟಿಯಲ್ಲಿಡಬಹುದು.

ಬೂದಿರೋಗ

[ಬದಲಾಯಿಸಿ]

ಎಲೆಗಳು ಬೆಳೆಯುವ ಹೊತ್ತಿಗೆ ಬರುತ್ತದೆ ಹಾಗೂ ಎಲೆಗಳ ಮೇಲೆ ಬೂದು ಹರವದಂತೆ ಕಾಣುತ್ತದೆ. ನೀರು ನಿಲ್ಲುವ ಚೌಳು ಹೊಲಗಳಲ್ಲಿ ಇದರ ಕಾಟ ಬಹಳ. ಸಿಗರೇಟ್ ತಂಬಾಕು ಈ ರೋಗದಿಂದ ಕೆಟ್ಟುಹೋಗುತ್ತದೆ. ಗೊಬ್ಬರ ಕಡಿಮೆ ಹಾಕುವುದು, ಗಿಡಗಳನ್ನು ವಿರಳವಾಗಿ ಹಚ್ಚುವುದು ಮತ್ತು ರೋಗಪೀಡಿತ ಹೊಲಗಳಲ್ಲಿ ಹೆಕ್ಟೇರಿಗೆ 45 - 90 ಕೆ.ಜಿ. ಗಂಧಕದ ಪುಡಿಯನ್ನು ಗಿಡಗಳ ಸಾಲುಗಳ ನಡುವೆ ಹಾಕುವುದು ಮುಮತಾದ ಕ್ರಮಗಳಿಂದ ರೋಗವನ್ನು ನಿವಾರಿಸಬಹುದು.

ಮೋಸೇಯಿಕ್

[ಬದಲಾಯಿಸಿ]

ಈ ರೋಗ ಸಸಿಗಳಲ್ಲೂ ವಯಸ್ಕ ಗಿಡಗಳಲ್ಲೂ ಬರುತ್ತದೆ. ರೋಗಪೀಡಿತ ಎಲೆಗಳ ಮೇಲೆ ಹಳದಿ-ಹಸಿರು ಮಚ್ಚೆಗಳು ಮೂಡುತ್ತವೆ. ರೋಗವು ಸಂಪರ್ಕದಿಂದ ಹಬ್ಬುವುದರಿಂದ ಮಡಿಗಳಲ್ಲೂ ಹೊಲಗಳಲ್ಲೂ ಕೆಲಸ ಮಾಡುವವರು ಕೆಲಸಕ್ಕೆ ತೊಡಗುವ ಮುಂಚೆ ಸಾಬೂನಿನಿಂದ ಕೈತೊಳೆಯುವುದರಿಂದ ರೋಗಪೀಡಿತ ಗಿಡಗಳನ್ನು ಕಿತ್ತು ಸುಡುವುದರಿಂದ ರೋಗವನ್ನು ನಿಯಂತ್ರಿಸಬಹುದು.

ಎಲೆಮಡಚುವ ರೋಗ

[ಬದಲಾಯಿಸಿ]

ಇದರಿಂದ ಎಲೆಗಳು ಮಡಚುತ್ತವೆ. ಬಿಳಿ ನುಡಿ (ಹ್ವೈಟ್ ಫ್ಲೈ) ಎಂಬ ಕೀಟ ರೋಗವನ್ನು ಹರಡುತ್ತವೆ. ಕೀಟ ನಾಶಕ ದ್ರಾವಣ ಸಿಂಪಡಿಸಿವುದು, ರೋಗಪೀಡಿತ, ಗಿಡಗಳನ್ನು ಕಿತ್ತು ಸುಡುವುದು - ಇವು ರೋಗ ನಿಯಂತ್ರಣದ ಕೆಲವು ಉಪಾಯಗಳು.

ಬೋಡು ರೋಗ

[ಬದಲಾಯಿಸಿ]

ಬೋಡು (ಓರಬ್ಯಾಂಕೆ) ಎಂಬ ಸಸ್ಯ ತಂಬಾಕಿನ ಬೇರಿಗೆ ಅಂಟಿಕೊಂಡು ತಂಬಾಕಿನ ಗಿಡ ತಯಾರಿಸಿದ ಆಹಾರವನ್ನು ಹೀರಿಕೊಳ್ಳುತ್ತದೆ. ಪ್ರತಿಸಾರಿ ಬೀಜ ಹಿಡಿಯುವ ಮುಂಚೆ ಬೋಡುಗಿಡಗಳನ್ನು ಕಿತ್ತೊಗೆಯುವುದರಿಂದ ಇದನ್ನು ಹತೋಟಿಯಲ್ಲಿಡಬಹುದು.

