ರಾಮಕೃಷ್ಣ ಪರಮಹಂಸ

ಭಾರತೀಯ ಹಿಂದೂ ಸನ್ಯಾಸಿ ಮತ್ತು ತತ್ವಜ್ಞಾನಿ

ಶ್ರೀ ರಾಮಕೃಷ್ಣ ಪರಮಹಂಸ (ಫೆಬ್ರವರಿ ೧೮, ೧೮೩೬ - ಆಗಸ್ಟ್ ೧೬, ೧೮೮೬) ಭಾರತದ ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ೧೯ ನೆಯ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು.ಇವರ ಮೊದಲ ಹೆಸರು "ಗಧಾದರ". "ನಮನ"

ಶ್ರೀ ರಾಮಕೃಷ್ಣ ಪರಮಹಂಸ

ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು.

ಪರಮಹಂಸರು ಅನುಭವಿಸಿದರೆಂದು ಹೇಳಲಾದ ನಿರ್ವಿಕಲ್ಪ ಸಮಾಧಿಯಿಂದ ಅವರು "ಅವಿದ್ಯಾಮಾಯೆ" ಮತ್ತು "ವಿದ್ಯಾಮಾಯೆ" ಎಂಬ ಎರಡು ಬಗೆಯ ಮಾಯೆಗಳನ್ನು ಅರಿತುಕೊಂಡರೆಂದು ಹೇಳಲಾಗುತ್ತದೆ. "ಅವಿದ್ಯಾಮಾಯೆ" ಎಂಬುದು ಸೃಷ್ಟಿಯ ಕಾಳ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಕ್ರೌರ್ಯ, ಲೋಭ, ಇತ್ಯಾದಿ). ವಿದ್ಯಾಮಾಯೆ ಎನ್ನುವುದು ಸೃಷ್ಟಿಯ ಉಚ್ಚತರ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಪ್ರೇಮ, ಅಧ್ಯಾತ್ಮಿಕ ದೃಷ್ಟಿ, ಇತ್ಯಾದಿ). ಪರಮಹಂಸರ ದೃಷ್ಟಿಯಲ್ಲಿ ಭಕ್ತರು ವಿದ್ಯಾಮಾಯೆಯಿಂದ ಅವಿದ್ಯಾಮಾಯೆಯನ್ನು ಗೆದ್ದು ನಂತರ ಸಂಪೂರ್ಣವಾಗಿ ಮಾಯಾತೀತರಾಗುವತ್ತ ಹೆಜ್ಜೆ ಹಾಕಬಹುದು.

ನಿರ್ವಿಕಲ್ಪ ಸಮಾಧಿಯಿಂದ ಹುಟ್ಟಿದ ರಾಮಕೃಷ್ಣರ ಇನ್ನೊಂದು ನಂಬಿಕೆಯೆಂದರೆ ಜನರು ನಂಬುವ ಎಲ್ಲ ದೇವರುಗಳೂ ಒಬ್ಬ ಸರ್ವಾಂತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳಷ್ಟೆ. ಋಗ್ವೇದದ ವಾಕ್ಯವಾದ "ಏಕಮ್ ಸದ್ವಿಪ್ರಾಃ ಬಹುಧಾ ವದಂತಿ" (ಒಂದೇ ಸದ್ವಸ್ತುವನ್ನು ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ) ಎಂಬ ವಿಚಾರವೇ ಇದು. ಹಾಗಾಗಿ ರಾಮಕೃಷ್ಣರ ದೃಷ್ಟಿಯಲ್ಲಿ ಎಲ್ಲ ಧರ್ಮಗಳೂ ಒಂದೇ - ತಮ್ಮ ಜೀವನದ ಕೆಲ ವರ್ಷಗಳ ಕಾಲ ಇತರ ಧರ್ಮಗಳನ್ನೂ ಅಭ್ಯಾಸ ಮಾಡಿದರು (ಮುಖ್ಯವಾಗಿ ಇಸ್ಲಾಮ್ ಧರ್ಮ, ಕ್ರೈಸ್ತ ಧರ್ಮ, ಹಾಗೂ ವಿವಿಧ ಯೋಗ ಮತ್ತು ತಂತ್ರ ಮಾರ್ಗಗಳು).

ರಾಮಕೃಷ್ಣರ ನಾಲ್ಕು ಮುಖ್ಯ ತತ್ವಗಳೆಂದರೆ:

  • ಎಲ್ಲ ಅಸ್ತಿತ್ವದ ಏಕತೆ
  • ಮಾನವರಲ್ಲಿಯೂ ಇರುವ ದೈವತ್ವ
  • ದೇವರ ಏಕತೆ
  • ಎಲ್ಲ ಧರ್ಮಗಳ ಸಾಮರಸ್ಯ

ರಾಮಕೃಷ್ಣರ ಜೀವನ ಮತ್ತು ಬೋಧನೆಗಳನ್ನು ಅವರ ಶಿಷ್ಯರಲ್ಲಿ ಒಬ್ಬರಾದ ಮಹೇಂದ್ರನಾಥ್ ಗುಪ್ತಾ ರವರು ದಾಖಲಿಸಿದರು. ಕ್ರಿ. ಶ. 1875ನೇ ಇಸವಿಯ ಸಮಯ. ಗಂಗಾನದಿಯ ತೀರದಲ್ಲಿ ದಕ್ಷಿಣೇಶ್ವರವೆಂಬ ಒಂದು ಪ್ರದೇಶ. ಅಲ್ಲಿ ಭವತಾರಿಣಿ ಜಗನ್ಮಾತೆಯ ಒಂದು ಸುಂದರ ದೇವಾಲಯ. ದೇವಸ್ಥಾನದ ಹೊರಗೆ ದಟ್ಟವಾದ ಕಾಡು ಇತ್ತು. ಸಹಸ್ರಾರು ಹಕ್ಕಿಗಳು ಸಂಜೆ ಮರದ ಮೇಲೆ ಕುಳಿತುಕೊಂಡು ವಿಧವಿಧವಾದ ಗಾನನೈವೇದ್ಯವನ್ನು ಜಗನ್ಮಾತೆಗೆ ಅರ್ಪಿಸುತ್ತಿವೆ. ಪಡವಲಂಚಿನಲ್ಲಿ ಸೂರ್ಯ ಸಂಜೆ ಓಕುಳಿಯ ಚೆಲ್ಲಿ ಮುಗಿಲಿನ ಅಂಚಿನ ಹಿಂದೆ ಮರೆಯಾಗುತ್ತಿರುವನು. ಆ ಸಮಯದಲ್ಲಿ ಸುಮಾರು ಇಪ್ಪತ್ತು ವರುಷದ ಯುವಕ ಮುಳುಗುತ್ತಿರುವ ರವಿಯನ್ನು ನೋಡಿ ನಿಟ್ಟುಸಿರುಬಿಡುವನು. 'ಅಯ್ಯೋ, ನನ್ನ ಜೀವನದಲ್ಲಿ ಆಗಲೇ ಒಂದು ದಿನ ಹೋಯಿತು. ಇನ್ನೂ ತಾಯಿ ಕಾಣಲಿಲ್ಲ' ಎಂದು ಕಂಬನಿದುಂಬಿ ಅಳುವನು. ನೆಲದ ಮೇಲೆ ಬಿದ್ದು ಹೊರಳಾಡುವನು. ನದಿಗೆ ಬಂದವರು ಹಿಂತಿರುಗಿ ಹೋಗುವಾಗ ಈ ದೃಶ್ಯವನ್ನು ನೋಡಿ, "ಅಯ್ಯೊ ಪಾಪ, ಹುಡುಗ ಹೆತ್ತ ತಾಯಿಗಾಗಿ ಅಳುತ್ತಿರುವನೇನೋ" ಎಂದು ಸಹಾನುಭೂತಿ ತೋರಿ ಮುಂದೆ ಸಾಗುವರು.

ಎಳೆ ಮಗು ಮರೆಯಾದ ತಾಯಿಗಾಗಿ ಎಷ್ಟು ಅಳುವುದೊ ಅಷ್ಟು ಅತ್ತನು ಆ ಯುವಕ ಜಗನ್ಮಾತೆಗಾಗಿ. ಸಂದೇಹಾಸ್ಪದವಾದ, ಕಣ್ಣಿಗೆ ಕಾಣದ ದೇವರಿಗಾಗಿ ಅಷ್ಟು ವ್ಯಥೆಪಟ್ಟವರು ಅಪರೂಪ, ಧಾರ್ಮಿಕ ಜೀವನದಲ್ಲಿ. ಕೊನೆಗೆ ನಿರಾಶನಾಗಿ ಗರ್ಭಗುಡಿಯಲ್ಲಿದ್ದ ಬಲಿಕೊಡುವ ಖಡ್ಗವನ್ನು ತೆಗೆದುಕೊಂಡನು. ಅದರಿಂದ ದೇವರೆದುರಿಗೆ ತನ್ನ ರುಂಡವನ್ನು ಈಡಾಡುವುದರಲ್ಲಿದ್ದನು. ತಕ್ಷಣ ದೇವಿ ಪ್ರತ್ಯಕ್ಷಳಾದಳು. ಯುವಕನ ಮನಸ್ಸು ಪ್ರಪಂಚವನ್ನು ತೊರೆದು ಅವರ್ಣನೀಯ ಆನಂದದಲ್ಲಿ ತಲ್ಲೀನವಾಯಿತು. ದೇವರು ಪರೀಕ್ಷಿಸುವನು. ಅವನು ನಮ್ಮ ಸರ್ವಸ್ವವನ್ನೂ ತೆತ್ತಲ್ಲದೆ ಬರುವುದಿಲ್ಲ. ನಮ್ಮೆಲ್ಲವನ್ನೂ ದೇವರಿಗೆ ಕೊಟ್ಟರೆ ದೇವರು ತನ್ನ ಎಲ್ಲವನ್ನೂ ಭಕ್ತನಿಗೆ ಕೊಡುವನು. ತನ್ನ ಇಡೀ ಜೀವನವನ್ನು ನಿವೇದಿಸಿ, ಜಗನ್ಮಾತೆಯನ್ನು ಪಡೆದುಕೊಂಡನು. ಈ ವ್ಯಕ್ತಿಯೇ ಮುಂದೆ ಜಗದ್ವಂದ್ಯ ಶ್ರೀರಾಮಕೃಷ್ಣ ಪರಮಹಂಸರಾದುದು.

ಸ್ವಾಮಿ ವಿವೇಕಾನಂದರು ಹೇಳಿರುವಂತೆ ಶ್ರೀರಾಮಕೃಷ್ಣರ ಜೀವನ ವೇದ ವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ. ಮೂವತ್ತು ಕೋಟಿ ಭಾರತೀಯರ ಎರಡು ಸಾವಿರ ವರುಷಗಳ ಜೀವನವನ್ನು ಇವರು ತಮ್ಮ ಒಂದು ಜೀವನದಲ್ಲಿ ಅಳವಡಿಸಿಕೊಂಡಿರುವರು. ಇವರ ಜೀವನ ದ್ವೈತ ಅದ್ವೈತ ವಿಶಿಷ್ಟಾದ್ವೈತಗಳ ತ್ರಿವೇಣಿ. ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ. ಇವರ ಜೀವನ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನ. ಹೊರಗೆ ನೋಡುವುದಕ್ಕೆ ಎಳೆನಗೆ ಸದಾ ಇವರ ಮುಖದಲ್ಲಿ ಚಿಮ್ಮುತ್ತಿದೆ. ಅದರ ಹಿಂದೆ ರೋಮಾಂಚಕಾರಿಯಾದ ಆಧ್ಯಾತ್ಮಿಕ ಘಟನಾವಳಿ ತುಂಬಿ ತುಳುಕಾಡುತ್ತಿದೆ.

ಇವರು ಘನ ವಿದ್ವಾಂಸರ ಗುಂಪಿಗೆ ಸೇರಿದವರಲ್ಲ, ದೊಡ್ಡ ವಾಗ್ಮಿಗಳಲ್ಲ. ಉಪನ್ಯಾಸ ಕೊಡುವುದಕ್ಕೆ ಎಲ್ಲೂ ಹೊರಗೆ ಹೋಗಲಿಲ್ಲ. ತಮ್ಮ ಬಾಳನ್ನೆಲ್ಲ ಬಹುಪಾಲು ದಕ್ಷಿಣೇಶ್ವರ ದೇವಾಲಯದ ವಲಯದಲ್ಲಿ ಕಳೆದರು. ಅದರೂ ಅಪರೂಪವಾಗಿ ಅರಳಿದ ಸಹಸ್ರದಳ ಕಮಲವಿದು. ಇಡೀ ಬದ್ಧಜೀವಿಗಳ ಉದ್ಧಾರಕ್ಕೆ ಬೇಕಾಗುವ ಧರ್ಮಾಮೃತ ಅಲ್ಲಿ ಹುದುಗಿತ್ತು. ಹಲವಾರು ಕಡೆಯಿಂದ ದುಂಬಿಗಳು ಬಂದವು. ಮಕರಂದವನ್ನು ಹೀರಿ ತೃಪ್ತರಾದವು. ಅದನ್ನು ಉಳಿದವರಿಗೆಲ್ಲ ಹಂಚಿ ಧನ್ಯರಾದವು, ಪಾಶ್ಚಾತ್ಯ ದೇಶಗಳಿಗೂ ಹಂಚಿ ಭರತಖಂಡಕ್ಕೆ ಮಾನ್ಯತೆ ತಂದವು. ಚಿರಾಯುವಾದ ಭಾರತಮಾತೆಯ ಶ್ರೇಷ್ಠತಮ ಪುತ್ರರಲ್ಲಿ ಶ್ರೀರಾಮಕೃಷ್ಣ ಪರಮಹಂಸರೊಬ್ಬರು.

ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯಲ್ಲಿ ಕಾಮಾರಪುಕುರವೆಂಬ ಸಣ್ಣದೊಂದು ಗ್ರಾಮ. ಅದು ಕಲ್ಕತ್ತೆಯಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿದೆ. ಈಗಿನ ಕಾಲದ ವಾಹನ ಸೌಕರ್ಯಗಳಾವುವೂ ಅಲ್ಲಿಗೆ ಇನ್ನೂ ಬಂದಿರಲಿಲ್ಲ. ಹತ್ತಿರದ ರೈಲ್ವೆ ಸ್ಟೇಷನ್ನಿಗೆ ಸುಮಾರು ಇಪ್ಪತ್ತೈದು ಮೈಲಿ. ಹಳ್ಳಿ ಸಣ್ಣದು. ಆದರೂ ಜನರು ನೆಮ್ಮದಿಯಾಗಿದ್ದರು. ಸುತ್ತಮುತ್ತಲೂ ಕಮಲ ಪುಷ್ಕರಣಿ ತೋಪು ಇವುಗಳ ಹಿಂದೆ ಹಸಿರು ಗದ್ದೆಯ ಬಯಲು. ಅಲ್ಲಿ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿಯರಿಂದ ಕೂಡಿದ ಒಂದು ಬ್ರಾಹ್ಮಣ ಕುಟುಂಬವಿತ್ತು. ಬಡವರಾದರೂ ದೊಡ್ಡ ದೈವಭಕ್ತರು. ಯಾವ ಅಧಿಕಾರವೂ ಇವರಿಗೆ ಇಲ್ಲದೆ ಇದ್ದರೂ ಜನರು ಇವರ ಜೀವನಗಾಂಭೀರ್ಯದೆದುರಿಗೆ ತಗ್ಗಿ ನಡೆಯುತ್ತಿದ್ದರು. ಭಕ್ತರು, ಪರೋಪಕಾರಿಗಳು ಎಂದು ಪ್ರಖ್ಯಾತರಾಗಿದ್ದರು. ಇವರಿಗೆ ಕ್ರಿ. ಶ. 1836ನೇ ಫೆಬ್ರವರಿ 18ನೇ ದಿನ ಹುಟ್ಟಿದ ನಾಲ್ಕನೆಯ ಮಗನೇ ಶ್ರೀರಾಮಕೃಷ್ಣ. ಮಗು ಹುಟ್ಟಿದಾಗ ಗದಾಧರನೆಂದು ನಾಮಕರಣ ಮಾಡಿದರು. ಮನೆಯಲ್ಲಿ ಗದಾಯ್ ಎಂದು ಕರೆಯುತ್ತಿದ್ದರು. ಕ್ರಮೇಣ ಶ್ರೀರಾಮಕೃಷ್ಣ ಎಂಬ ಹೆಸರು ಅವರಿಗೆ ಸೇರಿ, ನಂತರ, ಇದೇ ಪ್ರಖ್ಯಾತವಾಗಿ ನಿಂತಿತು.

ಮಗುವು ಮನೆಯವರಿಗೆ ಮಾತ್ರ ಮುದ್ದಾಗಿ ಇರಲಿಲ್ಲ. ಇಡೀ ಹಳ್ಳಿಯೇ ಆ ಮಗುವನ್ನು ನೋಡಿ ಸಂತೊಭೀಷಗೊಂಡಿತು. ಅದು ಎಲ್ಲರಿಗೂ ಬೇಕಾದ ಮಗುವಾಯಿತು. ಮಗುವಿಗೆ ಸುಮಾರು ಐದು ಆರನೆ ವರುಷ ತುಂಬುವ ಹೊತ್ತಿಗೆ, ದೇವದೇವಿಯರ ಹಲವು ಸ್ತೋತ್ರಗಳು, ರಾಮಾಯಣ ಮಹಾಭಾರತದ ಕಥೆಗಳು ಇವನ್ನು ಕಲಿತುಕೊಂಡಿತು.

ಬಾಲ್ಯದಿಂದಲೂ ಅವರಲ್ಲಿ ಕೆಲವು ಒಳ್ಳೆ ಸ್ವಭಾವಗಳು ಬಹಳ ಚೆನ್ನಾಗಿ ರೂಪುಗೊಂಡಿದ್ದವು. ಸ್ವಲ್ಪವೂ ಅಂಜಿಕೆ ಸ್ವಭಾವದವರಲ್ಲ. ಉಳಿದ ಮಕ್ಕಳು ಎಲ್ಲಿಗೆ ಹೋಗಲು ಅಂಜುತ್ತಿದ್ದರೋ ಅಲ್ಲಿಗೆ ಅವರು ಧೈರ್ಯವಾಗಿ ಹೋಗುತ್ತಿದ್ದರು. ಸಾಧಾರಣವಾಗಿ ಎಂತಹವನಿಗಾದರೂ ಸ್ಮಶಾನ ಸ್ವಲ್ವ ಅಂಜಿಕೆ ತರುವ ಸ್ಥಳ. ಅಂತಹ ಕಡೆ ಒಬ್ಬರೇ ನಿರ್ಭಯವಾಗಿ ಹೋಗುತ್ತಿದ್ದರು. ಯಾರೂ ಇವರಿಗೆ ಇಚ್ಛೆ ಇಲ್ಲದುದನ್ನು ಕೋಪ ತೋರಿ ಅಥವಾ ಗದರಿಸಿ ಮಾಡಿಸುವುದಕ್ಕೆ ಆಗುತ್ತಿರಲಿಲ್ಲ. ಯಾರಿಗಾದರೂ ಒಮ್ಮೆ ಮಾತು ಕೊಟ್ಟರೆ ಸಾಕು, ಏನಾದರೂ ಆಗಲಿ ಅದನ್ನು ನಡೆಸಿಕೊಡುತ್ತಿದ್ದರು. ಉಪನಯನದ ಸಮಯದಲ್ಲಿ ಮೊದಲ ಭಿಕ್ಷೆಯನ್ನು ಅವರ ಕುಲಕ್ಕೆ ಸೇರಿದ ಹಿರಿಯರಿಂದ ತೆಗೆದುಕೊಳ್ಳುವುದು ರೂಢಿ. ಬಾಲ್ಯದಿಂದಲೂ ಧನಿ ಎಂಬುವ ಅಕ್ಕಸಾಲಿಗ ಹೆಂಗಸು ಇವರನ್ನು ಪ್ರೀತಿಸುತ್ತಿದ್ದಳು. ಅವಳು ಒಂದು ದಿನ ಮಗುವಿನೊಡನೆ ಉಪನಯನದ ಸಮಯದಲ್ಲಿ ತನ್ನಿಂದ ಭಿಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಬೇಡಿಕೊಂಡಳು. ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಿಗೆ ಇತ್ತರು. ಇವರಿಗೆ ಒಂಭತ್ತು ವರುಷದ ಸಮಯಕ್ಕೆ ಉಪನಯನವಾಯಿತು. ಆ ಸಮಯದಲ್ಲಿ ಆಕೆಯಿಂದ ಭಿಕ್ಷೆ ತೆಗೆದುಕೊಳ್ಳದಂತೆ ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಕೊನೆಗೂ ಧನಿ ಎಂಬ ಅಕ್ಕಸಾಲಿಗಳಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸಿದರು. ಸಾಧಾರಣವಾಗಿ ಆ ವಯಸ್ಸಿನಲ್ಲಿ ಮಕ್ಕಳು ದೊಡ್ಡವರು ಹೇಳಿದಂತೆ ಕೇಳುವುದು ಸ್ವಭಾವ. ಇಂತಹ ವಯಸ್ಸಿನಲ್ಲಿಯೇ ಅವರ ಜೀವನದಲ್ಲಿ ಸತ್ಯಕ್ಕಾಗಿ ಏನನ್ನಾದರೂ ಸಹಿಸುವ ಶಕ್ತಿಯನ್ನು ನೋಡುತ್ತೇವೆ. ನಿಜವಾದ ಪ್ರೀತಿಯ ಎದುರಿಗೆ ಸಂಪ್ರದಾಯದ ಆಚಾರವನ್ನೆಲ್ಲ ಕಿತ್ತೊಗೆದರು.

ಶ್ರೀರಾಮಕೃಷ್ಣರನ್ನು ಹಳ್ಳಿಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಓದುವುದು ಬರೆಯುವುದರಲ್ಲಿ ಸ್ವಲ್ಪ ಆಸಕ್ತಿ ತೋರಿದರೂ ಗಣಿತ ತಲೆಗೆ ಹತ್ತಲಿಲ್ಲ. ಶಾಲೆಯೊಳಗೆ ಕುಳಿತು ಓದುವುದಕ್ಕಿಂತ ಹತ್ತಿರವಿದ್ದ ತೋಪಿನಲ್ಲಿ ಆಡುವುದರಲ್ಲಿ ಇವರಿಗೆ ಆಸಕ್ತಿ. ಕೆಲವು ವೇಳೆ ಶಾಲಾ ಉಪಾಧ್ಯಾಯರು ಬರುವುದು ತಡವಾದರೆ ಹುಡುಗರೊಂದಿಗೆ ಹತ್ತಿರವಿರುವ ತೋಪಿಗೆ ಹೋಗಿ ಅವರು ನೋಡಿದ್ದ ಬಯಲಾಟವನ್ನು ಆಡುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ಹಾಡು ನಟನೆ ಇವುಗಳನ್ನು ಅಭಿನಯಿಸುವುದರಲ್ಲಿ ತುಂಬಾ ಪಾಂಡಿತ್ಯವನ್ನು ತೋರಿದರು. ಪ್ರಚಂಡ ಜ್ಞಾಪಕಶಕ್ತಿ ಇವರಲ್ಲಿತ್ತು. ಹಾಡನ್ನು ಒಂದು ಸಲ ಕೇಳಿದರೆ ಸಾಕು, ಅದನ್ನು ನೆನಪಿನಲ್ಲಿಡುತ್ತಿದ್ದರು. ಅದರಂತೆ ಅಭಿನಯಿಸುತ್ತಿದ್ದರು.

ಶ್ರೀರಾಮಕೃಷ್ಣರು ಹುಟ್ಟು ಕಲೋಪಾಸಕರು. ಬಾಹ್ಯಪ್ರಪಂಚದ ಮನಸೆಳೆವ ಬಣ್ಣ, ಆಕಾರ, ಭಾವ, ಧ್ವನಿ ಇವುಗಳೆಲ್ಲಾ ಇಂದ್ರಿಯಾತೀತ ಪ್ರಪಂಚದೆಡೆಗೆ ಇವರನ್ನು ಬೀಸಿ ಕರೆಯುತ್ತಿದ್ದವು. ಶ್ರೀರಾಮಕೃಷ್ಣರಿಗೆ ಆರೇಳು ವರುಷದ ಸಮಯ. ಆಗ ಒಂದು ದಿನ ಹಸುರು ಗದ್ದೆಯ ಬಯಲಿನಲ್ಲಿ ನಡೆಯುತ್ತಿದ್ದರು. ಕೈಯಲ್ಲಿದ್ದ ಒಂದು ಸಣ್ಣ ಬುಟ್ಟಿಯಲ್ಲಿ ಪುರಿ ಇತ್ತು. ಅದನ್ನು ತಿನ್ನುತ್ತ ಸುತ್ತಲೂ ನೋಡುತ್ತ ಹೋಗುತ್ತಿದ್ದರು. ಸುತ್ತಲೂ ಹಸಿರು ಗದ್ದೆ, ಮೇಲೆ ಮೋಡ ಕವಿದಿತ್ತು . ಅದು ಕ್ರಮೇಣ ವಿಸ್ತಾರವಾಗಿ ಆಕಾಶವನ್ನೆಲ್ಲಾ ವ್ಯಾಪಿಸಿತು. ಅದರ ಕಳಗೆ ಬಕಪಕ್ಷಿಯ ಸಾಲು ಹಾರಿಹೋಗುತ್ತಿತ್ತು. ಈ ಬಣ್ಣಗಳ ವೈವಿಧ್ಯತೆಯನ್ನು ನೋಡಿದಾಗ ಅವರ ಮನಸ್ಸಿಗೆ ಯಾವ ಇಂದ್ರಿಯಾತೀತ ಸತ್ಯ ಹೊಳೆಯಿತೋ ತಿಳಿಯದು, ಸಂಪೂರ್ಣ ತನ್ಮಯರಾಗಿ ಬಾಹ್ಯಪ್ರಪಂಚವನ್ನು ಮರೆತುಬಿಟ್ಟರು. ಹತ್ತಿರವಿದ್ದವರು ಅವರನ್ನು ಮನೆಗೆ ಕರೆದುಕೊಂಡು ಬಂದರು. ಸ್ವಲ್ವ ಹೊತ್ತಾದ ಮೇಲೆಯೇ ಅವರಿಗೆ ಬಾಹ್ಯಪ್ರಜ್ಞೆ ಬಂದುದು. ಆಗ ತಮ್ಮ ಮನಸ್ಸು ಇಂದ್ರಿಯಾತೀತ ಪ್ರಪಂಚದಲ್ಲಿ ಅವರ್ಣನೀಯ ಅನಂದದಲ್ಲಿ ತಲ್ಲೀನವಾಗಿತ್ತು ಎಂದರು.

ಒಂದು ಶಿವರಾತ್ರಿಯ ದಿನ. ಅಂದು ಜಾಗರಣೆ ಮಾಡಿ ಶಿವಪೂಜೆ ಮಾಡಬೇಕೆಂದು ಅಣಿಯಾಗಿತ್ತು. ಅಂದು ಊರಿನಲ್ಲಿ ಎಲ್ಲರ ಜಾಗರಣೆಗೆಂದು ಬಯಲುನಾಟಕ ಒಂವನ್ನು ಆಡಲು ಕೆಲವರು ಅಣಿಯಾಗುತ್ತಿದ್ದರು. ರಾತ್ರಿಯಾಯಿತು. ನಾಟಕ ಆರಂಭವಾಗುವ ಸಮಯ ಬಂದರೂ ಶಿವನ ಪಾತ್ರಧಾರಿ ಬರಲಿಲ್ಲ. ವಿಚಾರಿಸಿದಾಗ ಅವನಿಗೆ ಅನಾರೋಗ್ಯವೆಂದು ತಿಳಿದುಬಂದಿತು. ಆಗ ಸ್ನೇಹಿತರು ಬಂದು ಶ್ರೀರಾಮಕೃಷ್ಣರನ್ನು ಶಿವನ ಪಾತ್ರವನ್ನು ವಹಿಸಿಕೊಳ್ಳಬೇಕೆಂದು ಕೇಳಿಕೊಂಡರು. ಅವರು ಮೊದಲು ಒಪ್ಪಲಿಲ್ಲ. ಪೂಜೆ ಜಾಗರಣೆಯಲ್ಲಿ ಮನೆಯಲ್ಲೆ ಕಾಲ ಕಳೆಯಬೇಕೆಂದಿರುವೆ ಎಂದರು. ಬಂದವರು, ಪಾತ್ರ ಮಾಡಿದರೂ ಶಿವನನ್ನು ಕುರಿತು ಚಿಂತಿಸುತ್ತಲೇ ಇರಬೇಕಾಗುವುದು; ಅದರಿಂದ ನೀನು ಶಿವನ ಧ್ಯಾನವನ್ನು ಮಾಡಿದಂತೆಯೆ, ಎಂದು ಸಮಾಧಾನ ಹೇಳಿದ ಮೇಲೆ ಒಪ್ಪಿಕೊಂಡರು. ಶಿವನಂತೆ ಭಸ್ಮ ಬಳಿದುಕೊಂಡು ಜಟಾಧಾರಿಯಾಗಿ ರಂಗಭೂಮಿಯ ಮೇಲೆ ಬಂದು ನಿಂತರು. ರಾಮಕೃಷ್ಣರು ತಾನು ನಟಿಸುತ್ತಿರುವೆನು ಎಂಬುದನ್ನು ಮರೆತು ಶಿವಧ್ಯಾನದಲ್ಲಿ ತಲ್ಲೀನರಾದರು. ಕಣ್ಣಿನಿಂದ ಆನಂದಬಾಷ್ಪ ಸುರಿಯತೊಡಗಿತು. ಬಾಹ್ಯಪ್ರಪಂಚದ ಅರಿವನ್ನು ಮರೆತರು. ನೆರೆದ ಪ್ರೇಕ್ಷಕ ವೃಂದಕ್ಕೆ ಶಿವನ ಪಾತ್ರಧಾರಿ ಕಾಣಲಿಲ್ಲ. ಶಿವನಲ್ಲಿ ಐಕ್ಯನಾದ ಶಿವಭಕ್ತನು ಕಂಡನು. ಪಾತ್ರಮಾಡಲು ಇವರಿಂದ ಆಗಲಿಲ್ಲ. ಹತ್ತಿರವಿದ್ದವರು ಹಾಗೆಯೇ ಇವರನ್ನು ಮನೆಗೆ ಕರೆದುಕೊಂಡು ಹೋದರು. ಮಾರನೇ ದಿನವೇ ಇವರಿಗೆ ಜನರ ಅರಿವುಂಟಾಗಿದ್ದು.

ಮತ್ತೊಂದು ದಿನ ಮೂರು ಮೈಲಿಗಳ ದೂರದಲ್ಲಿದ್ದ ವಿಶಾಲಾಕ್ಷಿಯ ದೇವಸ್ಥಾನಕ್ಕೆ ಕೆಲವು ಹೆಂಗಸರೊಂದಿಗೆ ಹೋಗುತ್ತಿದ್ದರು. ನಡೆದುಕೊಂಡು ಹೋಗುತ್ತಿರುವಾಗ ದೇವಿಗೆ ಸಂಬಂಧಪಟ್ಟ ಹಲವು ಹಾಡುಗಳನ್ನು ಜೊತೆಯವರು ಹೇಳುತ್ತಿದ್ದರು. ತಕ್ಷಣವೇ ಶ್ರೀರಾಮಕೃಷ್ಣರು ಸ್ಥಿರವಾಗಿ ನಿಂತರು. ಕಣ್ಣಿನಲ್ಲಿ ಅಶ್ರುಧಾರೆ ಹರಿಯತೊಡಗಿತು. ಪ್ರಪಂಚದ ಅರಿವೇ ಇವರಿಗೆ ಇರಲಿಲ್ಲ. ಹತ್ತಿರವಿದ್ದ ಹೆಂಗಸರು ಎಷ್ಟು ಶೈತ್ಯೋಪಚಾರ ಮಾಡಿದರೂ ಇವರಿಗೆ ಪ್ರಜ್ಞೆ ಬರಲಿಲ್ಲ. ಕೆಲವರು ದೇವರ ಹೆಸರನ್ನು ಇವರ ಕಿವಿಯಲ್ಲಿ ಹೇಳಿದಾಗ ಬಾಹ್ಯಪ್ರಪಂಚದ ಅರಿವಾಯಿತು.

ಹಲವು ದೇವದೇವಿಯರ ವಿಗ್ರಹವನ್ನು ತಾವೇ ಮಾಡಿ ಪೂಜಿಸುತ್ತಿದ್ದರು. ಶ್ರೀರಾಮಕೃಷ್ಣರ ಏಳನೇ ವಯಸ್ಸಿನಲ್ಲಿ ಅವರ ತಂದೆ ಕಾಲವಾದರು. ಅವರು ಮೊದಲ ಬಾರಿ ತಮ್ಮ ಹತ್ತಿರದವರ ಸಾವನ್ನು ನೋಡಬೇಕಾಯಿತು. ಮೊದಲೆ ಅಂತರ್ಮುಖಿ ಸ್ವಭಾವ ಅವರದು. ಈ ದಾರುಣ ಪೆಟ್ಟು ತಾಕಿದಾಗ ಜಗತ್ತು ನಶ್ವರವೆಂಬ ಭಾವನೆ ಚಿರಮುದ್ರಿತವಾಯಿತು. ಅವರ ತಾಯಿಗೆ ಪತಿಯ ಅಗಲಿಕೆ ದಾರುಣ ವ್ಯಥೆಯನ್ನುಂಟು ಮಾಡಿತು. ಅವರು ಇದನ್ನೂ ಕಣ್ಣಾರೆ ನೋಡಬೇಕಾಯಿತು. ಸಾಧ್ಯವಾದಮಟ್ಚಿಗೆ ಯಾವಾಗಲೂ ತಾಯಿಯ ಹತ್ತಿರವಿರುತ್ತ ಕೈಲಾದಮಟ್ಟಿಗೆ ಅವರಿಗೆ ಸಂತೋಷವನ್ನುಂಟು ಮಾಡಲು ಯತ್ನಿಸಿದರು.

