ಗಾಳಿಗೂಡೊಡೆದ ರೋಗ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಈ ಲೇಖನಕ್ಕೆ ಚಿತ್ರದ ಅವಶ್ಯಕತೆ ಇದೆ. ದಯವಿಟ್ಟು ಸರಿಯಾದ ಮುಕ್ತ ಲೈಸೆನ್ಸ್ ಹೊಂದಿರುವ ಚಿತ್ರವನ್ನು ಕಾಮನ್ಸ್ ನಲ್ಲಿ ಹುಡುಕಿ ಅಥವಾ ಸೇರಿಸಿ; ಈ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು.
The Free Image Search Tool may be able to locate suitable images on Flickr and other web sites. |
ಗಾಳಿಗೂಡೊಡೆದ ರೋಗ
ಬದಲಾಯಿಸಿಕುದುರೆಗಳಲ್ಲಿ ಮಾತ್ರ ಕಾಣಬರುವ ಉಸಿರಾಟ ಸಂಬಂಧಿರೋಗ. ಕಟ್ಟುಸಿರು (ಹೀವ್ಸ), ಗಾಳಿಗೂಡಿನ ಬಿರಿತ (ಅಲ್ವಿಯೋಲಾರ್ ಎಂಫೈಸೀಮ) ಪರ್ಯಾಯನಾಮಗಳು. ಪುಪ್ಪಸದ ಗಾಳಿ ಗೂಡುಗಳ ಹಿಗ್ಗುವಿಕೆ, ಪುಪ್ಪಸಗಳಲ್ಲಿ ದೊಡ್ಡ ಪೊಳ್ಳುಗಳುಂಟಾಗುವುದು-ಇವು ಇದರ ಲಕ್ಷಣಗಳು. ಇವುಗಳಿಂದಾಗಿ ಪುಪ್ಪಸದ ಗಾತ್ರ ಕಡಿಮೆಯಾಗಿ ಉಸಿರಾಟದಲ್ಲಿ ಅಸಮರ್ಪಕತೆ ತಲೆದೋರುತ್ತದೆ. ವಾಯುವಿನಿಮಯವೂ ಸರಿಯಾಗಿ ಸಾಗದು. ರೋಗಕ್ಕೆ ನಿರ್ದಿಷ್ಟ ಕಾರಣಗಳು ಇನ್ನೂ ಸರಿಯಾಗಿ ಗೊತ್ತಾಗಿಲ್ಲ. ಪುಪ್ಪಸದ ಉರಿತ, ಕೂರಾದ ಪಂಗುಸಿರ್ನಾಳದ ಉರಿಯೂತ, ದೀರ್ಘಕಾಲದ ಕೆಮ್ಮು, ಬೇರೂರಿದ ಪಂಗುಸಿರ್ನಾಳದ ಉರಿಯೂತ ಮುಂತಾದವೂ ಕೆಲವು ಕಾರಣಗಳು. ಸೇವನೆಯ ಏರುಪೇರುಗಳಿಂದಲೂ ಇದು ಬರಬಹುದು. ತೇವಪುರಿತ ವಾತಾವರಣ, ಹೆಚ್ಚಿನ ಕೆಲಸ, ಹೆಚ್ಚಾದ ಆಹಾರ, ಶೀತ ಹಾಗೂ ಬಿರುಗಾಳಿ ಪರಿಸ���ಥಿತಿಗಳಲ್ಲಿ ಕುದುರೆಗಳು ಈ ಬೇನೆಗೆ ಒಳಗಾಗುತ್ತವೆ. ದೂಳಿನಿಂದ ಅವೃತವಾದ ಪರಿಸರದಲ್ಲಿ ಇಬ್ಬನಿ ಇರುವ ಹುಲ್ಲನ್ನು ಮೇಯುವುದರಿಂದಲೂ ಹಸಿಯಾದ ಹಾಗೂ ಬೂಷ್ಟು ಬೆಳೆದಿರುವ ಆಹಾರವನ್ನು ತಿನ್ನುವುದರಿಂದಲೂ ಈ ರೋಗ ಬರುತ್ತದೆ. ತಿಮೋಥಿ ಕೆಂಪು ಕ್ಲೋವರ್, ಕುದುರೆ ಮಸಾಲೆ ಸೊಪ್ಪು ಹಾಗೂ ಇತರ ಜಾತಿಯ ಬೆಳೆಸಿದ ಮೇವನ್ನು ಕೊಡುವುದರಿಂದಲೂ ಈ ಬೇನೆ ಕಾಣಿಸಿಕೊಳ್ಳುತ್ತದೆ. ಡಿಕ್ಟಿಯೊಕೆವೊಲಸ್ ಆರ್ನಫೆಲ್ಡಿ ಜಾತಿಯ ಹುಳುಗಳು ಪುಪ್ಪಸದಲ್ಲಿ ಇರುವುದರಿಂದಲೂ ಗಾಳಿಗೂಡೊಡೆದ ರೋಗ ಬರುವುದೆಂಬ ನಂಬಿಕೆ ಉಂಟು. ಹೆಚ್ಚು ಕಾಲ ಲಾಯದಲ್ಲಿರುವ ಕುದುರೆಗಳಲ್ಲಿ ಈ ರೋಗ ಹೆಚ್ಚು. ಹುಲ್ಲುಗಾವಲಿನಲ್ಲಿ ಸ್ವತಂತ್ರವಾಗಿ ಮೇಯುವ ಕುದುರೆಗಳಲ್ಲಿ ಇದು ಅಷ್ಟಾಗಿ ಕಾಣದು. ಒಣಹುಲ್ಲು ಹಾಗೂ ಬಾರ್ಲಿಯನ್ನು ಮೇಯುವ ಕುದುರೆಗಳಲ್ಲಂತೂ ಈ ಬೇನೆ ಬರುವುದೇ ಇಲ್ಲ. ಒಂದು ರೀತಿಯ ಆಸ್ತಮಾದಿಂದಲೂ ಈ ರೋಗ ಉಂಟಾಗುತ್ತದೆ. ಚೆನ್ನಾಗಿ ಬೆಳೆಸಿದ ಒಳ್ಳೆಯ ತಳಿಗಳಲ್ಲಿ ಅಷ್ಟಾಗಿ ಕಾಣಬರದು. ಆದರೆ ಸ್ಥೂಲಕಾಯದ, ಗಿಡ್ಡಕಾಲಿನ, ದೊಡ್ಡಹೊಟ್ಟೆಯ ಕುದುರೆಗಳು ಈ ರೋಗಕ್ಕೆ ಸುಲಭವಾಗಿ ತುತ್ತಾಗುತ್ತವೆ. ವಿಪರೀತ ಕೆಲಸ ಮಾಡುವ ಕುದುರೆಗಳಿಗೆ ಸರಿಯಾದ ಆಹಾರ ಸಿಗದೆ ಹೋದರೆ ಅವುಗಳ ಪುಪ್ಪಸ ತನ್ನ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡು ರೋಗಪೀಡಿತವಾಗುತ್ತದೆ.