ಕೀಟಗಳು

[ಬದಲಾಯಿಸಿ]

ಎಲೆಕತ್ತರಿಸುವ ಹುಳ, ಮಿಡತೆ ಮತ್ತು ಕಾಂಡ ಕೊರೆಯುವ ಹುಳ - ಇವು ಮಡಿಗಳಲ್ಲಿಯ ಸಸಿಗಳಿಗೆ ಹತ್ತುವ ಹುಳಗಳು. ಚಿಪ್ಪಿನಹುಳು, ಜೇನು ಮತ್ತು ಕಂಬಳಿ ಹುಳು - ಇವು ಹೊಲಗಳಲ್ಲಿ ನೆಟ್ಟ ಗಿಡಗಳಿಗೆ ಹತ್ತುತ್ತವೆ. ಚುಟ್ಟದ ಚಿಪ್ಪಿನ ಹುಳ ದಾಸ್ತಾನು ಮಾಡಿದ ತಂಬಾಕಿಗೆ ಹತ್ತುತ್ತದೆ.

ಎಲೆಕತ್ತರಿಸುವ ಹುಳ ಮತ್ತು ಮಿಡತೆಗಳು ತಂಬಾಕಿನ ಒಟ್ಲುಪಾತಿಗಳನ್ನು ತಿಂದು ನಷ್ಟವನ್ನುಂಟುಮಾಡುತ್ತದೆ. ನಿವಾರಣೆಗಾಗಿ ಕೀಟನಾಶಕ ದ್ರಾವಣವನ್ನು ಸಿಂಪಡಿಸಲಾಗುತ್ತದೆ. ಕಾಂಡಕೊರೆಯುವ ಹುಳುವನ್ನು ನಿರ್ಮೂಲನ ಮಾಡಲಿಕ್ಕೆ ಕೀಟ ಹತ್ತಿದ ಗಿಡಗಳನ್ನು ಕಿತ್ತು ಸುಡುವುದುಂಟು. ಚಿಪ್ಪಿನ ಹುಳುಗಳು ನಾಟಿ ಮಾಡಿದ ಗಿಡಗಳು ಕಾಂಡಗಳನ್ನು ಕತ್ತರಿಸುತ್ತವೆ. ಆಳವಾದ ಉಳುಮೆಯಿಂದ ಇವನ್ನು ನಿಯಂತ್ರಿಸಲಾಗುತ್ತದೆ. ಹೇನುಗಳು ಎಳೆಯ ಎಲೆಗಳ ಕೆಳಬಾಗದ ಮೇಲಿದ್ದುಕೊಂಡು ಎಲೆಗಳ ರಸವನ್ನು ಹೀರಿಕೊಂಡು ಅವನ್ನು ಹಾಳುಮಾಡುವುವು. ಇವು ವೈರಸ್ ರೋಗಗಳನ್ನು ಕೂಡ ಹರಡುವುದು. ಎಂಡ್ರಿನ್ ದ್ರಾವಣವನ್ನು ಚಿಮುಕಿಸಿ ಇವನ್ನು ಹತೊಟಿಗೆ ತರಬಹುದು. ಕಂಬಳಿಹುಳಗಳ ಕಾಟ ಗುಜರಾತದ ಬೀಡಿ ತಂಬಾಕಿನ ಮೇಲೆ ಬಹಳ. ಇವು ಎಲೆಗಳನ್ನು ತಿಂದು ನಷ್ಟವುಂಟುಮಾಡುವುವು. ಕಳೆಗಳನ್ನೂ ಬೇಳಿಗಳನ್ನೂ ಸ್ವಚ್ಛಗೊಳಿಸಿ ಕೀಟನಾಶಕ ದ್ರಾವಣವನ್ನು ಸಿಂಪಡಿಸುವುದು. ಮೊಟ್ಟೆಗಳನ್ನೂ ಹುಳೂಗಳನ್ನೂ ಕೈಯಿಂದ ತೆಗೆದು ನಾಶಪಡಿಸುವುದು, ಚಿಟ್ಟಗಳನ್ನು ದೀಪಗಳಿಂದ ಆಕರ್ಷಿಸಿ ಕೊಲ್ಲುವುದು - ಇವು ನಿಯಂತ್ರಣ ವಿಧಾನಗಳು. ದಾಸ್ತಾನುಮಾಡಿದ ತಂಬಾಕಿಗೆ ಹಚ್ಚುವ ಚುಟ್ಟ ಚಿಪ್ಪಿನ ಹುಳುಗಳು ರಂಧ್ರಗಳನ್ನು ಮಾಡಿ ಎಲೆಗಳನ್ನು ಹಾಳುಮಾಡುತ್ತವೆ. ಕೀಟನಾಶಕಗಳನ್ನು ಚಿಮುಕಿಸುವುದರಿಂದಲೂ ವಖಾರಿಗಳಲ್ಲಿ ಅನಿಪಾಷಾಣಗಳ ಹೊಗೆಯಾಡಿಸುವುದರಿಂದಲೂ ಇವನ್ನು ಹತೋಟಿಯಲ್ಲಿಡಲಾಗುತ್ತದೆ.