ಕಲ್ಕತ್ತೆಯಿಂದ ಪೂರಿಗೆ ಹೋಗುವ ದಾರಿಯಲ್ಲಿ ಕಾಮಾರಪುಕುರವಿತ್ತು. ಅನೇಕ ಯಾತ್ರಿಕರು ಅಲ್ಲಿ ತಂಗಿ ಹೋಗುತ್ತಿದ್ದರು. ಶ್ರೀರಾಮಕೃಷ್ಣರ ಮನೆಯ ಹತ್ತಿರವೇ ಅನೇಕ ಸಾಧುಸಂತರು ಇಳಿದುಕೊಳ್ಳುತ್ತಿದ್ದ ಛತ್ರವಿತ್ತು. ಶ್ರೀರಾಮಕೃಷ್ಣರು ಅಲ್ಲಿಗೆ ಪದೇಪದೇ ಹೋಗುತ್ತಿದ್ದರು. ಸಾಧುಗಳೊಡನೆ ಮಾತನಾಡುವುದು, ಅವರು ಹೇಳುವುದನ್ನು ಭಕ್ತಿಯಿಂದ ಕೇಳುವುದು, ಅವರಿಗೆ ಸಣ್ಣಪುಟ್ಟ ಕೆಲಸದಲ್ಲಿ ನೆರವಾಗುವುದು ಮುಂತಾದುವನ್ನು ಮಾಡುತ್ತಿದ್ದರು. ಒಂದು ದಿನ ಅವರಂತಯೇ ತಾವೂ ಸಾಧುವಾಗಬೇಕೆಂದು ಬಯಸಿ ಮೈಗೆ ಬೂದಿ ಬಳಿದುಕೊಂಡು ಬಟ್ಟೆಯನ್ನು ಬೈರಾಗಿಯಂತೆ ಉಟ್ಟುಕೊಂಡು ಮನೆಗೆ ಬಂದರು. ತಾಯಿಗೆ ತಾನು ಸಾಧುವಾಗಿಬಿಟ್ಟೆ ಎಂದರು. ಇದನ್ನು ನೋಡಿ ತಾಯಿ ತಳಮಳಿಸಿದಳು. ಅವರು ಪತಿಯ ಅಗಲಿಕೆಯನ್ನು ಶ್ರೀರಾಮಕೃಷ್ಣರನ್ನು ನೋಡಿ ಮರೆತಿದ್ದರು. ಈಗ ಈ ಮಗುವೆ ಹೀಗೆ ಆಗುವನೆಂದು ಹೇಳಿದಾಗ ಎದೆ ತಲ್ಲಣಿಸಿತು. ಶ್ರೀರಾಮಕೃಷ್ಣರು ತಾಯಿ ದುಃಖಿತಳಾದುದನ್ನು ನೋಡಿ, ತಮ್ಮ ಬೈರಾಗಿ ವೇಷವನ್ನು ತೆಗೆದುಹಾಕಿದರು.

ಶ್ರೀರಾಮಕೃಷ್ಣರ ಮನೆಯ ಸಮೀಪದಲ್ಲಿ ಸೀತಾನಾಥ ಪೈನಿ ಎಂಬ ಗೃಹಸ್ಥ ಭಕ್ತನಿದ್ದನು. ಆತನ ಮನೆಯಲ್ಲಿ ಹಲವಾರು ಹೆಣ್ಣುಮಕ್ಕಳು ಇದ್ದರು. ರಾಮಕೃಷ್ಣರು ಅವರ ಮನೆಗೆ ಹೋಗಿ ಅನೇಕ ವೇಳೆ ಹಾಡು ಕತೆ ಮುಂತಾದುವನ್ನು ಹೇಳಿ ಅವರನ್ನು ಸಂತೋಷ ಪಡಿಸುತ್ತಿದ್ದರು. ಆ ಮನೆಯವರು ಈ ಮಗುವಿನ ಹಾಡು ನಟನೆಗಳಿಗೆ ಮೆಚ್ಚಿ ಕೃಷ್ಣನ ವೇಷಕ್ಕೆ ಬೇಕಾಗುವ ಬಟ್ಟೆಬರೆಗಳನ್ನೂ ಒಂದು ಚಿನ್ನದ ಬಣ್ಣದ ಕೊಳಲನ್ನೂ ಇವರಿಗೆ ಕೊಟ್ವರಂತೆ.

ಅವರ ಮನೆಯ ಪಕ್ಕದಲ್ಲೆ ದುರ್ಗಾದಾಸ ಪೈನಿ ಎಂಬ ಮತ್ತೊಬ್ಬನಿದ್ದನು. ಅವರ ಮನೆಯವರು ಇನ್ನೂ ಘೋಷಾ ಪದ್ಧತಿಯನ್ನು ಬಿಟ್ಟಿರಲಿಲ್ಲ. ಆತನು ಇದಕ್ಕೆ ಹೆಮ್ಮೆಪಡುತ್ತಿದ್ದನು. ತನ್ನ ಮನೆಯ ಹೆಂಗಸರನ್ನು ಪರಪುರುಷರಾರೂ ನೋಡಿಲ್ಲ; ಅವರನ್ನು ನೋಡುವುದು ಅಸಾಧ್ಯ ಎನ್ನುತ್ತಿದ್ದನು. ರಾಮಕೃಷ್ಣರು ಇದನ್ನು ಕೇಳಿ "ಮುಸುಕಲ್ಲ ಹೆಂಗಸರ ಮಾನ ಕಾಪಾಡುವುದು – ಸಂಸ್ಕೃತಿ ಮತ್ತು ಒಳ್ಳೆಯ ನಡತೆ. ಬೇಕಾದರೆ ನಾನು ನಿಮ್ಮ ಮನೆಗೆ ಪ್ರವೇಶಿಸಬಲ್ಲೆ" ಎಂದರು. ಇದನ್ನು ಕೇಳಿ ದುರ್ಗಾದಾಸನು "ನೋಡೋಣ, ಹೇಗೆ ಮಾಡುವೆಯೊ" ಎಂದನು.

ಒಂದು ದಿನ ಸಂಜೆ ದುರ್ಗಾದಾಸನು ಕೆಲವರೊಂದಿಗೆ ಮಾತನಾಡುತ್ತ ಮನೆಯ ಜಗಲಿಯ ಮೇಲೆ ಕುಳಿತುಕೊಂಡಿದ್ದನು. ಒಬ್ಬ ಹುಡುಗಿ ಮುಸುಕಿನಲ್ಲಿ ಬಂದು, "ನಾನು ಹತ್ತಿರದ ಹಳ್ಳಿಯವಳು, ನೂಲನ್ನು ಮಾರುವುದಕ್ಕೆ ಬಂದೆ; ಸಂಜೆಯಾಯಿತು. ದೂರ ನಡೆದುಹೋಗಬೇಕು; ರಾತ್ರಿ ಇಲ್ಲಿ ತಂಗಿ ಹೋಗುವುದಕ್ಕೆ ಅವಕಾಶವಿದೆಯೆ?" ಎಂದು ಕೇಳಿದಳು. ದುರ್ಗಾದಾಸನು, "ಒಳಗೆ ಹೋಗಿ ಹೆಂಗಸರೊಡನೆ ಮಾತನಾಡು" ಎಂದು ಕಳುಹಿಸಿದನು. ಹುಡುಗಿ ಒಳಗೆ ಹೋದಮೇಲೆ ದುರ್ಗಾದಾಸನ ಹೆಣ್ಣುಮಕ್ಕಳು ಅಪರಿಚಿತ ಹುಡುಗಿಯನ್ನು ಆದರದಿಂದ ಬರಮಾಡಿಕೊಂಡು ತಿನ್ನುವುದಕ್ಕೆ ತಿಂಡಿ ಕೊಟ್ಟರು. ಅವರೊಡನೆ ಬಹಳ ಹೊತ್ತು ರಾತ್ರಿ ಮಾತನಾಡುತ್ತಿದ್ದಳು. ಬೀದಿಯ ಹೊರಗಡೆ ಯಾರೋ ಗದಾಯ್ ಎಂದು ಕೂಗುವುದು ಕೇಳಿತು. ಈ ಸದ್ದು ಹುಡುಗಿಯ ಕಿವಿಗೆ ಬಿದ್ದೊಡನೆಯೇ "ಅಣ್ಣ, ಬರುತ್ತೀನಿ" ಎಂದು ಕೂಗಿಕೊಂಡಳು. ಆಗ ಮನೆಯವರಿಗೆ ಗೊತ್ತಾಯಿತು. ಈ ಹುಡುಗಿ ಶ್ರೀರಾಮಕೃಷ್ಣರೇ ಎಂದು. ಎಲ್ಲರಿಗೂ ಆಶ್ಚರ್ಯವಾಯಿತು, ದುರ್ಗಾದಾಸನಿಗೆ ಮೊದಲಿಗೆ ಕೋಪ ಬಂದರೂ ಅನಂತರ ಈ ಹಾಸ್ಯದಲ್ಲಿ ಎಲ್ಲರೊಡನೆ ತಾನೂ ಭಾಗಿಯಾದನು.

ತಂದೆಯ ಕಾಲಾನಂತರ ಮನೆಯ ಜವಾಬ್ದಾರಿ ಶ್ರೀರಾಮಕೃಷ್ಣರ ಹಿರಿಯ ಅಣ್ಣ ರಾಮಕುಮಾರನ ಮೇಲೆ ಬಿದ್ದಿತು. ವಿಸ್ತಾರವಾಗುತ್ತಿರುವ ಸಂಸಾರವನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ಈತನೇನೋ ದೊಡ್ಡ ವಿದ್ಯಾವಂತನಾಗಿದ್ದನು. ಆದರೆ ಆ ಹಳ್ಳಿಯಲ್ಲಿ ವಿದ್ಯೆಗೆ ಗೌರವ ಸಿಕ್ಕೀತೆ ಹೊರತು ಹಣ ಸಿಕ್ಕುವಂತಿರಲಿಲ್ಲ. ಕಲ್ಕತ್ತೆಗೆ ಹೋಗಿ ಅಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನು ತೆರೆದನು. ಶ್ರೀರಾಮಕೃಷ್ಣರು ಆಗ ಕಾಮಾರಪುಕುರದಲ್ಲೇ ಇದ್ದರು. ಆಗ ಅವರಿಗೆ ಸುಮಾರು ಹದಿನಾರು ವಯಸ್ಸು. ಹಳ್ಳಿಯಲ್ಲಿದ್ದರೆ ಹುಡುಗ ಓದುವುದಿಲ್ಲವೆಂದು ಕೆಲವು ದಿನಗಳಾದ ಮೇಲೆ ರಾಮಕುಮಾರನು ತನ್ನ ತಮ್ಮನನ್ನು ಕಲ್ಕತ್ತೆಗೆ ಕರೆಸಿಕೊಂಡನು. ಕೆಲವು ದಿನ ಹುಡುಗನನ್ನು ಹೋದದಾರಿಗೆ ಬಿಟ್ಟನು. ಹುಡುಗನಿಗೆ ಓದಿನ ಕಡೆ ಮನಸ್ಸು ಓಡುತ್ತಿರಲಿಲ್ಲ. ಒಂದು ದಿನ ತಮ್ಮನನ್ನು ಕರೆದು, "ಹೀಗೆ ಆದರೆ ಹೇಗೆ? ನಿನ್ನ ಭವಿಷ್ಯವೇನು?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ನನಗೆ ಬಟ್ಟೆ, ಹಿಟ್ಟು ಕೊಡುವ ವಿದ್ಯೆ ಬೇಡ. ಯಾವುದು ನನ್ನ ಹೃದಯಕ್ಕೆ ಬೆಳಕನ್ನು ಕೊಡಬಲ್ಲದೋ, ಯಾವುದನ್ನು ತಿಳಿದರೆ ಮನುಷ್ಯ ನಿತ್ಯ ತೃಪ್ತವಾಗುತ್ತಾನೆಯೋ ಆ ವಿದ್ಯೆ ಪಡೆಯಲು ನಾನು ಯತ್ನಿಸುವೆನು" ಎಂದರು. ಅಣ್ಣ ಅಪ್ರತಿಭನಾದನು. ತಮ್ಮನು ಸುಲಭವಾಗಿ ದಾರಿಗೆ ಬರುವಂತೆ ಕಾಣಲಿಲ್ಲ. ತಾನು ಹೋಗುತ್ತಿದ್ದ ಕೆಲವು ಮನೆಗಳಿಗೆ ಪೂಜೆಗೆ ಹೋಗು ಎಂದು ಹೇಳಿದನು. ತಮ್ಮನು ಇದನ್ನು ಸಂತೋಷದಿಂದ ಒಪ್ಪಿಕೊಂಡನು.

ಹೀಗೆ ಶ್ರೀರಾಮಕೃಷ್ಣರು ಇತರರ ಮನೆಗಳಿಗೆ ಹೋಗಿ ಪೂಜೆ ಮಾಡಿದರು. ಮನೆಯವರಿಗೆ ಹೊಸ ಪೂಜಾರಿಯು ಪೂಜೆ ಮಾಡುವ ರೀತಿ, ಅವರ ಭಾವ ಮುಂತಾದುವನ್ನು ನೋಡಿ ಅವರಲ್ಲಿ ಹೆಚ್ಚು ಗೌರವ ಉಂಟಾಯಿತು. ಅವಸರವಿಲ್ಲದ ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ಭಾವಪೂರ್ವಕವಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಇವರನ್ನು ಕಂಡು ಎಲ್ಲ ಮನೆಯವರಿಗೂ ಪ್ರೀತಿಯುಂಟಾಯಿತು; ಕೊಡುವ ದಕ್ಷಿಣೆಯ ಆಸೆಗಲ್ಲದೆ ಕೇವಲ ಉಪಾಸನೆಗಾಗಿಯೆ ದೇವರನ್ನು ಇವರು ಪೂಜಿಸುತ್ತಿದ್ದರು

ಕಲ್ಕತ್ತೆಯಲ್ಲಿ ರಾಣಿ ರಾಸಮಣಿ ಎಂಬ ದೊಡ್ಡ ದೇವೀ ಭಕ್ತೆ ಇದ್ದಳು. ಆಕೆ ತುಂಬಾ ಶ್ರೀಮಂತಳು. ಬೆಸ್ತರ ಕುಲದಿಂದ ಬಂದವಳು. ಬೇಕಾದಷ್ಟು ದುಡ್ಡು ವ್ಯಯಿಸಿ ದಕ್ಷಿಣೇಶ್ವರ ಎಂಬಲ್ಲಿ ಗಂಗಾನದಿಯ ತೀರದಲ್ಲಿ ದೊಡ್ಡದೊಂದು ಕಾಳಿಕಾ ದೇವಾಲಯವನ್ನು ಕಟ್ಟಿಸಿದಳು. ಅದನ್ನು ಪ್ರತಿಷ್ಠೆ ಮಾಡುವ ದಿನ ಬಂದಿತು. ಆದರೆ ಅಲ್ಲಿ ಪೂಜೆಮಾಡಲು ಯಾವ ಬ್ರಾಹ್ಮಣ ಪೂಜಾರಿಯೂ ಬರಲಿಲ್ಲ. ರಾಣಿ ಖಿನ್ನಳಾದಳು. ಈ ಸಮಾಚಾರ ರಾಮಕುಮಾರನಿಗೆ ಗೊತ್ತಾಯಿತು. ಆತ ಈಕೆಗೆ ಒಂದು ಉಪಾಯವನ್ನು ಸೂಚಿಸಿದನು. ಆ ದೇವಸ್ಥಾನವನ್ನು ಅದಕ್ಕೆ ಪ್ರತಿವರ್ಷವೂ ತಗಲುವ ಖರ್ಚಿನ ಸಮೇತ ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿಬಿಟ್ಟರೆ ಆ ದೇವಸ್ಥಾನದಲ್ಲಿ ಯಾವ ಬ್ರಾಹ್ಮಣ ಪೂಜಾರಿ ಬೇಕಾದರೂ ಪೂಜೆ ಮಾಡಬಹುದು ಎಂದನು. ಹಾಗೆ ಮಾಡಿದರೂ ಯಾರೂ ಪೂಜೆಗೆ ಮುಂದೆ ಬರಲಿಲ್ಲ. ಕೊನೆಗೆ ಉಪಾಯ ಹೇಳಿಕೊಟ್ಟವನೇ ಮುಂದೆ ಬರಬೇಕಾಯಿತು. ರಾಮಕುಮಾರನೇ ಅಲ್ಲಿ ಪೂಜೆಮಾಡುವುದಕ್ಕೆ ಒಪ್ಪಿಕೊಂಡನು. ಜೊತೆಗೆ ರಾಮಕೃಷ್ಣರೂ ಬಂದರು. ಕೆಲವು ವೇಳೆ ಅವರು ಅಣ್ಣನು ಪೂಜೆ ಮಾಡುವುದಕ್ಕೆ ಅಣಿಮಾಡಿಕೊಡುತ್ತಿದ್ದರು.

ರಾಣಿ ರಾಸಮಣಿಯ ಹಿರಿಯ ಅಳಿಯ ಮಥುರನಾಥ ಬಿಶ್ವಾಸ್ ಎಂಬವನಿದ್ದನು. ಆತ ವಿದ್ಯಾವಂತ, ಮೇಲ್ವಿಚಾರಣೆ ನೋಡಿಕೊಳ್ಳುವುದರಲ್ಲಿ ತುಂಬಾ ನಿಪುಣ. ರಾಣಿಯ ಆಸ್ತಿಯನ್ನೆಲ್ಲ ಅವನೇ ನೋಡಿಕೊಳ್ಳುತ್ತಿದ್ದನು. ಹಲವು ವೇಳೆ ಆತ ಗುಡಿಗೆ ಬಂದಾಗ ರಾಮಕೃಷ್ಣರು ಅವನ ಕಣ್ಣಿಗೆ ಬೀಳುತ್ತಿದ್ದರು. ನೋಡಿದೊಡನೆಯೆ ಆ ಹುಡುಗನ ಮೇಲೆ ಮಥುರನಾಥನಲ್ಲಿ ಪ್ರೀತಿ ಹುಟ್ಟಿತು. ಹೇಗಾದರೂ ಮಾಡಿ ಆ ಹುಡುಗನನ್ನು ಗುಡಿಯಲ್ಲೇ ನಿಲ್ಲಿಸಬೇಕು. ಆತ ಪೂಜಾರಿಯಾದರೆ ಒಳ್ಳೆಯದಾದೀತು ಎಂದು ಭಾವಿಸಿ ವಿಚಾರಿಸಿದನು. ಆದರೆ ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಲಿಲ್ಲ.

ಕೆಲವು ಕಾಲವಾದ ಮೇಲೆ ರಾಮಕುಮಾರನು ತನ್ನ ಹಳ್ಳಿಗೆ ಹೋದನು. ಪುನಃ ಹಿಂತಿರುಗಿ ಬಂದು ದೇವಿಯ ಪೂಜೆಯನ್ನು ಮಾಡುವ ಸುಯೋಗ ಅವನಿಗೆ ಇರಲಿಲ್ಲ. ಅಲ್ಲಿಯೇ ಕಾಲವಾದನು. ಆ ಸಮಯಕ್ಕೆ ಸರಿಯಾಗಿ ಹೃದಯರಾಮನೆಂಬ ಶ್ರೀರಾಮಕೃಷ್ಣರ ನೆಂಟನೊಬ್ಬನು ದಕ್ಷಿಣೇಶ್ವರಕ್ಕೆ ಜೀವನೋಪಾಯಕ್ಕಾಗಿ ಬಂದನು. ವಯಸ್ಸಿನಲ್ಲಿ ಶ್ರೀರಾಮಕೃಷ್ಣರಿಗಿಂತ ಕೆಲವು ವರುಷ ಕಿರಿಯವನು. ಮಥುರನಾಥ ಮತ್ತೆ ಶ್ರೀರಾಮಕೃಷ್ಣರನ್ನು ಪೂಜೆ ಮಾಡುವಂತೆ ಕೇಳಿಕೊಂಡನು. ಶ್ರೀರಾಮಕೃಷ್ಣರು, "ದೇವಿಗೆ ಬೇಕಾದಷ್ಟು ಒಡವೆ ವಸ್ತ್ರಗಳನ್ನೆಲ್ಲ ಹಾಕಿರುವರು; ಅದು ಕಳೆದುಹೋದರೆ ಪೂಜಾರಿಯ ತಲೆಯ ಮೇಲೆ ಬರುವುದು. ಈ ತರದ ಜವಾಬ್ದಾರಿ ಕೆಲಸ ಬೇಡ" ಎಂದರು. ಹೃದಯನು, "ನಾನು ಜವಾಬ್ದಾರಿ ಕೆಲಸವನ್ನು ನೋಡಿಕೊಳ್ಳುತ್ತೇನೆ, ಶ್ರೀರಾಮಕೃಷ್ಣರು ಪೂಜೆ ಮಾಡಿದರೆ ಸಾಕು" ಎಂದನು. ಶ್ರೀರಾಮಕೃಷ್ಣರು ಪೂಜೆ ಮಾಡುವುದಕ್ಕೆ ಒಪ್ಪಿಕೊಂಡರು.

ಶ್ರೀರಾಮಕೃಷ್ಣರ ಜೀವನದಲ್ಲಿ ಮಥುರನಾಥನು ಅತಿ ಮುಖ್ಯವಾದ ಪಾತ್ರವನ್ನು ಪಡೆದನು. ಶ್ರೀರಾಮಕೃಷ್ಣರಿಗೆ ಸಾಧನೆಯ ಸಮಯದಲ್ಲಿ ಬೇಕಾಗುವ ಸೌಕರ್ಯಗಳನ್ನೆಲ್ಲಾ ಒದಗಿಸಿದನು. ಆತ ಶ್ರೀರಾಮಕೃಷ್ಣರನ್ನು ಅತಿ ಪ್ರೀತಿಯಿಂದ ಕಾಣುತ್ತಿದ್ದನು. ತನ್ನ ಇಷ್ಟ ದೈವವೇ ಶ್ರೀರಾಮಕೃಷ್ಣರಾಗಿರುವನು ಎಂದು ಭಾವಿಸಿದನು.

ದಕ್ಷಿಣೇಶ್ವರದ ಸನ್ನಿವೇಶ ಶ್ರೀರಾಮಕೃಷ್ಣರ ಜೀವನಕ್ಕೆ ಅತಿಮುಖ್ಯವಾದ ಹಿನ್ನೆಲೆಯಾಯಿತು. ಪೂಜೆಮಾಡುವುದಕ್ಕಿ ಪ್ರಾರಂಭಿಸಿದುದು ಇಲ್ಲಿ. ಅದ್ಭುತ ಸಾಧನೆ ಮಾಡಿದುದು ಇಲ್ಲಿ, ಮಹಾವ್ಯಕ್ತಿಗಳು ಇವರನ್ನು ಸಂದರ್ಶಿಸಲು ಬಂದುದು ಇಲ್ಲಿ. ಸ್ವಾಮಿ ವಿವೇಕಾನಂದರಂತಹ ಶಿಷ್ಯರನ್ನು ತರಬೇತು ಮಾಡಿದುದು ಇಲ್ಲಿ. ಶ್ರೀರಾಮಕೃಷ್ಣರ ಲೀಲಾ ನಾಟಕಕ್ಕೆ ದಕ್ಷಿಣೇಶ್ವರ ಒಂದು ರಂಗಭೂಮಿಯಾಯಿತು. ಪಾವನ ಗಂಗಾನದಿ ಮುಂದೆ ಹರಿಯುತ್ತಿದೆ. ನದಿಯಿಂದ ಬಂದೊಡನೆಯೆ ದೊಡ್ಡ ಸೋಪಾನ ಪಂಕ್ತಿ. ನಂತರ ಎಡಗಡೆ ಬಲಗಡೆ ಆರು ಆರು ಶಿವಮಂದಿರಗಳು. ಅದನ್ನು ದಾಟಿ ಹೋದರೆ ಭವ್ಯವಾದ ಕಾಳಿಕಾ ದೇವಸ್ಥಾನ. ಅದರ ಮುಂದುಗಡೆ ವಿಶಾಲವಾದ ನಾಟ್ಯಮಂದಿರ. ಮತ್ತೊಂದು ಕಡೆ ರಾಧಾಕೃಷ್ಣರ ದೇವಸ್ಥಾನ. ಸುತ್ತಲೂ ವಿಸ್ತಾರವಾದ ಅಂಗಳ. ಅದರ ಹಿಂದೆ ಪ್ರಾಕಾರದ ಸುತ್ತಲೂ ಯತ್ರಿಕರು ಬಂದರೆ ತಂಗಿಕೊಳ್ಳುವುದಕ್ಕೆ ಹಲವಾರು ಕೋಣೆಗಳು ಇವೆ. ಪ್ರಾಕಾರವನ್ನು ದಾಟಿದೊಡನೆ ಗಂಗಾನದಿಯ ತೀರದಲ್ಲಿ ಅತಿ ದಟ್ಟವಾದ ಕಾಡು, ನಿರ್ಜನ ಪ್ರದೇಶ. ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದಕ್ಕೆ ಯೋಗ್ಯವಾದ ಸ್ಥಳ. ಪರಮಹಂಸರು ಈ ಪಾವನ ಪ್ರದೇಶವನ್ನು ತಮ್ಮ ತಪಸ್ಸಿನಿಂದ ಪಾವನತರ ಮಾಡಿದರು.

ಶ್ರೀರಾಮಕೃಷ್ಣರು ಪೂಜಾಕಾರ್ಯವನ್ನು ಆರಂಭಿಸಿದರು. ಬೆಳಗ್ಗೆ ಭಕ್ತಿಯಿಂದ ಕಂಪಿಸುತ್ತ ಗುಡಿಗೆ ಹೋಗುವರು. ದೇವಿಗೆ ಅಲಂಕಾರ ಮಾಡುವರು. ಪೂಜೆ ಮಾಡುವರು, ನೈವೇದ್ಯ ಮಾಡುವರು. ಆದರೆ ಇದರಲ್ಲಿ ಶ್ರೀರಾಮಕೃಷ್ಣರ ಜೀವನ ಕೊನೆಗೊಂಡಿದ್ದರೆ ಅವರು ಒಬ್ಬ ಪೂಜಾರಿ ಮಾತ್ರ ಆಗಿರುತ್ತಿದ್ದರು, ಜಗದ್ವಂದ್ಯ ಶ್ರೀರಾಮಕೃಷ್ಣರು ಆಗುತ್ತಿರಲಿಲ್ಲ. ಶಿಲಾಮೂರ್ತಿಯಲ್ಲಿ ಚೇತನವಿದೆಯೆ? ಆಕೆ ಶಿಲ್ಪಿಗಳು ಕೊರೆದ ವಿಗ್ರಹವೋ ಅಥವಾ ಭಕ್ತರು ಕಂಡ ದರ್ಶನವೋ? ಆಕೆ ಕೇವಲ ಒಂದು ಕಲ್ಪನೆಯ ಕತೆಯೋ ಅಥವಾ ಭಕ್ತರ ಮೊರೆಯನ್ನು ಕೇಳಿ ಅವರನ್ನು ಸದಾ ಉದ್ಧಾರಮಾಡಲು ಕಾದು ಕುಳಿತಿರುವ ಮಹಾ ಶಕ್ತಿ ಚಿಲುಮೆಯೋ? ಈ ಸಮಸ್ಯೆಯನ್ನು ಪರೀಕ್ಷಿಸುವುದಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿದರು.

ಶ್ರೀರಾಮಕೃಷ್ಣರು ಎಲ್ಲ ಜನರಿಂದ ದೂರವಾದರು. ಅವರದೇ ಆದ ಪ್ರಪಂಚದಲ್ಲಿ ವಿಹರಿಸತೊಡಗಿದರು. ಜಗನ್ಮಾತೆಯನ್ನು ನೋಡಬೇಕೆಂಬ ಆಸೆ ಕಾಡುಗಿಚ್ಚಿನೋಪಾದಿ ಅವರ ಜೀವನವನ್ನೆಲ್ಲ ವ್ಯಾಪಿಸಿತು. ಹಗಲು ಪೂಜೆಮಾಡುವರು, ಕಂಬನಿದುಂಬಿ ಜಗನ್ಮಾತೆಗಾಗಿ ಅತ್ತು ಕರೆಯುವರು : "ಹೇ ತಾಯೆ ! ನೀನು ಎಲ್ಲಿರುವೆ, ಮೈದೋರು, ರಾಮಪ್ರಸಾದ ನಿನ್ನ ದರ್ಶನ ಪಡೆದು ಅನುಗ್ರಹೀತನಾದ. ನಾನೇನು ಪಾಪಿಯೇ ! ನನ್ನ ಬಳಿಗೆ ನೀನೇಕೆ ಬಾರೆ? ನನಗೆ ಸುಖ ಬೇಡ, ಐಶ್ವರ್ಯ ಬೇಡ, ಸ್ನೇಹಿತರು ಬೇಡ, ನನಗೆ ಪ್ರಪಂಚದ ಯಾವ ಭೋಗವೂ ಬೇಡ. ಹೇ ತಾಯೇ, ನಿನ್ನನ್ನು ನೋಡುವುದೊಂದೇ ನನ್ನ ಚರಮಗುರಿ." ದಿನದ ಅಂತ್ಯಸಮಯವನ್ನು ಸೂಚಿಸುವ ಘಂಟಾಧ್ವನಿಯನ್ನು ಕೇಳಿದೊಡನೆಯೆ ಉದ್ವಿಗ್ನರಾಗಿ ಅಳತೊಡಗುವರು : "ತಾಯೆ ಮತ್ತೊಂದು ದಿನ ವ್ಯರ್ಥವಾಯಿತು. ನಾನು ಇನ್ನೂ ನಿನ್ನನ್ನು ಸಂದರ್ಶಿಸಲಿಲ್ಲ. ಈ ಅಲ್ಪಜೀವನದಲ್ಲಿ ಆಗಲೇ ಒಂದು ದಿನ ಕಳೆಯಿತು. ನನಗೆ ಇನ್ನೂ ಸತ್ಯ ಸಾಕ್ಷಾತ್ಕಾರವಾಗಲಿಲ್ಲ."

ಬೇಕಾದಷ್ಟು ಅತ್ತರು, ಪ್ರಾರ್ಥಿಸಿದರು, ಧ್ಯಾನಮಾಡಿದರು. ಆದರೂ ದೇವಿ ಮೈದೋರಲಿಲ್ಲ. ಒಂದು ದಿನ ಗರ್ಭಗುಡಿಯೊಳಗೆ ಇರುವಾಗ, ದೇವಿಯ ದರ್ಶನ ಪಡೆಯದ ಬಾಳು ನಿರರ್ಥಕ, ಇದು ಕೊನೆಗಾಣಲಿ ಎಂದು ಬಲಿಕೊಡುವ ಕತ್ತಿಯನ್ನು ತೆಗೆದುಕೊಂಡು ತಮ್ಮ ರುಂಡವನ್ನು ದೇವಿಯ ಅಡಿದಾವರೆಯಲ್ಲಿ ಚಂಡಾಡುವುದರಲ್ಲಿದ್ದರು. ಆಗ ಮಾಯಾ ತೆರೆ ಹಿಂದೆ ಸರಿಯಿತು. ಜಗನ್ಮಾತೆ ಪ್ರತ್ಯಕ್ಷಳಾದಳು. ಸಚ್ಚಿದಾನಂದ ಸ್ವರೂಪಿಣಿಯಲ್ಲಿ ಅವರ ಮನಸ್ಸು ತಲ್ಲೀನವಾಯಿತು. ಬಾಹ್ಯಪ್ರಪಂಚಕ್ಕೆ ಬಂದ ಮೇಲೆ ಅವರ ನಡತೆ ಸಂಪೂರ್ಣ ಬದಲಾಯಿಸಿತು. ಅವರ ಪಾಲಿಗೆ ಕಲ್ಲಿನ ವಿಗ್ರಹ ಮಾಯವಾಗಿ, ಅದೊಂದು ಸಚೇತನ ಮೂರ್ತಿಯಾಯಿತು. ಅಂದಿನಿಂದ ಪೂಜಾ ವಿಧಾನವೇ ಬೇರೆ ರೂಪು ತಾಳಿತು. ದೇವಿ ಅವರು ಕೊಟ್ಟ ನೈವೇದ್ಯವನ್ನು ಊಟ ಮಾಡುತ್ತಿದ್ದಳು. ಮಾಡಿದ ಪೂಜೆಯನ್ನು ಸ್ವೀಕರಿಸುತ್ತಿದ್ದಳು. ಬೇಡಿದ ಪಾರ್ಥನೆಯನ್ನು ಈಡೇರಿಸುತ್ತಿದ್ದಳು. ಮಗು ತಾಯಿಯೊಂದಿಗೆ ಯಾವ ರೀತಿ ಸಲಿಗೆಯಿಂದ ಇರುವುದೋ ಅದೇ ಸಲಿಗೆಯಲ್ಲಿ ಇವರು ಜಗನ್ಮಾತೆಯೊಡನೆ ವರ್ತಿಸುತ್ತಿದ್ದರು.

ಜಗನ್ಮಾತೆ ಪ್ರತ್ಯಕ್ಷಳಾದ ನಂತರ ಶ್ರೀರಾಮಕೃಷ್ಣರ ಪೂಜಾ ವಿಧಾನ ಬೇರೆ ರೂಪಕ್ಕೆ ತಿರುಗಿತು. ನೈವೇದ್ಯಕ್ಕೆ ಕೊಟ್ಟದ್ದನ್ನು ಕೆಲವು ವೇಳೆ ತಾವು ಮೊದಲು ರುಚಿ ನೋಡುವರು, ನಂತರ ದೇವಿಗೆ ಅರ್ಪಣೆ ಮಾಡುತ್ತಿದ್ದರು. ಹೂವು, ಗಂಧ, ದೇವಿಗೆ ಅರ್ಪಣೆ ಮಾಡುವುದಕ್ಕೆ ಮುಂಚೆ, ಜಗನ್ಮಾತೆ ತಮ್ಮಲ್ಲಿಯೂ ಇರುವಂತೆ ಭಾಸವಾಗಿ ಅದರಿಂದ ತಮ್ಮನ್ನೇ ಅಲಂಕರಿಸಿಕೊಳ್ಳುತ್ತಿದ್ದರು. ಮಂಗಳಾರತಿಯನ್ನು ಕೆಲವು ವೇಳೆ ಬಹಳ ಹೊತ್ತು ಮಾಡುತ್ತಿದ್ದರು. ಕೆಲವು ವೇಳೆ ಬಹಳ ಬೇಗ ಪೂರೈಸುವರು. ಸಾಮಾನ್ಯ ಜನರು ಅವರನ್ನು ಹುಚ್ಚು ಪೂಜಾರಿಯೆಂದು ಕರೆಯತೊಡಗಿದರು. ಸಾಧಾರಣವಾಗಿ ಮನುಷ್ಯರು ಮತ್ತೊಬ್ಬರನ್ನು ಅಳೆಯುವ ರೀತಿಯೇ ಹೀಗೆ. ಯಾರು ತಮ್ಮಂತೆ ಇಲ್ಲವೋ ಅವರೆಲ್ಲ ಹುಚ್ಚರು. ತಮಗೆ ಮಾತ್ರ ಬುದ್ಧಿ ಸ್ಥಿಮಿತವಾಗಿರುವುದೆಂದು ಭಾವಿಸುವರು. ದೇವಸ್ಥಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಮಥುರನಾಥನಿಗೂ ಈ ಸುದ್ದಿ ತಿಳಿಯಿತು. ಆತನಿಗೆ ಮೊದಲಿನಿಂದಲೂ ಶ್ರೀರಾಮಕೃಷ್ಣರ ಮೇಲೆ ಗೌರವ. ಇದನ್ನು ಕೇಳಿ ಅತಿ ವ್ಯಾಕುಲಿತನಾಗಿ ತಾನೆ ಬಂದು ಇದನ್ನು ನೋಡುವವರೆಗೂ ಯಾರೂ ಇವರಿಗೆ ತೊಂದರೆಯನ್ನು ಕೊಡಕೂಡದೆಂದು ಹೇಳಿಕಳುಹಿಸಿದನು. ಒಂದು ದಿನ ಅವನೇ ಬಂದು ಇವರ ಪೂಜಾವಿಧಾನವನ್ನು ನೋಡಿದನು. ಇದು ಹುಚ್ಚಲ್ಲ, ದೈವೋನ್ಮಾದವೆಂದು ತಿಳಿದು ಯಾರೂ ಅವರಿಗೆ ತೊಂದರೆ ಕೊಡದಂತೆ ಎಚ್ಚರಿಸಿ ಹೋದನು.

