ಜಿನ್ಸೆಂಗ್
ಜಿನ್ಸೆಂಗ್- ಅರ್ಯಾಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ. ಪ್ಯಾನ್ಯಾಕ್ಸ್ ಇದರ ವೈಜ್ಞಾನಿಕ ಹೆಸರು.
ಇದರಲ್ಲಿ ಷಿನ್ಸೆಂಗ್ ಮತ್ತು ಕ್ವಿಂಕಿಫೋಲಿಯಮ್ ಎಂಬ ಎರಡು ಪ್ರಭೇದಗಳುಂಟು. ಮೊದಲನೆಯದು ಪೂರ್ವ ಏಷ್ಯದ ಮೂಲವಾಸಿಯಾದರೆ ಎರಡನೆಯದು ಉತ್ತರ ಅಮೆರಿಕದ್ದು. ಉತ್ತರ ಚೀನ, ಕೊರಿಯ ಮತ್ತು ಜಪಾನುಗಳಲ್ಲಿ ಷಿನ್ಸೆಂಗ್ ಪ್ರಭೇದವನ್ನು ಔಷಧಿಗಾಗಿ ಬೆಳೆಸಲಾಗುತ್ತದೆ. ಐದು ಆರು ವಯಸ್ಸಿನ ಗಿಡಗಳಿಂದ ಬೇರುಗಳನ್ನು ಸಂಗ್ರಹಿಸುತ್ತಾರೆ. ಇವಕ್ಕೆ ಜಿನ್ಸೆಂಗ್ ಬೇರುಗಳೆಂದು ಹೆಸರು. ಇವು ವರ್ತುಲಾಕಾರದಲ್ಲೊ ಕದಿರು ರೂಪದಲ್ಲೊ ಇರುತ್ತವೆ. ಕವಲೊಡೆದಿರುವುದೂ ಉಂಟು. ಇವುಗಳ ಉದ್ದ ಸು. 12 ಸೆಂ.ಮೀ. ಬಣ್ಣ ಹಳದಿಮಿಶ್ರಿತ ಕಂದು. ಇವಕ್ಕೆ ಒಂದು ಬಗೆಯ ವಾಸನೆಯೂ ಉಂಟು. ಇವುಗಳಲ್ಲಿ ಕಹಿರುಚಿಯ ಅಂಟು ದ್ರವ ಕೂಡ ಇದೆ. ಈ ಬೇರುಗಳಲ್ಲಿರುವ ವಿವಿಧ ರಾಸಾಯನಿಕ ವಸ್ತುಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಚೀನ, ಅಮೆರಿಕದಲ್ಲಿ ಇದರಿಂದ ತಯಾರಾದ ಔಷಧಗಳಲ್ಲಿ ಗ್ಲೂಕೊಸೈಡ್, ರೆಸಿóನ್, ಟ್ಯಾನಿನ್, ಸಕ್ಕರೆ, ಪಿಷ್ಟ , ಮ್ಯೂಸಿಲೇಜ್ ಮುಂತಾದ ವಸ್ತುಗಳಿರುವುದು ಕಂಡುಬಂದಿದೆ. ಚೀನದ ಜಿನ್ಸೆಂಗ್ ಬೇರಿನಲ್ಲಿ ಬಿ ವೈಟಮಿನ್ನೂ ಒಂದು ರೀತಿಯ ಹಾರ್ಮೋನೂ ಇರುವುದು ತಿಳಿದು ಬಂದಿದೆ.
ಉಪಯೋಗ
ಬದಲಾಯಿಸಿಜಿನ್ಸೆಂಗ್ ಬೇರಿನಿಂದ ಜೀರ್ಣಶಕ್ತಿಯನ್ನು ಪ್ರಚೋದಿಸುವ ಔಷಧಿಯನ್ನೂ ಶಕ್ತಿವರ್ಧಕ ದ್ರವವನ್ನೂ ತಯಾರಿಸುತ್ತಾರೆ. ಇದರಿಂದ ತಯಾರಾದ ಔಷಧಿಗೆ ಮಿದುಳಿನ ಮೇಲೆ ತೀವ್ರ ಪರಿಣಾಮ ಬೀರಬಲ್ಲ ಶಕ್ತಿ ಇದೆ ಎಂದು ತಿಳಿದುಬಂದಿದೆ. ಔಷಧಿಯ ಅತಿ ಪ್ರಮಾಣದ ಸೇವನೆ ಮಿದುಳಿನ ಮೇಲೆ ದ್ರಾಕ್ಷಾರಸದಂತೆ ಪ್ರಭಾವ ಬೀರುತ್ತದೆ. ಅಲ್ಲದೆ ರಕ್ತದ ಒತ್ತಡ ಕಡಿಮೆಯಾಗುವಂತೆ ಅಥವಾ ಹೆಚ್ಚುವಂತೆ ಮಾಡುವ ಔಷಧವನ್ನೂ ಇದರಿಂದ ತಯಾರಿಸಲಾಗುತ್ತದೆ.