ತಂಬಾಕು ಕೊಯ್ಲು

[ಬದಲಾಯಿಸಿ]

ಎಲೆಕೊಯ್ಲು

[ಬದಲಾಯಿಸಿ]

ಸಿಗರೇಟ ಮತ್ತು ವೇಷ್ಟನ ತಂಬಾಕು ಗಿಡಗಳಲ್ಲಿ ಪಕ್ವವಾದ ಎಲೆಗಳನ್ನು ಮಾತ್ರವೇ ಕೊಯ್ಯಲಾಗುತ್ತದೆ. ಈ ಪದ್ಧತಿಗೆ ಪ್ರೈಮಿಂಗ್ ಎಂದು ಹೆಸರು. ಎಲೆಗಳು ಬಲಿತು ಹಳದಿ ಛಾಯೆಯನ್ನು ತಳೆದೊಡನೆ ಪ್ರೈಮಿಂಗ್ ಆರಂಭವಾಗುತ್ತದೆ. ಬಳಿಕ ವಾರಕ್ಕೆ ಒಂದು ಸಲದಂತೆ 5 - 6 ಸಲ ಕೊಯ್ದು ಎಲೆಗಳನ್ನು ಪಡೆಯಲಾಗುವುದು. ತರುವಾಯ ಎಲೆಗಳನ್ನು ನೆರಳಿನಲ್ಲಿ ಹರಡಿ, ಬಾಡಿಸಿ, ಉದ್ದನೆಯ ಸುತ್ತಲಿದಾರಗಳಿಗೆ ಕಟ್ಟಿ ಹದಗೊಳಿಸಲು ಒಯ್ಯಲಾಗುತ್ತದೆ. ಚುಟ್ಟ ಮತ್ತು ಹುಕ್ಕ ತಂಬಾಕು ಗಿಡಗಳಲ್ಲಿ ಎಲೆಗಳ ತುದಿ ಮತ್ತು ಅಂಚುಗಳು ಹಳದಿ ಬಣ್ಣಕ್ಕೆ ತಿರುಗಿ ಎಲೆಗಳು ನಿರಿಗೆಗಟ್ಟಿದಾಗ ಕೊಯ್ಯಲು ತೊಡಗುತ್ತಾರೆ. ಬೀಡಿ ತಂಬಾಕಿನ ಎಲೆಗಳನ್ನಾದರೂ ಅವುಗಳ ಮೇಲೆ ಕೆಂಪು ಕಣ್ಣುಗಳು (ಸ್ಟ್ಯಾಂಗಲ್ಸ್) ಮೂಡಿದಾಗ ಕೊಯ್ಯಲು ಆರಂಭಿಸುವರು

ಎಲೆಗಳನ್ನು ಹದಗೊಳಿಸುವುದು

[ಬದಲಾಯಿಸಿ]

ತಂಬಾಕಿನ ಎಲೆಗಳನ್ನು ಹಸಿಯಾಗಿಯೆ ಆಗಲಿ, ಕೇವಲ ಒಣಗಿಸಿಯಾಗಲಿ, ಉಪಯೋಗಿಸಲಾಗುವುದಿಲ್ಲ. ಅವನ್ನು ಸೂಕ್ತ ರೀತಿಯಲ್ಲಿ ಹದಗೊಳಿಸಬೇಕು. ಹದಗೊಳಿಸಿಕೆಯ ಪ್ರಕ್ರಿಯೆಯಲ್ಲಿ ಎಲೆಗಳು ಕೆಲವು ರಾಸಾಯನಿಕ ಕ್ರಿಯೆಗಳಿಗೆ ಒಳಗಾಗುವುವು. ತಂಬಾಕಿನ ಬಗೆಯೂ ಗುಣಮಟ್ಟವೂ ಬೆಲೆಯೂ ಹದಗೊಳಿಸಿಕೆಯನ್ನು ಅವಲಂಬಿಸಿವೆಯಾದ್ದರಿಂದ ಈ ಪ್ರಕ್ರಿಯೆ ಬಲು ಮಹತ್ತ್ವದ್ದು. ಹದಗೊಳಿಸಿಕೆಯ ವಿದಾನಗಳು ಪ್ರಧಾನವಾಗಿ ನಾಲ್ಕು ತರದವು: 1 ಶಾಖದಿಂದ ಹದಕೊಡುವುದು, 2 ಹವೆಯಲ್ಲಿ ಹದಕೊಡುವುದು, 3 ಬೆಂಕಿಯಿಂದ ಹದಕೊಡುವುದು, 4 ಬಿಸಿಲಿನಲ್ಲಿ ಹದಕೊಡುವುದು.