ಒಂದು ದಿನ ರಾಣಿ ರಾಸಮಣಿ ಶ್ರೀರಾಮಕೃಷ್ಣರು ಪೂಜೆ ಮಾಡುತ್ತಿದ್ದಾಗ ಬಂದಳು. ಪೂಜೆಯಾದ ಮೇಲೆ ರಾಮಕೃಷ್ಣರನ್ನು ಒಂದೆರಡು ಭಕ್ತಿಯ ಹಾಡನ್ನು ಹಾಡುವಂತೆ ಕೇಳಿಕೊಂಡಳು. ಶ್ರೀರಾಮಕೃಷ್ಣರು ಹಾಡುತ್ತಿರುವಾಗ ಆಕೆಯ ಮನಸ್ಸು ಹಾಡಿನ ಮೇಲೆ ಇರಲಿಲ್ಲ. ಯಾವುದೊ ಒಂದು ಮೊಕದ್ದಮೆಯ ವಿಷಯವನ್ನು ಚಿಂತಿಸುತ್ತಿತ್ತು. ಶ್ರೀರಾಮಕೃಷ್ಣರು ಇದನ್ನು ಗ್ರಹಿಸಿ ಆಕೆಯ ಹತ್ತಿರ ಹೋಗಿ "ಇಲ್ಲಿಯೂ ಪ್ರಾಪಂಚಿಕ ಚಿಂತನೆಯೆ?" ಎಂದು ಕೆನ್ನೆಗೆ ಏಟು ಕೊಟ್ಟರು. ರಾಣಿ ರಾಸಮಣಿ ತನ್ನ ತಪ್ಪನ್ನು ಒಪ್ಪಿಕೊಂಡು ಕುಪಿತಳಾಗದೆ, ಜಗನ್ಮಾತೆಯೇ ತನಗೆ ಈ ರೀತಿ ಶಿಕ್ಷಿಸಿದಳೆಂದು ಭಾವಿಸಿದಳು. ಅದರ ಇಂತಹ ಕೆಲವು ದೃಶ್ಯಗಳನ್ನು ಕಂಡ ಇತರರು ಶ್ರೀರಾಮಕೃಷ್ಣರು ನಿಜವಾಗಿ ಹುಚ್ಚರೆಂದು ಭಾವಿಸಿದರು. ಆದರೆ ರಾಣಿಗೆ ಇವರೊಬ್ಬ ಮಹಾಭಕ್ತರೆಂದು ಗೊತ್ತಾಯಿತು. ವಜ್ರದ ವ್ಯಾಪಾರಿಗೆ ಮಾತ್ರ ವಜ್ರ ಯಾವುದು, ಗಾಜಿನ ಚೂರು ಯಾವುದು ಎಂಬುದು ಗೊತ್ತಾಗುವುದು.

ರಾಣಿ ರಾಸಮಣಿ, ಮಥುರನಾಥ ಇವರಿಬ್ಬರೂ ಶ್ರೀರಾಮಕೃಷ್ಣರ ಜೀವನದಲ್ಲಿ ಮುಖ್ಯ ಪಾತ್ರವನ್ನು ಪಡೆದಿರುವರು ಎಂಬುದನ್ನು ಆಗಲೇ ತಿಳಿಸಿರುವೆವು. ಅವರಿಗೂ ರಾಮಕೃಷ್ಣರಿಗೂ ಸಂಬಂಧಪಟ್ಟ ಒಂದೆರಡು ಘಟನೆಗಳಿಂದ ಪರಮಹಂಸರ ವ್ಯಕ್ತಿತ್ವ ಇನ್ನೂ ಹೆಚ್ಚು ಪ್ರಕಾಶಕ್ಕೆ ಬರುವುದನ್ನು ನೋಡುತ್ತೇವೆ. ಒಂದು ದಿನ ರಾಧಾಕೃಷ್ಣನ ದೇವಸ್ಥಾನದಲ್ಲಿ ರಾಧಾರಮಣನ ವಿಗ್ರಹದ ಕಾಲು ಪೂಜಾರಿಯ ಅಜಾಗರೂಕತೆಯಿಂದ ಮುರಿದು ಹೋಯಿತು. ಭಿನ್ನವಾದ ವಿಗ್ರಹವನ್ನು ಪೂಜಿಸುವುದು ಅಶಾಸ್ತ್ರೀಯವೆಂದು ಪಂಡಿತರು ಸಾರಿದರು. ಇಷ್ಟು ದಿನವೂ ಪೂಜಿಸುತ್ತಿದ್ದ ಆ ವಿಗ್ರಹವನ್ನು ತೆಗೆದಿಡಲು ರಾಣಿಯ ಮನಸ್ಸು ಒಪ್ಪಲಿಲ್ಲ. ಹೀಗೆ ವ್ಯಾಕುಲದಲ್ಲಿರುವಾಗ ಶ್ರೀರಾಮಕೃಷ್ಣರು ಹೀಗೆ ಹೇಳಿದರು: "ನಿನ್ನ ಅಳಿಯ ಮಥುರನಾಥನಿಗೆ ಕಾಲು ಮುರಿದುಹೋದರೆ ಅವನನ್ನು ನೀನು ಹೊರಗೆ ಕಳುಹಿಸಿ ಬೇರೆ ಅಳಿಯನನ್ನು ಬರಮಾಡಿಕೊಳ್ಳುವೆಯಾ? ಅದರಂತೆಯೇ ವಿಗ್ರಹವನ್ನು ಸರಿಮಾಡಿ ಉಪಯೋಗಿಸಬಹುದು" ಎಂದರು. ಯಾವ ಶಾಸ್ತ್ರವೂ ಬಗೆಹರಿಸದ ಒಂದು ಸಮಸ್ಯೆಯನ್ನು ಶ್ರೀರಾಮಕೃಷ್ಣರು ಪ್ರಪಂಚದಿಂದ ಆರಿಸಿಕೊಂಡ ಒಂದು ಉಪಮಾನದ ಮೂಲಕ ಬಗೆಹರಿಸಿದರು.

ಶ್ರೀರಾಮಕೃಷ್ಣರು ಪೂಜೆಗೆ ಒಂದು ದಿನ ಹೂವನ್ನು ಕೊಯ್ಯಲು ಹೋದಾಗ ಆ ಹೂವುಗಳೆಲ್ಲಾ ಆಗತಾನೇ ವಿರಾಟ್ ಸ್ವರೂಪಿ ಭಗವಂತನಿಗೆ ಅರ್ಪಿತವಾದಂತೆ ಭಾಸವಾಯಿತು. ಪ್ರತಿಯೊಂದು ಹೂವಿನ ಗಿಡವೂ ಅವನ ಕೈಯಲ್ಲಿರುವ ತುರಾಯಿಯಂತೆ ಕಂಡಿತು. ಅಂದಿನಿಂದ ಬಾಹ್ಯಪೂಜೆ ಮಾಡುವುದನ್ನು ಬಿಟ್ಟರು. ಹೃದಯನೆ ಈ ಕೆಲಸವನ್ನು ಕೈಗೊಂಡನು.

ಮಥುರನಾಥನು ಒಂದು ದಿನ ಶ್ರೀರಾಮಕೃಷ್ಣರೊಡನೆ ಮಾತನಾಡುತ್ತಿದ್ದಾಗ "ದೇವರೂ ಕೂಡ ನಿಯಮವನ್ನು ಮೀರಲಾರ" ಎಂದನು. ಅಗ ಶ್ರೀರಾಮಕೃಷ್ಣರು ದೇವರಿಗೆ ಎಲ್ಲವೂ ಸಾಧ್ಯವೆಂದರು. ಮಥುರನಾಥನು "ಹಾಗಾದರೆ ಬಿಳಿ ದಾಸವಾಳದ ಹೂವು ಬಿಡುವ ಗಿಡದಲ್ಲಿ ಕೆಂಪು ಹೂವು ಬಿಡಬಲ್ಲದೆ?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ಅವನ ಇಚ್ಛೆಯಾದರೆ ಬಿಡದೆ ಏನು?" ಎಂದರು. ಮಾರನೆದಿನ ತೋಟದಲ್ಲಿ ಹೋಗುತ್ತಿದ್ದಾಗ ಬಿಳಿ ದಾಸವಾಳದ ಗಿಡದಲ್ಲಿ ಒಂದು ಅಪರೂಪವಾಗಿ ಕೆಂಪು ದಾಸವಾಳ ಬಿಟ್ಟಿರುವುದನ್ನು ನೋಡಿದರು. ಅದನ್ನು ಮಥುರನಾಥನಿಗೆ ತೋರಿಸಿ, "ನೋಡು ದೇವರಿಗೆ ಯಾವುದು ಅಸಾಧ್ಯ?" ಎಂದರು. ಮಥುರನು, "ಅಬ್ಬ, ನಿಮ್ಮ ಹತ್ತಿರ ಮಾತನಾಡುವುದು ತುಂಬಾ ಕಷ್ಟ!" ಎಂದು ತೆಪ್ಪಗಾದನು.

ಮತ್ತೊಂದು ದಿನ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ವಿಗ್ರಹದ ಮೇಲಿದ್ದ ಒಡವೆಗಳನ್ನೆಲ್ಲಾ ಅಪಹರಿಸಿದರು. ಮಥುರನು ಇದನ್ನು ಕೇಳಿ ಅತಿ ವ್ಯಾಕುಲನಾಗಿ ಶ್ರೀರಾಮಕೃಷ್ಣರ ಹತ್ತಿರ ಬಂದು, "ಏನು ದೇವರು ತನ್ನ ಮೇಲಿರುವ ಒಡವೆಗಳನ್ನು ಕೂಡ ಕಳ್ಳರಿಂದ ಕಾಪಾಡಿಕೊಳ್ಳಲಾರದೆ ಹೋದನಲ್ಲ" ಎಂದನು. ಇದನ್ನು ಕೇಳಿ ಶ್ರೀರಾಮಕೃಷ್ಣರು, "ಓ ! ಏನು ಮಾತನಾಡುವೆ. ನಿನಗೆ ಅದು ಬೆಲೆಬಾಳುವ ಒಡವೆ. ದೇವರಿಗೆ ಅದು ಮಣ್ಣಿಗೆ ಸಮಾನ. ದೇವರ ಮನೆಬಾಗಿಲನ್ನು ಕುಬೇರ ಕಾಯುತ್ತಿರುವಾಗ ನಿನ್ನ ಒಂದೆರಡು ಒಡವೆ ಮತ್ತಾರೋ ಹೊತ್ತುಕೊಂಡು ಹೋದರೆ ಅದನ್ನು ದೇವರು ಗಮನಿಸುವನೇ?" ಎಂದರು.

ಸಾಧಾರಣ ಮನುಷ್ಯರು ದೇವರ ಮಹಾತ್ಮೆಯನ್ನು ಅಳೆಯುವುದು ಹೀಗೆ. ಆ ಒಡವೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಕಳ್ಳನೇನಾದರೂ ರಕ್ತಕಾರಿ ಸತ್ತಿದ್ದರೆ, ಪರವಾಗಿಲ್ಲ, ದೇವರಲ್ಲಿ ಏನೋ ಸತ್ಯವಿದೆ ಎನ್ನುವರು. ಏನೂ ಆಗದೆ ಹೋದರೆ, ಅಯ್ಯೋ ಮಹಾತ್ಮೆಯನ್ನು ಏನು ಇದೆ! ಎನ್ನುವರು. ದೇವರಿಗೆ ಸತ್ಪುರುಷ ಹೇಗೆ ಒಬ್ಬ ಮಗನೋ ಹಾಗೆಯೇ ಕಳ್ಳನೂ ಒಬ್ಬ ಮಗ ಎಂಬ ಭಾವ ಬರಬೇಕಾದರ ಜೀವ ತುಂಬಾ ಮುಂದುವರಿದಿರಬೇಕು.

ಶ್ರೀರಾಮಕೃಷ್ಣರು ಅಸಾಧಾರಣ ರೀತಿಯಲ್ಲಿ ವ್ಯವಹರಿಸುತ್ತ ಇದ್ದುದು ಸಾಧಾರಣ ಜನರಿಗೆ ಗೊತ್ತಾಗಲಿಲ್ಲ. ಇವರು ಹುಚ್ಚರಾಗಿ ಹೋಗಿರುವರು ಎಂಬ ಸುದ್ದಿ ಸುತ್ತಲೂ ಹಬ್ಬಿತು. ಇದು ಕಾಮಾರಪುಕುರಕ್ಕೂ ಮುಟ್ಟಿತು. ಶ್ರೀರಾಮಕೃಷ್ಣರ ತಾಯಿ ಚಂದ್ರಮಣಿದೇವಿ 1859ರಲ್ಲಿ ಮಗನನ್ನು ಕಾಮಾರಪುಕುರಕ್ಕೆ ಕರೆಸಿಕೊಂಡರು. ಔಷಧೋಪಚಾರ, ಯಂತ್ರಮಂತ್ರಗಳೆಲ್ಲವನ್ನೂ ಮಾಡಿಸಿದರು. ಆದರೆ ಇವರ ಹುಚ್ಚು ಮಾಯವಾಗುವ ರೀತಿ ಕಾಣಲಿಲ್ಲ. ಪರಮಹಂಸರೆ ಒಂದು ಸಲ ಹಾಸ್ಯವಾಗಿ, ಬೇಕಾದರೆ ನನಗೆ ರೋಗವಿದ್ದರೆ ಗುಣಮಾಡಿ. ಆದರೆ ದೇವರ ಹುಚ್ಚನ್ನು ಮಾತ್ರ ಬಿಡಿಸಬೇಡಿ ಎಂದರು. ಯಾರೋ ಚಂದ್ರಮಣಿದೇವಿಗೆ ಮಗನಿಗೆ ಮದುವೆ ಮಾಡಿದರೆ ಹುಚ್ಚು ಬಿಟ್ಟು ಹೋಗುವುದೆಂದು ಹೇಳಿದರು. ಹೆಣ್ಣಿಗೆ ಬೇಕಾದಷ್ಟು ಹುಡುಕತೊಡಗಿದರು. ಸುಮಾರು ಮೂರು ಮೈಲಿ ದೂರದ ಜಯರಾಮಬಟಿ ಎಂಬ ಗ್ರಾಮದಲ್ಲಿ ರಾಮಚಂದ್ರ ಮುಖ್ಯೋಪಾಧ್ಯಾಯರ ಮನೆಯಲ್ಲಿ ಐದು ವರ್ಷದ ಒಂದು ಹೆಣ್ಣು ಮಗು ಸಿಕ್ಕಿತು. ಆಗ ಶ್ರೀರಾಮಕೃಷ್ಣರಿಗೆ 23 ವರ್ಷ ವಯಸ್ಸು. ವಧುವರರಿಗೆ ಅಂತರ ಹದಿನೆಂಟು ವರುಷ! ಅಂತೂ ಮದುವೆಯಾಯಿತು. ಈ ಮದುವೆಯ ಗುರಿ ಶ್ರೀರಾಮಕೃಷ್ಣರಿಗೆ ಹಿಡಿದ ದೇವರ ಹುಚ್ಚನ್ನು ಬಿಡಿಸುವುದು. ಆದರೆ ಇವರ ಭವಿಷ್ಯ ಜೀವನ, ಮದುವೆ ಮಾಡಿದ ಉದ್ದೇಶ ಸಫಲವಾಗಲಿಲ್ಲವೆಂಬುದಕ್ಕೆ ಉದಾಹರಣೆಯಾಗಿದೆ.

ಮದುವೆಯಾದ ಕೆಲವು ತಿಂಗಳ ಮೇಲೆ ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹಿಂದಿರುಗಿದರು. ಆಧ್ಯಾತ್ಮಿಕ ಘಟನಾವಳಿಗಳ ಮಧ್ಯದಲ್ಲಿ ಇವರ ಜೀವನ ಸಿಲುಕಿ ಸುಂಟರಗಾಳಿಯಲ್ಲಿ ಸುತ್ತುವ ತರಗಲೆಯಂತೆ ಆಯಿತು.

ಧ್ಯಾನಕ್ಕೆ ಕುಳಿತರೆಂದರೆ ಶಿಲಾವಿಗ್ರಹದಂತೆ ಆಗುತ್ತಿದ್ದರು. ಇವರ ಅಚಲ ದೇಹವ ನೋಡಿ ಹಕ್ಕಿಗಳು ನಿರ್ಭಯವಾಗಿ ಅದರ ಮೇಲೆ ಕುಳಿತುಕೊಳ್ಳುತ್ತಿದ್ದವು.

ಶ್ರೀರಾಮಕೃಷ್ಣರು ದೇವಿಯ ದರ್ಶನವನ್ನೇನೋ ಪಡೆದಿದ್ದರು. ಆದರೆ ಅದರಲ್ಲಿ ತೃಪ್ತರಾಗಲಿಲ್ಲ. ದೇವರನ್ನು ಎಷ್ಟೆಷ್ಟು ರೂಪಿನಲ್ಲಿ ನೋಡಲು ಸಾಧ್ಯವೊ ಅಷ್ಟು ರೂಪಿನಲ್ಲೆಲ್ಲಾ ನೋಡಲು ಬಯಸಿದರು. ಹಲವು ಭಾವಗಳ ಮೂಲಕ ಅವನನ್ನು ಪ್ರೀತಿಸಿದರು. ಹಲವು ಸಾಧನೆಗಳನ್ನು ಮಾಡಿದರು. ಹಲವು ಧರ್ಮಗಳನ್ನು ಅನುಷ್ಠಾನ ಮಾಡಿದರು. ಹಲವು ದಾರಿಗಳಲ್ಲಿ ನಡೆದು ಒಂದೇ ಸತ್ಯದೆಡೆಗೆ ಬಂದರು. ಸತ್ಯದೇಗುಲಕ್ಕೆ ಬರುವುದಕ್ಕೆ ಅನಂತ ಬಾಗಿಲುಗಳಿವೆ ಎಂಬುದು ಅವರ ಅನುಭವದ ಆಳದಿಂದ ಬಂದ ಮಾತು, ಕೇವಲ ತರ್ಕದ ಗರಡಿಯಿಂದ ಬಂದುದಲ್ಲ. ಎಲ್ಲಾ ಧರ್ಮಗಳಲ್ಲಿರುವ ಏಕಮಾತ್ರ ಸತ್ಯದ ಅನುಭವ ಇವರಿಗೆ ಕರಗತವಾದುದರಿಂದ ಇವರು ಯಾರನ್ನೂ ದೂರುತ್ತಿರಲಿಲ್ಲ. ಯಾವ ಧರ್ಮವನ್ನೂ ತಾತ್ಸಾರದಿಂದ ಕಾಣುತ್ತಿರಲಿಲ್ಲ."

ಶ್ರೀರಾಮಕೃಷ್ಣರ ಸಾಧನೆಯಲ್ಲಿ ಒಂದು ವೈಶಿಷ್ಟ್ಯವನ್ನು ನೋಡುತ್ತೇವೆ. ಇವರು ಗುರುಗಳನ್ನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ. ಗುರುಗಳು ಇವರಿದ್ದೆಡೆಗೆ ಬಂದರು. ಒಂದೊಂದು ಸಾಧನೆಗೂ ಆಯಾ ಪಥದಲ್ಲಿ ನುರಿತ ಗುರುವೊಬ್ಬರು ಹೇಗೋ ಇವರ ಸಮೀಪಕ್ಕೆ ಆಕರ್ಷಿಸಲ್ಪಟ್ಟು ಇವರನ್ನು ಮುಂದಕ್ಕೆ ಕರೆದುಕೊಂಡು ಹೋಗುವರು. ಶಾಕ್ತ ಮತ್ತು ವೈಷ್ಣವ ಸಾಧನೆಗಳು ಭೈರವಿ ಬ್ರಾಹ್ಮಣಿ ಎಂಬ ಘನ ವಿದುಷಿಯ ನೇತೃತ್ವದಲ್ಲಿ ನಡೆಯಿತು. ಅಕೆ ಇಂತಹ ಸಾಧಕನೊಬ್ಬನು ಸಿಕ್ಕಿಯಾನೇ ಎಂದು ಹುಡುಕುತ್ತಿದ್ದಾಗ, ಶ್ರೀರಾಮಕೃಷ್ಣರು ಅವರಿಗೆ ಗೋಚರಿಸಿದರು. ವಾತ್ಸಲ್ಯಭಾವ ಸಾಧನೆಗೆ ಜಟಾಧಾರಿಯೆಂಬ ಒಬ್ಬ ರಾಮಭಕ್ತನ ಪರಿಚಯವಾಯಿತು. ಅದ್ವೈತ ಸಾಧನೆಗೆ ತೋತಾಪುರಿ ಎಂಬ ಸನ್ಯಾಸಿಯ ಸಹಾಯ ದೊರಕಿತು. ಕ್ರೈಸ್ತ ಮತ್ತು ಮಹಮ್ಮದೀಯ ಸಾಧನೆಗಳಿಗೆ ಆಯಾ ಮತದ ಅತ್ಯುತ್ತಮ ಪ್ರತಿನಿಧಿಗಳ ಸಹಾಯ ದೊರಕಿತು. ಘನ ವಿದ್ವಾಂಸರು ಇವರ ಸಮೀಪಕ್ಕೆ ಬಂದರು. ಅತಿ ಮುಂದುವರಿದ ಸಾಧಕರು ಇವರ ಸಮೀಪಕ್ಕೆ ಬಂದರು. ಎಲ್ಲರಿಂದಲೂ ಶ್ರೀರಾಮಕೃಷ್ಣರು ಕೆಲವು ವಿಷಯಗಳನ್ನು ಕಲಿತರು. "ನಾನು ಎಲ್ಲಿಯವರೆಗೂ ಬದುಕಿರುವೆನೊ ಅಲ್ಲಿಯವರೆಗೂ ಹೊಸದಾಗಿ ಕಲಿಯುತ್ತೇನೆ" ಎನ್ನುತ್ತಿದ್ದರು. ಈ ದೈನ್ಯವನ್ನು ಕೊನೆಯ ತನಕ ಶ್ರೀರಾಮಕೃಷ್ಣರಲ್ಲಿ ಕಾಣುತ್ತೇವೆ.

ಶ್ರೀರಾಮಕೃಷ್ಣರು ತಮ್ಮದೇ ಆದ ಸರಳ ರೀತಿಯಲ್ಲಿ ಭಗವಂತನಿಗೂ ಭಕ್ತನಿಗೂ ಮಧ್ಯೆ ಇರುವ ತೊಡರುಗಳನ್ನು ಭೇದಿಸಲು ಮೊದಲು ಮಾಡಿದರು. ದ್ರವ್ಯದ ಮೇಲಿರುವ ಆಸೆ ಸಂಪೂರ್ಣ ತೊಲಗುವಂತೆ ಒಂದು ಕೈಯಲ್ಲಿ ರೂಪಾಯಿಯನ್ನು ಮತ್ತೊಂದು ಕೈಯಲ್ಲಿ ಮಣ್ಣನ್ನು ತೆಗೆದುಕೊಂಡು ಗಂಗಾನದಿ ತೀರದ ಮೇಲೆ ಕುಳಿತು ಹಣವನ್ನು ನೋಡಿ, ಮತ್ತೊಂದು ಕೈಯಲ್ಲಿರುವ ಮಣ್ಣಿಗಿಂತ ಇದು ಮೇಲಲ್ಲ, ಇದು ದೇವರ ಸಮೀಪಕ್ಕೆ ಕರೆದುಕೊಂಡು ಹೋಗುವುದಕ್ಕೆ ಬದಲಾಗಿ ಲೋಭಮಾರ್ಗದಲ್ಲಿ ಸಿಲುಕಿಸುವುದು ಎಂದು ತರ್ಕಿಸಿ ಎರಡನ್ನೂ ನೀರಿಗೆ ಬಿಸಾಡುತ್ತಿದ್ದರು. ಇವರು ಯಾವುದನ್ನು ಧಿಕ್ಕರಿಸಿದ್ದರೋ ಅದನ್ನು ಇವರ ಇಡೀ ದೇಹದ ಅಂಗೋಪಾಂಗಗಳು ಧಿಕ್ಕರಿಸಿದ್ದವು. ಮನಸ್ಸಿಗೆ ಅರಿವಾಗದೆ ದೇಹಕ್ಕೆ ಸೋಂಕಿದರೂ ಚೇಳು ಕುಟುಕಿದಂತೆ ಆಗಿ ಅದನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ.

ಇದರಂತೆ ಕಾಮಿನಿಯೂ ಕೂಡ. ಶ್ರೀರಾಮಕೃಷ್ಣರು ಹೆಂಗಸರನ್ನು ದೂರದೇ ಅವರನ್ನು ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟರು. ಎಲ್ಲರಲ್ಲೂ ಜಗನ್ಮಾತೆಯೇ ಹಲವು ರೂಪಿನಿಂದ ಕಾಣುತ್ತಿರುವಳೆಂದು ಇಡೀ ಸ್ತ್ರೀ ಕುಲವನ್ನೆ ಪೂಜ್ಯ ದೃಷ್ಟಿಯಿಂದ ನೋಡುತ್ತಿದ್ದರು.

ಉಚ್ಚ ಬ್ರಾಹ್ಮಣ ಕುಲದಿಂದ ಬಂದವನು ತಾನೆಂಬ ಅಹಂಕಾರವನ್ನು ಅಳಿಸುವುದಕ್ಕಾಗಿ ಚಂಡಾಲನ ಮನೆಯನ್ನು ಕೂಡ ಇವರು ಗುಡಿಸಿದರು.

ಮಾನವನು ಯಾವ ಯಾವ ಭಾವದ ಮೂಲಕ ಮತ್ತೊಬ್ಬ ಮಾನವನನ್ನು ಪ್ರೀತಿಸಬಹುದೊ ಆ ಭಾವಗಳೆಲ್ಲದರ ಮೂಲಕ ದೇವರನ್ನು ಪ್ರೀತಿಸಬಹುದು. ಪ್ರೀತಿಯು ಭಕ್ತ ಮತ್ತು ಭಗವಂತನನ್ನು ಬಂಧಿಸುವ ಒಂದು ಮಧುರ ಬಂಧನ. ಎಲ್ಲಿಯವರೆಗೂ ನಾವು ಮಾನವರೋ ಅಲ್ಲಿಯವರೆಗೆ ಮಾನವಸಹಜ ಪ್ರೀತಿಯ ಮೂಲಕ ಮಾತ್ರ ದೇವರನ್ನು ಪ್ರೀತಿಸಬಲ್ಲೆವು. ಇಂತಹ ಪ್ರೀತಿಯಲ್ಲಿ ಐದು ಮುಖ್ಯ ಭಾವಗಳಿವೆ. ಶಾಂತಭಾವ, ಇದರಲ್ಲಿ ದೇವರನ್ನು ತಂದೆ ಅಥವಾ ತಾಯಿಯಂತೆ ಭಾವಿಸಬಹುದು. ಜೀವನದಲ್ಲಿ ಮಗುವಿಗೆ ತಂದೆತಾಯಿಗಳಷ್ಟು ಅಭಯವನ್ನು ಕೊಡುವವರು ಮತ್ತಾರೂ ದೊರಕಲಾರರು. ಅವರಲ್ಲಿರುವಷ್ಟು ಸಲಿಗೆ ಮತ್ತಾರಲ್ಲಿಯೂ ಇರಲಾರದು. ಇಡೀ ಬ್ರಹ್ಮಾಂಡ ಅವನಿಂದ ಬಂದಿದೆ. ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡುವ ಮಹಾಶಕ್ತಿಗಣಿಯಾಗಿರುವನು ಅವನು. ಆದಕಾರಣವೇ ಅವನನ್ನು ತಂದೆ ಅಥವಾ ತಾಯಿ ಎಂದು ಕರೆಯುವುದು. ಶ್ರೀರಾಮಕೃಷ್ಣರು ಮುಕ್ಕಾಲುಪಾಲು ತಮ್ಮ ಭವಜೀವನವನ್ನು ಕಳೆಯುತ್ತಿದ್ದುದು ಜಗನ್ಮಾತೆಯನ್ನು ನೆಚ್ಚಿಕೊಂಡಿರುವ ಮಗುವಿನಂತೆ. ದೇವರನ್ನು ಕೆಲವು ವೇಳೆ ತಂದೆಯೆಂತಲೂ ಕರೆದರು.

ದಾಸ್ಯಭಾವದಲ್ಲಿ ಭಗವಂತ ಸ್ವಾಮಿಯಾಗುವನು. ಭಕ್ತ ಅವನ ಆಣತಿಯನ್ನು ಪರಿಪಾಲಿಸುವ ಪಾಲಿಸುವ ಭೃತ್ಯನಾಗುವನು. ಭಕ್ತನಿಗೆ ತನಗಾಗಿ ಏನನ್ನೂ ಸಾಧಿಸಬೇಕೆಂಬ ಆಸೆ ಇರುವುದಿಲ್ಲ. ಅವನಿಗೆ, ಸ್ವಾಮಿಯ ಹಿತ ತನ್ನ ಹಿತ, ಸ್ವಾಮಿಯ ಇಷ್ಟ ತನ್ನ ಇಷ್ಟ, ಸ್ವಾಮಿಯ ಜಯ ತನ್ನ ಜಯ. ಈ ಭೃತ್ಯಭಾವದಲ್ಲಿರಬೇಕಾದರೆ ಅಹಂಕಾರ ಸಂಪೂರ್ಣ ನಾಶವಾಗಿರಬೇಕು. ಆಗ ಮಾತ್ರ ಎಲ್ಲ ಭಗವಂತನಿಗಾಗಿ ಎಂಬ ಮಧುರಗಾನಪಲ್ಲವಿ ಅವನ ಜೀವನದಿಂದ ಹೊರಹೊಮ್ಮುವುದು. ಹನುಮಂತನು ಶ್ರೀರಾಮಚಂದ್ರನನ್ನು ನೋಡುತ್ತಿದ್ದುದು ಹೀಗೆ. ಹನುಮಂತನಿಗೆ ರಾಮ ಇಷ್ಟದೇವನಾಗುವನು. ಶ್ರೀರಾಮನ ಆಣತಿಯನ್ನು ಪರಿಪಾಲಿಸುವುದೊಂದೇ ಇವನ ಜೀವನದ ಮಹೋದ್ದೇಶ. ಅದಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆಯುವನು. ವೀರಾಧಿವೀರನಾದರೂ ರಾಮಾಯಣದಲ್ಲಿ ಬರುವ ಹನುಮಂತ ನಿಗರ್ವಿ, ವಿನಯಶಾಲಿ. ಅಶೋಕವನದಲ್ಲಿ ದುಃಖದಿಂದ ಕೊರಗುತ್ತಿದ್ದ ಸೀತಾದೇವಿಯನ್ನು ನೋಡಲು ಹೋದಾಗ ಶ್ರೀರಾಮಚಂದ್ರನ ಸುದ್ದಿಯನ್ನು ಅವಳಿಗೆ ಹೇಳಿದನು. ಇನ್ನೇನು ಶ್ರೀರಾಮನು ಬೇಗ ಬರುವನು, ನಿನ್ನನ್ನು ಸೆರೆಯಿಂದ ಬಿಡಿಸುವನು' ಎಂದು ಧೈರ್ಯ ಹೇಳಿದನು. ಆದರೆ ಸೀತೆಗೆ ರಾಮನ ಜೊತೆಯಲ್ಲಿ ಬರುವವರ ಸಾಹಸದಲ್ಲಿ ನಂಬಿಕೆ ಇರಲಿಲ್ಲ. ಆಕೆಗೆ ಹನುಮಂತ, ಸುಗ್ರೀವನ ಸೈನ್ಯದಲ್ಲಿ ತಾನೇ ಕೊನೆಯವನೆಂದು ಹೇಳುತ್ತಾನೆ. ಯಾರು ವೀರಾಧಿವೀರನೋ, ಜಗಜಟ್ಟಿಯೋ, ಅಂತಹವನು ಹಾಗೆ ಹೇಳಿಕೊಳ್ಳಬೇಕಾದರೆ ಅಹಂಕಾರದಿಂದ ಆ ವ್ಯಕ್ತಿ ಎಷ್ಟು ಪಾರಾಗಿರುವನು ಎಂಬುದನ್ನು ಊಹಿಸಬಹುದು.

ಪರಮಹಂಸರು ದಾಸ್ಯಭಾವವನ್ನು ಹನುಮಂತನಂತೆ ಅಭ್ಯಾಸ ಮಾಡಿದರು; ಗೆಡ್ಡೆ ಗೆಣಸುಗಳನ್ನು ತಿಂದು, ಮರದ ಮೇಲೆ ನೆಗೆದಾಡುತ್ತಿದ್ದರಂತೆ ಆ ಕಾಲದಲ್ಲಿ. ಶ್ರೀರಾಮ ಮತ್ತು ಸೀತಾದೇವಿಯ ದರ್ಶನವನ್ನು ಆ ಭಾವದಲ್ಲಿ ಇದ್ದಾಗ ಪಡೆದರು.

ಸಖ್ಯಭಾವದಲ್ಲಿ ಭಕ್ತನಿಗೆ ಭಗವಂತನೊಡನೆ ಒಂದು ನಿಕಟತೆ ಕಾಣುವುದು. ದೊಡ್ಡವನು ಚಿಕ್ಕವನು ಎಂಬ ಭಾವ ಮಾಯವಾಗುವುದು. ಭಗವಂತನಲ್ಲಿರುವ ಶಕ್ತಿಗಾಗಿ ಸ್ನೇಹಿತ ಅವನನ್ನು ಪ್ರೀತಿಸುವುದಿಲ್ಲ. ಕೇವಲ ಪ್ರೀತಿಗಾಗಿ ಪ್ರೀತಿಸುತ್ತಾನೆ. ಅನ್ಯೋನ್ಯ ಸಲಿಗೆ ಹೆಚ್ಚುವುದು. ಕೃಷ್ಣಸುಧಾಮರ ಸಂಬಂಧ ಸಖ್ಯಭಾವಕ್ಕೆ ಉದಾಹರಣೆ. ಶ್ರೀರಾಮಕೃಷ್ಣರು ಈ ಭಾವದಲ್ಲಿಯೂ ಕೆಲವು ಕಾಲ ತಲ್ಲೀನರಾಗಿದ್ದರು.