ಈ ಬೇನೆ ಭಾರತದಲ್ಲಿ ಅಷ್ಟಾಗಿಲ್ಲ. ಅರಬ್ ದೇಶದಲ್ಲಿ ಇಲ್ಲವೇ ಇಲ್ಲ. ಯೂರೋಪಿನ ವಿವಿಧ ದೇಶಗಳಲ್ಲೂ ಬಹು ವಿರಳ. ಅಮೆರಿಕ ಸಂಯುಕ್ತ ಸಂಸ್ಥಾನದ ವಿವಿಧ ಭಾಗಗಳಲ್ಲಿ ವ್ಯಾಪಕವಾಗಿದೆ. ಮಾತ್ರವಲ್ಲ ಅಲ್ಲಿ ಈ ರೋಗ ವರ್ಷವರ್ಷವೂ ಹೆಚ್ಚುತ್ತಿದೆ. ರೋಗಲಕ್ಷಣಗಳು: ಬಹಳ ನಿಧಾನವಾಗಿ ಕಾಣಿಸಿಕೊಳ್ಳುತ್ತವೆ. ಮೊದಲು ಕಾಣಿಸಿಕೊಳ್ಳುವುದು ಕೆಮ್ಮು. ಎಡೆಬಿಡದೆ ಬರುವ ಕೆಮ್ಮನ್ನು ತಾಳಲಾರದೆ ಕುದುರೆ ನರಳುತ್ತದೆ. ಅನಂತರ ಮೂಗಿನಲ್ಲಿ ನೀರು ಸುರಿಯಲು ಆರಂಭವಾಗುತ್ತದೆ. ಕುದುರೆಗೆ ವಿಶ್ರಾಂತಿ ಕೊಡದೆ ಓಡಾಡಿಸಿದರೆ ಆಗ ಅದು ಉಸಿರಾಡಲು ತೊಳಲಾಡುತ್ತದೆ. ರೋಗದ ಮೊದಲ ದಿನಗಳಲ್ಲಿ ಕುದುರೆ ವಿಶ್ರಾಂತಿ ಪಡೆಯುತ್ತಿರುವಾಗ ಅದರ ಉಸಿರಾಟ ಸರಾಗವಾಗಿ ಇರುತ್ತದೆ. ಮುಂದೆ ರೋಗ ಉಲ್ಭಣವಾಗುತ್ತ ಹೋದಹಾಗೆ ಉಸಿರಾಡುವ���ದು ಕಷ್ಟವಾಗುತ್ತ ಬರುತ್ತದೆ. ಇದರಿಂದ ರೋಗಸ್ಥಿತಿಯನ್ನು ಬಹಳ ಸುಲಭವಾಗಿ ಗುರುತಿಸಬಹುದು. ಕೆಮ್ಮುವಾಗ ಸೀನು ಇರುವುದಿಲ್ಲ. ಕುದುರೆಯಿಂದ ಶ್ರಮದಾಯಕ ಕೆಲಸಮಾಡಿಸಿದರೆ ಕೆಮ್ಮು ಹೆಚ್ಚಾಗುತ್ತದೆ. ಎಲ್ಲಿಯೊ ದೂರದಲ್ಲಿ ಕೆಮ್ಮಿದ ಹಾಗೆ ಸದ್ದು ಉಂಟಾಗುತ್ತದೆ. ಸಾಮಾನ್ಯವಾಗಿ ಉಸಿರಾಟದ ವೇಗ ಹೆಚ್ಚುತ್ತದೆ. ಉಸಿರೆಳೆದುಕೊಳ್ಳುವುದರಲ್ಲಿ ಯಾವ ಬದಲಾವಣೆ ಇಲ್ಲದಿದ್ದರೂ ಉಸಿರು ಬಿಡುವಾಗ ಕುದುರೆಗೆ ಕಷ್ಟವಾಗುತ್ತದೆ. ಅಲ್ಲದೆ ನಿಃಶ್ವಾಸದಲ್ಲಿ ಎರಡು ಹಂತಗಳನ್ನು ಕಾಣಬಹುದು. ಜೊತೆಗೆ ಒಡಕು ಇಲ್ಲವೆ ಶಿಳ್ಳೆಯ ಶಬ್ದವೂ ಬರುತ್ತದೆ. ಅಲ್ಲದೆ ಹಿಸ್ ಹಿಸ್ ಎಂಬ ಸದ್ದೂ ಉಂಟಾಗುತ್ತದೆ. ಎದೆಗೂಡು ವಿಶಾಲವಾದಂತಾಗಿ ಪುಪ್ಪಸದ ಅಂಗಾಂಶಗಳು ತನ್ನ ಪುಟಿತತೆಯನ್ನು ಕಳೆದುಕೊಳ್ಳುತ್ತವೆ. ಪುಪ್ಪುಸದ ಪರೆ ಬಿಳಿಚಿಕೊಳ್ಳುತ್ತದೆ. ಪಕ್ಕೆಲಬುಗಳ ಹಿಂದಿನ ಭಾಗದಲ್ಲಿ ಗುಳಿ ಬೀಳುತ್ತದೆ. ಅಲ್ಲಿನ ಸ್ನಾಯುಗಳು ಇಳಿಬೀಳುತ್ತವೆ. ಪುಪ್ಪುಸದ ಒಳಶಬ್ದವನ್ನು ಸ್ಟೆತೋಸ್ಕೋಪಿನ ಸಹಾಯದಿಂದ ಕೇಳಬಹುದು. ಪುಪ್ಪುಸದಲ್ಲಿ ಚಿಟಗುಟ್ಟುವ ಶಬ್ದದ ಅಲೆಗಳು ಸ್ಪುಟವಾಗಿ ಕೇಳುವುದರ ಜೊತೆಗೆ ರಕ್ತನಾಳಗಳ ಮರ್ಮರ ಧ್ವನಿಯೂ ಕೇಳಿಬರುತ್ತದೆ.