ಶಾಖದಿಂದ ಹದಕೊಡುವುದು

[ಬದಲಾಯಿಸಿ]

ಸಿಗರೇಟು ತಯಾರಿಕೆಗೆ ಬಳಸುವ ವರ್ಜಿನಿಯ ತಂಬಾಕಿಗೆ ಮಾತ್ರ ಈ ವಿಧಾನವನ್ನು ಅನುಸರಿಸುವರು. ಕೊಯ್ಲು ಮಾಡಿದ ಎಲೆಗಳನ್ನು ಕೋಲುಗಳ ಮೇಲೆ ಹೇರಿ ವಿಶೇಷ ರೀತಿಯಲ್ಲಿ ಕಟ್ಟಿದ ಕೊಠಡಿಗಳಲ್ಲಿಟ್ಟು, ಕಬ್ಬಿಣದ ಕೊಳವೆಗಳ ಮೂಲಕ ಬಿಸಿ ಗಾಳಿಯನ್ನು ಹಾಯಿಸಿ 96 - 108 ಗಂಟೆಗಳ ಕಾಲ ಹದಗೊಳಿಸುವರು. ಇದರಲ್ಲಿ ನಾಲ್ಕು ಹಂತಗಳುಂಟು: (i) ಎಲೆಗಳು ನಿಂಬೆಹಳದಿ ಬಣ್ಣವನ್ನು ತಳೆಯುವಂತೆ ಮಾಡುವುದು - ಕೊಠಡಿಯಲ್ಲಿ ಎಲೆಗಳನ್ನು ಸಂಗ್ರಹಿಸಿಟ್ಟ ಅನಂತರ, ಬಾಗಿಲು ಮುಚ್ಚಿ 24 ರಿಂದ 40 ಗಂಟೆಗಳಲ್ಲಿ ಒಳಗಿನ ಉಷ್ಣತೆಯನ್ನು ಬಹು ಮೆಲ್ಲನೆ 1050 ಈ. ತನಕ ಏರಿಸುವುದು. ಈ ಸಮಯದಲ್ಲಿ ಆದ್ರ್ರತೆ ಸುಮಾರು 85% ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ಕ್ರಮದಿಂದ ಎಲೆಗಳೊಳಗಿನ ಪಿಷ್ಟಪದಾರ್ಥಗಳು ಸಕ್ಕರೆಗಳಾಗಿ ಪರಿವರ್ತನೆಯಾಗುವುವು. (ii) ಹಳದೀ ಬಣ್ಣವನ್ನು ಹಿಡಿದಿಡುವುದು: ಬಹುಪಾಲು ಈ ಕ್ರಮದಿಂದ ಎಲೆಗಳು ಹಳದಿ ಬಣ್ಣವನ್ನು ತಳೆದು ಬಳಿಕ ಸುಮಾರು 5 - 10 ಗಂಟೆಗಳಲ್ಲಿ ಉಷ್ಣತೆಯನ್ನು 1050 - 1200 ಈ. ವರೆಗೆ ಏರಿಸಿ ಬಣ್ಣವನ್ನು ಹಿಡಿದಿಡುವುದು. ಉಷ್ಣತೆಯನ್ನು ಮೆಲ್ಲನೆ ಹೆಚ್ಚಿಸುತ್ತ ಹೋದಂತೆ ಆದ್ರ್ರತೆಯನ್ನು ತಗ್ಗಿಸಲಾಗುತ್ತದೆ. ಇಲ್ಲವಾದರೆ ಎಲೆಗಳು ಕಂದುಬಣ್ಣದವಾಗುತ್ತದೆ. (iii) ಎಲೆಗಳನ್ನು ಒಣಗಿಸುವುದು: ಇದಕ್ಕೆ 20 - 27 ಗಂಟೆಗಳಲ್ಲಿ ಉಷ್ನತೆಯನ್ನು 1200 - 1450 ಈ. ವರೆಗೆ ಹೆಚ್ಚಿಸಲಾಗುವುದು. (iv) ಎಲೆಗಳ ನಡುನರಗಳನ್ನು ಒಣಗಿಸುವುದು : 16 - 27 ಗಂಟೆಗಳಲ್ಲಿ 1450 ಈ ನಿಂದ 1300 ಈ ವರೆಗೆ ಏರಿಸಲಾಗುವುದು. ಅನಂತರ ನಸುಕು ಮುಂಜಾನೆ ಎಲೆಗಳು ಮಿದುವಾಗಿಯೇ ಇರುವಾಗ ಅವನ್ನು ಕೊಠಡಿಯಿಂದ ಹೊರ ಹಸಿರು ಬಾಗವನ್ನು ಅರಿಸಿನ ಬಣ್ಣದವಾಗುತ್ತದೆ. ಬಳಿಕ ಎಲೆಗಳನ್ನು ಬಣ್ಣ ಮತ್ತು ಕುಂದಿಲ್ಲದಿರುವಿಕೆ _ ಇವುಗಳ ಆಧಾರದ ಮೇಲೆ ಬೇರೆಬೇರೆ ದರ್ಜೆಗಳಾಗಿ ವಿಂಗಡಿಸಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ.