ವಾತೃಲ್ಯಭಾವದಲ್ಲಿ ಭಕ್ತ ಭಗವಂತನನ್ನು ತನ್ನ ಮಗುವೆಂದು ತಿಳಿಯುವನು. ತಾಯಿಗೆ ಮಗುವಿನ ಮೇಲೆ ಇರುವ ಪ್ರೀತಿಯಲ್ಲಿ ಸಂಪೂರ್ಣ ನಿಃಸ್ವಾರ್ಥತೆ ಕಾಣುವುದು. ಮಗುವಿನಿಂದ ತಾಯಿ ಏನನ್ನೂ ಅಪೇಕ್ಷಿಸುವುದಿಲ್ಲ. ಸದಾ ಮಗುವಿನ ಹಿತಕ್ಕೆ ತನ್ನ ನಿದ್ದೆ ಸುಖ ಎಲ್ಲವನ್ನೂ ತೆರಲು ಸಿದ್ಧಳಾಗಿರುವಳು. ಎಲ್ಲಿಯವರೆಗೂ ಲಾಭದ ಅಪೇಕ್ಷೆ ಸ್ವಲ್ವವಾದರೂ ಇದೆಯೋ, ಅಲ್ಲಿಯದರೆಗೆ ಇಂತಹ ಪ್ರೇಮ ಸಾಧ್ಯವಿಲ್ಲ. ಯಶೋಧೆ ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಕೌಸಲ್ಯೆ ರಾಮನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿದ್ದಾಗ ದೇವರನ್ನು ರಾಮಲಾಲನೆಂದು ಪ್ರೀತಿಸಿದರು.

ಮಧುರಭಾವದಲ್ಲಿ ಭಕ್ತಭಗವಂತರಿಗೆ ಸತಿಪತಿಯರ ಸಂಬಂಧವಿರುವುದು. ಮಾನವ ಪ್ರೇಮದಲ್ಲೆಲ್ಲ ಅತ್ಯಂತ ನಿಕಟವಾದುದು ಸತಿಪತಿಯರದು. ಗೋಪಿಯರು ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿರುವಾಗ ಹೆಂಗಸಿನಂತೆ ಸೀರೆ ಉಟ್ಟು, ಆಭರಣ ತೊಟ್ಟುಕೊಂಡು ರಾಧಾರಮಣನನ್ನು ಸೇವಿಸಿದರು.

ಶ್ರೀರಾಮಕೃಷ್ಣರ ಭಾವಜೀವನ ಸರ್ವತೋಮುಖವಾದುದು. ಯಾವ ಯಾವ ಭಾವದ ಮೂಲಕ ಭಗವಂತನನ್ನು ನೋಡಬಹುದೋ ಅದರ ಮೂಲಕ ನೋಡಿದರು. ಒಂದೊಂದು ಸಲ ಒಂದೊಂದು ಭಾವದಲ್ಲಿ ತಲ್ಲೀನರಾಗುತ್ತಿದ್ದರು.

ಸಗುಣೋಪಾಸನೆಯಲ್ಲಿ ಮಾತೃಭಾವಕ್ಕೆ ಅವಕಾಶವಿದೆ. ಆದರೆ ಸಗುಣವೆಂಬ ಅಲೆಗಳ ಹಿಂದೆ, ನಿರ್ಗುಣ ನಿರಾಕಾರದ ಕಡಲಿದೆ. ಶ್ರೀರಾಮಕೃಷ್ಣರು ತೋತಾಪುರಿ ಎಂಬ ಸನ್ಯಾಸಿಯಿಂದ ಅದ್ವೈತ ದೀಕ್ಷೆಯನ್ನು ಪಡೆದರು. ನಾಮರೂಪಗಳನ್ನು ಮೀರಿ, ಕಾರ್ಯಕಾರಣ ಜಗತ್ತನ್ನು ಅತಿಕ್ರಮಿಸಿ, ನಿರಾಕಾರ ಬ್ರಹ್ಮದ ಕಡಲಿಗೆ ಧುಮುಕಿ ತಲ್ಲೀನರಾದರು. ಆ ಸ್ಥಿತಿಯಲ್ಲಿಯೇ ಅವರು ಬಹುಕಾಲವಿದ್ದರು. ಕ್ರಮೇಣ ಜಗನ್ಮಯಿ ಅವರ ಮನಸ್ಸನ್ನು ಕೆಳಗಿಳಿಸಿ ಸಾಕಾರ ನಿರಾಕಾರಗಳ ಮಧ್ಯೆ ಅವರನ್ನು ಬಿಟ್ಟು, ನೀನು ಇಲ್ಲೇ ಇರು ಎಂದು ಆಜ್ಞಾಪಿಸಿದಳಂತೆ.

ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಅವರ ಭಕ್ತಿಯ ಹಿನ್ನಲೆಯಾಗಿ ಯಾವಾಗಲೂ ಜ್ಞಾನವಿರುತ್ತಿತ್ತು. ಸ್ವಾಮಿ ವಿವೇಕಾನಂದರೇ, ಶ್ರೀರಾಮಕೃಷ್ಣರು ಹೊರನೋಟಕ್ಕೆ ಭಕ್ತರು, ಒಳಗೆ ಜ್ಞಾನಿಗಳು ಎನ್ನುತ್ತಿದ್ದರು. ಹೆಚ್ಚು ಮಾನವರು ಭಾವಜೀವಿಗಳು. ಯುಕ್ತಿ ಭಾವವನ್ನು ಆಶ್ರಯಿಸಿ ಬೆಳೆಯುವುದು. ಆದಕಾರಣವೇ ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಮಾನ್ಯತೆ ಕೊಟ್ಟರು.

ಪರಮಹಂಸರು ಅಷ್ಟೇ ಪ್ರಾಧಾನ್ಯವನ್ನು ಕರ್ಮಯೋಗಕ್ಕೆ ಕೊಟ್ಟರು. ಒಂದು ದಿನ ಭಕ್ತನೊಬ್ಬನು ಶ್ರೀರಾಮಕೃಷ್ಣರೊಂದಿಗೆ ಮಾತನಾಡುತ್ತಿದ್ದಾಗ ತಾನು ಬೇಕಾದಷ್ಟು ಪರರಿಗೆ ಉಪಕಾರ ಮಾಡಬೇಕೆಂದು ಹೇಳುತ್ತಿದ್ದನು. ಇದನ್ನು ಕೇಳಿ ಶ್ರೀರಾಮಕೃಷ್ಣರು "ಉಪಕಾರದ ಮಾತನ್ನು ಆಡಬೇಡ, ದೇವರೊಬ್ಬನೇ ಇತರರಿಗೆ ಉಪಕಾರ ಮಾಡಬಲ್ಲ. ಸಾಧಾರಣ ಜೀವಿಗಳು ಇತರರಿಗೆ ಸೇವೆ ಮಾತ್ರ ಮಾಡಬಲ್ಲರು. ಯಾರು ಬ್ರಹ್ಮಾಂಡವನ್ನು ಸೃಷ್ಟಿಸಿ, ಪಶುಪಕ್ಷಿ ಕ್ರಿಮಿಕೀಟಗಳಿಗೆ ಆಹಾರವನ್ನು ಒದಗಿಸಿರುವನೋ ಅವನು, ಕೆಲವರಿಗೆ ಸಹಾಯ ಮಾಡಲಾಗದೆ ಅವರಿಗೆ ನೀವು ಸಹಾಯಮಾಡಿ ಎಂದು ಹೇಳಲಿಲ್ಲ. ಉಪಕಾರವಲ್ಲ, ಸೇವೆ" ಎಂದರು. ಇದನ್ನು ಸ್ವಾಮಿ ವಿವೇಕಾನಂದರು ಆಲಿಸಿ ನಂತರ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, "ಇಂದು ಪರಮಹಂಸರ ಬಾಯಿಯಿಂದ ದೊಡ್ಡ ಸತ್ಯವನ್ನು ಕೇಳಿದೆ. ನಾನು ಬದುಕಿದ್ದರೆ ಇದನ್ನು ಎಲ್ಲರಿಗೂ ಬೋಧಿಸುವೆನು" ಎಂದರು. ಅನಂತರ ಅವರು ಬೋಧಿಸಿದ ಕರ್ಮಯೋಗವೆಲ್ಲ 'ಉಪಕಾರವಲ್ಲ, ಸೇವೆ' ಎಂಬ ಶ್ರೀರಾಮಕೃಷ್ಣರ ಒಂದು ಸೂತ್ರದ ಬಾಷ್ಯ

ಶ್ರೀರಾಮಕೃಷ್ಣರು ಎಲ್ಲ ಸಾಧನೆಗಳನ್ನೂ ಮಾಡಿ ಸಿದ್ಧಿ ಎಂಬ ಅಮೃತವನ್ನು ತಮ್ಮ ಹೃದಯದಲ್ಲಿ ಶೇಖರಿಸಿಟ್ಟುಕೊಂಡರು. ಆದರೆ ಅಮೃತವನ್ನು ತಾವು ಮಾತ್ರ ಸವಿದು ಧನ್ಯರಾಗಬಯಸಲಿಲ್ಲ. ಜಗದ ಕಷ್ಟನಷ್ಟಗಳಲ್ಲಿ ಸಿಕ್ಕಿ ನೊಂದವರಿಗೆಲ್ಲ ಅದನ್ನು ಹಂಚಿ ಅವರನ್ನೂ ಸುಖಿಗಳನ್ನಾಗಿ ಮಾಡಬಯಸಿದರು. ಆನಂದವನ್ನು ಯಾವಾಗಲೂ ಮತ್ತೊಬ್ಬನಿಗೆ ಹಂಚಿದಾಗ ಅದು ಇಮ್ಮಡಿಸುಪುದು. ಅದಕ್ಕಾಗಿಯೆ ಪರಮಹಂಸರು ಶಿಷ್ಯರಿಗಾಗಿ ಕಾದುಕುಳಿತರು. ಶ್ರೀರಾಮಕೃಷ್ಣರ ತಪೋಶಕ್ತಿ ಹಲವು ಪಕ್ವಕ್ಕೆ ಬಂದ ಸಾಧಕರನ್ನು ತನ್ನೆಡೆಗೆ ಸೆಳೆಯಿತು.

ಶ್ರೀರಾಮಕೃಷ್ಣರು ಪ್ರತಿದಿನವೂ ಸಂಜೆ ತಮ್ಮ ಕೋಣೆಯ ಮೇಲಿನ ಮಹಡಿಗೆ ಹೋಗಿ ಕಲ್ಕತ್ತೆಯ ಕಡೆ ನೋಡುತ್ತ "ಎಲ್ಲಿ ನನ್ನ ಮಕ್ಕಳು ಇನ್ನೂ ಬರಲಿಲ್ಲವಲ್ಲಾ" ಎಂದು ದುಃಖಿಸುತ್ತಿದ್ದರು. ಜಗನ್ಮಾತೆಯನ್ನು ಕಾಣಲು ಮೊದಲು ಎಷ್ಟು ತವಕಪಟ್ಟರ��� ಅಷ್ಟೇ ತವಕಪಟ್ಟರು ಶಿಷ್ಯರ ಆಗಮನಕ್ಕಾಗಿ. ಈ ಮಹಾ ಕರೆ ಅವ್ಯಕ್ತವಾದರೂ ಹಲವು ಜೀವಿಗಳನ್ನು ಮುಟ್ಟಿ ಒಬ್ಬೊಬ್ಬರನ್ನಾಗಿ ಅವರ ಕಡೆಗೆ ಸೆಳೆಯಿತು.

ಶ್ರೀರಾಮಕೃಷ್ಣರು ಒಬ್ಬ ನುರಿತ ಗುರುಗಳು, ಜಗದ ರಹಸ್ಯವನ್ನು ಆರಿತವರು. ಪ್ರತಿಯೊಂದು ವ್ಯಕ್ತಿಯಲ್ಲಿಯೂ ಒಂದು ವೈಶಿಷ್ಟ್ಯ ಇದೆ. ಅದಕ್ಕೆ ಭಂಗ ಬರದಂತೆ ತರಪೇತು ಕೊಡುತ್ತಿದ್ದರು. ಬಂದ ಶಿಷ್ಯರ ನ್ಯೂನಾತಿರೇಕಗಳನ್ನು ತಿದ್ದಿ, ಅವರೆಲ್ಲರನ್ನೂ ಭಗವಂತನ ಪೂಜೆಗೆ ಯೋಗ್ಯವಾದ ಪುಷ್ಪವನ್ನಾಗಿ ಮಾಡಿದರು.

ಶ್ರೀರಾಮಕೃಷ್ಣರಿಗೆ ಶಿಷ್ಯರ ಮೇಲೆ ಇದ್ದ ಪ್ರೀತಿ ಅಸಾಧಾರಣವಾದುದು. ಮೊದಲು ಶಿಷ್ಯರ ಎದೆಗೆ ತಟ್ಟಿದ್ದು ಪರಮಹಂಸರಲ್ಲಿದ್ದ ಆಧ್ಯಾತ್ಮಿಕ ಸತ್ಯಗಳಲ್ಲ, ಅವರ ಅಪಾರ ಪ್ರೇಮ. ಆ ಪ್ರೇಮಮಹಾಸ್ತ್ರ ಎಲ್ಲರನ್ನೂ ಒಲಿಸಿಕೊಂಡಿತು. ಅವರಲ್ಲಿ ಪ್ರಖ್ಯಾತರಾದ ವಿವೇಕಾನಂದರಂತಹ ಹಲವಾರು ಶಿಷ್ಯರು ತಾವು ಪರಮಹಂಸರ ಪ್ರೇಮದ ದಾಸರೆಂದು ಹೇಳಿಕೊಳ್ಳುತ್ತಿದ್ದರು.

ವಿಮರ್ಶಾತ್ಮಕ ಬುದ್ದಿ ಎಲ್ಲರಲ್ಲಿಯೂ ಬೆಳೆಯುವಂತೆ ಮಾಡುತ್ತಿದ್ದರು. ಯಾವುದನ್ನೂ ವಿಚಾರ ಮಾಡಿದಲ್ಲದೆ ಪರೀಕ್ಷಿಸಿದಲ್ಲದೆ ಒಪ್ಪಿಕೊಳ್ಳಿಬೇಡ ಎನ್ನುತ್ತಿದ್ದರು. ಅವರ ಬೋಧನೆ ಮತು ಜೀವನವನ್ನು ಹಲವರು ಶಿಷ್ಯರು ಹಲವು ರೀತಿಯಲ್ಲಿ ಪರೀಕ್ಷಿಸಿದರು. ಶಿಷ್ಯರು ತಮ್ಮನ್ನು ಪರೀಕ್ಷಿಸಿದರೆ ಕೋಪತಾಳದೆ ಆನಂದದಿಂದ ಅದನ್ನು ನೋಡುತ್ತಿದ್ದರು.

ಕಾಮಕಾಂಚನತ್ಯಾಗ ಇವರ ಉಪದೇಶದ ಪಲ್ಲವಿಯಾಗಿತ್ತು. ಒಂದು ದಿನ, ನರೇಂದ್ರ (ಮುಂದೆ ಸ್ವಾಮಿ ವಿವೇಕಾನಂದರು) ಶ್ರೀರಾಮಕೃಷ್ಣರು ಹೊರಗೆ ಹೋದ ಸಮಯದಲ್ಲಿ ಒಂದು ನಾಣ್ಯವನ್ನು ಅವರ ಹಾಸಿಗೆಯ ಕೆಳಗೆ ಇಟ್ಟರು. ಶ್ರೀರಾಮಕೃಷ್ಣರು ಬಂದು ಹಾಸಿಗೆಯ ಮೇಲೆ ಕುಳಿತೊಡನೆಯೇ ಚೇಳು ಕುಟುಕಿದಂತೆ ಆಯಿತು. ಹಾಸಿಗೆಯನ್ನು ಹುಡುಕಿ ನೋಡಿದಾಗ ಒಂದು ರೂಪಾಯಿ ಬಿತ್ತು. ಪರಮಹಂಸರ ತ್ಯಾಗಬುದ್ಧಿ ಅಷ್ಟು ಆಳಕ್ಕೆ ಹೋಗಿತ್ತು.

ಮತ್ತೊಬ್ಬ ಶಿಷ್ಯನು ಶ್ರೀರಾಮಕೃಷ್ಣರು ಅರ್ಧರಾತ್ರಿ ಎದ್ದು ಗಂಗಾನದಿಯ ತೀರಕ್ಕೆ ಹೋಗಿದ್ದಾಗ ಇವರು ಇಂತಹ ಅವೇಳೆಯಲಿ ಎದ್ದು ಎಲ್ಲಿಗೆ ಹೋಗುತ್ತಾರೆ? ತಮ್ಮ ಪತ್ನಿ ಶಾರದಾದೇವಿಯರ ಕೋಣೆ ಕಡೆ ಹೋಗಬಹುದೆ ! ಎಂದು ತಿಳಿಯಲು ಅಲ್ಲೇ ಹೊಂಚುಹಾಕುತ್ತಿದ್ದನು. ಸ್ವಲ್ಪ ಹೊತ್ತಾದ ಮೇಲೆ ಶ್ರೀರಾಮಕೃಷ್ಣರು ಶಾರದಾದೇವಿಯವರ ಕೋಣೆಯ ಕಡೆ ಹೋಗದೆ ಸೀದಾ ತಮ್ಮ ರೂಮಿನ ಕಡೆ ಬಂದರು. ಹೊಂಚು ಕಾಯುತ್ತಿದ್ದ ಶಿಷ್ಯ ಇವರನ್ನು ಅನುಮಾನಿಸಿದ್ದಕ್ಕಾಗಿ ನಾಚಿ ಪರಮಹಂಸರಿಗೆ ನಮಸ್ಕಾರ ಕ್ಷಮಾಪಣೆ ಕೇಳಿದನು. ಆಗ ಶ್ರೀರಾಮಕೃಷ್ಣರು ಸಾಧುವನ್ನು ಹಗಲು ಪರೀಕ್ಷೆ ಮಾಡಿದರೆ ಸಾಲದು, ರಾತ್ರಿಯೂ ಪರೀಕ್ಷಿಸಬೇಕು ಎಂದರು.

ಭಕ್ತಿಯ, ಧರ್ಮದ ಹೆಸರಿನಲ್ಲಿ ಮೂರ್ಖನಾದರೆ ಅದನ್ನು ಅವರು ಸಹಿಸುತ್ತಿರಲಿಲ್ಲ. ಒಬ್ಬ ಶಿಷ್ಯನಿಗೆ ಪೇಟೆಯಿಂದ ಸಾಮಾನು ತರುವುದಕ್ಕೆ ಹೇಳಿದರು. ಆತನು ಸರಿಯಾಗಿ ಪರೀಕ್ಷೆ ಮಾಡದೆ ತಂದನು. ಆಗ ಶ್ರೀರಾಮಕೃಷ್ಣರು, ಶಿಷ್ಯರು ವ್ಯಾಪಾರಕ್ಕೆ ಅಂಗಡಿಗೆ ಹೋದರೆ ಸರಿಯಾಗಿ ಪರೀಕ್ಷೆ ಮಾಡಬೇಕು, ಅಂಗಡಿಯಲ್ಲಿ ವರ್ತಕರು ಧರ್ಮಕ್ಕಾಗಿ ಅಲ್ಲ ಇರುವುದು ಎಂದು ಬುದ್ಧಿ ಹೇಳಿದರು. ಸಾಮಾನನ್ನು ಕೊಂಡಾದ ಮೇಲೆ ಕೊಸರು ಕೇಳುವುದನ್ನು ಮರೆಯಬಾರದು ಎಂದರು. ಅಸಡ್ಡೆ, ಮರೆವು ಇವು ಯಾವ ರೂಪಿನಲ್ಲಿ ಬಂದರೂ ಅವರು ಸಹಿಸುತ್ತಿರಲಿಲ್ಲ . "ನಾನು ಮತ್ತೊಂದು ಕ್ಷಣದಲ್ಲಿ ಪ್ರಪಂಚವನ್ನು ಮರೆತು ಸಮಾಧಿಯಲ್ಲಿ ಮಗ್ನನಾಗುತ್ತೇನೆ. ಆದರೂ ಯಾವುದನ್ನೂ ಮರೆಯುವುದಿಲ್ಲ. ನಿಮಗೇಕೆ ಇಂತಹ ಮರೆವು. ಇದು ಆಧ್ಯಾತ್ಮಿಕ ಜೀವನದ ಕುರುಹಲ್ಲ" ಎನ್ನುತ್ತಿದ್ದರು.

ಒಬ್ಬ ಶಿಷ್ಯನು ತುಂಬ ಮೃದು ಸ್ವಭಾವದವನು. ಒಬ್ಬರು ಗಟ್ಟಿ ಮಾತನ್ನಾಡಿದರೂ ಸಹಿಸುವುದಕ್ಕೆ ಆಗುತ್ತಿರಲಿಲ್ಲ. ಆತ ಒಂದು ದಿನ ದೋಣಿಯಲ್ಲಿ ಬರುತ್ತಿದ್ದಾಗ ಕೆಲವರು ಶ್ರೀರಾಮಕೃಷ್ಣರನ್ನು ಹಾಸ್ಯ ಮಾಡುತ್ತಿದ್ದರು. ಆತ ಇದನ್ನು ಸುಮ್ಮನೆ ಕೇಳುತ್ತಿದ್ದನು. ದಕ್ಷಿಣೇಶ್ವರಕ್ಕೆ ಬಂದ ಮೇಲೆ ಈ ಸಮಾಚಾರವನ್ನು ಶ್ರೀರಾಮಕೃಷ್ಣರಿಗೆ ಹೇಳಿದನು. ಅವರು, "ಏನು ಗುರುನಿಂದೆ ಆಗುತ್ತಿದ್ದರೂ ನೀನು ಸುಮ್ಮನೆ ಕೇಳುತ್ತಿದ್ದೆಯಾ? ಆ ಸ್ಥಳವನ್ನು ಬಿಟ್ಟಾದರೂ ಬರಬೇಕಾಗಿತ್ತು" ಎಂದರು.

ಮತ್ತೊಬ್ಬ ಶಿಷ್ಯನ ಸ್ವಭಾವ ಉಗ್ರ. ಆತನ ಜೀವನ ಮಾಗುವುದಕ್ಕೆ ಸ್ವಲ್ವ ಮೃದುತ್ವ ಬರಬೇಕಾಗಿತ್ತು . ಅಂತಹ ಶಿಷ್ಯನೊಬ್ಬನು ದೋಣಿಯಲ್ಲಿ ಬರುತ್ತಿದ್ದಾಗ ಹಿಂದಿನಂತೆಯೇ ಕೆಲವರು ಶ್ರೀರಾಮಕೃಷ್ಣರನ್ನು ದೂರುತ್ತಿದ್ದರು. ಇದನ್ನು ಕೇಳಿ ತುಂಬ ಕೋಪತಾಳಿ ದೋಣಿಯ ಒಂದು ಕಡೆಗೆ ಹೋಗಿ, ನೀವು ನನ್ನ ಗುರುನಿಂದೆಯನ್ನು ನಿಲ್ಲಿಸದೆ ಇದ್ದರೆ ದೋಣಿಯನ್ನು ಮುಳುಗಿಸುತ್ತೇನೆ ಎಂದು ದೋಣಿಯನ್ನು ಅಲ್ಲಾಡಿಸತೊಡಗಿದನು. ದೋಣಿಯಲ್ಲಿದ್ದವರು ಅಂಜಿ ಸುಮ್ಮನಾದರು. ಶ್ರೀರಾಮಕೃಷ್ಣರಿಗೆ ಈ ಸಮಾಚಾರವನ್ನು ಹೇಳಿದ ಮೇಲೆ, ಅವರು "ಕೋಪದಿಂದ ನೀನು ಎಂತಹ ಅನಾಹುತ ಮಾಡುತ್ತಿದ್ದೆ, ಅವರು ಬೈದರೆ ನನಗೇನಾಯಿತು" ಎಂದರು.

ಶ್ರೀರಾಮಕೃಷ್ಣರು ಪ್ರತಿಯೊಬ್ಬರ ಶೀಲವನ್ನು ಪರೀಕ್ಷಿಸಿ ಅವರಿಗೆ ತಕ್ಕ ಸಲಹೆಯನ್ನು ಕೊಡುತ್ತಿದ್ದರು.

ಶ್ರೀರಾಮಕೃಷ್ಣರು ಪ್ರಪಂಚವನ್ನು ಬಿಟ್ಟ ಕೆಲವು ಸನ್ಯಾಸಿಗಳಿಗೆ ಮಾತ್ರ ಆದರ್ಶಪ್ರಾಯವಾಗಲು ಬಯಸಲಿಲ್ಲ. ಗೃಹಸ್ಥರಿಗೂ ಆದರ್ಶಪ್ರಾಯರಾಗಿದ್ದರು. ಗೃಹಸ್ಥರಿಗೂ ಸನ್ಯಾಸಿಗೆ ಸರಿಸಮನಾದ ಜೀವನವನ್ನು ನಡೆಸಲು ಸಾಧ್ಯವೆಂದು ತೋರಿರುವರು.

ಶ್ರೀಶಾರದಾದೇವಿಗೆ ಹದಿನೆಂಟು ವರುಷವಾದಾಗ ಶ್ರೀರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಬಂದರು. ಶ್ರೀರಾಮಕೃಷ್ಣರು ಆದರದಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಅಷ್ಟು ಹೊತ್ತಿಗೆ ಮಥುರನಾಥನು ತೀರಿಹೋಗಿದ್ದನು. "ಆತನಿದ್ದಿದ್ದರೆ ನಿನಗೆ ಇಲ್ಲಿ ಇಳಿದುಕೊಳ್ಳುವುದಕ್ಕೆ ಬೇಕಾದಷ್ಟು ಅನುಕೂಲವನ್ನು ಮಾಡಿಕೊಡುತ್ತಿದ್ದನು" ಎಂದರು. ಶಾಸ್ತ್ರೀಯವಾಗಿ ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯನ್ನು ಮದುವೆಯಾಗಿದ್ದರು. ಆದಕಾರಣ ತಾವು ಯಾವುದನ್ನು ಮಾಡಬೇಕಾದರೂ ಅವರ ಒಪ್ಪಿಗೆ ಮತ್ತು ಸಹಾನುಭೂತಿ ಇಲ್ಲದೆ ಮಾಡಬಯಸಲಿಲ್ಲ. ಬಲಾತ್ಕಾರವಾಗಿ ಏನೊಂದನ್ನೂ ಅವರು ಶಾರದಾದೇವಿಯವರ ಮೇಲೆ ಹೇರಲಿಲ್ಲ. ಶ್ರೀರಾಮಕೃಷ್ಣರು ಶಾರದಾದೇವಿಯವರಿಗೆ, "ನನಗೆ ಎಲ್ಲಾ ಸ್ತ್ರೀಯರೂ ಜಗನ್ಮಾತೆಯ ಪ್ರತಿಬಿಂಬದಂತೆ ಕಾಣುವರು. ನಾನು ನಿನ್ನಲ್ಲಿಯೂ ಅದನ್ನೇ ನೋಡುತ್ತೇನೆ. ಆದರೆ ನೀನು ಇಂದ್ರಿಯ ಪ್ರಪಂಚದಲ್ಲಿ ಇರಲು ಇಚ್ಛೆಪಟ್ಟರೆ ಅದಕ್ಕೂ ನಾನು ಸಿದ್ಧನಾಗಿರುವೆ. ನಿನಗೆ ಯಾವುದು ಬೇಕು ಹೇಳು" ಎಂದರು. ಆದರೆ ಶ್ರೀಶಾರದಾದೇವಿಯವರು ಪರಮಹಂಸರಿಗೆ ತಕ್ಕ ಸತಿ. ತಾವೂ ಅವರಂತೆಯೇ ಆಗಲು ಬಯಸಿದರು, ಇದನ್ನು ಕೇಳಿ ಶ್ರೀರಾಮಕೃಷ್ಣರಿಗೆ ಅತ್ಯಾನಂದವಾಯಿತು. ಆಜನ್ಮ ಬ್ರಹ್ಮಚರ್ಯ ವ್ರತಧಾರಿಗಳಾಗಿ ಇಬ್ಬರೂ ಜಗನ್ಮಾತೆಯ ಕೆಲಸಕ್ಕೆ ಟೊಂಕಕಟ್ಚಿ ನಿಂತರು. ಎಂದು ಶ್ರೀಶಾರದಾದೇವಿಯವರು ಪ್ರಾಪಂಚಿಕ ಸುಖವನ್ನು ತೊರೆದು ತಾವು ಅವರಂತೆಯೇ ಜಗನ್ಮಾತೆಯ ಭಕ್ತರಾಗಲು ಬಯಸಿದರೋ ಅಂದಿನಿಂದಿಲೇ ಶ್ರೀರಾಮಕೃಷ್ಣರು ಸತಿಯ ಜೀವನದ ಜವಾಬ್ದಾರಿಯನ್ನೆಲ್ಲ ತೆಗೆದುಕೊಂಡರು. ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು. ಪೂಜೆ, ಜಪ, ತಪ, ಸಾಧನೆಗಳನ್ನು ಹೇಗೆ ಮಾಡಬೇಕು ಎಂಬುದರಿಂದ ಹಿಡಿದು ನಿರ್ವಿಕಲ್ಪ ಸಮಾಧಿಯವರೆಗೆ ಅವರನ್ನು ಕರೆದುಕೊಂಡು ಹೋದರು.

ಶ್ರೀರಾಮಕೃಷ್ಣರ ಕೀರ್ತಿ ಹಬ್ಬುತ್ತಾ ಬಂದಿತು. ಕಲ್ಕತ್ತೆಯ ಅನೇಕ ಪ್ರಮುಖ ವ್ಯಕ್ತಿಗಳು ಇವರನ್ನು ನೋಡಲು ಬರುತ್ತಿದ್ದರು. ಕೆಲವು ವೇಳೆ ಶ್ರೀರಾಮಕೃಷ್ಣರೇ ಅವರನ್ನು ನೋಡಲು ಹೋಗುತ್ತಿದ್ದರು. ಕೇಶವಚಂದ್ರಸೇನ ಬ್ರಹ್ಮ ಸಮಾಜದ ಮುಂದಾಳು, ಪ್ರಖ್ಯಾತ ವಾಗ್ಮಿ, ಪರಮಹಂಸರ ಹತ್ತಿರದ ಭಕ್ತನಾದ. ಒಂದು ದಿನ ಶ್ರೀರಾಮಕೃಷ್ಣರೇ ಈಶ್ವರಚಂದ್ರ ವಿದ್ಯಾಸಾಗರನನ್ನು ನೋಡುವುದಕ್ಕೆ ಹೋದರು. ಘನವಿದ್ವಾಂಸನಾದ ಈಶ್ವರಚಂದ್ರ ಪರಮಹಂಸರ ಬಾಯಿಯಿಂದ ಬರುವ ಮಾತನ್ನು ಕೇಳಿದನು. ಶಾಸ್ತ್ರಗಳ ಜಟಿಲ ಸಮಸ್ಯೆಯನ್ನು ಕೂಡ ಇವರ ಮಾತು ಬಗೆಹರಿಸಬಲ್ಲದೆಂದು ತಿಳಿದನು. ಮಹರ್ಷಿ ದೇವೇಂದ್ರನಾಥ ಠಾಕೂರರನ್ನು ನೋಡಲು ಶ್ರೀರಾಮಕೃಷ್ಣರೇ ಒಂದು ದಿನ ಮಥುರನಾಥನೊಂದಿಗೆ ಹೋದರು. ದಯಾನಂದ ಸರಸ್ವತಿ ಶ್ರೀರಾಮಕೃಷ್ಣರನ್ನು ನೋಡುವುದಕ್ಕೆ ದಕ್ಷಿಣೇಶ್ವರಕ್ಕೆ ಬಂದಿದ್ದರು. ಮುಂದೆ ಪ್ರಪಂಚವನ್ನೇ ವಿಸ್ಮಯಗೊಳಿಸಿದ ಸ್ವಾಮಿ ವಿವೇಕಾನಂದ ಮುಂತಾದ ಶಿಷ್ಯರು ಆಗ ಅನಾಮಧೇಯವಾಗಿ ಬಂದು ಹೋಗುತ್ತಿದ್ದರು.

ಶ್ರೀರಾಮಕೃಷ್ಣರಿಗೆ ಬಂದ ಶಿಷ್ಯರೊಡನೆ ಮಾತನಾಡಿ ಮಾತನಾಡಿ ಗಂಟಲಲ್ಲಿ ಹುಣ್ಣಾಯಿತು. ಮಾತನಾಡಬೇಡಿ ಎಂದು ವೈದ್ಯರು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಯಾರಾದರೂ ಬದ್ಧ ಜೀವಿಗಳು ಬಂದು ಇವರ ಹತ್ತಿರ ನಿಂತು ಭಗವಂತನ ವಿಷಯವನ್ನು ಎತ್ತಿದರೆ ಸಾಕು, ಯಾತನೆಯ ಗಮನವಿಲ್ಲದೆ ಮಾತನಾಡಲು ಮೊದಲು ಮಾಡುವರು. "ನನ್ನ ಮಾತಿನಿಂದ ಇತರರಿಗೆ ಶಾಂತಿ ಸಿಕ್ಕುವ ಹಾಗೆ ಇದ್ದರೆ ಇಂತಹ ಎಷ್ಟು ನೋವನ್ನಾದರೂ ಸಹಿಸುತ್ತೇನೆ. ಭವಜೀವಿಗಳ ಉದ್ಧಾರಕ್ಕೆ ಎಷ್ಟು ಜನ್ಮಗಳನ್ನಾದರೂ ಎತ್ತಲು ಸಿದ್ಧನಾಗಿರುವೆ !" ಎನ್ನುತ್ತಿದ್ದರು.

ಶ್ರೀರಾಮಕೃಷ್ಣರೆಂಬ ದೇಹದ ಗೂಡಿನಲ್ಲಿ ವಾಸಿಸುತ್ತಿದ್ದ ಜೀವದ ಹಕ್ಕಿ 1886ನೇ ಇಸವಿ ಆಗಸ್ಟ್ 16ನೇ ತಾರೀಖು ಹಾರಿಹೋಯಿತು. ಅಂದಿನಿಂದ ವಿಶ್ವವಿಹಾರಿ ಆಯಿತು. ಅವರ ತಪಸ್ಸು ಸರ್ವತೋಮುಖಿವಾಗಿ ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸಾಧಕವಾಯಿತು.

ಶ್ರೀರಾಮಕೃಷ್ಣರು ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಎಲ್ಲವನ್ನೂ ಪೂ��್ಣಮಾಡಿದರು, ಹಿಂದೂವಾಗಿಯೇ ಇದ್ದು ಎಲ್ಲ ಧರ್ಮಗಳ ಸಾಧನೆ ಮಾಡಬಹುದೆಂಬುದನ್ನು ತೋರಿದರು. ಎಲ್ಲ ಧರ್ಮಗಳ ಹಿಂದೆ ಇರುವುದೊಂದೇ ಸತ್ಯೆವೆಂಬುದು ಅವರ ಅನುಭವದ ಆಳದಿಂದ ಬಂದ ಮಾತು. ಹಿಂದೂಗಳು, ಮಹಮ್ಮದೀಯರು, ಕ್ರೈಸ್ತರು ಧರ್ಮದ ಹೆಸರಿನಲ್ಲಿ ವೈಮನಸ್ಸನ್ನು ಹರಡುವ ಬದಲು, ಶ್ರೀರಾಮಕೃಷ್ಣರಂತಹ ಒಂದು ಆದರ್ಶವಿದ್ದರೆ, ಹಿಂದೂಗಳು ಉತ್ತಮ ಹಿಂದೂಗಳಾಗುವರು, ಕ್ರೈಸ್ತರು ಉತ್ತಮ ಕ್ರೈಸ್ತರಾಗುವರು ಕ್ರಿ. ಶ. 1875ನೇ ಇಸವಿಯ ಸಮಯ. ಗಂಗಾನದಿಯ ತೀರದಲ್ಲಿ ದಕ್ಷಿಣೇಶ್ವರವೆಂಬ ಒಂದು ಪ್ರದೇಶ. ಅಲ್ಲಿ ಭವತಾರಿಣಿ ಜಗನ್ಮಾತೆಯ ಒಂದು ಸುಂದರ ದೇವಾಲಯ. ದೇವಸ್ಥಾನದ ಹೊರಗೆ ದಟ್ಟವಾದ ಕಾಡು ಇತ್ತು. ಸಹಸ್ರಾರು ಹಕ್ಕಿಗಳು ಸಂಜೆ ಮರದ ಮೇಲೆ ಕುಳಿತುಕೊಂಡು ವಿಧವಿಧವಾದ ಗಾನನೈವೇದ್ಯವನ್ನು ಜಗನ್ಮಾತೆಗೆ ಅರ್ಪಿಸುತ್ತಿವೆ. ಪಡವಲಂಚಿನಲ್ಲಿ ಸೂರ್ಯ ಸಂಜೆ ಓಕುಳಿಯ ಚೆಲ್ಲಿ ಮುಗಿಲಿನ ಅಂಚಿನ ಹಿಂದೆ ಮರೆಯಾಗುತ್ತಿರುವನು. ಆ ಸಮಯದಲ್ಲಿ ಸುಮಾರು ಇಪ್ಪತ್ತು ವರುಷದ ಯುವಕ ಮುಳುಗುತ್ತಿರುವ ರವಿಯನ್ನು ನೋಡಿ ನಿಟ್ಟುಸಿರುಬಿಡುವನು. 'ಅಯ್ಯೋ, ನನ್ನ ಜೀವನದಲ್ಲಿ ಆಗಲೇ ಒಂದು ದಿನ ಹೋಯಿತು. ಇನ್ನೂ ತಾಯಿ ಕಾಣಲಿಲ್ಲ' ಎಂದು ಕಂಬನಿದುಂಬಿ ಅಳುವನು. ನೆಲದ ಮೇಲೆ ಬಿದ್ದು ಹೊರಳಾಡುವನು. ನದಿಗೆ ಬಂದವರು ಹಿಂತಿರುಗಿ ಹೋಗುವಾಗ ಈ ದೃಶ್ಯವನ್ನು ನೋಡಿ, "ಅಯ್ಯೊ ಪಾಪ, ಹುಡುಗ ಹೆತ್ತ ತಾಯಿಗಾಗಿ ಅಳುತ್ತಿರುವನೇನೋ" ಎಂದು ಸಹಾನುಭೂತಿ ತೋರಿ ಮುಂದೆ ಸಾಗುವರು.

ಎಳೆ ಮಗು ಮರೆಯಾದ ತಾಯಿಗಾಗಿ ಎಷ್ಟು ಅಳುವುದೊ ಅಷ್ಟು ಅತ್ತನು ಆ ಯುವಕ ಜಗನ್ಮಾತೆಗಾಗಿ. ಸಂದೇಹಾಸ್ಪದವಾದ, ಕಣ್ಣಿಗೆ ಕಾಣದ ದೇವರಿಗಾಗಿ ಅಷ್ಟು ವ್ಯಥೆಪಟ್ಟವರು ಅಪರೂಪ, ಧಾರ್ಮಿಕ ಜೀವನದಲ್ಲಿ. ಕೊನೆಗೆ ನಿರಾಶನಾಗಿ ಗರ್ಭಗುಡಿಯಲ್ಲಿದ್ದ ಬಲಿಕೊಡುವ ಖಡ್ಗವನ್ನು ತ��ಗೆದುಕೊಂಡನು. ಅದರಿಂದ ದೇವರೆದುರಿಗೆ ತನ್ನ ರುಂಡವನ್ನು ಈಡಾಡುವುದರಲ್ಲಿದ್ದನು. ತಕ್ಷಣ ದೇವಿ ಪ್ರತ್ಯಕ್ಷಳಾದಳು. ಯುವಕನ ಮನಸ್ಸು ಪ್ರಪಂಚವನ್ನು ತೊರೆದು ಅವರ್ಣನೀಯ ಆನಂದದಲ್ಲಿ ತಲ್ಲೀನವಾಯಿತು. ದೇವರು ಪರೀಕ್ಷಿಸುವನು. ಅವನು ನಮ್ಮ ಸರ್ವಸ್ವವನ್ನೂ ತೆತ್ತಲ್ಲದೆ ಬರುವುದಿಲ್ಲ. ನಮ್ಮೆಲ್ಲವನ್ನೂ ದೇವರಿಗೆ ಕೊಟ್ಟರೆ ದೇವರು ತನ್ನ ಎಲ್ಲವನ್ನೂ ಭಕ್ತನಿಗೆ ಕೊಡುವನು. ತನ್ನ ಇಡೀ ಜೀವನವನ್ನು ನಿವೇದಿಸಿ, ಜಗನ್ಮಾತೆಯನ್ನು ಪಡೆದುಕೊಂಡನು. ಈ ವ್ಯಕ್ತಿಯೇ ಮುಂದೆ ಜಗದ್ವಂದ್ಯ ಶ್ರೀರಾಮಕೃಷ್ಣ ಪರಮಹಂಸರಾದುದು.

ಸ್ವಾಮಿ ವಿವೇಕಾನಂದರು ಹೇಳಿರುವಂತೆ ಶ್ರೀರಾಮಕೃಷ್ಣರ ಜೀವನ ವೇದ ವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ. ಮೂವತ್ತು ಕೋಟಿ ಭಾರತೀಯರ ಎರಡು ಸಾವಿರ ವರುಷಗಳ ಜೀವನವನ್ನು ಇವರು ತಮ್ಮ ಒಂದು ಜೀವನದಲ್ಲಿ ಅಳವಡಿಸಿಕೊಂಡಿರುವರು. ಇವರ ಜೀವನ ದ್ವೈತ ಅದ್ವೈತ ವಿಶಿಷ್ಟಾದ್ವೈತಗಳ ತ್ರಿವೇಣಿ. ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ. ಇವರ ಜೀವನ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನ. ಹೊರಗೆ ನೋಡುವುದಕ್ಕೆ ಎಳೆನಗೆ ಸದಾ ಇವರ ಮುಖದಲ್ಲಿ ಚಿಮ್ಮುತ್ತಿದೆ. ಅದರ ಹಿಂದೆ ರೋಮಾಂಚಕಾರಿಯಾದ ಆಧ್ಯಾತ್ಮಿಕ ಘಟನಾವಳಿ ತುಂಬಿ ತುಳುಕಾಡುತ್ತಿದೆ.

ಇವರು ಘನ ವಿದ್ವಾಂಸರ ಗುಂಪಿಗೆ ಸೇರಿದವರಲ್ಲ, ದೊಡ್ಡ ವಾಗ್ಮಿಗಳಲ್ಲ. ಉಪನ್ಯಾಸ ಕೊಡುವುದಕ್ಕೆ ಎಲ್ಲೂ ಹೊರಗೆ ಹೋಗಲಿಲ್ಲ. ತಮ್ಮ ಬಾಳನ್ನೆಲ್ಲ ಬಹುಪಾಲು ದಕ್ಷಿಣೇಶ್ವರ ದೇವಾಲಯದ ವಲಯದಲ್ಲಿ ಕಳೆದರು. ಅದರೂ ಅಪರೂಪವಾಗಿ ಅರಳಿದ ಸಹಸ್ರದಳ ಕಮಲವಿದು. ಇಡೀ ಬದ್ಧಜೀವಿಗಳ ಉದ್ಧಾರಕ್ಕೆ ಬೇಕಾಗುವ ಧರ್ಮಾಮೃತ ಅಲ್ಲಿ ಹುದುಗಿತ್ತು. ಹಲವಾರು ಕಡೆಯಿಂದ ದುಂಬಿಗಳು ಬಂದವು. ಮಕರಂದವನ್ನು ಹೀರಿ ತೃಪ್ತರಾದವು. ಅದನ್ನು ಉಳಿದವರಿಗೆಲ್ಲ ಹಂಚಿ ಧನ್ಯರಾದವು, ಪಾಶ್ಚಾತ್ಯ ದೇಶಗಳಿಗೂ ಹಂಚಿ ಭರತಖಂಡಕ್ಕೆ ಮಾನ್ಯತೆ ತಂದವು. ಚಿರಾಯುವಾದ ಭಾರತಮಾತೆಯ ಶ್ರೇಷ್ಠತಮ ಪುತ್ರರಲ್ಲಿ ಶ್ರೀರಾಮಕೃಷ್ಣ ಪರಮಹಂಸರೊಬ್ಬರು.

ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯಲ್ಲಿ ಕಾಮಾರಪುಕುರವೆಂಬ ಸಣ್ಣದೊಂದು ಗ್ರಾಮ. ಅದು ಕಲ್ಕತ್ತೆಯಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿದೆ. ಈಗಿನ ಕಾಲದ ವಾಹನ ಸೌಕರ್ಯಗಳಾವುವೂ ಅಲ್ಲಿಗೆ ಇನ್ನೂ ಬಂದಿರಲಿಲ್ಲ. ಹತ್ತಿರದ ರೈಲ್ವೆ ಸ್ಟೇಷನ್ನಿಗೆ ಸುಮಾರು ಇಪ್ಪತ್ತೈದು ಮೈಲಿ. ಹಳ್ಳಿ ಸಣ್ಣದು. ಆದರೂ ಜನರು ನೆಮ್ಮದಿಯಾಗಿದ್ದರು. ಸುತ್ತಮುತ್ತಲೂ ಕಮಲ ಪುಷ್ಕರಣಿ ತೋಪು ಇವುಗಳ ಹಿಂದೆ ಹಸಿರು ಗದ್ದೆಯ ಬಯಲು. ಅಲ್ಲಿ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿಯರಿಂದ ಕೂಡಿದ ಒಂದು ಬ್ರಾಹ್ಮಣ ಕುಟುಂಬವಿತ್ತು. ಬಡವರಾದರೂ ದೊಡ್ಡ ದೈವಭಕ್ತರು. ಯಾವ ಅಧಿಕಾರವೂ ಇವರಿಗೆ ಇಲ್ಲದೆ ಇದ್ದರೂ ಜನರು ಇವರ ಜೀವನಗಾಂಭೀರ್ಯದೆದುರಿಗೆ ತಗ್ಗಿ ನಡೆಯುತ್ತಿದ್ದರು. ಭಕ್ತರು, ಪರೋಪಕಾರಿಗಳು ಎಂದು ಪ್ರಖ್ಯಾತರಾಗಿದ್ದರು. ಇವರಿಗೆ ಕ್ರಿ. ಶ. 1836ನೇ ಫೆಬ್ರವರಿ 18ನೇ ದಿನ ಹುಟ್ಟಿದ ನಾಲ್ಕನೆಯ ಮಗನೇ ಶ್ರೀರಾಮಕೃಷ್ಣ. ಮಗು ಹುಟ್ಟಿದಾಗ ಗದಾಧರನೆಂದು ನಾಮಕರಣ ಮಾಡಿದರು. ಮನೆಯಲ್ಲಿ ಗದಾಯ್ ಎಂದು ಕರೆಯುತ್ತಿದ್ದರು. ಕ್ರಮೇಣ ಶ್ರೀರಾಮಕೃಷ್ಣ ಎಂಬ ಹೆಸರು ಅವರಿಗೆ ಸೇರಿ, ನಂತರ, ಇದೇ ಪ್ರಖ್ಯಾತವಾಗಿ ನಿಂತಿತು.

ಮಗುವು ಮನೆಯವರಿಗೆ ಮಾತ್ರ ಮುದ್ದಾಗಿ ಇರಲಿಲ್ಲ. ಇಡೀ ಹಳ್ಳಿಯೇ ಆ ಮಗುವನ್ನು ನೋಡಿ ಸಂತೊಭೀಷಗೊಂಡಿತು. ಅದು ಎಲ್ಲರಿಗೂ ಬೇಕಾದ ಮಗುವಾಯಿತು. ಮಗುವಿಗೆ ಸುಮಾರು ಐದು ಆರನೆ ವರುಷ ತುಂಬುವ ಹೊತ್ತಿಗೆ, ದೇವದೇವಿಯರ ಹಲವು ಸ್ತೋತ್ರಗಳು, ರಾಮಾಯಣ ಮಹಾಭಾರತದ ಕಥೆಗಳು ಇವನ್ನು ಕಲಿತುಕೊಂಡಿತು.

ಬಾಲ್ಯದಿಂದಲೂ ಅವರಲ್ಲಿ ಕೆಲವು ಒಳ್ಳೆ ಸ್ವಭಾವಗಳು ಬಹಳ ಚೆನ್ನಾಗಿ ರೂಪುಗೊಂಡಿದ್ದವು. ಸ್ವಲ್ಪವೂ ಅಂಜಿಕೆ ಸ್ವಭಾವದವರಲ್ಲ. ಉಳಿದ ಮಕ್ಕಳು ಎಲ್ಲಿಗೆ ಹೋಗಲು ಅಂಜುತ್ತಿದ್ದರೋ ಅಲ್ಲಿಗೆ ಅವರು ಧೈರ್ಯವಾಗಿ ಹೋಗುತ್ತಿದ್ದರು. ಸಾಧಾರಣವಾಗಿ ಎಂತಹವನಿಗಾದರೂ ಸ್ಮಶಾನ ಸ್ವಲ್ವ ಅಂಜಿಕೆ ತರುವ ಸ್ಥಳ. ಅಂತಹ ಕಡೆ ಒಬ್ಬರೇ ನಿರ್ಭಯವಾಗಿ ಹೋಗುತ್ತಿದ್ದರು. ಯಾರೂ ಇವರಿಗೆ ಇಚ್ಛೆ ಇಲ್ಲದುದನ್ನು ಕೋಪ ತೋರಿ ಅಥವಾ ಗದರಿಸಿ ಮಾಡಿಸುವುದಕ್ಕೆ ಆಗುತ್ತಿರಲಿಲ್ಲ. ಯಾರಿಗಾದರೂ ಒಮ್ಮೆ ಮಾತು ಕೊಟ್ಟರೆ ಸಾಕು, ಏನಾದರೂ ಆಗಲಿ ಅದನ್ನು ನಡೆಸಿಕೊಡುತ್ತಿದ್ದರು. ಉಪನಯನದ ಸಮಯದಲ್ಲಿ ಮೊದಲ ಭಿಕ್ಷೆಯನ್ನು ಅವರ ಕುಲಕ್ಕೆ ಸೇರಿದ ಹಿರಿಯರಿಂದ ತೆಗೆದುಕೊಳ್ಳುವುದು ರೂಢಿ. ಬಾಲ್ಯದಿಂದಲೂ ಧನಿ ಎಂಬುವ ಅಕ್ಕಸಾಲಿಗ ಹೆಂಗಸು ಇವರನ್ನು ಪ್ರೀತಿಸುತ್ತಿದ್ದಳು. ಅವಳು ಒಂದು ದಿನ ಮಗುವಿನೊಡನೆ ಉಪನಯನದ ಸಮಯದಲ್ಲಿ ತನ್ನಿಂದ ಭಿಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಬೇಡಿಕೊಂಡಳು. ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಿಗೆ ಇತ್ತರು. ಇವರಿಗೆ ಒಂಭತ್ತು ವರುಷದ ಸಮಯಕ್ಕೆ ಉಪನಯನವಾಯಿತು. ಆ ಸಮಯದಲ್ಲಿ ಆಕೆಯಿಂದ ಭಿಕ್ಷೆ ತೆಗೆದುಕೊಳ್ಳದಂತೆ ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಕೊನೆಗೂ ಧನಿ ಎಂಬ ಅಕ್ಕಸಾಲಿಗಳಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸಿದರು. ಸಾಧಾರಣವಾಗಿ ಆ ವಯಸ್ಸಿನಲ್ಲಿ ಮಕ್ಕಳು ದೊಡ್ಡವರು ಹೇಳಿದಂತೆ ಕೇಳುವುದು ಸ್ವಭಾವ. ಇಂತಹ ವಯಸ್ಸಿನಲ್ಲಿಯೇ ಅವರ ಜೀವನದಲ್ಲಿ ಸತ್ಯಕ್ಕಾಗಿ ಏನನ್ನಾದರೂ ಸಹಿಸುವ ಶಕ್ತಿಯನ್ನು ನೋಡುತ್ತೇವೆ. ನಿಜವಾದ ಪ್ರೀತಿಯ ಎದುರಿಗೆ ಸಂಪ್ರದಾಯದ ಆಚಾರವನ್ನೆಲ್ಲ ಕಿತ್ತೊಗೆದರು.

ಶ್ರೀರಾಮಕೃಷ್ಣರನ್ನು ಹಳ್ಳಿಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಓದುವುದು ಬರೆಯುವುದರಲ್ಲಿ ಸ್ವಲ್ಪ ಆಸಕ್ತಿ ತೋರಿದರೂ ಗಣಿತ ತಲೆಗೆ ಹತ್ತಲಿಲ್ಲ. ಶಾಲೆಯೊಳಗೆ ಕುಳಿತು ಓದುವುದಕ್ಕಿಂತ ಹತ್ತಿರವಿದ್ದ ತೋಪಿನಲ್ಲಿ ಆಡುವುದರಲ್ಲಿ ಇವರಿಗೆ ಆಸಕ್ತಿ. ಕೆಲವು ವೇಳೆ ಶಾಲಾ ಉಪಾಧ್ಯಾಯರು ಬರುವುದು ತಡವಾದರೆ ಹುಡುಗರೊಂದಿಗೆ ಹತ್ತಿರವಿರುವ ತೋಪಿಗೆ ಹೋಗಿ ಅವರು ನೋಡಿದ್ದ ಬಯಲಾಟವನ್ನು ಆಡುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ಹಾಡು ನಟನೆ ಇವುಗಳನ್ನು ಅಭಿನಯಿಸುವುದರಲ್ಲಿ ತುಂಬಾ ಪಾಂಡಿತ್ಯವನ್ನು ತೋರಿದರು. ಪ್ರಚಂಡ ಜ್ಞಾಪಕಶಕ್ತಿ ಇವರಲ್ಲಿತ್ತು. ಹಾಡನ್ನು ಒಂದು ಸಲ ಕೇಳಿದರೆ ಸಾಕು, ಅದನ್ನು ನೆನಪಿನಲ್ಲಿಡುತ್ತಿದ್ದರು. ಅದರಂತೆ ಅಭಿನಯಿಸುತ್ತಿದ್ದರು.

ಶ್ರೀರಾಮಕೃಷ್ಣರು ಹುಟ್ಟು ಕಲೋಪಾಸಕರು. ಬಾಹ್ಯಪ್ರಪಂಚದ ಮನಸೆಳೆವ ಬಣ್ಣ, ಆಕಾರ, ಭಾವ, ಧ್ವನಿ ಇವುಗಳೆಲ್ಲಾ ಇಂದ್ರಿಯಾತೀತ ಪ್ರಪಂಚದೆಡೆಗೆ ಇವರನ್ನು ಬೀಸಿ ಕರೆಯುತ್ತಿದ್ದವು. ಶ್ರೀರಾಮಕೃಷ್ಣರಿಗೆ ಆರೇಳು ವರುಷದ ಸಮಯ. ಆಗ ಒಂದು ದಿನ ಹಸುರು ಗದ್ದೆಯ ಬಯಲಿನಲ್ಲಿ ನಡೆಯುತ್ತಿದ್ದರು. ಕೈಯಲ್ಲಿದ್ದ ಒಂದು ಸಣ್ಣ ಬುಟ್ಟಿಯಲ್ಲಿ ಪುರಿ ಇತ್ತು. ಅದನ್ನು ತಿನ್ನುತ್ತ ಸುತ್ತಲೂ ನೋಡುತ್ತ ಹೋಗುತ್ತಿದ್ದರು. ಸುತ್ತಲೂ ಹಸಿರು ಗದ್ದೆ, ಮೇಲೆ ಮೋಡ ಕವಿದಿತ್ತು . ಅದು ಕ್ರಮೇಣ ವಿಸ್ತಾರವಾಗಿ ಆಕಾಶವನ್ನೆಲ್ಲಾ ವ್ಯಾಪಿಸಿತು. ಅದರ ಕಳಗೆ ಬಕಪಕ್ಷಿಯ ಸಾಲು ಹಾರಿಹೋಗುತ್ತಿತ್ತು. ಈ ಬಣ್ಣಗಳ ವೈವಿಧ್ಯತೆಯನ್ನು ನೋಡಿದಾಗ ಅವರ ಮನಸ್ಸಿಗೆ ಯಾವ ಇಂದ್ರಿಯಾತೀತ ಸತ್ಯ ಹೊಳೆಯಿತೋ ತಿಳಿಯದು, ಸಂಪೂರ್ಣ ತನ್ಮಯರಾಗಿ ಬಾಹ್ಯಪ್ರಪಂಚವನ್ನು ಮರೆತುಬಿಟ್ಟರು. ಹತ್ತಿರವಿದ್ದವರು ಅವರನ್ನು ಮನೆಗೆ ಕರೆದುಕೊಂಡು ಬಂದರು. ಸ್ವಲ್ವ ಹೊತ್ತಾದ ಮೇಲೆಯೇ ಅವರಿಗೆ ಬಾಹ್ಯಪ್ರಜ್ಞೆ ಬಂದುದು. ಆಗ ತಮ್ಮ ಮನಸ್ಸು ಇಂದ್ರಿಯಾತೀತ ಪ್ರಪಂಚದಲ್ಲಿ ಅವರ್ಣನೀಯ ಅನಂದದಲ್ಲಿ ತಲ್ಲೀನವಾಗಿತ್ತು ಎಂದರು.

ಒಂದು ಶಿವರಾತ್ರಿಯ ದಿನ. ಅಂದು ಜಾಗರಣೆ ಮಾಡಿ ಶಿವಪೂಜೆ ಮಾಡಬೇಕೆಂದು ಅಣಿಯಾಗಿತ್ತು. ಅಂದ�� ಊರಿನಲ್ಲಿ ಎಲ್ಲರ ಜಾಗರಣೆಗೆಂದು ಬಯಲುನಾಟಕ ಒಂವನ್ನು ಆಡಲು ಕೆಲವರು ಅಣಿಯಾಗುತ್ತಿದ್ದರು. ರಾತ್ರಿಯಾಯಿತು. ನಾಟಕ ಆರಂಭವಾಗುವ ಸಮಯ ಬಂದರೂ ಶಿವನ ಪಾತ್ರಧಾರಿ ಬರಲಿಲ್ಲ. ವಿಚಾರಿಸಿದಾಗ ಅವನಿಗೆ ಅನಾರೋಗ್ಯವೆಂದು ತಿಳಿದುಬಂದಿತು. ಆಗ ಸ್ನೇಹಿತರು ಬಂದು ಶ್ರೀರಾಮಕೃಷ್ಣರನ್ನು ಶಿವನ ಪಾತ್ರವನ್ನು ವಹಿಸಿಕೊಳ್ಳಬೇಕೆಂದು ಕೇಳಿಕೊಂಡರು. ಅವರು ಮೊದಲು ಒಪ್ಪಲಿಲ್ಲ. ಪೂಜೆ ಜಾಗರಣೆಯಲ್ಲಿ ಮನೆಯಲ್ಲೆ ಕಾಲ ಕಳೆಯಬೇಕೆಂದಿರುವೆ ಎಂದರು. ಬಂದವರು, ಪಾತ್ರ ಮಾಡಿದರೂ ಶಿವನನ್ನು ಕುರಿತು ಚಿಂತಿಸುತ್ತಲೇ ಇರಬೇಕಾಗುವುದು; ಅದರಿಂದ ನೀನು ಶಿವನ ಧ್ಯಾನವನ್ನು ಮಾಡಿದಂತೆಯೆ, ಎಂದು ಸಮಾಧಾನ ಹೇಳಿದ ಮೇಲೆ ಒಪ್ಪಿಕೊಂಡರು. ಶಿವನಂತೆ ಭಸ್ಮ ಬಳಿದುಕೊಂಡು ಜಟಾಧಾರಿಯಾಗಿ ರಂಗಭೂಮಿಯ ಮೇಲೆ ಬಂದು ನಿಂತರು. ರಾಮಕೃಷ್ಣರು ತಾನು ನಟಿಸುತ್ತಿರುವೆನು ಎಂಬುದನ್ನು ಮರೆತು ಶಿವಧ್ಯಾನದಲ್ಲಿ ತಲ್ಲೀನರಾದರು. ಕಣ್ಣಿನಿಂದ ಆನಂದಬಾಷ್ಪ ಸುರಿಯತೊಡಗಿತು. ಬಾಹ್ಯಪ್ರಪಂಚದ ಅರಿವನ್ನು ಮರೆತರು. ನೆರೆದ ಪ್ರೇಕ್ಷಕ ವೃಂದಕ್ಕೆ ಶಿವನ ಪಾತ್ರಧಾರಿ ಕಾಣಲಿಲ್ಲ. ಶಿವನಲ್ಲಿ ಐಕ್ಯನಾದ ಶಿವಭಕ್ತನು ಕಂಡನು. ಪಾತ್ರಮಾಡಲು ಇವರಿಂದ ಆಗಲಿಲ್ಲ. ಹತ್ತಿರವಿದ್ದವರು ಹಾಗೆಯೇ ಇವರನ್ನು ಮನೆಗೆ ಕರೆದುಕೊಂಡು ಹೋದರು. ಮಾರನೇ ದಿನವೇ ಇವರಿಗೆ ಜನರ ಅರಿವುಂಟಾಗಿದ್ದು.

ಮತ್ತೊಂದು ದಿನ ಮೂರು ಮೈಲಿಗಳ ದೂರದಲ್ಲಿದ್ದ ವಿಶಾಲಾಕ್ಷಿಯ ದೇವಸ್ಥಾನಕ್ಕೆ ಕೆಲವು ಹೆಂಗಸರೊಂದಿಗೆ ಹೋಗುತ್ತಿದ್ದರು. ನಡೆದುಕೊಂಡು ಹೋಗುತ್ತಿರುವಾಗ ದೇವಿಗೆ ಸಂಬಂಧಪಟ್ಟ ಹಲವು ಹಾಡುಗಳನ್ನು ಜೊತೆಯವರು ಹೇಳುತ್ತಿದ್ದರು. ತಕ್ಷಣವೇ ಶ್ರೀರಾಮಕೃಷ್ಣರು ಸ್ಥಿರವಾಗಿ ನಿಂತರು. ಕಣ್ಣಿನಲ್ಲಿ ಅಶ್ರುಧಾರೆ ಹರಿಯತೊಡಗಿತು. ಪ್ರಪಂಚದ ಅರಿವೇ ಇವರಿಗೆ ಇರಲಿಲ್ಲ. ಹತ್ತಿರವಿದ್ದ ಹೆಂಗಸರು ಎಷ್ಟು ಶೈತ್ಯೋಪಚಾರ ಮಾಡಿದರೂ ಇವರಿಗೆ ಪ್ರಜ್ಞೆ ಬರಲಿಲ್ಲ. ಕೆಲವರು ದೇವರ ಹೆಸರನ್ನು ಇವರ ಕಿವಿಯಲ್ಲಿ ಹೇಳಿದಾಗ ಬಾಹ್ಯಪ್ರಪಂಚದ ಅರಿವಾಯಿತು.

ಹಲವು ದೇವದೇವಿಯರ ವಿಗ್ರಹವನ್ನು ತಾವೇ ಮಾಡಿ ಪೂಜಿಸುತ್ತಿದ್ದರು. ಶ್ರೀರಾಮಕೃಷ್ಣರ ಏಳನೇ ವಯಸ್ಸಿನಲ್ಲಿ ಅವರ ತಂದೆ ಕಾಲವಾದರು. ಅವರು ಮೊದಲ ಬಾರಿ ತಮ್ಮ ಹತ್ತಿರದವರ ಸಾವನ್ನು ನೋಡಬೇಕಾಯಿತು. ಮೊದಲೆ ಅಂತರ್ಮುಖಿ ಸ್ವಭಾವ ಅವರದು. ಈ ದಾರುಣ ಪೆಟ್ಟು ತಾಕಿದಾಗ ಜಗತ್ತು ನಶ್ವರವೆಂಬ ಭಾವನೆ ಚಿರಮುದ್ರಿತವಾಯಿತು. ಅವರ ತಾಯಿಗೆ ಪತಿಯ ಅಗಲಿಕೆ ದಾರುಣ ವ್ಯಥೆಯನ್ನುಂಟು ಮಾಡಿತು. ಅವರು ಇದನ್ನೂ ಕಣ್ಣಾರೆ ನೋಡಬೇಕಾಯಿತು. ಸಾಧ್ಯವಾದಮಟ್ಚಿಗೆ ಯಾವಾಗಲೂ ತಾಯಿಯ ಹತ್ತಿರವಿರುತ್ತ ಕೈಲಾದಮಟ್ಟಿಗೆ ಅವರಿಗೆ ಸಂತೋಷವನ್ನುಂಟು ಮಾಡಲು ಯತ್ನಿಸಿದರು.

ಕಲ್ಕತ್ತೆಯಿಂದ ಪೂರಿಗೆ ಹೋಗುವ ದಾರಿಯಲ್ಲಿ ಕಾಮಾರಪುಕುರವಿತ್ತು. ಅನೇಕ ಯಾತ್ರಿಕರು ಅಲ್ಲಿ ತಂಗಿ ಹೋಗುತ್ತಿದ್ದರು. ಶ್ರೀರಾಮಕೃಷ್ಣರ ಮನೆಯ ಹತ್ತಿರವೇ ಅನೇಕ ಸಾಧುಸಂತರು ಇಳಿದುಕೊಳ್ಳುತ್ತಿದ್ದ ಛತ್ರವಿತ್ತು. ಶ್ರೀರಾಮಕೃಷ್ಣರು ಅಲ್ಲಿಗೆ ಪದೇಪದೇ ಹೋಗುತ್ತಿದ್ದರು. ಸಾಧುಗಳೊಡನೆ ಮಾತನಾಡುವುದು, ಅವರು ಹೇಳುವುದನ್ನು ಭಕ್ತಿಯಿಂದ ಕೇಳುವುದು, ಅವರಿಗೆ ಸಣ್ಣಪುಟ್ಟ ಕೆಲಸದಲ್ಲಿ ನೆರವಾಗುವುದು ಮುಂತಾದುವನ್ನು ಮಾಡುತ್ತಿದ್ದರು. ಒಂದು ದಿನ ಅವರಂತಯೇ ತಾವೂ ಸಾಧುವಾಗಬೇಕೆಂದು ಬಯಸಿ ಮೈಗೆ ಬೂದಿ ಬಳಿದುಕೊಂಡು ಬಟ್ಟೆಯನ್ನು ಬೈರಾಗಿಯಂತೆ ಉಟ್ಟುಕೊಂಡು ಮನೆಗೆ ಬಂದರು. ತಾಯಿಗೆ ತಾನು ಸಾಧುವಾಗಿಬಿಟ್ಟೆ ಎಂದರು. ಇದನ್ನು ನೋಡಿ ತಾಯಿ ತಳಮಳಿಸಿದಳು. ಅವರು ಪತಿಯ ಅಗಲಿಕೆಯನ್ನು ಶ್ರೀರಾಮಕೃಷ್ಣರನ್ನು ನೋಡಿ ಮರೆತಿದ್ದರು. ಈಗ ಈ ಮಗುವೆ ಹೀಗೆ ಆಗುವನೆಂದು ಹೇಳಿದಾಗ ಎದೆ ತಲ್ಲಣಿಸಿತು. ಶ್ರೀರಾಮಕೃಷ್ಣರು ತಾಯಿ ದುಃಖಿತಳಾದುದನ್ನು ನೋಡಿ, ತಮ್ಮ ಬೈರಾಗಿ ವೇಷವನ್ನು ತೆಗೆದುಹಾಕಿದರು.

ಶ್ರೀರಾಮಕೃಷ್ಣರ ಮನೆಯ ಸಮೀಪದಲ್ಲಿ ಸೀತಾನಾಥ ಪೈನಿ ಎಂಬ ಗೃಹಸ್ಥ ಭಕ್ತನಿದ್ದನು. ಆತನ ಮನೆಯಲ್ಲಿ ಹಲವಾರು ಹೆಣ್ಣುಮಕ್ಕಳು ಇದ್ದರು. ರಾಮಕೃಷ್ಣರು ಅವರ ಮನೆಗೆ ಹೋಗಿ ಅನೇಕ ವೇಳೆ ಹಾಡು ಕತೆ ಮುಂತಾದುವನ್ನು ಹೇಳಿ ಅವರನ್ನು ಸಂತೋಷ ಪಡಿಸುತ್ತಿದ್ದರು. ಆ ಮನೆಯವರು ಈ ಮಗುವಿನ ಹಾಡು ನಟನೆಗಳಿಗೆ ಮೆಚ್ಚಿ ಕೃಷ್ಣನ ವೇಷಕ್ಕೆ ಬೇಕಾಗುವ ಬಟ್ಟೆಬರೆಗಳನ್ನೂ ಒಂದು ಚಿನ್ನದ ಬಣ್ಣದ ಕೊಳಲನ್ನೂ ಇವರಿಗೆ ಕೊಟ್ವರಂತೆ.