ರೋಗನಿದಾನ
ಬದಲಾಯಿಸಿರೋಗ ಚೆನ್ನಾಗಿ ಉಲ್ಬಣಸಿದ ಮೇಲೆಯೆ ಅದನ್ನು ಗುರುತಿಸಲು ಸಾಧ್ಯವಾಗುವುದರಿಂದ ಕುದುರೆಗಳನ್ನು ಕೊಳ್ಳುವಾಗ ಪರಿಣಿತ ಪಶು ವೈದ್ಯರಿಂದ ಪರೀಕ್ಷೆ ಮಾಡಿಸಿ ರೋಗ ಇದೆಯೊ ಇಲ್ಲವೊ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹೆನ್ಬೇನ್, ದತ್ತೂರಿ, ಬೆಲಡೊನ ಬೀಜ ಮುಂತಾದ ಮತ್ತು ಬರಿಸುವ ಔಷಧಿಗಳನ್ನು ಬಳಸಿ ಗಾಳಿಗೂಡೊಡೆದ ರೋಗವನ್ನು ಮರೆಮಾಡಬಹುದಾದ್ದರಿಂದ ಕುದುರೆಗಳನ್ನು ಕೊಳ್ಳುವಾಗ ಈ ವಿಷಯದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಗಾಳಿಗೂಡೊಡೆದ ರೋಗಕ್ಕೆ ಸರಿಯಾದ ಔಷಧಿಗಳಿಲ್ಲ. ಕುದುರೆಗಳು ಒಮ್ಮೆ ರೋಗಪೀಡಿತವಾದರೆ ಅವನ್ನು ಗುಣಪಡಿಸುವದು ಕಷ್ಟ. ಇದರಿಂದ ರೋಗಬಾರದಂತೆ ಮೊದಲೇ ಎಚ್ಚರ ವಹಿಸುವುದು ವಿಹಿತ. ಕುದುರೆಗಳಿಗೆ ಹಗುರಾದ ಕೆಲಸವನ್ನು ಕೊಡುವುದರಿಂದ, ಅವನ್ನು ಶೀತದಿಂದ ರಕ್ಷಿಸುವುದರಿಂದ, ಮಿತವಾದ ಪೌಷ್ಟಿಕ ಆಹಾರ ಕೊಡುವುದರಿಂದ, ಒಣಗಿದ ಮತ್ತು ಒಳ್ಳೆಯ ಹುಲ್ಲನ್ನು ತಿನ್ನಿಸುವುದರಿಂದ ರೋಗವನ್ನು ತಡೆಗಟ್ಟಬಹುದು. ಫೌಲರನ ಆರ್ಸೆನಿಕ್ ದ್ರಾವಣ ಹಾಗೂ ಶಾಮಕ ಔಷಧಗಳ (ಸಡೇಟಿವ್್ಸ) ಬಳಕೆಯಿಂದಲೂ ಇದನ್ನು ತಡೆಯಬಹುದು.