2 ಹವೆಯಲ್ಲಿ ಹದಗೊಳಿಸುವುದು

[ಬದಲಾಯಿಸಿ]

ಈ ವಿಧಾನದಲ್ಲಿ ಎರಡು ಹಂತಗಳಿವೆ. ಮೊದಲಿನ ಹಂತದಲ್ಲಿ ಎಲೆಗಳು ಸಜೀವವಿದ್ದು ಅದರ ಅಂತ್ಯದಲ್ಲಿ ಎಲೆಗಳಿಗೆ

  1. ತಂಬಾಕಿನ ಎಲೆಗಳು ಹಳದಿ ಬಣ್ಣ ಬರುತ್ತದೆ. ಎರಡನೆಯ ಹಂತದಲ್ಲಿ ಎಲೆಗಳು ಸತ್ತು ಅವು ಕಂದು ಬಣ್ಣದವಾಗುತ್ತವೆ. ಒಳ್ಳೆಯ ಕಂದು ಬಣ್ಣ ಬರುವುದಕ್ಕೆ ಸಾಕಷ್ಟು ಆದ್ರ್ರತೆಯೂ ಆಕ್ಷಿಜನ್ನಿನ ಪೂರೈಕೆಯೂ ಇರಬೇಕಾಗುತ್ತದೆ. ಈ ಹಂತದಲ್ಲಿ ಎಲೆಗಳು ಹುದುಗಟ್ಟಿ ಅವುಗಳ ನಿಕೋಟಿನ್ ಪರಿಮಾಣ ಕಡಿಮೆಯಾಗುತ್ತದೆ. ಪಶ್ಚಿಮ ಬಂಗಾಳದ ವೇಷ್ಟನ ತಂಬಾಕಿನಲ್ಲಿ ಈ ಕ್ರಮ ಉಂಟು. ಪ್ರೈಮಿಂಗ್ ಮಾಡಿದ ಎಲೆಗಳನ್ನು ಸುತ್ತಲಿದಾರದಿಂದ ಕಟ್ಟಿ ವಿಶಿಸ್ಟ ಕೊಠಡಿಯಲ್ಲಿ ಬಿದಿರಿನ ಮೇಲೆ ಹೇರಿ ಹದಮಾಡುತ್ತಾರೆ. ಈ ವೇಳೆಯಲ್ಲಿ 70% - 80% ಆದ್ರ್ರತೆ ಇರುವಂತೆ ನೋಡಿಕೊಳ್ಳಲಾಗುವುದು. ಆಮೇಲೆ ಸಿಗರೇಟ್ ತಂಬಾಕಿನಂತೆಯೇ ರಾಶಿ ಹಾಕಿ ಹುದುಗೊಳಿಸುವ ಕ್ರಮವನ್ನು ಅನುಸರಿಸಲಾಗುತ್ತದೆ. ಆಂದ್ರ ಪ್ರದೇಶದ ಲಂಕಾ ತಂಬಾಕನ್ನು ಕೂಡ ಹವೆಯಲ್ಲಿ ಹದಗೊಳಿಸುವುದುಂಟು. ಈ ತಂಬಾಕಿನ ಎಲೆಗಳನ್ನು ಕಾಂಡದ ಸಮೇತ ಕೊಯ್ಯುವರು. ಹದಗೊಳಿಸುವ ಕಾರ್ಯ 2 - 2 1/2 ತಿಂಗಳವರೆಗೆ ನಡೆದ ಬಳಿಕ ಎಲೆಗಳು ಹಳದಿ ಮಿಶ್ರಿತ ಕಂದು ಬಣ್ಣದವಾಗುತ್ತದೆ ಮತ್ತು ಅವಕ್ಕೆ ಸೇರಿದಂತಿರುವ ಕಾಂಡದ ತುಂಡುಗಳು ಚೆನ್ನಾಗಿ ಒಣಗುತ್ತವೆ.