ಅವರ ಮನೆಯ ಪಕ್ಕದಲ್ಲೆ ದುರ್ಗಾದಾಸ ಪೈನಿ ಎಂಬ ಮತ್ತೊಬ್ಬನಿದ್ದನು. ಅವರ ಮನೆಯವರು ಇನ್ನೂ ಘೋಷಾ ಪದ್ಧತಿಯನ್ನು ಬಿಟ್ಟಿರಲಿಲ್ಲ. ಆತನು ಇದಕ್ಕೆ ಹೆಮ್ಮೆಪಡುತ್ತಿದ್ದನು. ತನ್ನ ಮನೆಯ ಹೆಂಗಸರನ್ನು ಪರಪುರುಷರಾರೂ ನೋಡಿಲ್ಲ; ಅವರನ್ನು ನೋಡುವುದು ಅಸಾಧ್ಯ ಎನ್ನುತ್ತಿದ್ದನು. ರಾಮಕೃಷ್ಣರು ಇದನ್ನು ಕೇಳಿ "ಮುಸುಕಲ್ಲ ಹೆಂಗಸರ ಮಾನ ಕಾಪಾಡುವುದು – ಸಂಸ್ಕೃತಿ ಮತ್ತು ಒಳ್ಳೆಯ ನಡತೆ. ಬೇಕಾದರೆ ನಾನು ನಿಮ್ಮ ಮನೆಗೆ ಪ್ರವೇಶಿಸಬಲ್ಲೆ" ಎಂದರು. ಇದನ್ನು ಕೇಳಿ ದುರ್ಗಾದಾಸನು "ನೋಡೋಣ, ಹೇಗೆ ಮಾಡುವೆಯೊ" ಎಂದನು.

ಒಂದು ದಿನ ಸಂಜೆ ದುರ್ಗಾದಾಸನು ಕೆಲವರೊಂದಿಗೆ ಮಾತನಾಡುತ್ತ ಮನೆಯ ಜಗಲಿಯ ಮೇಲೆ ಕುಳಿತುಕೊಂಡಿದ್ದನು. ಒಬ್ಬ ಹುಡುಗಿ ಮುಸುಕಿನಲ್ಲಿ ಬಂದು, "ನಾನು ಹತ್ತಿರದ ಹಳ್ಳಿಯವಳು, ನೂಲನ್ನು ಮಾರುವುದಕ್ಕೆ ಬಂದೆ; ಸಂಜೆಯಾಯಿತು. ದೂರ ನಡೆದುಹೋಗಬೇಕು; ರಾತ್ರಿ ಇಲ್ಲಿ ತಂಗಿ ಹೋಗುವುದಕ್ಕೆ ಅವಕಾಶವಿದೆಯೆ?" ಎಂದು ಕೇಳಿದಳು. ದುರ್ಗಾದಾಸನು, "ಒಳಗೆ ಹೋಗಿ ಹೆಂಗಸರೊಡನೆ ಮಾತನಾಡು" ಎಂದು ಕಳುಹಿಸಿದನು. ಹುಡುಗಿ ಒಳಗೆ ಹೋದಮೇಲೆ ದುರ್ಗಾದಾಸನ ಹೆಣ್ಣುಮಕ್ಕಳು ಅಪರಿಚಿತ ಹುಡುಗಿಯನ್ನು ಆದರದಿಂದ ಬರಮಾಡಿಕೊಂಡು ತಿನ್ನುವುದಕ್ಕೆ ತಿಂಡಿ ಕೊಟ್ಟರು. ಅವರೊಡನೆ ಬಹಳ ಹೊತ್ತು ರಾತ್ರಿ ಮಾತನಾಡುತ್ತಿದ್ದಳು. ಬೀದಿಯ ಹೊರಗಡೆ ಯಾರೋ ಗದಾಯ್ ಎಂದು ಕೂಗುವುದು ಕೇಳಿತು. ಈ ಸದ್ದು ಹುಡುಗಿಯ ಕಿವಿಗೆ ಬಿದ್ದೊಡನೆಯೇ "ಅಣ್ಣ, ಬರುತ್ತೀನಿ" ಎಂದು ಕೂಗಿಕೊಂಡಳು. ಆಗ ಮನೆಯವರಿಗೆ ಗೊತ್ತಾಯಿತು. ಈ ಹುಡುಗಿ ಶ್ರೀರಾಮಕೃಷ್ಣರೇ ಎಂದು. ಎಲ್ಲರಿಗೂ ಆಶ್ಚರ್ಯವಾಯಿತು, ದುರ್ಗಾದಾಸನಿಗೆ ಮೊದಲಿಗೆ ಕೋಪ ಬಂದರೂ ಅನಂತರ ಈ ಹಾಸ್ಯದಲ್ಲಿ ಎಲ್ಲರೊಡನೆ ತಾನೂ ಭಾಗಿಯಾದನು.

ತಂದೆಯ ಕಾಲಾನಂತರ ಮನೆಯ ಜವಾಬ್ದಾರಿ ಶ್ರೀರಾಮಕೃಷ್ಣರ ಹಿರಿಯ ಅಣ್ಣ ರಾಮಕುಮಾರನ ಮೇಲೆ ಬಿದ್ದಿತು. ವಿಸ್ತಾರವಾಗುತ್ತಿರುವ ಸಂಸಾರವನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ಈತನೇನೋ ದೊಡ್ಡ ವಿದ್ಯಾವಂತನಾಗಿದ್ದನು. ಆದರೆ ಆ ಹಳ್ಳಿಯಲ್ಲಿ ವಿದ್ಯೆಗೆ ಗೌರವ ಸಿಕ್ಕೀತೆ ಹೊರತು ಹಣ ಸಿಕ್ಕುವಂತಿರಲಿಲ್ಲ. ಕಲ್ಕತ್ತೆಗೆ ಹೋಗಿ ಅಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನು ತೆರೆದನು. ಶ್ರೀರಾಮಕೃಷ್ಣರು ಆಗ ಕಾಮಾರಪುಕುರದಲ್ಲೇ ಇದ್ದರು. ಆಗ ಅವರಿಗೆ ಸುಮಾರು ಹದಿನಾರು ವಯಸ್ಸು. ಹಳ್ಳಿಯಲ್ಲಿದ್ದರೆ ಹುಡುಗ ಓದುವುದಿಲ್ಲವೆಂದು ಕೆಲವು ದಿನಗಳಾದ ಮೇಲೆ ರಾಮಕುಮಾರನು ತನ್ನ ತಮ್ಮನನ್ನು ಕಲ್ಕತ್ತೆಗೆ ಕರೆಸಿಕೊಂಡನು. ಕೆಲವು ದಿನ ಹುಡುಗನನ್ನು ಹೋದದಾರಿಗೆ ಬಿಟ್ಟನು. ಹುಡುಗನಿಗೆ ಓದಿನ ಕಡೆ ಮನಸ್ಸು ಓಡುತ್ತಿರಲಿಲ್ಲ. ಒಂದು ದಿನ ತಮ್ಮನನ್ನು ಕರೆದು, "ಹೀಗೆ ಆದರೆ ಹೇಗೆ? ನಿನ್ನ ಭವಿಷ್ಯವೇನು?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ನನಗೆ ಬಟ್ಟೆ, ಹಿಟ್ಟು ಕೊಡುವ ವಿದ್ಯೆ ಬೇಡ. ಯಾವುದು ನನ್ನ ಹೃದಯಕ್ಕೆ ಬೆಳಕನ್ನು ಕೊಡಬಲ್ಲದೋ, ಯಾವುದನ್ನು ತಿಳಿದರೆ ಮನುಷ್ಯ ನಿತ್ಯ ತೃಪ್ತವಾಗುತ್ತಾನೆಯೋ ಆ ವಿದ್ಯೆ ಪಡೆಯಲು ನಾನು ಯತ್ನಿಸುವೆನು" ಎಂದರು. ಅಣ್ಣ ಅಪ್ರತಿಭನಾದನು. ತಮ್ಮನು ಸುಲಭವಾಗಿ ದಾರಿಗೆ ಬರುವಂತೆ ಕಾಣಲಿಲ್ಲ. ತಾನು ಹೋಗುತ್ತಿದ್ದ ಕೆಲವು ಮನೆಗಳಿಗೆ ಪೂಜೆಗೆ ಹೋಗು ಎಂದು ಹೇಳಿದನು. ತಮ್ಮನು ಇದನ್ನು ಸಂತೋಷದಿಂದ ಒಪ್ಪಿಕೊಂಡನು.

ಹೀಗೆ ಶ್ರೀರಾಮಕೃಷ್ಣರು ಇತರರ ಮನೆಗಳಿಗೆ ಹೋಗಿ ಪೂಜೆ ಮಾಡಿದರು. ಮನೆಯವರಿಗೆ ಹೊಸ ಪೂಜಾರಿಯು ಪೂಜೆ ಮಾಡುವ ರೀತಿ, ಅವರ ಭಾವ ಮುಂತಾದುವನ್ನು ನೋಡಿ ಅವರಲ್ಲಿ ಹೆಚ್ಚು ಗೌರವ ಉಂಟಾಯಿತು. ಅವಸರವಿಲ್ಲದ ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ಭಾವಪೂರ್ವಕವಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಇವರನ್ನು ಕಂಡು ಎಲ್ಲ ಮನೆಯವರಿಗೂ ಪ್ರೀತಿಯುಂಟಾಯಿತು; ಕೊಡುವ ದಕ್ಷಿಣೆಯ ಆಸೆಗಲ್ಲದೆ ಕೇವಲ ಉಪಾಸನೆಗಾಗಿಯೆ ದೇವರನ್ನು ಇವರು ಪೂಜಿಸುತ್ತಿದ್ದರು

ಕಲ್ಕತ್ತೆಯಲ್ಲಿ ರಾಣಿ ರಾಸಮಣಿ ಎಂಬ ದೊಡ್ಡ ದೇವೀ ಭಕ್ತೆ ಇದ್ದಳು. ಆಕೆ ತುಂಬಾ ಶ್ರೀಮಂತಳು. ಬೆಸ್ತರ ಕುಲದಿಂದ ಬಂದವಳು. ಬೇಕಾದಷ್ಟು ದುಡ್ಡು ವ್ಯಯಿಸಿ ದಕ್ಷಿಣೇಶ್ವರ ಎಂಬಲ್ಲಿ ಗಂಗಾನದಿಯ ತೀರದಲ್ಲಿ ದೊಡ್ಡದೊಂದು ಕಾಳಿಕಾ ದೇವಾಲಯವನ್ನು ಕಟ್ಟಿಸಿದಳು. ಅದನ್ನು ಪ್ರತಿಷ್ಠೆ ಮಾಡುವ ದಿನ ಬಂದಿತು. ಆದರೆ ಅಲ್ಲಿ ಪೂಜೆಮಾಡಲು ಯಾವ ಬ್ರಾಹ್ಮಣ ಪೂಜಾರಿಯೂ ಬರಲಿಲ್ಲ. ರಾಣಿ ಖಿನ್ನಳಾದಳು. ಈ ಸಮಾಚಾರ ರಾಮಕುಮಾರನಿಗೆ ಗೊತ್ತಾಯಿತು. ಆತ ಈಕೆಗೆ ಒಂದು ಉಪಾಯವನ್ನು ಸೂಚಿಸಿದನು. ಆ ದೇವಸ್ಥಾನವನ್ನು ಅದಕ್ಕೆ ಪ್ರತಿವರ್ಷವೂ ತಗಲುವ ಖರ್ಚಿನ ಸಮೇತ ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿಬಿಟ್ಟರೆ ಆ ದೇವಸ್ಥಾನದಲ್ಲಿ ಯಾವ ಬ್ರಾಹ್ಮಣ ಪೂಜಾರಿ ಬೇಕಾದರೂ ಪೂಜೆ ಮಾಡಬಹುದು ಎಂದನು. ಹಾಗೆ ಮಾಡಿದರೂ ಯಾರೂ ಪೂಜೆಗೆ ಮುಂದೆ ಬರಲಿಲ್ಲ. ಕೊನೆಗೆ ಉಪಾಯ ಹೇಳಿಕೊಟ್ಟವನೇ ಮುಂದೆ ಬರಬೇಕಾಯಿತು. ರಾಮಕುಮಾರನೇ ಅಲ್ಲಿ ಪೂಜೆಮಾಡುವುದಕ್ಕೆ ಒಪ್ಪಿಕೊಂಡನು. ಜೊತೆಗೆ ರಾಮಕೃಷ್ಣರೂ ಬಂದರು. ಕೆಲವು ವೇಳೆ ಅವರು ಅಣ್ಣನು ಪೂಜೆ ಮಾಡುವುದಕ್ಕೆ ಅಣಿಮಾಡಿಕೊಡುತ್ತಿದ್ದರು.

ರಾಣಿ ರಾಸಮಣಿಯ ಹಿರಿಯ ಅಳಿಯ ಮಥುರನಾಥ ಬಿಶ್ವಾಸ್ ಎಂಬವನಿದ್ದನು. ಆತ ವಿದ್ಯಾವಂತ, ಮೇಲ್ವಿಚಾರಣೆ ನೋಡಿಕೊಳ್ಳುವುದರಲ್ಲಿ ತುಂಬಾ ನಿಪುಣ. ರಾಣಿಯ ಆಸ್ತಿಯನ್ನೆಲ್ಲ ಅವನೇ ನೋಡಿಕೊಳ್ಳುತ್ತಿದ್ದನು. ಹಲವು ವೇಳೆ ಆತ ಗುಡಿಗೆ ಬಂದಾಗ ರಾಮಕೃಷ್ಣರು ಅವನ ಕಣ್ಣಿಗೆ ಬೀಳುತ್ತಿದ್ದರು. ನೋಡಿದೊಡನೆಯೆ ಆ ಹುಡುಗನ ಮೇಲೆ ಮಥುರನಾಥನಲ್ಲಿ ಪ್ರೀತಿ ಹುಟ್ಟಿತು. ಹೇಗಾದರೂ ಮಾಡಿ ಆ ಹುಡುಗನನ್ನು ಗುಡಿಯಲ್ಲೇ ನಿಲ್ಲಿಸಬೇಕು. ಆತ ಪೂಜಾರಿಯಾದರೆ ಒಳ್ಳೆಯದಾದೀತು ಎಂದು ಭಾವಿಸಿ ವಿಚಾರಿಸಿದನು. ಆದರೆ ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಲಿಲ್ಲ.

ಕೆಲವು ಕಾಲವಾದ ಮೇಲೆ ರಾಮಕುಮಾರನು ತನ್ನ ಹಳ್ಳಿಗೆ ಹೋದನು. ಪುನಃ ಹಿಂತಿರುಗಿ ಬಂದು ದೇವಿಯ ಪೂಜೆಯನ್ನು ಮಾಡುವ ಸುಯೋಗ ಅವನಿಗೆ ಇರಲಿಲ್ಲ. ಅಲ್ಲಿಯೇ ಕಾಲವಾದನು. ಆ ಸಮಯಕ್ಕೆ ಸರಿಯಾಗಿ ಹೃದಯರಾಮನೆಂಬ ಶ್ರೀರಾಮಕೃಷ್ಣರ ನೆಂಟನೊಬ್ಬನು ದಕ್ಷಿಣೇಶ್ವರಕ್ಕೆ ಜೀವನೋಪಾಯಕ್ಕಾಗಿ ಬಂದನು. ವಯಸ್ಸಿನಲ್ಲಿ ಶ್ರೀರಾಮಕೃಷ್ಣರಿಗಿಂತ ಕೆಲವು ವರುಷ ಕಿರಿಯವನು. ಮಥುರನಾಥ ಮತ್ತೆ ಶ್ರೀರಾಮಕೃಷ್ಣರನ್ನು ಪೂಜೆ ಮಾಡುವಂತೆ ಕೇಳಿಕೊಂಡನು. ಶ್ರೀರಾಮಕೃಷ್ಣರು, "ದೇವಿಗೆ ಬೇಕಾದಷ್ಟು ಒಡವೆ ವಸ್ತ್ರಗಳನ್ನೆಲ್ಲ ಹಾಕಿರುವರು; ಅದು ಕಳೆದುಹೋದರೆ ಪೂಜಾರಿಯ ತಲೆಯ ಮೇಲೆ ಬರುವುದು. ಈ ತರದ ಜವಾಬ್ದಾರಿ ಕೆಲಸ ಬೇಡ" ಎಂದರು. ಹೃದಯನು, "ನಾನು ಜವಾಬ್ದಾರಿ ಕೆಲಸವನ್ನು ನೋಡಿಕೊಳ್ಳುತ್ತೇನೆ, ಶ್ರೀರಾಮಕೃಷ್ಣರು ಪೂಜೆ ಮಾಡಿದರೆ ಸಾಕು" ಎಂದನು. ಶ್ರೀರಾಮಕೃಷ್ಣರು ಪೂಜೆ ಮಾಡುವುದಕ್ಕೆ ಒಪ್ಪಿಕೊಂಡರು.

ಶ್ರೀರಾಮಕೃಷ್ಣರ ಜೀವನದಲ್ಲಿ ಮಥುರನಾಥನು ಅತಿ ಮುಖ್ಯವಾದ ಪಾತ್ರವನ್ನು ಪಡೆದನು. ಶ್ರೀರಾಮಕೃಷ್ಣರಿಗೆ ಸಾಧನೆಯ ಸಮಯದಲ್ಲಿ ಬೇಕಾಗುವ ಸೌಕರ್ಯಗಳನ್ನೆಲ್ಲಾ ಒದಗಿಸಿದನು. ಆತ ಶ್ರೀರಾಮಕೃಷ್ಣರನ್ನು ಅತಿ ಪ್ರೀತಿಯಿಂದ ಕಾಣುತ್ತಿದ್ದನು. ತನ್ನ ಇಷ್ಟ ದೈವವೇ ಶ್ರೀರಾಮಕೃಷ್ಣರಾಗಿರುವನು ಎಂದು ಭಾವಿಸಿದನು.

ದಕ್ಷಿಣೇಶ್ವರದ ಸನ್ನಿವೇಶ ಶ್ರೀರಾಮಕೃಷ್ಣರ ಜೀವನಕ್ಕೆ ಅತಿಮುಖ್ಯವಾದ ಹಿನ್ನೆಲೆಯಾಯಿತು. ಪೂಜೆಮಾಡುವುದಕ್ಕಿ ಪ್ರಾರಂಭಿಸಿದುದು ಇಲ್ಲಿ. ಅದ್ಭುತ ಸಾಧನೆ ಮಾಡಿದುದು ಇಲ್ಲಿ, ಮಹಾವ್ಯಕ್ತಿಗಳು ಇವರನ್ನು ಸಂದರ್ಶಿಸಲು ಬಂದುದು ಇಲ್ಲಿ. ಸ್ವಾಮಿ ವಿವೇಕಾನಂದರಂತಹ ಶಿಷ್ಯರನ್ನು ತರಬೇತು ಮಾಡಿದುದು ಇಲ್ಲಿ. ಶ್ರೀರಾಮಕೃಷ್ಣರ ಲೀಲಾ ನಾಟಕಕ್ಕೆ ದಕ್ಷಿಣೇಶ್ವರ ಒಂದು ರಂಗಭೂಮಿಯಾಯಿತು. ಪಾವನ ಗಂಗಾನದಿ ಮುಂದೆ ಹರಿಯುತ್ತಿದೆ. ನದಿಯಿಂದ ಬಂದೊಡನೆಯೆ ದೊಡ್ಡ ಸೋಪಾನ ಪಂಕ್ತಿ. ನಂತರ ಎಡಗಡೆ ಬಲಗಡೆ ಆರು ಆರು ಶಿವಮಂದಿರಗಳು. ಅದನ್ನು ದಾಟಿ ಹೋದರೆ ಭವ್ಯವಾದ ಕಾಳಿಕಾ ದೇವಸ್ಥಾನ. ಅದರ ಮುಂದುಗಡೆ ವಿಶಾಲವಾದ ನಾಟ್ಯಮಂದಿರ. ಮತ್ತೊಂದು ಕಡೆ ರಾಧಾಕೃಷ್ಣರ ದೇವಸ್ಥಾನ. ಸುತ್ತಲೂ ವಿಸ್ತಾರವಾದ ಅಂಗಳ. ಅದರ ಹಿಂದೆ ಪ್ರಾಕಾರದ ಸುತ್ತಲೂ ಯತ್ರಿಕರು ಬಂದರೆ ತಂಗಿಕೊಳ್ಳುವುದಕ್ಕೆ ಹಲವಾರು ಕೋಣೆಗಳು ಇವೆ. ಪ್ರಾಕಾರವನ್ನು ದಾಟಿದೊಡನೆ ಗಂಗಾನದಿಯ ತೀರದಲ್ಲಿ ಅತಿ ದಟ್ಟವಾದ ಕಾಡು, ನಿರ್ಜನ ಪ್ರದೇಶ. ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದಕ್ಕೆ ಯೋಗ್ಯವಾದ ಸ್ಥಳ. ಪರಮಹಂಸರು ಈ ಪಾವನ ಪ್ರದೇಶವನ್ನು ತಮ್ಮ ತಪಸ್ಸಿನಿಂದ ಪಾವನತರ ಮಾಡಿದರು.

ಶ್ರೀರಾಮಕೃಷ್ಣರು ಪೂಜಾಕಾರ್ಯವನ್ನು ಆರಂಭಿಸಿದರು. ಬೆಳಗ್ಗೆ ಭಕ್ತಿಯಿಂದ ಕಂಪಿಸುತ್ತ ಗುಡಿಗೆ ಹೋಗುವರು. ದೇವಿಗೆ ಅಲಂಕಾರ ಮಾಡುವರು. ಪೂಜೆ ಮಾಡುವರು, ನೈವೇದ್ಯ ಮಾಡುವರು. ಆದರೆ ಇದರಲ್ಲಿ ಶ್ರೀರಾಮಕೃಷ್ಣರ ಜೀವನ ಕೊನೆಗೊಂಡಿದ್ದರೆ ಅವರು ಒಬ್ಬ ಪೂಜಾರಿ ಮಾತ್ರ ಆಗಿರುತ್ತಿದ್ದರು, ಜಗದ್ವಂದ್ಯ ಶ್ರೀರಾಮಕೃಷ್ಣರು ಆಗುತ್ತಿರಲಿಲ್ಲ. ಶಿಲಾಮೂರ್ತಿಯಲ್ಲಿ ಚೇತನವಿದೆಯೆ? ಆಕೆ ಶಿಲ್ಪಿಗಳು ಕೊರೆದ ವಿಗ್ರಹವೋ ಅಥವಾ ಭಕ್ತರು ಕಂಡ ದರ್ಶನವೋ? ಆಕೆ ಕೇವಲ ಒಂದು ಕಲ್ಪನೆಯ ಕತೆಯೋ ಅಥವಾ ಭಕ್ತರ ಮೊರೆಯನ್ನು ಕೇಳಿ ಅವರನ್ನು ಸದಾ ಉದ್ಧಾರಮಾಡಲು ಕಾದು ಕುಳಿತಿರುವ ಮಹಾ ಶಕ್ತಿ ಚಿಲುಮೆಯೋ? ಈ ಸಮಸ್ಯೆಯನ್ನು ಪರೀಕ್ಷಿಸುವುದಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿದರು.

ಶ್ರೀರಾಮಕೃಷ್ಣರು ಎಲ್ಲ ಜನರಿಂದ ದೂರವಾದರು. ಅವರದೇ ಆದ ಪ್ರಪಂಚದಲ್ಲಿ ವಿಹರಿಸತೊಡಗಿದರು. ಜಗನ್ಮಾತೆಯನ್ನು ನೋಡಬೇಕೆಂಬ ಆಸೆ ಕಾಡುಗಿಚ್ಚಿನೋಪಾದಿ ಅವರ ಜೀವನವನ್ನೆಲ್ಲ ವ್ಯಾಪಿಸಿತು. ಹಗಲು ಪೂಜೆಮಾಡುವರು, ಕಂಬನಿದುಂಬಿ ಜಗನ್ಮಾತೆಗಾಗಿ ಅತ್ತು ಕರೆಯುವರು : "ಹೇ ತಾಯೆ ! ನೀನು ಎಲ್ಲಿರುವೆ, ಮೈದೋರು, ರಾಮಪ್ರಸಾದ ನಿನ್ನ ದರ್ಶನ ಪಡೆದು ಅನುಗ್ರಹೀತನಾದ. ನಾನೇನು ಪಾಪಿಯೇ ! ನನ್ನ ಬಳಿಗೆ ನೀನೇಕೆ ಬಾರೆ? ನನಗೆ ಸುಖ ಬೇಡ, ಐಶ್ವರ್ಯ ಬೇಡ, ಸ್ನೇಹಿತರು ಬೇಡ, ನನಗೆ ಪ್ರಪಂಚದ ಯಾವ ಭೋಗವೂ ಬೇಡ. ಹೇ ತಾಯೇ, ನಿನ್ನನ್ನು ನೋಡುವುದೊಂದೇ ನನ್ನ ಚರಮಗುರಿ." ದಿನದ ಅಂತ್ಯಸಮಯವನ್ನು ಸೂಚಿಸುವ ಘಂಟಾಧ್ವನಿಯನ್ನು ಕೇಳಿದೊಡನೆಯೆ ಉದ್ವಿಗ್ನರಾಗಿ ಅಳತೊಡಗುವರು : "ತಾಯೆ ಮತ್ತೊಂದು ದಿನ ವ್ಯರ್ಥವಾಯಿತು. ನಾನು ಇನ್ನೂ ನಿನ್ನನ್ನು ಸಂದರ್ಶಿಸಲಿಲ್ಲ. ಈ ಅಲ್ಪಜೀವನದಲ್ಲಿ ಆಗಲೇ ಒಂದು ದಿನ ಕಳೆಯಿತು. ನನಗೆ ಇನ್ನೂ ಸತ್ಯ ಸಾಕ್ಷಾತ್ಕಾರವಾಗಲಿಲ್ಲ."

ಬೇಕಾದಷ್ಟು ಅತ್ತರು, ಪ್ರಾರ್ಥಿಸಿದರು, ಧ್ಯಾನಮಾಡಿದರು. ಆದರೂ ದೇವಿ ಮೈದೋರಲಿಲ್ಲ. ಒಂದು ದಿನ ಗರ್ಭಗುಡಿಯೊಳಗೆ ಇರುವಾಗ, ದೇವಿಯ ದರ್ಶನ ಪಡೆಯದ ಬಾಳು ನಿರರ್ಥಕ, ಇದು ಕೊನೆಗಾಣಲಿ ಎಂದು ಬಲಿಕೊಡುವ ಕತ್ತಿಯನ್ನು ತೆಗೆದುಕೊಂಡು ತಮ್ಮ ರುಂಡವನ್ನು ದೇವಿಯ ಅಡಿದಾವರೆಯಲ್ಲಿ ಚಂಡಾಡುವುದರಲ್ಲಿದ್ದರು. ಆಗ ಮಾಯಾ ತೆರೆ ಹಿಂದೆ ಸರಿಯಿತು. ಜಗನ್ಮಾತೆ ಪ್ರತ್ಯಕ್ಷಳಾದಳು. ಸಚ್ಚಿದಾನಂದ ಸ್ವರೂಪಿಣಿಯಲ್ಲಿ ಅವರ ಮನಸ್ಸು ತಲ್ಲೀನವಾಯಿತು. ಬಾಹ್ಯಪ್ರಪಂಚಕ್ಕೆ ಬಂದ ಮೇಲೆ ಅವರ ನಡತೆ ಸಂಪೂರ್ಣ ಬದಲಾಯಿಸಿತು. ಅವರ ಪಾಲಿಗೆ ಕಲ್ಲಿನ ವಿಗ್ರಹ ಮಾಯವಾಗಿ, ಅದೊಂದು ಸಚೇತನ ಮೂರ್ತಿಯಾಯಿತು. ಅಂದಿನಿಂದ ಪೂಜಾ ವಿಧಾನವೇ ಬೇರೆ ರೂಪು ತಾಳಿತು. ದೇವಿ ಅವರು ಕೊಟ್ಟ ನೈವೇದ್ಯವನ್ನು ಊಟ ಮಾಡುತ್ತಿದ್ದಳು. ಮಾಡಿದ ಪೂಜೆಯನ್ನು ಸ್ವೀಕರಿಸುತ್ತಿದ್ದಳು. ಬೇಡಿದ ಪಾರ್ಥನೆಯನ್ನು ಈಡೇರಿಸುತ್ತಿದ್ದಳು. ಮಗು ತಾಯಿಯೊಂದಿಗೆ ಯಾವ ರೀತಿ ಸಲಿಗೆಯಿಂದ ಇರುವುದೋ ಅದೇ ಸಲಿಗೆಯಲ್ಲಿ ಇವರು ಜಗನ್ಮಾತೆಯೊಡನೆ ವರ್ತಿಸುತ್ತಿದ್ದರು.

ಜಗನ್ಮಾತೆ ಪ್ರತ್ಯಕ್ಷಳಾದ ನಂತರ ಶ್ರೀರಾಮಕೃಷ್ಣರ ಪೂಜಾ ವಿಧಾನ ಬೇರೆ ರೂಪಕ್ಕೆ ತಿರುಗಿತು. ನೈವೇದ್ಯಕ್ಕೆ ಕೊಟ್ಟದ್ದನ್ನು ಕೆಲವು ವೇಳೆ ತಾವು ಮೊದಲು ರುಚಿ ನೋಡುವರು, ನಂತರ ದೇವಿಗೆ ಅರ್ಪಣೆ ಮಾಡುತ್ತಿದ್ದರು. ಹೂವು, ಗಂಧ, ದೇವಿಗೆ ಅರ್ಪಣೆ ಮಾಡುವುದಕ್ಕೆ ಮುಂಚೆ, ಜಗನ್ಮಾತೆ ತಮ್ಮಲ್ಲಿಯೂ ಇರುವಂತೆ ಭಾಸವಾಗಿ ಅದರಿಂದ ತಮ್ಮನ್ನೇ ಅಲಂಕರಿಸಿಕೊಳ್ಳುತ್ತಿದ್ದರು. ಮಂಗಳಾರತಿಯನ್ನು ಕೆಲವು ವೇಳೆ ಬಹಳ ಹೊತ್ತು ಮಾಡುತ್ತಿದ್ದರು. ಕೆಲವು ವೇಳೆ ಬಹಳ ಬೇಗ ಪೂರೈಸುವರು. ಸಾಮಾನ್ಯ ಜನರು ಅವರನ್ನು ಹುಚ್ಚು ಪೂಜಾರಿಯೆಂದು ಕರೆಯತೊಡಗಿದರು. ಸಾಧಾರಣವಾಗಿ ಮನುಷ್ಯರು ಮತ್ತೊಬ್ಬರನ್ನು ಅಳೆಯುವ ರೀತಿಯೇ ಹೀಗೆ. ಯಾರು ತಮ್ಮಂತೆ ಇಲ್ಲವೋ ಅವರೆಲ್ಲ ಹುಚ್ಚರು. ತಮಗೆ ಮಾತ್ರ ಬುದ್ಧಿ ಸ್ಥಿಮಿತವಾಗಿರುವುದೆಂದು ಭಾವಿಸುವರು. ದೇವಸ್ಥಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಮಥುರನಾಥನಿಗೂ ಈ ಸುದ್ದಿ ತಿಳಿಯಿತು. ಆತನಿಗೆ ಮೊದಲಿನಿಂದಲೂ ಶ್ರೀರಾಮಕೃಷ್ಣರ ಮೇಲೆ ಗೌರವ. ಇದನ್ನು ಕೇಳಿ ಅತಿ ವ್ಯಾಕುಲಿತನಾಗಿ ತಾನೆ ಬಂದು ಇದನ್ನು ನೋಡುವವರೆಗೂ ಯಾರೂ ಇವರಿಗೆ ತೊಂದರೆಯನ್ನು ಕೊಡಕೂಡದೆಂದು ಹೇಳಿಕಳುಹಿಸಿದನು. ಒಂದು ದಿನ ಅವನೇ ಬಂದು ಇವರ ಪೂಜಾವಿಧಾನವನ್ನು ನೋಡಿದನು. ಇದು ಹುಚ್ಚಲ್ಲ, ದೈವೋನ್ಮಾದವೆಂದು ತಿಳಿದು ಯಾರೂ ಅವರಿಗೆ ತೊಂದರೆ ಕೊಡದಂತೆ ಎಚ್ಚರಿಸಿ ಹೋದನು.

ಒಂದು ದಿನ ರಾಣಿ ರಾಸಮಣಿ ಶ್ರೀರಾಮಕೃಷ್ಣರು ಪೂಜೆ ಮಾಡುತ್ತಿದ್ದಾಗ ಬಂದಳು. ಪೂಜೆಯಾದ ಮೇಲೆ ರಾಮಕೃಷ್ಣರನ್ನು ಒಂದೆರಡು ಭಕ್ತಿಯ ಹಾಡನ್ನು ಹಾಡುವಂತೆ ಕೇಳಿಕೊಂಡಳು. ಶ್ರೀರಾಮಕೃಷ್ಣರು ಹಾಡುತ್ತಿರುವಾಗ ಆಕೆಯ ಮನಸ್ಸು ಹಾಡಿನ ಮೇಲೆ ಇರಲಿಲ್ಲ. ಯಾವುದೊ ಒಂದು ಮೊಕದ್ದಮೆಯ ವಿಷಯವನ್ನು ಚಿಂತಿಸುತ್ತಿತ್ತು. ಶ್ರೀರಾಮಕೃಷ್ಣರು ಇದನ್ನು ಗ್ರಹಿಸಿ ಆಕೆಯ ಹತ್ತಿರ ಹೋಗಿ "ಇಲ್ಲಿಯೂ ಪ್ರಾಪಂಚಿಕ ಚಿಂತನೆಯೆ?" ಎಂದು ಕೆನ್ನೆಗೆ ಏಟು ಕೊಟ್ಟರು. ರಾಣಿ ರಾಸಮಣಿ ತನ್ನ ತಪ್ಪನ್ನು ಒಪ್ಪಿಕೊಂಡು ಕುಪಿತಳಾಗದೆ, ಜಗನ್ಮಾತೆಯೇ ತನಗೆ ಈ ರೀತಿ ಶಿಕ್ಷಿಸಿದಳೆಂದು ಭಾವಿಸಿದಳು. ಅದರ ಇಂತಹ ಕೆಲವು ದೃಶ್ಯಗಳನ್ನು ಕಂಡ ಇತರರು ಶ್ರೀರಾಮಕೃಷ್ಣರು ನಿಜವಾಗಿ ಹುಚ್ಚರೆಂದು ಭಾವಿಸಿದರು. ಆದರೆ ರಾಣಿಗೆ ಇವರೊಬ್ಬ ಮಹಾಭಕ್ತರೆಂದು ಗೊತ್ತಾಯಿತು. ವಜ್ರದ ವ್ಯಾಪಾರಿಗೆ ಮಾತ್ರ ವಜ್ರ ಯಾವುದು, ಗಾಜಿನ ಚೂರು ಯಾವುದು ಎಂಬುದು ಗೊತ್ತಾಗುವುದು.