  2. 3 ಬೆಂಕಿಯಿಂದ ಹದಗೊಳಿಸುವುದು : ಈ ವಿಧಾನವನ್ನು ಪ್ರಮುಖ ವಾಗಿ ಜಾಫ್ನಾ ಜಾತಿಯ ಮತ್ತು ತಮಿಳುನಾಡಿನಲ್ಲಿ ತಿನ್ನುವ ತಂಬಾಕನ್ನು ತಯಾರಿಸುವುದರಲ್ಲಿ ಅನುಸರಿಸಲಾಗುತ್ತದೆ. ಕೊಯ್ದ ಗಿಡಗಳ ಗೊಂಚಲುಗಳನ್ನು ಹದಕೊಡುವ ಕೊಠಡಿಯಲ್ಲಿ ಪೇರಿಸಿ, ತೆಂಗಿನಕಾಯಿಯ ಸಿಪ್ಪೆ, ಒಣಗರಿ ಮುಂತಾದವನ್ನು ಸಾವಕಾಶವಾಗಿ ಸುಟ್ಟು ತಂಬಾಕಿ ಸುಮಾರು 12 ಗಂಟೆಗಳ ವರೆಗೆ ಹೊಗೆ ಕೊಡುವರು. ಬಳಿಕ, ಅದನ್ನು ಹೊರತೆಗದು 3 ದಿವಸ ರಾಶಿಹಾಕಿಡುವರು. ಆಮೇಲೆ ಪುನಃ ಹೊಗೆಕೊಡುವರು. ಹೊಗೆಯೊಳಗಿನ ಕ್ರಿಯೋಸೋಟ್ ಸತ್ತ್ವ ತಂಬಾಕಿನಲ್ಲಿ ಚೆನ್ನಾಗಿ ಇಂಗಿ ಅದಕ್ಕೆ ಸಮರ್ಪಕ ರುಚಿ ಬರುವ ತನಕ ಇವೆರಡು ಕಾರ್ಯಗಳು ಒಂದಾದ ಮೇಲೊಂದರಂತೆ ನಡೆಯುತ್ತವೆ. ಅನಂತರ 3 - 4 ವಾರಗಳ ತನಕ ರಾಶಿಹಾಕಿ ಹುದುಗೊಳಿಸುವರು. ಜಾಫ್ನಾ ತಂಬಾಕನ್ನು ಆಮೇಲೆ ಸಮುದ್ರದ ನೀರು ನಿಂತ ತಗ್ಗುಗಳಿಂದ ತಂದ ಉಪ್ಪುನೀರಲ್ಲಿ ಅಥವಾ ಬೆಲ್ಲದ ನೀರಲ್ಲಿ ನೆನೆಯಿಸಿ ಅದಕ್ಕೆ ಹೆಚ್ಚಿನ ರುಚಿ ಕೊಡುವರು.
  3. 4 ಬಿಸಿಲಲ್ಲಿ ಹದಗೊಳಿಸುವಿಕೆ: ತಮಿಳುನಾಡು ಸಿಗಾರ್ ಮತ್ತು ತಿನ್ನುವ ತಂಬಾಕುಗಳ ಎಲೆಗಳನ್ನು ಹೊಲದಿಂದ ಕೊಯ್ದು ತಂದ ಬಳಿಕ 15 - 20 ದಿವಸ ಕಟ್ಟಿಗೆಯ ಚೌಕಟ್ಟುಗಳ ಮೇಲೆ ತೂಗಿ ಒಣಗಿಸುತ್ತಾರೆ. ಆಂಧ್ರಪ್ರದೇಶದಲ್ಲಿ ನಾಟು ತಂಬಾಕಿನ ಎಲೆಗಳನ್ನು ಕಾಂಡದ ಸಣ್ಣ ತುಂಡಿನೊಡನೆ ಕೊಯ್ದು ಆಧಾರ ಕಟ್ಟುಗಳ ಮೇಲೆ ಇಟ್ಟು ಒಣಗಿಸುತ್ತಾರೆ. ಕರ್ನಾಟಕದ (ನಿಪ್ಪಾಣಿಯ) ಬೀಡಿ ತಂಬಾಕು, ಬಿಹಾರದ ಹುಕ್ಕ ಮತ್ತು ತಿನ್ನುವ ತಂಬಾಕು, ಉತ್ತರಪ್ರದೇಶ ಮತ್ತು ಪಂಜಾಬಿದ ಹುಕ್ಕ ತಂಬಾಕು - ಇವುಗಳಲ್ಲಿ ಇಡೀ ಗಿಡಗಳನ್ನು ನೆಲದಮೇಲೆ ಹರಡಿ ಬಿಸಿಲಿನಲ್ಲಿ ಒಣಗಿಸುವರು. ಉತ್ತರ ಪ್ರದೇಶದಲ್ಲಿ ತಿನ್ನುವ ತಂಬಾಕನ್ನು ಪಶ್ಚಿಮ ಬಂಗಾಲದ ಹುಕ್ಕಾ ತಂಬಾಕನ್ನೂ ಇದೇ ರೀತಿ ನೆಲದ ಮೇಲೆ ಹರಿವಿ ಒಣಗಿಸುವರು.

ತಂಬಾಕಿನಲ್ಲಿರುವ ರಾಸಾಯನಿಕಗಳು

[ಬದಲಾಯಿಸಿ]
  1. ನಿಕೊಟೀನ್: ಇದು ಟಬೇಕಮ್ ಮತ್ತು ರಸ್ಪಿಕಗಳೆರಡರಲ್ಲೂ ಇರುವ ಉತ್ತೇಜಕ ರಾಸಾಯನಿಕ. ಮ್ಯಾಲಿಕ್, ಸಿಟ್ರಿಕ್ ಇತ್ಯಾದಿ ಆಮ್ಲಗಳೊಂದಿಗೆ ಇದು ಸೇರಿಕೊಂಡಿದೆ. ತಂಬಾಕಿನ ಜಾತಿ, ಬೆಳೆಯುವ ಪ್ರದೇಶದ ಹವೆ ಮತ್ತು ಕೃಷಿ ಹಾಗೂ ಹದಗೊಳಿಸುವ ಮತ್ತು ಹುದುಗೊಳಿಸುವ ರೀತಿ ಇವುಗಳನ್ನು ಅವಲಂಬಿಸಿ ನಿಕೊಟೀನ್ ಮೊತ್ತ ವ್ಯತ್ಯಾಸವಾಗುತ್ತದೆ. ಆಲ್ಕಲಾಯ್ಡ್ಸ್ ಕಡಿಮೆ ಇರುವ (ಮೇರಿಲ್ಯಾಂಡ್ ಮುಂತಾದ ಕೆಲವು ಜಾತಿಗಳಲ್ಲಿ) ನಾರನಿ, ಕೊಟೀನ್ ಎಂಬ ರಾಸಾಯನಿಕ ನಿಕೊಟೀನಿಗಿಂತ ಹೆಚ್ಚು ಇರುತ್ತದೆ. ಬಲಿತ ಬೀಜಗಳಲ್ಲಿ ನಿಕೊಟೀನ್ ಇರುವುದಿಲ್ಲ. ಆದರೆ ಬೀಜ ಮೊಳೆತೊಡನೆ ಇದು ಉತ್ಪತ್ತಿಯಾಗತೊಡಗುತ್ತದೆ. ಸಾಮಾನ್ಯವಾಗಿ ಇದು ಬೇರುಗಳಲ್ಲಿ ಉತ್ಪತ್ತಿಯಾಗಿ ಎಲೆಗಳಲ್ಲಿ ಸಂಚಿತವಾಗುತ್ತದೆ. ಗಿಡದ ಯಾವುದೊಂದು ಭಾಗದ ಪೋಷಣೆಯಲ್ಲಿ ನಿಕೊಟೀನ್ ಅವಶ್ಯಕವೇ ಎಂಬುದು ಇನ್ನೂ ಅವಗತವಿಲ್ಲ. ಭಾರತದಲ್ಲಿನ ಬೇರೆಬೇರೆ ತಂಬಾಕುಗಳಲ್ಲಿ ನಿಕೊಟೀನಿನ ಪ್ರಮಾಣ ಈ ಕೆಳಗಿನಂತಿದೆ:

ಹುಕ್ಕಾ ತಂಬಾಕು (ಟುಬೇಕಮ್) - 0.5% ರಿಂದ 1.5% ಹುಕ್ಕಾ ತಂಬಾಕು (ರಸ್ಪಿಕ) - 2% ರಿಂದ 3.5% ನಸ್ಯದ ತಂಬಾಕು - 3.2% ರಿಂದ 4.8% ಶುದ್ಧ ನಿಕೋಟೀನು ಬಣ್ಣವಿಲ್ಲದ ದ್ರಾವಣ.

ನಿಕೋಟೀನ್ ನರಗಳಿಗೆ ಉತ್ತೇಜನಕಾರ��. ಇದನ್ನು ಸೇವಿಸುವುದರಿಂದ ಕರುಳು ಆಕುಂಚಿಸಿ ಹೆಚ್ಚು ರಾಸಾಯನಿಕಗಳನ್ನು ಉತ್ಪಾದಿಸುತ್ತದೆ. ರಕ್ತನಳಿಕೆಗಳೂ ಆಕುಂಚನಗೊಳ್ಳುವುದರಿಂದ ರಕ್ತಾಭಿಸರಣ ಹೆಚ್ಚು ಜೋರಿನಿಂದ ನಡೆಯುತ್ತದೆ.

ತಂಬಾಕನ್ನು ಸುಟ್ಟರೆ ಅದರೊಳಗಿನ ಘನಪದಾರ್ಥಗಳ 15% - 20% ತೂಕದಷ್ಟು ಬೂದಿ ಉಂಟಾಗುತ್ತದೆ. ಶಾಖದಿಂದ ಹದಕೊಟ್ಟ ತಂಬಾಕಿನಲ್ಲಿ ಸಕ್ಕರೆಗಳ ಪ್ರಮಾಣ 20% ಕ್ಕೂ ಹೆಚ್ಚು ಇರುತ್ತದೆ. ಸಿಗಾರಿನ ತಂಬಾಕಿನಲ್ಲಿ ನೈಟ್ರೋಜನ್ ಬಹಳ ಹೆಚ್ಚು ಇದ್ದು ಪಿಷ್ಟಪದಾರ್ಥಗಲೂ ಸಕ್ಕರೆಗಳೂ ಬಲು ಕಡಿಮೆ ಇರುತ್ತವೆ. ಬೀಡಿ ತಂಬಾಕಿನ ಕೆಂಪು ಕಣ್ಣುಗಳಲ್ಲಿ ಎಲೆಯ ಇತರ ಭಾಗಕ್ಕಿಂತ ಹೆಚ್ಚು ನೈಟ್ರೋಜನ್, ನಿಕೊಟೀನ್ ಮತ್ತು ಮೇಣಗಳೂ ಸರಿಗಳೂ ಇದ್ದು ಸಕ್ಕರೆ, ಬೂದಿಯಾಗುವ ಪದಾರ್ಥ, ಕ್ಯಾಲ್ಸಿಯಮ್, ಮೆಗ್ನಿಸಿಯಮ್, ಮತ್ತು ಕ್ಲೋರೈಡ್ ಕಡಿಮೆ ಇರುತ್ತದೆ.