ರಾಣಿ ರಾಸಮಣಿ, ಮಥುರನಾಥ ಇವರಿಬ್ಬರೂ ಶ್ರೀರಾಮಕೃಷ್ಣರ ಜೀವನದಲ್ಲಿ ಮುಖ್ಯ ಪಾತ್ರವನ್ನು ಪಡೆದಿರುವರು ಎಂಬುದನ್ನು ಆಗಲೇ ತಿಳಿಸಿರುವೆವು. ಅವರಿಗೂ ರಾಮಕೃಷ್ಣರಿಗೂ ಸಂಬಂಧಪಟ್ಟ ಒಂದೆರಡು ಘಟನೆಗಳಿಂದ ಪರಮಹಂಸರ ವ್ಯಕ್ತಿತ್ವ ಇನ್ನೂ ಹೆಚ್ಚು ಪ್ರಕಾಶಕ್ಕೆ ಬರುವುದನ್ನು ನೋಡುತ್ತೇವೆ. ಒಂದು ದಿನ ರಾಧಾಕೃಷ್ಣನ ದೇವಸ್ಥಾನದಲ್ಲಿ ರಾಧಾರಮಣನ ವಿಗ್ರಹದ ಕಾಲು ಪೂಜಾರಿಯ ಅಜಾಗರೂಕತೆಯಿಂದ ಮುರಿದು ಹೋಯಿತು. ಭಿನ್ನವಾದ ವಿಗ್ರಹವನ್ನು ಪೂಜಿಸುವುದು ಅಶಾಸ್ತ್ರೀಯವೆಂದು ಪಂಡಿತರು ಸಾರಿದರು. ಇಷ್ಟು ದಿನವೂ ಪೂಜಿಸುತ್ತಿದ್ದ ಆ ವಿಗ್ರಹವನ್ನು ತೆಗೆದಿಡಲು ರಾಣಿಯ ಮನಸ್ಸು ಒಪ್��ಲಿಲ್ಲ. ಹೀಗೆ ವ್ಯಾಕುಲದಲ್ಲಿರುವಾಗ ಶ್ರೀರಾಮಕೃಷ್ಣರು ಹೀಗೆ ಹೇಳಿದರು: "ನಿನ್ನ ಅಳಿಯ ಮಥುರನಾಥನಿಗೆ ಕಾಲು ಮುರಿದುಹೋದರೆ ಅವನನ್ನು ನೀನು ಹೊರಗೆ ಕಳುಹಿಸಿ ಬೇರೆ ಅಳಿಯನನ್ನು ಬರಮಾಡಿಕೊಳ್ಳುವೆಯಾ? ಅದರಂತೆಯೇ ವಿಗ್ರಹವನ್ನು ಸರಿಮಾಡಿ ಉಪಯೋಗಿಸಬಹುದು" ಎಂದರು. ಯಾವ ಶಾಸ್ತ್ರವೂ ಬಗೆಹರಿಸದ ಒಂದು ಸಮಸ್ಯೆಯನ್ನು ಶ್ರೀರಾಮಕೃಷ್ಣರು ಪ್ರಪಂಚದಿಂದ ಆರಿಸಿಕೊಂಡ ಒಂದು ಉಪಮಾನದ ಮೂಲಕ ಬಗೆಹರಿಸಿದರು.

ಶ್ರೀರಾಮಕೃಷ್ಣರು ಪೂಜೆಗೆ ಒಂದು ದಿನ ಹೂವನ್ನು ಕೊಯ್ಯಲು ಹೋದಾಗ ಆ ಹೂವುಗಳೆಲ್ಲಾ ಆಗತಾನೇ ವಿರಾಟ್ ಸ್ವರೂಪಿ ಭಗವಂತನಿಗೆ ಅರ್ಪಿತವಾದಂತೆ ಭಾಸವಾಯಿತು. ಪ್ರತಿಯೊಂದು ಹೂವಿನ ಗಿಡವೂ ಅವನ ಕೈಯಲ್ಲಿರುವ ತುರಾಯಿಯಂತೆ ಕಂಡಿತು. ಅಂದಿನಿಂದ ಬಾಹ್ಯಪೂಜೆ ಮಾಡುವುದನ್ನು ಬಿಟ್ಟರು. ಹೃದಯನೆ ಈ ಕೆಲಸವನ್ನು ಕೈಗೊಂಡನು.

ಮಥುರನಾಥನು ಒಂದು ದಿನ ಶ್ರೀರಾಮಕೃಷ್ಣರೊಡನೆ ಮಾತನಾಡುತ್ತಿದ್ದಾಗ "ದೇವರೂ ಕೂಡ ನಿಯಮವನ್ನು ಮೀರಲಾರ" ಎಂದನು. ಅಗ ಶ್ರೀರಾಮಕೃಷ್ಣರು ದೇವರಿಗೆ ಎಲ್ಲವೂ ಸಾಧ್ಯವೆಂದರು. ಮಥುರನಾಥನು "ಹಾಗಾದರೆ ಬಿಳಿ ದಾಸವಾಳದ ಹೂವು ಬಿಡುವ ಗಿಡದಲ್ಲಿ ಕೆಂಪು ಹೂವು ಬಿಡಬಲ್ಲದೆ?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ಅವನ ಇಚ್ಛೆಯಾದರೆ ಬಿಡದೆ ಏನು?" ಎಂದರು. ಮಾರನೆದಿನ ತೋಟದಲ್ಲಿ ಹೋಗುತ್ತಿದ್ದಾಗ ಬಿಳಿ ದಾಸವಾಳದ ಗಿಡದಲ್ಲಿ ಒಂದು ಅಪರೂಪವಾಗಿ ಕೆಂಪು ದಾಸವಾಳ ಬಿಟ್ಟಿರುವುದನ್ನು ನೋಡಿದರು. ಅದನ್ನು ಮಥುರನಾಥನಿಗೆ ತೋರಿಸಿ, "ನೋಡು ದೇವರಿಗೆ ಯಾವುದು ಅಸಾಧ್ಯ?" ಎಂದರು. ಮಥುರನು, "ಅಬ್ಬ, ನಿಮ್ಮ ಹತ್ತಿರ ಮಾತನಾಡುವುದು ತುಂಬಾ ಕಷ್ಟ!" ಎಂದು ತೆಪ್ಪಗಾದನು.

ಮತ್ತೊಂದು ದಿನ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ವಿಗ್ರಹದ ಮೇಲಿದ್ದ ಒಡವೆಗಳನ್ನೆಲ್ಲಾ ಅಪಹರಿಸಿದರು. ಮಥುರನು ಇದನ್ನು ಕೇಳಿ ಅತಿ ವ್ಯಾಕುಲನಾಗಿ ಶ್ರೀರಾಮಕೃಷ್ಣರ ಹತ್ತಿರ ಬಂದು, "ಏನು ದೇವರು ತನ್ನ ಮೇಲಿರುವ ಒಡವೆಗಳನ್ನು ಕೂಡ ಕಳ್ಳರಿಂದ ಕಾಪಾಡಿಕೊಳ್ಳಲಾರದೆ ಹೋದನಲ್ಲ" ಎಂದನು. ಇದನ್ನು ಕೇಳಿ ಶ್ರೀರಾಮಕೃಷ್ಣರು, "ಓ ! ಏನು ಮಾತನಾಡುವೆ. ನಿನಗೆ ಅದು ಬೆಲೆಬಾಳುವ ಒಡವೆ. ದೇವರಿಗೆ ಅದು ಮಣ್ಣಿಗೆ ಸಮಾನ. ದೇವರ ಮನೆಬಾಗಿಲನ್ನು ಕುಬೇರ ಕಾಯುತ್ತಿರುವಾಗ ನಿನ್ನ ಒಂದೆರಡು ಒಡವೆ ಮತ್ತಾರೋ ಹೊತ್ತುಕೊಂಡು ಹೋದರೆ ಅದನ್ನು ದೇವರು ಗಮನಿಸುವನೇ?" ಎಂದರು.

ಸಾಧಾರಣ ಮನುಷ್ಯರು ದೇವರ ಮಹಾತ್ಮೆಯನ್ನು ಅಳೆಯುವುದು ಹೀಗೆ. ಆ ಒಡವೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಕಳ್ಳನೇನಾದರೂ ರಕ್ತಕಾರಿ ಸತ್ತಿದ್ದರೆ, ಪರವಾಗಿಲ್ಲ, ದೇವರಲ್ಲಿ ಏನೋ ಸತ್ಯವಿದೆ ಎನ್ನುವರು. ಏನೂ ಆಗದೆ ಹೋದರೆ, ಅಯ್ಯೋ ಮಹಾತ್ಮೆಯನ್ನು ಏನು ಇದೆ! ಎನ್ನುವರು. ದೇವರಿಗೆ ಸತ್ಪುರುಷ ಹೇಗೆ ಒಬ್ಬ ಮಗನೋ ಹಾಗೆಯೇ ಕಳ್ಳನೂ ಒಬ್ಬ ಮಗ ಎಂಬ ಭಾವ ಬರಬೇಕಾದರ ಜೀವ ತುಂಬಾ ಮುಂದುವರಿದಿರಬೇಕು.

ಶ್ರೀರಾಮಕೃಷ್ಣರು ಅಸಾಧಾರಣ ರೀತಿಯಲ್ಲಿ ವ್ಯವಹರಿಸುತ್ತ ಇದ್ದುದು ಸಾಧಾರಣ ಜನರಿಗೆ ಗೊತ್ತಾಗಲಿಲ್ಲ. ಇವರು ಹುಚ್ಚರಾಗಿ ಹೋಗಿರುವರು ಎಂಬ ಸುದ್ದಿ ಸುತ್ತಲೂ ಹಬ್ಬಿತು. ಇದು ಕಾಮಾರಪುಕುರಕ್ಕೂ ಮುಟ್ಟಿತು. ಶ್ರೀರಾಮಕೃಷ್ಣರ ತಾಯಿ ಚಂದ್ರಮಣಿದೇವಿ 1859ರಲ್ಲಿ ಮಗನನ್ನು ಕಾಮಾರಪುಕುರಕ್ಕೆ ಕರೆಸಿಕೊಂಡರು. ಔಷಧೋಪಚಾರ, ಯಂತ್ರಮಂತ್ರಗಳೆಲ್ಲವನ್ನೂ ಮಾಡಿಸಿದರು. ಆದರೆ ಇವರ ಹುಚ್ಚು ಮಾಯವಾಗುವ ರೀತಿ ಕಾಣಲಿಲ್ಲ. ಪರಮಹಂಸರೆ ಒಂದು ಸಲ ಹಾಸ್ಯವಾಗಿ, ಬೇಕಾದರೆ ನನಗೆ ರೋಗವಿದ್ದರೆ ಗುಣಮಾಡಿ. ಆದರೆ ದೇವರ ಹುಚ್ಚನ್ನು ಮಾತ್ರ ಬಿಡಿಸಬೇಡಿ ಎಂದರು. ಯಾರೋ ಚಂದ್ರಮಣಿದೇವಿಗೆ ಮಗನಿಗೆ ಮದುವೆ ಮಾಡಿದರೆ ಹುಚ್ಚು ಬಿಟ್ಟು ಹೋಗುವುದೆಂದು ಹೇಳಿದರು. ಹೆಣ್ಣಿಗೆ ಬೇಕಾದಷ್ಟು ಹುಡುಕತೊಡಗಿದರು. ಸುಮಾರು ಮೂರು ಮೈಲಿ ದೂರದ ಜಯರಾಮಬಟಿ ಎಂಬ ಗ್ರಾಮದಲ್ಲಿ ರಾಮಚಂದ್ರ ಮುಖ್ಯೋಪಾಧ್ಯಾಯರ ಮನೆಯಲ್ಲಿ ಐದು ವರ್ಷದ ಒಂದು ಹೆಣ್ಣು ಮಗು ಸಿಕ್ಕಿತು. ಆಗ ಶ್ರೀರಾಮಕೃಷ್ಣರಿಗೆ 23 ವರ್ಷ ವಯಸ್ಸು. ವಧುವರರಿಗೆ ಅಂತರ ಹದಿನೆಂಟು ವರುಷ! ಅಂತೂ ಮದುವೆಯಾಯಿತು. ಈ ಮದುವೆಯ ಗುರಿ ಶ್ರೀರಾಮಕೃಷ್ಣರಿಗೆ ಹಿಡಿದ ದೇವರ ಹುಚ್ಚನ್ನು ಬಿಡಿಸುವುದು. ಆದರೆ ಇವರ ಭವಿಷ್ಯ ಜೀವನ, ಮದುವೆ ಮಾಡಿದ ಉದ್ದೇಶ ಸಫಲವಾಗಲಿಲ್ಲವೆಂಬುದಕ್ಕೆ ಉದಾಹರಣೆಯಾಗಿದೆ.

ಮದುವೆಯಾದ ಕೆಲವು ತಿಂಗಳ ಮೇಲೆ ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹಿಂದಿರುಗಿದರು. ಆಧ್ಯಾತ್ಮಿಕ ಘಟನಾವಳಿಗಳ ಮಧ್ಯದಲ್ಲಿ ಇವರ ಜೀವನ ಸಿಲುಕಿ ಸುಂಟರಗಾಳಿಯಲ್ಲಿ ಸುತ್ತುವ ತರಗಲೆಯಂತೆ ಆಯಿತು.

ಧ್ಯಾನಕ್ಕೆ ಕುಳಿತರೆಂದರೆ ಶಿಲಾವಿಗ್ರಹದಂತೆ ಆಗುತ್ತಿದ್ದರು. ಇವರ ಅಚಲ ದೇಹವ ನೋಡಿ ಹಕ್ಕಿಗಳು ನಿರ್ಭಯವಾಗಿ ಅದರ ಮೇಲೆ ಕುಳಿತುಕೊಳ್ಳುತ್ತಿದ್ದವು.

ಶ್ರೀರಾಮಕೃಷ್ಣರು ದೇವಿಯ ದರ್ಶನವನ್ನೇನೋ ಪಡೆದಿದ್ದರು. ಆದರೆ ಅದರಲ್ಲಿ ತೃಪ್ತರಾಗಲಿಲ್ಲ. ದೇವರನ್ನು ಎಷ್ಟೆಷ್ಟು ರೂಪಿನಲ್ಲಿ ನೋಡಲು ಸಾಧ್ಯವೊ ಅಷ್ಟು ರೂಪಿನಲ್ಲೆಲ್ಲಾ ನೋಡಲು ಬಯಸಿದರು. ಹಲವು ಭಾವಗಳ ಮೂಲಕ ಅವನನ್ನು ಪ್ರೀತಿಸಿದರು. ಹಲವು ಸಾಧನೆಗಳನ್ನು ಮಾಡಿದರು. ಹಲವು ಧರ್ಮಗಳನ್ನು ಅನುಷ್ಠಾನ ಮಾಡಿದರು. ಹಲವು ದಾರಿಗಳಲ್ಲಿ ನಡೆದು ಒಂದೇ ಸತ್ಯದೆಡೆಗೆ ಬಂದರು. ಸತ್ಯದೇಗುಲಕ್ಕೆ ಬರುವುದಕ್ಕೆ ಅನಂತ ಬಾಗಿಲುಗಳಿವೆ ಎಂಬುದು ಅವರ ಅನುಭವದ ಆಳದಿಂದ ಬಂದ ಮಾತು, ಕೇವಲ ತರ್ಕದ ಗರಡಿಯಿಂದ ಬಂದುದಲ್ಲ. ಎಲ್ಲಾ ಧರ್ಮಗಳಲ್ಲಿರುವ ಏಕಮಾತ್ರ ಸತ್ಯದ ಅನುಭವ ಇವರಿಗೆ ಕರಗತವಾದುದರಿಂದ ಇವರು ಯಾರನ್ನೂ ದೂರುತ್ತಿರಲಿಲ್ಲ. ಯಾವ ಧರ್ಮವನ್ನೂ ತಾತ್ಸಾರದಿಂದ ಕಾಣುತ್ತಿರಲಿಲ್ಲ."

ಶ್ರೀರಾಮಕೃಷ್ಣರ ಸಾಧನೆಯಲ್ಲಿ ಒಂದು ವೈಶಿಷ್ಟ್ಯವನ್ನು ನೋಡುತ್ತೇವೆ. ಇವರು ಗುರುಗಳನ್ನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ. ಗುರುಗಳು ಇವರಿದ್ದೆಡೆಗೆ ಬಂದರು. ಒಂದೊಂದು ಸಾಧನೆಗೂ ಆಯಾ ಪಥದಲ್ಲಿ ನುರಿತ ಗುರುವೊಬ್ಬರು ಹೇಗೋ ಇವರ ಸಮೀಪಕ್ಕೆ ಆಕರ್ಷಿಸಲ್ಪಟ್ಟು ಇವರನ್ನು ಮುಂದಕ್ಕೆ ಕರೆದುಕೊಂಡು ಹೋಗುವರು. ಶಾಕ್ತ ಮತ್ತು ವೈಷ್ಣವ ಸಾಧನೆಗಳು ಭೈರವಿ ಬ್ರಾಹ್ಮಣಿ ಎಂಬ ಘನ ವಿದುಷಿಯ ನೇತೃತ್ವದಲ್ಲಿ ನಡೆಯಿತು. ಅಕೆ ಇಂತಹ ಸಾಧಕನೊಬ್ಬನು ಸಿಕ್ಕಿಯಾನೇ ಎಂದು ಹುಡುಕುತ್ತಿದ್ದಾಗ, ಶ್ರೀರಾಮಕೃಷ್ಣರು ಅವರಿಗೆ ಗೋಚರಿಸಿದರು. ವಾತ್ಸಲ್ಯಭಾವ ಸಾಧನೆಗೆ ಜಟಾಧಾರಿಯೆಂಬ ಒಬ್ಬ ರಾಮಭಕ್ತನ ಪರಿಚಯವಾಯಿತು. ಅದ್ವೈತ ಸಾಧನೆಗೆ ತೋತಾಪುರಿ ಎಂಬ ಸನ್ಯಾಸಿಯ ಸಹಾಯ ದೊರಕಿತು. ಕ್ರೈಸ್ತ ಮತ್ತು ಮಹಮ್ಮದೀಯ ಸಾಧನೆಗಳಿಗೆ ಆಯಾ ಮತದ ಅತ್ಯುತ್ತಮ ಪ್ರತಿನಿಧಿಗಳ ಸಹಾಯ ದೊರಕಿತು. ಘನ ವಿದ್ವಾಂಸರು ಇವರ ಸಮೀಪಕ್ಕೆ ಬಂದರು. ಅತಿ ಮುಂದುವರಿದ ಸಾಧಕರು ಇವರ ಸಮೀಪಕ್ಕೆ ಬಂದರು. ಎಲ್ಲರಿಂದಲೂ ಶ್ರೀರಾಮಕೃಷ್ಣರು ಕೆಲವು ವಿಷಯಗಳನ್ನು ಕಲಿತರು. "ನಾನು ಎಲ್ಲಿಯವರೆಗೂ ಬದುಕಿರುವೆನೊ ಅಲ್ಲಿಯವರೆಗೂ ಹೊಸದಾಗಿ ಕಲಿಯುತ್ತೇನೆ" ಎನ್ನುತ್ತಿದ್ದರು. ಈ ದೈನ್ಯವನ್ನು ಕೊನೆಯ ತನಕ ಶ್ರೀರಾಮಕೃಷ್ಣರಲ್ಲಿ ಕಾಣುತ್ತೇವೆ.

ಶ್ರೀರಾಮಕೃಷ್ಣರು ತಮ್ಮದೇ ಆದ ಸರಳ ರೀತಿಯಲ್ಲಿ ಭಗವಂತನಿಗೂ ಭಕ್ತನಿಗೂ ಮಧ್ಯೆ ಇರುವ ತೊಡರುಗಳನ್ನು ಭೇದಿಸಲು ಮೊದಲು ಮಾಡಿದರು. ದ್ರವ್ಯದ ಮೇಲಿರುವ ಆಸೆ ಸಂಪೂರ್ಣ ತೊಲಗುವಂತೆ ಒಂದು ಕೈಯಲ್ಲಿ ರೂಪಾಯಿಯನ್ನು ಮತ್ತೊಂದು ಕೈಯಲ್ಲಿ ಮಣ್ಣನ್ನು ತೆಗೆದುಕೊಂಡು ಗಂಗಾನದಿ ತೀರದ ಮೇಲೆ ಕುಳಿತು ಹಣವನ್ನು ನೋಡಿ, ಮತ್ತೊಂದು ಕೈಯಲ್ಲಿರುವ ಮಣ್ಣಿಗಿಂತ ಇದು ಮೇಲಲ್ಲ, ಇದು ದೇವರ ಸಮೀಪಕ್ಕೆ ಕರೆದುಕೊಂಡು ಹೋಗುವುದಕ್ಕೆ ಬದಲಾಗಿ ಲೋಭಮಾರ್ಗದಲ್ಲಿ ಸಿಲುಕಿಸುವುದು ಎಂದು ತರ್ಕಿಸಿ ಎರಡನ್ನೂ ನೀರಿಗೆ ಬಿಸಾಡುತ್ತಿದ್ದರು. ಇವರು ಯಾವುದನ್ನು ಧಿಕ್ಕರಿಸಿದ್ದರೋ ಅದನ್ನು ಇವರ ಇಡೀ ದೇಹದ ಅಂಗೋಪಾಂಗಗಳು ಧಿಕ್ಕರಿಸಿದ್ದವು. ಮನಸ್ಸಿಗೆ ಅರಿವಾಗದೆ ದೇಹಕ್ಕೆ ಸೋಂಕಿದರೂ ಚೇಳು ಕುಟುಕಿದಂತೆ ಆಗಿ ಅದನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ.

ಇದರಂತೆ ಕಾಮಿನಿಯೂ ಕೂಡ. ಶ್ರೀರಾಮಕೃಷ್ಣರು ಹೆಂಗಸರನ್ನು ದೂರದೇ ಅವರನ್ನು ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟರು. ಎಲ್ಲರಲ್ಲೂ ಜಗನ್ಮಾತೆಯೇ ಹಲವು ರೂಪಿನಿಂದ ಕಾಣುತ್ತಿರುವಳೆಂದು ಇಡೀ ಸ್ತ್ರೀ ಕುಲವನ್ನೆ ಪೂಜ್ಯ ದೃಷ್ಟಿಯಿಂದ ನೋಡುತ್ತಿದ್ದರು.

ಉಚ್ಚ ಬ್ರಾಹ್ಮಣ ಕುಲದಿಂದ ಬಂದವನು ತಾನೆಂಬ ಅಹಂಕಾರವನ್ನು ಅಳಿಸುವುದಕ್ಕಾಗಿ ಚಂಡಾಲನ ಮನೆಯನ್ನು ಕೂಡ ಇವರು ಗುಡಿಸಿದರು.

ಮಾನವನು ಯಾವ ಯಾವ ಭಾವದ ಮೂಲಕ ಮತ್ತೊಬ್ಬ ಮಾನವನನ್ನು ಪ್ರೀತಿಸಬಹುದೊ ಆ ಭಾವಗಳೆಲ್ಲದರ ಮೂಲಕ ದೇವರನ್ನು ಪ್ರೀತಿಸಬಹುದು. ಪ್ರೀತಿಯು ಭಕ್ತ ಮತ್ತು ಭಗವಂತನನ್ನು ಬಂಧಿಸುವ ಒಂದು ಮಧುರ ಬಂಧನ. ಎಲ್ಲಿಯವರೆಗೂ ನಾವು ಮಾನವರೋ ಅಲ್ಲಿಯವರೆಗೆ ಮಾನವಸಹಜ ಪ್ರೀತಿಯ ಮೂಲಕ ಮಾತ್ರ ದೇವರನ್ನು ಪ್ರೀತಿಸಬಲ್ಲೆವು. ಇಂತಹ ಪ್ರೀತಿಯಲ್ಲಿ ಐದು ಮುಖ್ಯ ಭಾವಗಳಿವೆ. ಶಾಂತಭಾವ, ಇದರಲ್ಲಿ ದೇವರನ್ನು ತಂದೆ ಅಥವಾ ತಾಯಿಯಂತೆ ಭಾವಿಸಬಹುದು. ಜೀವನದಲ್ಲಿ ಮಗುವಿಗೆ ತಂದೆತಾಯಿಗಳಷ್ಟು ಅಭಯವನ್ನು ಕೊಡುವವರು ಮತ್ತಾರೂ ದೊರಕಲಾರರು. ಅವರಲ್ಲಿರುವಷ್ಟು ಸಲಿಗೆ ಮತ್ತಾರಲ್ಲಿಯೂ ಇರಲಾರದು. ಇಡೀ ಬ್ರಹ್ಮಾಂಡ ಅವನಿಂದ ಬಂದಿದೆ. ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡುವ ಮಹಾಶಕ್ತಿಗಣಿಯಾಗಿರುವನು ಅವನು. ಆದಕಾರಣವೇ ಅವನನ್ನು ತಂದೆ ಅಥವಾ ತಾಯಿ ಎಂದು ಕರೆಯುವುದು. ಶ್ರೀರಾಮಕೃಷ್ಣರು ಮುಕ್ಕಾಲುಪಾಲು ತಮ್ಮ ಭವಜೀವನವನ್ನು ಕಳೆಯುತ್ತಿದ್ದುದು ಜಗನ್ಮಾತೆಯನ್ನು ನೆಚ್ಚಿಕೊಂಡಿರುವ ಮಗುವಿನಂತೆ. ದೇವರನ್ನು ಕೆಲವು ವೇಳೆ ತಂದೆಯೆಂತಲೂ ಕರೆದರು.

ದಾಸ್ಯಭಾವದಲ್ಲಿ ಭಗವಂತ ಸ್ವಾಮಿಯಾಗುವನು. ಭಕ್ತ ಅವನ ಆಣತಿಯನ್ನು ಪರಿಪಾಲಿಸುವ ಪಾಲಿಸುವ ಭೃತ್ಯನಾಗುವನು. ಭಕ್ತನಿಗೆ ತನಗಾಗಿ ಏನನ್ನೂ ಸಾಧಿಸಬೇಕೆಂಬ ಆಸೆ ಇರುವುದಿಲ್ಲ. ಅವನಿಗೆ, ಸ್ವಾಮಿಯ ಹಿತ ತನ್ನ ಹಿತ, ಸ್ವಾಮಿಯ ಇಷ್ಟ ತನ್ನ ಇಷ್ಟ, ಸ್ವಾಮಿಯ ಜಯ ತನ್ನ ಜಯ. ಈ ಭೃತ್ಯಭಾವದಲ್ಲಿರಬೇಕಾದರೆ ಅಹಂಕಾರ ಸಂಪೂರ್ಣ ನಾಶವಾಗಿರಬೇಕು. ಆಗ ಮಾತ್ರ ಎಲ್ಲ ಭಗವಂತನಿಗಾಗಿ ಎಂಬ ಮಧುರಗಾನಪಲ್ಲವಿ ಅವನ ಜೀವನದಿಂದ ಹೊರಹೊಮ್ಮುವುದು. ಹನುಮಂತನು ಶ್ರೀರಾಮಚಂದ್ರನನ್ನು ನೋಡುತ್ತಿದ್ದುದು ಹೀಗೆ. ಹನುಮಂತನಿಗೆ ರಾಮ ಇಷ್ಟದೇವನಾಗುವನು. ಶ್ರೀರಾಮನ ಆಣತಿಯನ್ನು ಪರಿಪಾಲಿಸುವುದೊಂದೇ ಇವನ ಜೀವನದ ಮಹೋದ್ದೇಶ. ಅದಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆಯುವನು. ವೀರಾಧಿವೀರನಾದರೂ ರಾಮಾಯಣದಲ್ಲಿ ಬರುವ ಹನುಮಂತ ನಿಗರ್ವಿ, ವಿನಯಶಾಲಿ. ಅಶೋಕವನದಲ್ಲಿ ದುಃಖದಿಂದ ಕೊರಗುತ್ತಿದ್ದ ಸೀತಾದೇವಿಯನ್ನು ನೋಡಲು ಹೋದಾಗ ಶ್ರೀರಾಮಚಂದ್ರನ ಸುದ್ದಿಯನ್ನು ಅವಳಿಗೆ ಹೇಳಿದನು. ಇನ್ನೇನು ಶ್ರೀರಾಮನು ಬೇಗ ಬರುವನು, ನಿನ್ನನ್ನು ಸೆರೆಯಿಂದ ಬಿಡಿಸುವನು' ಎಂದು ಧೈರ್ಯ ಹೇಳಿದನು. ಆದರೆ ಸೀತೆಗೆ ರಾಮನ ಜೊತೆಯಲ್ಲಿ ಬರುವವರ ಸಾಹಸದಲ್ಲಿ ನಂಬಿಕೆ ಇರಲಿಲ್ಲ. ಆಕೆಗೆ ಹನುಮಂತ, ಸುಗ್ರೀವನ ಸೈನ್ಯದಲ್ಲಿ ತಾನೇ ಕೊನೆಯವನೆಂದು ಹೇಳುತ್ತಾನೆ. ಯಾರು ವೀರಾಧಿವೀರನೋ, ಜಗಜಟ್ಟಿಯೋ, ಅಂತಹವನು ಹಾಗೆ ಹೇಳಿಕೊಳ್ಳಬೇಕಾದರೆ ಅಹಂಕಾರದಿಂದ ಆ ವ್ಯಕ್ತಿ ಎಷ್ಟು ಪಾರಾಗಿರುವನು ಎಂಬುದನ್ನು ಊಹಿಸಬಹುದು.

ಪರಮಹಂಸರು ದಾಸ್ಯಭಾವವನ್ನು ಹನುಮಂತನಂತೆ ಅಭ್ಯಾಸ ಮಾಡಿದರು; ಗೆಡ್ಡೆ ಗೆಣಸುಗಳನ್ನು ತಿಂದು, ಮರದ ಮೇಲೆ ನೆಗೆದಾಡುತ್ತಿದ್ದರಂತೆ ಆ ಕಾಲದಲ್ಲಿ. ಶ್ರೀರಾಮ ಮತ್ತು ಸೀತಾದೇವಿಯ ದರ್ಶನವನ್ನು ಆ ಭಾವದಲ್ಲಿ ಇದ್ದಾಗ ಪಡೆದರು.

ಸಖ್ಯಭಾವದಲ್ಲಿ ಭಕ್ತನಿಗೆ ಭಗವಂತನೊಡನೆ ಒಂದು ನಿಕಟತೆ ಕಾಣುವುದು. ದೊಡ್ಡವನು ಚಿಕ್ಕವನು ಎಂಬ ಭಾವ ಮಾಯವಾಗುವುದು. ಭಗವಂತನಲ್ಲಿರುವ ಶಕ್ತಿಗಾಗಿ ಸ್ನೇಹಿತ ಅವನನ್ನು ಪ್ರೀತಿಸುವುದಿಲ್ಲ. ಕೇವಲ ಪ್ರೀತಿಗಾಗಿ ಪ್ರೀತಿಸುತ್ತಾನೆ. ಅನ್ಯೋನ್ಯ ಸಲಿಗೆ ಹೆಚ್ಚುವುದು. ಕೃಷ್ಣಸುಧಾಮರ ಸಂಬಂಧ ಸಖ್ಯಭಾವಕ್ಕೆ ಉದಾಹರಣೆ. ಶ್ರೀರಾಮಕೃಷ್ಣರು ಈ ಭಾವದಲ್ಲಿಯೂ ಕೆಲವು ಕಾಲ ತಲ್ಲೀನರಾಗಿದ್ದರು.

ವಾತೃಲ್ಯಭಾವದಲ್ಲಿ ಭಕ್ತ ಭಗವಂತನನ್ನು ತನ್ನ ಮಗುವೆಂದು ತಿಳಿಯುವನು. ತಾಯಿಗೆ ಮಗುವಿನ ಮೇಲೆ ಇರುವ ಪ್ರೀತಿಯಲ್ಲಿ ಸಂಪೂರ್ಣ ನಿಃಸ್ವಾರ್ಥತೆ ಕಾಣುವುದು. ಮಗುವಿನಿಂದ ತಾಯಿ ಏನನ್ನೂ ಅಪೇಕ್ಷಿಸುವುದಿಲ್ಲ. ಸದಾ ಮಗುವಿನ ಹಿತಕ್ಕೆ ತನ್ನ ನಿದ್ದೆ ಸುಖ ಎಲ್ಲವನ್ನೂ ತೆರಲು ಸಿದ್ಧಳಾಗಿರುವಳು. ಎಲ್ಲಿಯವರೆಗೂ ಲಾಭದ ಅಪೇಕ್ಷೆ ಸ್ವಲ್ವವಾದರೂ ಇದೆಯೋ, ಅಲ್ಲಿಯದರೆಗೆ ಇಂತಹ ಪ್ರೇಮ ಸಾಧ್ಯವಿಲ್ಲ. ಯಶೋಧೆ ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಕೌಸಲ್ಯೆ ರಾಮನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿದ್ದಾಗ ದೇವರನ್ನು ರಾಮಲಾಲನೆಂದು ಪ್ರೀತಿಸಿದರು.

ಮಧುರಭಾವದಲ್ಲಿ ಭಕ್ತಭಗವಂತರಿಗೆ ಸತಿಪತಿಯರ ಸಂಬಂಧವಿರುವುದು. ಮಾನವ ಪ್ರೇಮದಲ್ಲೆಲ್ಲ ಅತ್ಯಂತ ನಿಕಟವಾದುದು ಸತಿಪತಿಯರದು. ಗೋಪಿಯರು ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿರುವಾಗ ಹೆಂಗಸಿನಂತೆ ಸೀರೆ ಉಟ್ಟು, ಆಭರಣ ತೊಟ್ಟುಕೊಂಡು ರಾಧಾರಮಣನನ್ನು ಸೇವಿಸಿದರು.

ಶ್ರೀರಾಮಕೃಷ್ಣರ ಭಾವಜೀವನ ಸರ್ವತೋಮುಖವಾದುದು. ಯಾವ ಯಾವ ಭಾವದ ಮೂಲಕ ಭಗವಂತನನ್ನು ನೋಡಬಹುದೋ ಅದರ ಮೂಲಕ ನೋಡಿದರು. ಒಂದೊಂದು ಸಲ ಒಂದೊಂದು ಭಾವದಲ್ಲಿ ತಲ್ಲೀನರಾಗುತ್ತಿದ್ದರು.

ಸಗುಣೋಪಾಸನೆಯಲ್ಲಿ ಮಾತೃಭಾವಕ್ಕೆ ಅವಕಾಶವಿದೆ. ಆದರೆ ಸಗುಣವೆಂಬ ಅಲೆಗಳ ಹಿಂದೆ, ನಿರ್ಗುಣ ನಿರಾಕಾರದ ಕಡಲಿದೆ. ಶ್ರೀರಾಮಕೃಷ್ಣರು ತೋತಾಪುರಿ ಎಂಬ ಸನ್ಯಾಸಿಯಿಂದ ಅದ್ವೈತ ದೀಕ್ಷೆಯನ್ನು ಪಡೆದರು. ನಾಮರೂಪಗಳನ್ನು ಮೀರಿ, ಕಾರ್ಯಕಾರಣ ಜಗತ್ತನ್ನು ಅತಿಕ್ರಮಿಸಿ, ನಿರಾಕಾರ ಬ್ರಹ್ಮದ ಕಡಲಿಗೆ ಧುಮುಕಿ ತಲ್ಲೀನರಾದರು. ಆ ಸ್ಥಿತಿಯಲ್ಲಿಯೇ ಅವರು ಬಹುಕಾಲವಿದ್ದರು. ಕ್ರಮೇಣ ಜಗನ್ಮಯಿ ಅವರ ಮನಸ್ಸನ್ನು ಕೆಳಗಿಳಿಸಿ ಸಾಕಾರ ನಿರಾಕಾರಗಳ ಮಧ್ಯೆ ಅವರನ್ನು ಬಿಟ್ಟು, ನೀನು ಇಲ್ಲೇ ಇರು ಎಂದು ಆಜ್ಞಾಪಿಸಿದಳಂತೆ.

ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಅವರ ಭಕ್ತಿಯ ಹಿನ್ನಲೆಯಾಗಿ ಯಾವಾಗಲೂ ಜ್ಞಾನವಿರುತ್ತಿತ್ತು. ಸ್ವಾಮಿ ವಿವೇಕಾನಂದರೇ, ಶ್ರೀರಾಮಕೃಷ್ಣರು ಹೊರನೋಟಕ್ಕೆ ಭಕ್ತರು, ಒಳಗೆ ಜ್ಞಾನಿಗಳು ಎನ್ನುತ್ತಿದ್ದರು. ಹೆಚ್ಚು ಮಾನವರು ಭಾವಜೀವಿಗಳು. ಯುಕ್ತಿ ಭಾವವನ್ನು ಆಶ್ರಯಿಸಿ ಬೆಳೆಯುವುದು. ಆದಕಾರಣವೇ ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಮಾನ್ಯತೆ ಕೊಟ್ಟರು.

ಪರಮಹಂಸರು ಅಷ್ಟೇ ಪ್ರಾಧಾನ್ಯವನ್ನು ಕರ್ಮಯೋಗಕ್ಕೆ ಕೊಟ್ಟರು. ಒಂದು ದಿನ ಭಕ್ತನೊಬ್ಬನು ಶ್ರೀರಾಮಕೃಷ್ಣರೊಂದಿಗೆ ಮಾತನಾಡುತ್ತಿದ್ದಾಗ ತಾನು ಬೇಕಾದಷ್ಟು ಪರರಿಗೆ ಉಪಕಾರ ಮಾಡಬೇಕೆಂದು ಹೇಳುತ್ತಿದ್ದನು. ಇದನ್ನು ಕೇಳಿ ಶ್ರೀರಾಮಕೃಷ್ಣರು "ಉಪಕಾರದ ಮಾತನ್ನು ಆಡಬೇಡ, ದೇವರೊಬ್ಬನೇ ಇತರರಿಗೆ ಉಪಕಾರ ಮಾಡಬಲ್ಲ. ಸಾಧಾರಣ ಜೀವಿಗಳು ಇತರರಿಗೆ ಸೇವೆ ಮಾತ್ರ ಮಾಡಬಲ್ಲರು. ಯಾರು ಬ್ರಹ್ಮಾಂಡವನ್ನು ಸೃಷ್ಟಿಸಿ, ಪಶುಪಕ್ಷಿ ಕ್ರಿಮಿಕೀಟಗಳಿಗೆ ಆಹಾರವನ್ನು ಒದಗಿಸಿರುವನೋ ಅವನು, ಕೆಲವರಿಗೆ ಸಹಾಯ ಮಾಡಲಾಗದೆ ಅವರಿಗೆ ನೀವು ಸಹಾಯಮಾಡಿ ಎಂದು ಹೇಳಲಿಲ್ಲ. ಉಪಕಾರವಲ್ಲ, ಸೇವೆ" ಎಂದರು. ಇದನ್ನು ಸ್ವಾಮಿ ವಿವೇಕಾನಂದರು ಆಲಿಸಿ ನಂತರ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, "ಇಂದು ಪರಮಹಂಸರ ಬಾಯಿಯಿಂದ ದೊಡ್ಡ ಸತ್ಯವನ್ನು ಕೇಳಿದೆ. ನಾನು ಬದುಕಿದ್ದರೆ ಇದನ್ನು ಎಲ್ಲರಿಗೂ ಬೋಧಿಸುವೆನು" ಎಂದರು. ಅನಂತರ ಅವರು ಬೋಧಿಸಿದ ಕರ್ಮಯೋಗವೆಲ್ಲ 'ಉಪಕಾರವಲ್ಲ, ಸೇವೆ' ಎಂಬ ಶ್ರೀರಾಮಕೃಷ್ಣರ ಒಂದು ಸೂತ್ರದ ಬಾಷ್ಯ

ಶ್ರೀರಾಮಕೃಷ್ಣರು ಎಲ್ಲ ಸಾಧನೆಗಳನ್ನೂ ಮಾಡಿ ಸಿದ್ಧಿ ಎಂಬ ಅಮೃತವನ್ನು ತಮ್ಮ ಹೃದಯದಲ್ಲಿ ಶೇಖರಿಸಿಟ್ಟುಕೊಂಡರು. ಆದರೆ ಅಮೃತವನ್ನು ತಾವು ಮಾತ್ರ ಸವಿದು ಧನ್ಯರಾಗಬಯಸಲಿಲ್ಲ. ಜಗದ ಕಷ್ಟನಷ್ಟಗಳಲ್ಲಿ ಸಿಕ್ಕಿ ನೊಂದವರಿಗೆಲ್ಲ ಅದನ್ನು ಹಂಚಿ ಅವರನ್ನೂ ಸುಖಿಗಳನ್ನಾಗಿ ಮಾಡಬಯಸಿದರು. ಆನಂದವನ್ನು ಯಾವಾಗಲೂ ಮತ್ತೊಬ್ಬನಿಗೆ ಹಂಚಿದಾಗ ಅದು ಇಮ್ಮಡಿಸುಪುದು. ಅದಕ್ಕಾಗಿಯೆ ಪರಮಹಂಸರು ಶಿಷ್ಯರಿಗಾಗಿ ಕಾದುಕುಳಿತರು. ಶ್ರೀರಾಮಕೃಷ್ಣರ ತಪೋಶಕ್ತಿ ಹಲವು ಪಕ್ವಕ್ಕೆ ಬಂದ ಸಾಧಕರನ್ನು ತನ್ನೆಡೆಗೆ ಸೆಳೆಯಿತು.

ಶ್ರೀರಾಮಕೃಷ್ಣರು ಪ್ರತಿದಿನವೂ ಸಂಜೆ ತಮ್ಮ ಕೋಣೆಯ ಮೇಲಿನ ಮಹಡಿಗೆ ಹೋಗಿ ಕಲ್ಕತ್ತೆಯ ಕಡೆ ನೋಡುತ್ತ "ಎಲ್ಲಿ ನನ್ನ ಮಕ್ಕಳು ಇನ್ನೂ ಬರಲಿಲ್ಲವಲ್ಲಾ" ಎಂದು ದುಃಖಿಸುತ್ತಿದ್ದರು. ಜಗನ್ಮಾತೆಯನ್ನು ಕಾಣಲು ಮೊದಲು ಎಷ್ಟು ತವಕಪಟ್ಟರೋ ಅಷ್ಟೇ ತವಕಪಟ್ಟರು ಶಿಷ್ಯರ ಆಗಮನಕ್ಕಾಗಿ. ಈ ಮಹಾ ಕರೆ ಅವ್ಯಕ್ತವಾದರೂ ಹಲವು ಜೀವಿಗಳನ್ನು ಮುಟ್ಟಿ ಒಬ್ಬೊಬ್ಬರನ್ನಾಗಿ ಅವರ ಕಡೆಗೆ ಸೆಳೆಯಿತು.

ಶ್ರೀರಾಮಕೃಷ್ಣರು ಒಬ್ಬ ನುರಿತ ಗುರುಗಳು, ಜಗದ ರಹಸ್ಯವನ್ನು ಆರಿತವರು. ಪ್ರತಿಯೊಂದು ವ್ಯಕ್ತಿಯಲ್ಲಿಯೂ ಒಂದು ವೈಶಿಷ್ಟ್ಯ ಇದೆ. ಅದಕ್ಕೆ ಭಂಗ ಬರದಂತೆ ತರಪೇತು ಕೊಡುತ್ತಿದ್ದರು. ಬಂದ ಶಿಷ್ಯರ ನ್ಯೂನಾತಿರೇಕಗಳನ್ನು ತಿದ್ದಿ, ಅವರೆಲ್ಲರನ್ನೂ ಭಗವಂತನ ಪೂಜೆಗೆ ಯೋಗ್ಯವಾದ ಪುಷ್ಪವನ್ನಾಗಿ ಮಾಡಿದರು.

ಶ್ರೀರಾಮಕೃಷ್ಣರಿಗೆ ಶಿಷ್ಯರ ಮೇಲೆ ಇದ್ದ ಪ್ರೀತಿ ಅಸಾಧಾರಣವಾದುದು. ಮೊದಲು ಶಿಷ್ಯರ ಎದೆಗೆ ತಟ್ಟಿದ್ದು ಪರಮಹಂಸರಲ್ಲಿದ್ದ ಆಧ್ಯಾತ್ಮಿಕ ಸತ್ಯಗಳಲ್ಲ, ಅವರ ಅಪಾರ ಪ್ರೇಮ. ಆ ಪ್ರೇಮಮಹಾಸ್ತ್ರ ಎಲ್ಲರನ್ನೂ ಒಲಿಸಿಕೊಂಡಿತು. ಅವರಲ್ಲಿ ಪ್ರಖ್ಯಾತರಾದ ವಿವೇಕಾನಂದರಂತಹ ಹಲವಾರು ಶಿಷ್ಯರು ತಾವು ಪರಮಹಂಸರ ಪ್ರೇಮದ ದಾಸರೆಂದು ಹೇಳಿಕೊಳ್ಳುತ್ತಿದ್ದರು.

ವಿಮರ್ಶಾತ್ಮಕ ಬುದ್ದಿ ಎಲ್ಲರಲ್ಲಿಯೂ ಬೆಳೆಯುವಂತೆ ಮಾಡುತ್ತಿದ್ದರು. ಯಾವುದನ್ನೂ ವಿಚಾರ ಮಾಡಿದಲ್ಲದೆ ಪರೀಕ್ಷಿಸಿದಲ್ಲದೆ ಒಪ್ಪಿಕೊಳ್ಳಿಬೇಡ ಎನ್ನುತ್ತಿದ್ದರು. ಅವರ ಬೋಧನೆ ಮತು ಜೀವನವನ್ನು ಹಲವರು ಶಿಷ್ಯರು ಹಲವು ರೀತಿಯಲ್ಲಿ ಪರೀಕ್ಷಿಸಿದರು. ಶಿಷ್ಯರು ತಮ್ಮನ್ನು ಪರೀಕ್ಷಿಸಿದರೆ ಕೋಪತಾಳದೆ ಆನಂದದಿಂದ ಅದನ್ನು ನೋಡುತ್ತಿದ್ದರು.

ಕಾಮಕಾಂಚನತ್ಯಾಗ ಇವರ ಉಪದೇಶದ ಪಲ್ಲವಿಯಾಗಿತ್ತು. ಒಂದು ದಿನ, ನರೇಂದ್ರ (ಮುಂದೆ ಸ್ವಾಮಿ ವಿವೇಕಾನಂದರು) ಶ್ರೀರಾಮಕೃಷ್ಣರು ಹೊರಗೆ ಹೋದ ಸಮಯದಲ್ಲಿ ಒಂದು ನಾಣ್ಯವನ್ನು ಅವರ ಹಾಸಿಗೆಯ ಕೆಳಗೆ ಇಟ್ಟರು. ಶ್ರೀರಾಮಕೃಷ್ಣರು ಬಂದು ಹಾಸಿಗೆಯ ಮೇಲೆ ಕುಳಿತೊಡನೆಯೇ ಚೇಳು ಕುಟುಕಿದಂತೆ ಆಯಿತು. ಹಾಸಿಗೆಯನ್ನು ಹುಡುಕಿ ನೋಡಿದಾಗ ಒಂದು ರೂಪಾಯಿ ಬಿತ್ತು. ಪರಮಹಂಸರ ತ್ಯಾಗಬುದ್ಧಿ ಅಷ್ಟು ಆಳಕ್ಕೆ ಹೋಗಿತ್ತು.

ಮತ್ತೊಬ್ಬ ಶಿಷ್ಯನು ಶ್ರೀರಾಮಕೃಷ್ಣರು ಅರ್ಧರಾತ್ರಿ ಎದ್ದು ಗಂಗಾನದಿಯ ತೀರಕ್ಕೆ ಹೋಗಿದ್ದಾಗ ಇವರು ಇಂತಹ ಅವೇಳೆಯಲಿ ಎದ್ದು ಎಲ್ಲಿಗೆ ಹೋಗುತ್ತಾರೆ? ತಮ್ಮ ಪತ್ನಿ ಶಾರದಾದೇವಿಯರ ಕೋಣೆ ಕಡೆ ಹೋಗಬಹುದೆ ! ಎಂದು ತಿಳಿಯಲು ಅಲ್ಲೇ ಹೊಂಚುಹಾಕುತ್ತಿದ್ದನು. ಸ್ವಲ್ಪ ಹೊತ್ತಾದ ಮೇಲೆ ಶ್ರೀರಾಮಕೃಷ್ಣರು ಶಾರದಾದೇವಿಯವರ ಕೋಣೆಯ ಕಡೆ ಹೋಗದೆ ಸೀದಾ ತಮ್ಮ ರೂಮಿನ ಕಡೆ ಬಂದರು. ಹೊಂಚು ಕಾಯುತ್ತಿದ್ದ ಶಿಷ್ಯ ಇವರನ್ನು ಅನುಮಾನಿಸಿದ್ದಕ್ಕಾಗಿ ನಾಚಿ ಪರಮಹಂಸರಿಗೆ ನಮಸ್ಕಾರ ಕ್ಷಮಾಪಣೆ ಕೇಳಿದನು. ಆಗ ಶ್ರೀರಾಮಕೃಷ್ಣ��ು ಸಾಧುವನ್ನು ಹಗಲು ಪರೀಕ್ಷೆ ಮಾಡಿದರೆ ಸಾಲದು, ರಾತ್ರಿಯೂ ಪರೀಕ್ಷಿಸಬೇಕು ಎಂದರು.

ಭಕ್ತಿಯ, ಧರ್ಮದ ಹೆಸರಿನಲ್ಲಿ ಮೂರ್ಖನಾದರೆ ಅದನ್ನು ಅವರು ಸಹಿಸುತ್ತಿರಲಿಲ್ಲ. ಒಬ್ಬ ಶಿಷ್ಯನಿಗೆ ಪೇಟೆಯಿಂದ ಸಾಮಾನು ತರುವುದಕ್ಕೆ ಹೇಳಿದರು. ಆತನು ಸರಿಯಾಗಿ ಪರೀಕ್ಷೆ ಮಾಡದೆ ತಂದನು. ಆಗ ಶ್ರೀರಾಮಕೃಷ್ಣರು, ಶಿಷ್ಯರು ವ್ಯಾಪಾರಕ್ಕೆ ಅಂಗಡಿಗೆ ಹೋದರೆ ಸರಿಯಾಗಿ ಪರೀಕ್ಷೆ ಮಾಡಬೇಕು, ಅಂಗಡಿಯಲ್ಲಿ ವರ್ತಕರು ಧರ್ಮಕ್ಕಾಗಿ ಅಲ್ಲ ಇರುವುದು ಎಂದು ಬುದ್ಧಿ ಹೇಳಿದರು. ಸಾಮಾನನ್ನು ಕೊಂಡಾದ ಮೇಲೆ ಕೊಸರು ಕೇಳುವುದನ್ನು ಮರೆಯಬಾರದು ಎಂದರು. ಅಸಡ್ಡೆ, ಮರೆವು ಇವು ಯಾವ ರೂಪಿನಲ್ಲಿ ಬಂದರೂ ಅವರು ಸಹಿಸುತ್ತಿರಲಿಲ್ಲ . "ನಾನು ಮತ್ತೊಂದು ಕ್ಷಣದಲ್ಲಿ ಪ್ರಪಂಚವನ್ನು ಮರೆತು ಸಮಾಧಿಯಲ್ಲಿ ಮಗ್ನನಾಗುತ್ತೇನೆ. ಆದರೂ ಯಾವುದನ್ನೂ ಮರೆಯುವುದಿಲ್ಲ. ನಿಮಗೇಕೆ ಇಂತಹ ಮರೆವು. ಇದು ಆಧ್ಯಾತ್ಮಿಕ ಜೀವನದ ಕುರುಹಲ್ಲ" ಎನ್ನುತ್ತಿದ್ದರು.

ಒಬ್ಬ ಶಿಷ್ಯನು ತುಂಬ ಮೃದು ಸ್ವಭಾವದವನು. ಒಬ್ಬರು ಗಟ್ಟಿ ಮಾತನ್ನಾಡಿದರೂ ಸಹಿಸುವುದಕ್ಕೆ ಆಗುತ್ತಿರಲಿಲ್ಲ. ಆತ ಒಂದು ದಿನ ದೋಣಿಯಲ್ಲಿ ಬರುತ್ತಿದ್ದಾಗ ಕೆಲವರು ಶ್ರೀರಾಮಕೃಷ್ಣರನ್ನು ಹಾಸ್ಯ ಮಾಡುತ್ತಿದ್ದರು. ಆತ ಇದನ್ನು ಸುಮ್ಮನೆ ಕೇಳುತ್ತಿದ್ದನು. ದಕ್ಷಿಣೇಶ್ವರಕ್ಕೆ ಬಂದ ಮೇಲೆ ಈ ಸಮಾಚಾರವನ್ನು ಶ್ರೀರಾಮಕೃಷ್ಣರಿಗೆ ಹೇಳಿದನು. ಅವರು, "ಏನು ಗುರುನಿಂದೆ ಆಗುತ್ತಿದ್ದರೂ ನೀನು ಸುಮ್ಮನೆ ಕೇಳುತ್ತಿದ್ದೆಯಾ? ಆ ಸ್ಥಳವನ್ನು ಬಿಟ್ಟಾದರೂ ಬರಬೇಕಾಗಿತ್ತು" ಎಂದರು.

ಮತ್ತೊಬ್ಬ ಶಿಷ್ಯನ ಸ್ವಭಾವ ಉಗ್ರ. ಆತನ ಜೀವನ ಮಾಗುವುದಕ್ಕೆ ಸ್ವಲ್ವ ಮೃದುತ್ವ ಬರಬೇಕಾಗಿತ್ತು . ಅಂತಹ ಶಿಷ್ಯನೊಬ್ಬನು ದೋಣಿಯಲ್ಲಿ ಬರುತ್ತಿದ್ದಾಗ ಹಿಂದಿನಂತೆಯೇ ಕೆಲವರು ಶ್ರೀರಾಮಕೃಷ್ಣರನ್ನು ದೂರುತ್ತಿದ್ದರು. ಇದನ್ನು ಕೇಳಿ ತುಂಬ ಕೋಪತಾಳಿ ದೋಣಿಯ ಒಂದು ಕಡೆಗೆ ಹೋಗಿ, ನೀವು ನನ್ನ ಗುರುನಿಂದೆಯನ್ನು ನಿಲ್ಲಿಸದೆ ಇದ್ದರೆ ದೋಣಿಯನ್ನು ಮುಳುಗಿಸುತ್ತೇನೆ ಎಂದು ದೋಣಿಯನ್ನು ಅಲ್ಲಾಡಿಸತೊಡಗಿದನು. ದೋಣಿಯಲ್ಲಿದ್ದವರು ಅಂಜಿ ಸುಮ್ಮನಾದರು. ಶ್ರೀರಾಮಕೃಷ್ಣರಿಗೆ ಈ ಸಮಾಚಾರವನ್ನು ಹೇಳಿದ ಮೇಲೆ, ಅವರು "ಕೋಪದಿಂದ ನೀನು ಎಂತಹ ಅನಾಹುತ ಮಾಡುತ್ತಿದ್ದೆ, ಅವರು ಬೈದರೆ ನನಗೇನಾಯಿತು" ಎಂದರು.

ಶ್ರೀರಾಮಕೃಷ್ಣರು ಪ್ರತಿಯೊಬ್ಬರ ಶೀಲವನ್ನು ಪರೀಕ್ಷಿಸಿ ಅವರಿಗೆ ತಕ್ಕ ಸಲಹೆಯನ್ನು ಕೊಡುತ್ತಿದ್ದರು.

ಶ್ರೀರಾಮಕೃಷ್ಣರು ಪ್ರಪಂಚವನ್ನು ಬಿಟ್ಟ ಕೆಲವು ಸನ್ಯಾಸಿಗಳಿಗೆ ಮಾತ್ರ ಆದರ್ಶಪ್ರಾಯವಾಗಲು ಬಯಸಲಿಲ್ಲ. ಗೃಹಸ್ಥರಿಗೂ ಆದರ್ಶಪ್ರಾಯರಾಗಿದ್ದರು. ಗೃಹಸ್ಥರಿಗೂ ಸನ್ಯಾಸಿಗೆ ಸರಿಸಮನಾದ ಜೀವನವನ್ನು ನಡೆಸಲು ಸಾಧ್ಯವೆಂದು ತೋರಿರುವರು.

ಶ್ರೀಶಾರದಾದೇವಿಗೆ ಹದಿನೆಂಟು ವರುಷವಾದಾಗ ಶ್ರೀರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಬಂದರು. ಶ್ರೀರಾಮಕೃಷ್ಣರು ಆದರದಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಅಷ್ಟು ಹೊತ್ತಿಗೆ ಮಥುರನಾಥನು ತೀರಿಹೋಗಿದ್ದನು. "ಆತನಿದ್ದಿದ್ದರೆ ನಿನಗೆ ಇಲ್ಲಿ ಇಳಿದುಕೊಳ್ಳುವುದಕ್ಕೆ ಬೇಕಾದಷ್ಟು ಅನುಕೂಲವನ್ನು ಮಾಡಿಕೊಡುತ್ತಿದ್ದನು" ಎಂದರು. ಶಾಸ್ತ್ರೀಯವಾಗಿ ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯನ್ನು ಮದುವೆಯಾಗಿದ್ದರು. ಆದಕಾರಣ ತಾವು ಯಾವುದನ್ನು ಮಾಡಬೇಕಾದರೂ ಅವರ ಒಪ್ಪಿಗೆ ಮತ್ತು ಸಹಾನುಭೂತಿ ಇಲ್ಲದೆ ಮಾಡಬಯಸಲಿಲ್ಲ. ಬಲಾತ್ಕಾರವಾಗಿ ಏನೊಂದನ್ನೂ ಅವರು ಶಾರದಾದೇವಿಯವರ ಮೇಲೆ ಹೇರಲಿಲ್ಲ. ಶ್ರೀರಾಮಕೃಷ್ಣರು ಶಾರದಾದೇವಿಯವರಿಗೆ, "ನನಗೆ ಎಲ್ಲಾ ಸ್ತ್ರೀಯರೂ ಜಗನ್ಮಾತೆಯ ಪ್ರತಿಬಿಂಬದಂತೆ ಕಾಣುವರು. ನಾನು ನಿನ್ನಲ್ಲಿಯೂ ಅದನ್ನೇ ನೋಡುತ್ತೇನೆ. ಆದರೆ ನೀನು ಇಂದ್ರಿಯ ಪ್ರಪಂಚದಲ್ಲಿ ಇರಲು ಇಚ್ಛೆಪಟ್ಟರೆ ಅದಕ್ಕೂ ನಾನು ಸಿದ್ಧನಾಗಿರುವೆ. ನಿನಗೆ ಯಾವುದು ಬೇಕು ಹೇಳು" ಎಂದರು. ಆದರೆ ಶ್ರೀಶಾರದಾದೇವಿಯವರು ಪರಮಹಂಸರಿಗೆ ತಕ್ಕ ಸತಿ. ತಾವೂ ಅವರಂತೆಯೇ ಆಗಲು ಬಯಸಿದರು, ಇದನ್ನು ಕೇಳಿ ಶ್ರೀರಾಮಕೃಷ್ಣರಿಗೆ ಅತ್ಯಾನಂದವಾಯಿತು. ಆಜನ್ಮ ಬ್ರಹ್ಮಚರ್ಯ ವ್ರತಧಾರಿಗಳಾಗಿ ಇಬ್ಬರೂ ಜಗನ್ಮಾತೆಯ ಕೆಲಸಕ್ಕೆ ಟೊಂಕಕಟ್ಚಿ ನಿಂತರು. ಎಂದು ಶ್ರೀಶಾರದಾದೇವಿಯವರು ಪ್ರಾಪಂಚಿಕ ಸುಖವನ್ನು ತೊರೆದು ತಾವು ಅವರಂತೆಯೇ ಜಗನ್ಮಾತೆಯ ಭಕ್ತರಾಗಲು ಬಯಸಿದರೋ ಅಂದಿನಿಂದಿಲೇ ಶ್ರೀರಾಮಕೃಷ್ಣರು ಸತಿಯ ಜೀವನದ ಜವಾಬ್ದಾರಿಯನ್ನೆಲ್ಲ ತೆಗೆದುಕೊಂಡರು. ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು. ಪೂಜೆ, ಜಪ, ತಪ, ಸಾಧನೆಗಳನ್ನು ಹೇಗೆ ಮಾಡಬೇಕು ಎಂಬುದರಿಂದ ಹಿಡಿದು ನಿರ್ವಿಕಲ್ಪ ಸಮಾಧಿಯವರೆಗೆ ಅವರನ್ನು ಕರೆದುಕೊಂಡು ಹೋದರು.

ಶ್ರೀರಾಮಕೃಷ್ಣರ ಕೀರ್ತಿ ಹಬ್ಬುತ್ತಾ ಬಂದಿತು. ಕಲ್ಕತ್ತೆಯ ಅನೇಕ ಪ್ರಮುಖ ವ್ಯಕ್ತಿಗಳು ಇವರನ್ನು ನೋಡಲು ಬರುತ್ತಿದ್ದರು. ಕೆಲವು ವೇಳೆ ಶ್ರೀರಾಮಕೃಷ್ಣರೇ ಅವರನ್ನು ನೋಡಲು ಹೋಗುತ್ತಿದ್ದರು. ಕೇಶವಚಂದ್ರಸೇನ ಬ್ರಹ್ಮ ಸಮಾಜದ ಮುಂದಾಳು, ಪ್ರಖ್ಯಾತ ವಾಗ್ಮಿ, ಪರಮಹಂಸರ ಹತ್ತಿರದ ಭಕ್ತನಾದ. ಒಂದು ದಿನ ಶ್ರೀರಾಮಕೃಷ್ಣರೇ ಈಶ್ವರಚಂದ್ರ ವಿದ್ಯಾಸಾಗರನನ್ನು ನೋಡುವುದಕ್ಕೆ ಹೋದರು. ಘನವಿದ್ವಾಂಸನಾದ ಈಶ್ವರಚಂದ್ರ ಪರಮಹಂಸರ ಬಾಯಿಯಿಂದ ಬರುವ ಮಾತನ್ನು ಕೇಳಿದನು. ಶಾಸ್ತ್ರಗಳ ಜಟಿಲ ಸಮಸ್ಯೆಯನ್ನು ಕೂಡ ಇವರ ಮಾತು ಬಗೆಹರಿಸಬಲ್ಲದೆಂದು ತಿಳಿದನು. ಮಹರ್ಷಿ ದೇವೇಂದ್ರನಾಥ ಠಾಕೂರರನ್ನು ನೋಡಲು ಶ್ರೀರಾಮಕೃಷ್ಣರೇ ಒಂದು ದಿನ ಮಥುರನಾಥನೊಂದಿಗೆ ಹೋದರು. ದಯಾನಂದ ಸರಸ್ವತಿ ಶ್ರೀರಾಮಕೃಷ್ಣರನ್ನು ನೋಡುವುದಕ್ಕೆ ದಕ್ಷಿಣೇಶ್ವರಕ್ಕೆ ಬಂದಿದ್ದರು. ಮುಂದೆ ಪ್ರಪಂಚವನ್ನೇ ವಿಸ್ಮಯಗೊಳಿಸಿದ ಸ್ವಾಮಿ ವಿವೇಕಾನಂದ ಮುಂತಾದ ಶಿಷ್ಯರು ಆಗ ಅನಾಮಧೇಯವಾಗಿ ಬಂದು ಹೋಗುತ್ತಿದ್ದರು.

ಶ್ರೀರಾಮಕೃಷ್ಣರಿಗೆ ಬಂದ ಶಿಷ್ಯರೊಡನೆ ಮಾತನಾಡಿ ಮಾತನಾಡಿ ಗಂಟಲಲ್ಲಿ ಹುಣ್ಣಾಯಿತು. ಮಾತನಾಡಬೇಡಿ ಎಂದು ವೈದ್ಯರು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಯಾರಾದರೂ ಬದ್ಧ ಜೀವಿಗಳು ಬಂದು ಇವರ ಹತ್ತಿರ ನಿಂತು ಭಗವಂತನ ವಿಷಯವನ್ನು ಎತ್ತಿದರೆ ಸಾಕು, ಯಾತನೆಯ ಗಮನವಿಲ್ಲದೆ ಮಾತನಾಡಲು ಮೊದಲು ಮಾಡುವರು. "ನನ್ನ ಮಾತಿನಿಂದ ಇತರರಿಗೆ ಶಾಂತಿ ಸಿಕ್ಕುವ ಹಾಗೆ ಇದ್ದರೆ ಇಂತಹ ಎಷ್ಟು ನೋವನ್ನಾದರೂ ಸಹಿಸುತ್ತೇನೆ. ಭವಜೀವಿಗಳ ಉದ್ಧಾರಕ್ಕೆ ಎಷ್ಟು ಜನ್ಮಗಳನ್ನಾದರೂ ಎತ್ತಲು ಸಿದ್ಧನಾಗಿರುವೆ !" ಎನ್ನುತ್ತಿದ್ದರು.

ಶ್ರೀರಾಮಕೃಷ್ಣರೆಂಬ ದೇಹದ ಗೂಡಿನಲ್ಲಿ ವಾಸಿಸುತ್ತಿದ್ದ ಜೀವದ ಹಕ್ಕಿ 1886ನೇ ಇಸವಿ ಆಗಸ್ಟ್ 16ನೇ ತಾರೀಖು ಹಾರಿಹೋಯಿತು. ಅಂದಿನಿಂದ ವಿಶ್ವವಿಹಾರಿ ಆಯಿತು. ಅವರ ತಪಸ್ಸು ಸರ್ವತೋಮುಖಿವಾಗಿ ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸಾಧಕವಾಯಿತು.

ಶ್ರೀರಾಮಕೃಷ್ಣರು ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಎಲ್ಲವನ್ನೂ ಪೂರ್ಣಮಾಡಿದರು, ಹಿಂದೂವಾಗಿಯೇ ಇದ್ದು ಎಲ್ಲ ಧರ್ಮಗಳ ಸಾಧನೆ ಮಾಡಬಹುದೆಂಬುದನ್ನು ತೋರಿದರು. ಎಲ್ಲ ಧರ್ಮಗಳ ಹಿಂದೆ ಇರುವುದೊಂದೇ ಸತ್ಯೆವೆಂಬುದು ಅವರ ಅನುಭವದ ಆಳದಿಂದ ಬಂದ ಮಾತು. ಹಿಂದೂಗಳು, ಮಹಮ್ಮದೀಯರು, ಕ್ರೈಸ್ತರು ಧರ್ಮದ ಹೆಸರಿನಲ್ಲಿ ವೈಮನಸ್ಸನ್ನು ಹರಡುವ ಬದಲು, ಶ್ರೀರಾಮಕೃಷ್ಣರಂತಹ ಒಂದು ಆದರ್ಶವಿದ್ದರೆ, ಹಿಂದೂಗಳು ಉತ್ತಮ ಹಿಂದೂಗಳಾಗುವರು, ಕ್ರೈಸ್ತರು ಉತ್ತಮ ಕ್ರೈಸ್ತರಾಗುವರು

ಪ್ರಮುಖ ಶಿಷ್ಯರು

ಬದಲಾಯಿಸಿ

ಸಂನ್ಯಾಸೀ ಭಕ್ತರು

ಬದಲಾಯಿಸಿ

ಗ್ರಹಸ್ಥ ಭಕ್ತರು

ಬದಲಾಯಿಸಿ
  • ರಾಮಚಂದ್ರ ದತ್ತ
  • ಸುರೇಂದ್ರನಾಥ ಮಿತ್ರ
  • ಬಲರಾಮ ಬಸು
  • ಮಹೇಂದ್ರನಾಥ ಗುಪ್ತ
  • ನಾಗ ಮಹಾಶಯರು
  • ಗಿರೀಶಚಂದ್ರ ಘೋಷ
  • ಅಕ್ಷಯಕುಮಾರ ಸೇನ
  • ದೇವೇಂದ್ರನಾಥ ಮಜುಮ್ದಾರ

ಮಹಿಳಾ ಭಕ್ತರು

ಬದಲಾಯಿಸಿ
  • ಗೌರಿ ಮಾ
  • ಯೋಗಿನ್ ಮಾ
  • ಗೋಲಾಪ್ ಮಾ
  • ಗೋಪಾಲೇರ್‍ ಮಾ

ಇವನ್ನೂ ನೋಡಿ

ಬದಲಾಯಿಸಿ

ರಾಮಕೃಷ್ಣ ಮಿಷನ್

ಶಾರದಾದೇವಿ

ವಿವೇಕಾನಂದ

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಪುಸ್ತಕಗಳು

ಬದಲಾಯಿಸಿ