ತಂಬಾಕಿನ ಎಗ್ಮಾರ್ಕ್ ಗ್ರೇಡಿಂಗ್ ನಿಯಮಗಳ ಅನುಸಾರ ಬೇರೆ ಬೇರೆ ತಂಬಾಕುಗಳಲ್ಲಿ ಈ ಕೆಳಗಿನಂತೆ ದರ್ಜೆಗಳು ಉಂಟು: ತಂಬಾಕಿನ ಬಗೆ ದರ್ಜೆಗಳ ಸಂಖ್ಯೆ

  1. ಶಾಖದಿಂದ ಹದಗೊಳಿಸಿದ ವರ್ಜೀನಿಯ ... 20
  2. ತುದಿಯ ಎಲೆಗಳು ... 2
  3. ಬಿಸಿಲಲ್ಲಿ ಹದಗೊಳಿಸಿದ ವರ್ಜೀನಿಯ ... 5
  4. ಬಿಸಿಲಲ್ಲಿ ಹದಗೊಳಿಸಿದ ನಾಟು ... 10
  5. ಬಿಸಿಲಲ್ಲಿ ಹದಗೊಳಿಸಿದ ಚುಟ್ಟ (ವರ್ಜೀನಿಯ ಮತ್ತು ನಾಟು) ... 2
  6. ಬಿಸಿಲಲ್ಲಿ ಹದಗೊಳಿಸಿದ ಮೋತಿಹಾರಿ (ರಸ್ಪಿಕ) ... 4
  7. ಬಿಸಿಲಲ್ಲಿ ಹದಗೊಳಿಸಿದ ಜಾತಿ (ಟಬೇಕಮ್) ... 5
  8. ಬಿಸಿಲಲ್ಲಿ ಹದಗೊಳೀಸಿದ ಜಾತಿ - ಬಿಷ್ಟಥ ... 3
  9. ಬಿಸಿಲಲ್ಲಿ ಹದಗೊಳಿಸಿದ ದೇಶಿ ... 12

1# ಹ್ವೈಟ್ ಬರ್ಲಿ ... 4 ಉಳಿದ ತಂಬಾಕುಗಳಲ್ಲಿ ಎಗ್ಮಾರ್ಕ್ ದರ್ಜೆಗಳನ್ನು ಗೊತ್ತುಪಡಿಸಿಲ್ಲ.

ಸಂಶೋಧನೆ

[ಬದಲಾಯಿಸಿ]

ತಂಬಾಕಿನ ಫಸಲನ್ನೂ ಗುಣವನ್ನೂ ಸುಧಾರಿಸಲಿಕ್ಕೆಂದು ಅನೇಕ ಬಗೆಯ ಸಂಶೋಧನೆಗಳು ನಡೆಯುತ್ತಿವೆ. ಸುಧಾರಿಸಿದ ತಳಿಗಳನ್ನು ಉತ್ಪಾದಿಸುವುದು, ಮಡಿಗಳ ಮತ್ತು ಹೊಲಗಳ ಕೃಷಿ, ಸರದಿ ಬೀಜ, ಗೊಬ್ಬರ ನೀರಾವರಿ, ರೋಗ, - ಕೀಟಗಳ ನಿವಾರಣೆ ಇವೆಲ್ಲವುಗಳಲ್ಲಿ ಸುಧಾರಣೆಗಳನ್ನು ಮಾಡುವ ವಿಷಯದಲ್ಲಿ ಸಂಶೋಧನೆಗಳನ್ನು ಮದ್ರಾಸಿನಲ್ಲಿರುವ ಇಂಡಿಯನ್ ಸೆಂಟ್ರಲ್ ಟೊಬ್ಯಾಕೊ ಕಮಿಟಿ ಎಂಬ ಕೇಂದ್ರೀಯ ಸಮಿತಿ ಇನ್ಸ್ಟಿಟ್ಯೂಟ್ ಎಂಬ ಸಂಶೋಧನಾಲಯವನ್ನು ಆಂಧ್ರಪ್ರದೇಶದ ರಾಜಮಹೇಂದ್ರಿಯಲ್ಲಿ ಸ್ಥಾಪಿಸಿದೆ. ಇದಲ್ಲದೆ ಪ್ರತಿಯೊಂದು ಬಗೆಯ ತಂಬಾಕುಗಳಲ್ಲಿ ಸಂಶೋಧನೆ ಮಾಡುವ ಬಗ್ಗೆ ಸಂಬಂಧಪಟ್ಟ ಸೀಮೆಗಳಲ್ಲಿ ಸಂಶೋಧನ ಕೇಂದ್ರಗಳು ಸ್ಥಾಪಿತವಾಗಿವೆ.

ಉಲ್ಲೇಖ

[ಬದಲಾಯಿಸಿ]
  1. http://www.cottoninfo.com.au/
  2. http://www.tobaccofreekids.org/research/factsheets/pdf/0125.pdf
"https://kn.wikipedia.org/w/index.php?title=ತಂಬಾಕು&oldid=1102347" ಇಂದ ಪಡೆಯಲ್ಪಟ್ಟಿದೆ